ಸಮ್ಮೇಳನದಲ್ಲಿ ವಿದೇಶಿಗನ ಕನ್ನಡ ಪ್ರೀತಿ
ಕನ್ನಡದಲ್ಲೇ ಮಾತನಾಡುವ ಡೆನ್ಮಾರ್ಕ್ನ ಹೆನ್ರಿಕ್ ಹರ್ಡ್ಮನ್
- ಡಿ.ಬಿ. ವಡವಡಗಿ
ಬಿಜಾಪುರ: ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಕನ್ನಡ ಮನಸ್ಸುಗಳು, ಕನ್ನಡಾಭಿಮಾನಿಗಳು ಸಾಹಿತ್ಯಾಸಕ್ತರ ನಡುವೆ ಡೆನ್ಮಾರ್ಕ್ ದೇಶದ ಪ್ರಜೆಯೊಬ್ಬರು ಎಲ್ಲರ ಗಮನ ಸೆಳೆಯುತ್ತಿದ್ದರು.
ಭಾನುವಾರ ಎಲ್ಲ ಗೋಷ್ಠಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಗೋಷ್ಠಿಯಲ್ಲಿ ಮಂಡನೆಯಾಗುವ ವಿದ್ವತ್ಪೂರ್ಣ ವಿಷಯಗಳನ್ನು ತದೇಕಚಿತ್ತದಿದ ಆಲಿಸುತ್ತ, ಅವುಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತ ಗಂಭೀರವದನರಾಗಿದ್ದ ಈ ವ್ಯಕ್ತಿ ಡೆನ್ಮಾರ್ಕ್ ಪ್ರಜೆ ಹೆನ್ರಿಕ್ ಹರ್ಡ್ಮನ್. ಅವರು ಮಾತ್ರ ಭಾನುವಾರ ಸಮಾನಾಂತರ ವೇದಿಕೆಯ ಕಂಠಿ ಸಭಾಂಗಣದಲ್ಲಿ ಯಾವುದೇ ಗೊಂದಲ, ಸಂಕೋಚವಿಲ್ಲದೇ ಅತಿಥಿಗಳ ಭಾಷಣ ಆಲಿಸುತ್ತಿದ್ದರು.
ಇವರ ಪಕ್ಕ ಹೋಗಿ ಕುಳಿತು ನಿಮ್ಮದು ಯಾವ ದೇಶ ಎಂದು 'ಕನ್ನಡಪ್ರಭ' ಇಂಗ್ಲಿಷ್ನಲ್ಲಿ ಕೇಳಿದಾಗ ಕೂಡಲೇ ಅವರು, ಸುಮ್ಮನಿರಿ ನಾನು ಅವರ ಭಾಷಣ ಕೇಳುತ್ತಿದ್ದೇನೆ ಎಂದು ಅಚ್ಚ ಕನ್ನಡದಲ್ಲಿ ಹೇಳಿದರು. ಈ ಮಾತು ಕೇಳಿ ಅಕ್ಕಪಕ್ಕದಲ್ಲಿ ಕುಳಿತಿದ್ದವರಲ್ಲಿ ಅಚ್ಚರಿಗೊಂಡರು.
ಗೋಷ್ಠಿ ಮುಗಿಯುತ್ತಿದ್ದಂತೆ ಅವರನ್ನು ಮಾತಿಗೆಳೆದಾಗ, ನಿಜಕ್ಕೂ ಅಚ್ಚರಿಪಡುವ, ಬೆರಗುಗೊಳಿಸುವ ಅಂಶ ಬೆಳಕಿಗೆ ಬಂದವು.
