ಕನ್ನಡ ನಿರಂತರ
ಕನ್ನಡಕ್ಕೆ ಸಾವಿಲ್ಲ, ಕನ್ನಡ ನಶಿಸಲ್ಲ. ಬದಲಾಗಿ ಕನ್ನಡದ ಭವಿಷ್ಯ ಉಜ್ವಲವಾಗಿದೆ ಎಂದು 79ನೇ ಸಾಹಿತ್ಯ ಸಮ್ಮೇಳನಕ್ಕೆ ಭಾರೀ ಸಂಖ್ಯೆಯಲ್ಲಿ...
-ಸಮ್ಮೇಳನಕ್ಕೆ ಎಲ್ಲೆಡೆಯಿಂದ ಹರಿದುಬಂದರು ಕನ್ನಡಿಗರು
-ಗುಮ್ಮಟ ನಗರಿಯಲ್ಲಿ ಸಾರ್ಥಕ ತೆರೆಕಂಡ ಅಕ್ಷರ ಕಮ್ಮಟ
- ವಿನಾಯಕ ಭಟ್ಟ ಮೂರೂರು
ಕನ್ನಡಪ್ರಭ ವಾರ್ತೆ ಬಿಜಾಪುರ ಫೆ.11
ಕನ್ನಡಕ್ಕೆ ಸಾವಿಲ್ಲ, ಕನ್ನಡ ನಶಿಸಲ್ಲ. ಬದಲಾಗಿ ಕನ್ನಡದ ಭವಿಷ್ಯ ಉಜ್ವಲವಾಗಿದೆ ಎಂದು 79ನೇ ಸಾಹಿತ್ಯ ಸಮ್ಮೇಳನಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕನ್ನಡಿಗರು ವಿಶ್ವಕ್ಕೆ ಸಂದೇಶ ರವಾನಿಸಿದ್ದಾರೆ.
ಇದು ಬಿಜಾಪುರ 79ನೇ ಸಾಹಿತ್ಯ ಸಮ್ಮೇಳನದ ಪ್ರಮುಖ ಸಾಧನೆ. ಕನ್ನಡ ನಶಿಸುತ್ತಿದೆ, ಕನ್ನಡದ ಬಗ್ಗೆ ಜನರಿಗೆ ಆಸಕ್ತಿಯಿಲ್ಲ. ಕನ್ನಡ ಅಪಾಯದಲ್ಲಿದೆ ಎಂದು ಭಾಷಣ ಮಾಡುವವರು ಬಿಜಾಪುರದಲ್ಲಿ ನಡೆದ 79ನೇ ಸಾಹಿತ್ಯ ಸಮ್ಮೇಳನಕ್ಕೆ ಬಂದು ನೋಡಬೇಕಿತ್ತು. ಶನಿವಾರ, ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ಜನ ಸ್ವಲ್ಪ ಕಡಿಮೆ ಇದ್ದರು. ಆದರೂ 3 ದಿನವೂ ಸಾಹಿತ್ಯ ಸಮ್ಮೇಳನಕ್ಕೆ ಜನರ ಕೊರತೆಯಾಗಲಿಲ್ಲ. ಸಾಕು ಸಾಕೆನ್ನುವಷ್ಟು ಜನ ಬಂದಿದ್ದರು. ಇಷ್ಟೆಲ್ಲ ಜನ ಎಲ್ಲಿಂದ ಬಂದರು ಎಂದು ಅಚ್ಚರಿಪಡುವಷ್ಟು ಜನ ಆಗಮಿಸಿದ್ದರು.
ಜನರಲ್ಲಿ ಕನ್ನಡದ ಬಗ್ಗೆ ಅಭಿಮಾನವಿಲ್ಲ. ಕನ್ನಡ ಭಾಷೆ ನಶಿಸುತ್ತದೆ ಎಂಬೆಲ್ಲ ಮಾತುಗಳು ಕೇವಲ ಬೊಗಳೆ. ಕನ್ನಡಕ್ಕೆ ಅಪಾರ ಜನ ಬೆಂಬಲವಿದೆ. ಕನ್ನಡದ ಬಗ್ಗೆ ಜನರಿಗೆ ಪ್ರೀತಿಯಿದೆ ಎಂಬುದನ್ನು ಜನ 79ನೇ ಸಾಹಿತ್ಯ ಸಮ್ಮೇಳನದ ಮೂಲಕ ಸಾಬೀತು ಮಾಡಿದ್ದಾರೆ.