ಬೆಂಗಳೂರಿನಿಂದ ಮೈಸೂರಿಗೆ: ಹೆನ್ರಿಕ್ ಹರ್ಡ್ಮನ್, ಕನ್ನಡ ಭಾಷಾ ಅಧ್ಯಯನ ನಿಮಿತ್ತ 5 ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಅಲ್ಲಿನ ಕನ್ನಡ ಭಾಷೆ ಬಳಕೆಯಲ್ಲಿನ ಗೊಂದಲ, ಅಸ್ಪಷ್ಟತೆ, ಪರಭಾಷೆಯ ಪ್ರಹಾರ ಸಹಿಸಲಾಗದೆ ಕಳೆದ 6 ತಿಂಗಳ ಹಿಂದೆ ಮೈಸೂರಿಗೆ ಬಂದು ನೆಲೆಸಿದರಂತೆ. ಬೆಂಗಳೂರಿನಲ್ಲಿ ಇನ್ನು 10 ವರ್ಷ ಕಳೆದರೆ ಇಂಗ್ಲಿಷ್ ಸೇರಿದಂತೆ ಬೇರೆ ಭಾಷೆಯ ಪದಗಳೇ ಕನ್ನಡ ಭಾಷೆಯ ಮೇಲೆ ಪ್ರಭುತ್ವ ಸಾಧಿಸುತ್ತವೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ನೆಲೆ ಇಲ್ಲವಾಗುತ್ತದೆ ಎಂದು ತನ್ನ ಅನುಭವದ ಮಾತು ಹೇಳಿದ ಹೆನ್ರಿಕ್ ವಿದೇಶಿ ಪ್ರಜೆಯಾಗಿದ್ದರೂ ಕನ್ನಡ ಭಾಷೆಯ ಕಾಳಜಿ ಹೊರಗೆಡವಿದರು.
ಪತ್ರಿಕೆ ಓದಿ ತಿಳಿದುಕೊಂಡೆ: ಈ ಸಮ್ಮೇಳನದ ಬಗ್ಗೆ ಯಾರು ಹೇಳಿದರು ಎಂದು ಕೇಳಿದಾಗ ಕನ್ನಡ ಪತ್ರಿಕೆ ಓದಿ, ತಿಳಿದುಕೊಂಡು ಇಲ್ಲಿಗೆ ಬಂದೆ ಎಂದು ಹೇಳಿದರು.
ಸದ್ಯ ಅಂತರ್ಜಾಲ ತಾಣಗಳ ಮೂಲಕ ತಮ್ಮ ಕೆಲಸ ಕಾರ್ಯ ನಿರ್ವಹಿಸುತ್ತಿರುವ ಹೆನ್ರಿಕ್ಗೆ 6 ಭಾಷೆ ಗೊತ್ತು. ಕನ್ನಡ ಭಾಷೆಯಲ್ಲಿ ಬರೆಯುವುದು, ಮಾತಾಡುವುದು ಇವರಿಗೆ ಗೊತ್ತು. ಮೈಸೂರಿನಲ್ಲಿ ಕನ್ನಡ ವಾತಾವರಣ ಹೆಚ್ಚಿರುವುದರಿಂದ ಇದು ಸಾಧ್ಯವಾಯಿತು ಎಂದು ಅವರು ಹೇಳುತ್ತಾರೆ.
ನಾಟಕಗಳಿಗೆ ಒಲವು: ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ) ನಾಟಕಗಳ ಬಗ್ಗೆ ಒಲವು ತೋರುವ ಇವರು, ಹಲವು ಪ್ರದರ್ಶನಗಳನ್ನು ವೀಕ್ಷಿಸಿದ್ದಾರೆ. ನಾಟಕದ ಬಗ್ಗೆ ಒಲವು ಹೊಂದಿದ್ದಾರೆ. ಸದ್ಯ ಬಿಜಾಪುರದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಕ್ಷೀಕರಿಸಿರುವ ಇವರಿಗೆ ಸಮ್ಮೇಳನವನ್ನು ಸಾಹಿತ್ಯೀಕವಾಗಿ ಸಂಘಟಿಸಿದ ರೀತಿಗೆ ಮೆಚ್ಚುಗೆ ಇದೆ. ಇನ್ನೂ ಸುಧಾರಣೆ ಆಗಬೇಕು ಎಂದು ಸೂಚ್ಯವಾಗಿ ಮನದಾಳದ ಮಾತು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