ಭರ್ಜರಿ ಪುಸ್ತಕ ವ್ಯಾಪಾರ: ಪುಸ್ತಕ ವ್ಯಾಪಾರಿಗಳು ಹೇಳುವಂತೆ ಈ ಬಾರಿ ಪುಸ್ತಕ ವ್ಯಾಪಾರವೂ ಭರ್ಜರಿಯಾಗಿದೆ. ಪ್ರತಿ ಸಾಹಿತ್ಯ ಸಮ್ಮೇಳನದಲ್ಲೂ ವ್ಯಾಪಾರವಿಲ್ಲ ಎಂಬ ಅವರ ಗೋಳು ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿ ಬರಲಿಲ್ಲ. ಜನರು ಕೇವಲ ಜಾತ್ರೆ ಎಂಬ ಕಲ್ಪನೆಯಿಂದ ಸಾಹಿತ್ಯ ಸಮ್ಮೇಳನಕ್ಕೆ ಬಂದಿರಲಿಲ್ಲ. ಬದಲಾಗಿ ಸಾಹಿತ್ಯ ಪ್ರೀತಿಯಿಂದಲೇ ಆಗಮಿಸಿದ್ದರು ಎಂಬುದಕ್ಕೆ ಪುಸ್ತಕ ಮಾರಾಟವೇ ಸಾಕ್ಷಿ.
ಸ್ವಯಂ ಸೇವಕರ: ಯಥಾಪ್ರಕಾರ ಸಾಹಿತ್ಯ ಸಮ್ಮೇಳನವೆಂದರೆ ಹೀಗೇ. ನಮ್ಮಿಂದ ಸರಿಯಾಗಿ ಸಮ್ಮೇಳನ ಆಯೋಜಿಸಲು ಸಾಧ್ಯವಿಲ್ಲ. ನೀವೇ ಹೊಂದಿಕೊಳ್ಳಬೇಕು ಎಂಬುದನ್ನು ಸಾಹಿತ್ಯ ಪರಿಷತ್ ಸಾಬೀತುಪಡಿಸಿದೆ. ಅವ್ಯವಸ್ಥೆಗಳು ಸಮ್ಮೇಳನದ 3 ದಿನವೂ ರಾರಾಜಿಸಿದವು. ಮೊದಲ ದಿನ ಸ್ವಲ್ಪ ಕಟ್ಟುನಿಟ್ಟಿತ್ತು. ದಿನ ಮತ್ತು ಸಮಯ ಕಳೆದಂತೆ ಜನರನ್ನು ನಿಯಂತ್ರಿಸುವವರ್ಯಾರೂ ಇರಲಿಲ್ಲ. ನಿಯಂತ್ರಣಕ್ಕಾಗಿ ಹಾಕಿದ ಬೇಲಿಗಳೆಲ್ಲ ಜನಶಕ್ತಿಯನ್ನು ತಡೆಯಲು ವಿಫಲವಾಗಿ ನೆಲಕ್ಕೊರಗಿದ್ದವು. ಜನಶಕ್ತಿಗೆ ಜಗ್ಗಿದ ಪೊಲೀಸರು ಕೇವಲ ಮುಖ್ಯವೇದಿಕೆ ಹಾಗೂ ಮಾಧ್ಯಮ ಕೇಂದ್ರಕ್ಕೆ ಮಾತ್ರ ಜನರನ್ನು ನಿಯಂತ್ರಿಸುವ ಹೊಣೆ ಹೊತ್ತಿದ್ದರು. ಉಳಿದಂತೆ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಕೊರತೆ ಕಾಣಿಸಿದ್ದು ಸ್ವಯಂ ಸೇವಕರದ್ದು. ಸಾಕಷ್ಟು ಕಡೆ ಸಾಹಿತ್ಯ ಸಮ್ಮೇಳನಗಳು ನಡೆದಾಗ ಸ್ವಯಂ ಸೇವಕರ ದಂಡೇ ಇರುತ್ತದೆ. ಇದು ಎಷ್ಟೋ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಆದರೆ ಸಂಘಟಕರು ಸ್ವಯಂ ಸೇವಕರನ್ನು ಗುರುತಿಸುವಲ್ಲಿ ವಿಫಲರಾಗಿರುವುದು ಸ್ಪಷ್ಟವಾಗಿತ್ತು.
ಸಪ್ಪೆ ಗೋಷ್ಠಿಗಳು 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮತ್ತೊಂದು ಹಿನ್ನಡೆ. ಕನ್ನಡದ ಭವಿಷ್ಯದ ಸವಾಲುಗಳ ಕುರಿತು ಒಂದೂ ಪರಿಣಾಮಕಾರಿ ಗೋಷ್ಠಿ ಇರಲಿಲ್ಲ. ಇದ್ದೊಂದು ಗೋಷ್ಠಿಯೂ ಅರ್ಧಕ್ಕೇ ಮುಗಿಯಿತು. ಬಹುತೇಕ ಎಲ್ಲ ಗೋಷ್ಠಿಗಳು ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಇದ್ದವೇ ಆಗಿದ್ದವು. ಗೋಷ್ಠಿಗಳಲ್ಲಿ ಮಾತಾಡಿದ ಹೆಚ್ಚಿನವರು ಅಂಥ ಹೆಸರಿರುವ ಸಾಹಿತಿಗಳೂ ಆಗಿರಲಿಲ್ಲ. ಪರಿಣಾಮಕಾರಿ ಭಾಷಣ ಮಾಡಲು ಹೆಚ್ಚಿನವರು ವಿಫಲರಾದರು. ಇದರಿಂದಾಗಿ ಗೋಷ್ಠಿಗಳು ಸಪ್ಪೆಯಾಗಿದ್ದವು. ವಿಶೇಷ ಚರ್ಚೆಯನ್ನು ಹುಟ್ಟುಹಾಕಲು ಯಾವ ಗೋಷ್ಠಿಯೂ ಸಮರ್ಥವಾಗಿರಲಿಲ್ಲ. ಕನ್ನಡದ ಭವಿಷ್ಯದ ಸವಾಲುಗಳು, ಮೊಬೈಲ್, ಕಂಪ್ಯೂಟರ್ ಯುಗದಲ್ಲಿ ಕನ್ನಡ, ಯುನಿಕೋಡ್ ಮುಂತಾದವುಗಳ ಬಗ್ಗೆ ಸಮ್ಮೇಳನದಲ್ಲಿ ಒಂದು ಗೋಷ್ಠಿಯೂ ಇಲ್ಲದಿರುವುದು ಸಮ್ಮೇಳನ ಸಂಯೋಜಕರಿಗೆ ದೂರದೃಷ್ಟಿಯ ಕೊರತೆ ಇತ್ತು ಎಂಬುದನ್ನು ಬಿಂಬಿಸಿತು. ಆದರೆ ಅವೆಲ್ಲವನ್ನೂ ಜನಶಕ್ತಿ, ಕನ್ನಡ ಪ್ರೀತಿ ಮತ್ತು ಧೂಳು ಮುಚ್ಚಿಹಾಕಿತು.
ವಿವಾದಕ್ಕೆಡೆಯಾದ ನಿರ್ಣಯ: ಸಮ್ಮೇಳನದ ನಿರ್ಣಯದಲ್ಲಿ ಕಲಂ 371(ಜೆ) ತಿದ್ದುಪಡಿ ಮೂಲಕ ಹೈ-ಕ ಪ್ರದೇಶಕ್ಕೆ ದೊರೆತಿರುವ ವಿಶೇಷ ಸ್ಥಾನಮಾನಕ್ಕೆ ಹಿಂದುಳಿದ ಬಿಜಾಪುರ ಜಿಲ್ಲೆಯನ್ನೂ ಸೇರಿಸಬೇಕು ಎಂಬುದು ವಿವಾದಕ್ಕೆಡೆ ಮಾಡಿಕೊಟ್ಟಿದೆ. ನಾಲ್ಕು ದಶಕಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಹೈ-ಕ ಭಾಗದ ಹಿಂದುಳಿದ 6 ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಕಲ್ಪಿಸಲು ಒಪ್ಪಿಗೆ ನೀಡಿದೆ. ಆದರೆ, ಈಗ ಇದ್ದಕ್ಕಿದ್ದಂತೆ ಬಿಜಾಪುರ ಕೂಡ ಸೇರಿಸಬೇಕು ಎಂದು ನಿರ್ಣಯ ಕೈಗೊಂಡಿದ್ದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.
ನವ ನಿರ್ಣಯಗಳು
-ಸಂವಿಧಾನದ ಪರಿಚ್ಛೇದ 343ನೇ ವಿಧಿಯಿಂದ 351ನೇ ವಿಧಿಯವರೆಗೆ ವಿಧಿಸಿರುವ ಎಲ್ಲ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ನೀಡಲು 'ರಾಷ್ಟ್ರೀಯ ಭಾಷಾ ನೀತಿ' ಜಾರಿಗೆ ತರಬೇಕು. ಹಿಂದಿ ಅಬ್ಬರದಲ್ಲಿ ಕನ್ನಡ ನಿರ್ಲಕ್ಷಿಸದಂತೆ ಕ್ರಮ ವಹಿಸಬೇಕು.
-ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರದ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಬೇಕು. ಉನ್ನತ ಶಿಕ್ಷಣದಲ್ಲಿ ಗರಿಷ್ಠ ಮೀಸಲಾತಿ ಕಲ್ಪಿಸಬೇಕು.
-ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆ ಲಭಿಸುವ ವ್ಯವಸ್ಥೆಯಾಗಬೇಕು. ಡಾ. ಸರೋಜಿನಿ ಮಹಿಷಿ ವರದಿ ತಕ್ಷಣ ಜಾರಿಯಾಗಬೇಕು.
-ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕೊರತೆಯಾಗದಂತೆ ಪೂರಕ ವಾತಾವರಣ ಸೃಷ್ಟಿಸಬೇಕು.
-ಕನ್ನಡ ಸಿನಿಮಾ, ಟಿವಿಗಳಿಗೆ ಮಾರಕವಾಗಿರುವ ಡಬ್ಬಿಂಗ್ ಹಾವಳಿ ತಡೆಗಟ್ಟಬೇಕು.
-371(ಜೆ) ತಿದ್ದುಪಡಿ ಅಡಿ ದೊರೆತಿರುವ ವಿಶೇಷ ಸ್ಥಾನಮಾನಕ್ಕೆ ಬಿಜಾಪುರ ಕೂಡ ಸೇರಿಸಬೇಕು.
-ಕಾವೇರಿ ನದಿ ನೀರು ಹಂಚಿಕೆಯಲ್ಲಿ ಉದ್ಭವಿಸಿರುವ ಸಮಸ್ಯೆ ನಿವಾರಣೆಗೆ ಸುಪ್ರೀಂ ಕೋರ್ಟ್ ಮಾನವೀಯ ನೆಲೆಯಲ್ಲಿ ಪ್ರಕರಣವನ್ನು ಪುನರ್ ಪರಿಶೀಲಿಸಬೇಕು.
-ಪ್ರಾಚೀನ ಮತ್ತು ಐತಿಹಾಸಿಕ ದಾಖಲೆಗಳಲ್ಲಿ ಗುಮ್ಮಟ ನಗರಿ ಬಿಜಾಪುರಕ್ಕೆ 'ವಿಜಯಪುರ' ಎಂದು ಮರು ನಾಮಕರಣ ಮಾಡಬೇಕು.
-ಬಿಜಾಪುರ ಮಹಿಳಾ ವಿವಿ ಕಾರ್ಯವ್ಯಾಪ್ತಿ ವಿಸ್ತರಿಸಿ ಎಲ್ಲ ಮಹಿಳಾ ಕಾಲೇಜುಗಳು ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

