ಪ್ರಧಾನ ಸುದ್ದಿ

ಕರ್ನಾಟಕಕ್ಕೆ ಗೋಳ್ ಎಕ್ಸ್‌ಪ್ರೆಸ್

ಕರ್ನಾಟಕಕ್ಕೆ ಗೋಳ್ ಎಕ್ಸ್‌ಪ್ರೆಸ್
Published On :

ನವದೆಹಲಿ: ಒಂಬತ್ತು ಹೊಸ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿರುವ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಭಾರಿ ಕೊಡುಗೆಯನ್ನೇನೂ ನೀಡಿಲ್ಲ. ಆದರೆ, ಯೋಜನೆಗಳ ಲೆಕ್ಕದಲ್ಲಿ ಕರ್ನಾಟಕಕ್ಕೆ ದಕ್ಕಿರುವ ಯೋಜನೆಗಳ ಸಂಖ್ಯೆ ಹೆಚ್ಚಿದ್ದು, ಎಲ್ಲವೂ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂಬಂತಿವೆ.
ಹೊಸದಾಗಿ ಒಂಬತ್ತು ಎಕ್ಸ್‌ಪ್ರೆಸ್ ರೈಲುಗಳ ಜತೆಗೆ ಮೂರು ಪ್ಯಾಸೆಂಜರ್ ರೈಲುಗಳು, ಇರುವ ಎಂಟು ಎಕ್ಸ್‌ಪ್ರೆಸ್ ರೈಲುಗಳನ್ನು ವಿಸ್ತರಿಸಿದ್ದಾರೆ. ನಾಲ್ಕು ಹೊಸ ಮಾರ್ಗಗಳನ್ನೂ ಘೋಷಿಸಿದ್ದಾರೆ. ಕೋಲಾರದಲ್ಲೊಂದು ರೈಲುಬೋಗಿ ನಿರ್ಮಾಣ ಘಟಕ, ಬೆಂಗಳೂರಿನಲ್ಲಿ ಎಕ್ಸಿಕ್ಯೂಟಿವ್ ಲಾಂಜ್ ನಿರ್ಮಾಣ, ಮಂಗಳೂರಿನಲ್ಲಿ ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಹಿಂದಿನ ಬಜೆಚ್‌ನಲ್ಲಿ ಘೋಷಿಸಿದ್ದ ಯೋಜನೆಗಳಿಗೆ ಈ ಬಾರಿ ಕಿಂಚಿತ್ ಅನುದಾನ ಒದಗಿಸಿ, ಹಳೆಯ ಯೋಜನೆಗಳನ್ನು ಜೀವಂತವಾಗಿಡುವ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಹಿಂದಿನ ಬಜೆಟ್‌ಗಳಲ್ಲಿ ಘೋಷಿಸಿದ್ದ ಯೋಜನೆಗಳು, ಈಗ ಘೋಷಿಸಿರುವ ಯೋಜನೆಗಳು ಸೇರಿ 1936 ಕಿ.ಮೀ. ಉದ್ದದ ರೈಲು ಮಾರ್ಗದ ವಿವಿಧ ಹಂತದ ಯೋಜನೆಗಳಿಗೆ ಒಟ್ಟು ಬೇಕಾಗಿರುವ ಅನುದಾನ 7949 ಕೋಟಿ.
2013-14ರ ಸಾಲಿಗೆ ಘೋಷಿಸಿರುವ ಅನುದಾನ 243.85 ಕೋಟಿ ಮಾತ್ರ. ಅಂದರೆ, ಒಟ್ಟು ಯೋಜನಾ ವೆಚ್ಚದ ಶೇ.3ರಷ್ಟು ಮೊತ್ತವನ್ನು ಮಾತ್ರ ಮಂಜೂರು ಮಾಡಲಾಗಿದೆ.
ರಾಜ್ಯದ ಬೇಡಿಕೆಗಿಲ್ಲ ಮಣೆ: ಉಚಿತ ಭೂಮಿ ನೀಡುವ ಹಾಗೂ ಶೇ.50 ರಷ್ಟು ವೆಚ್ಚ ಭರಿಸುವ ವಾಗ್ದಾನ ನೀಡಿದ್ದರೂ ರಾಜ್ಯ ಸರ್ಕಾರದ ಬೇಡಿಕೆಯನ್ನು ಪೂರ್ಣ ಪರಿಗಣನೆಗೆ ತೆಗೆದುಕೊಂಡಿಲ್ಲ. ವಿಧಾನಸಭಾ ಚುನಾವಣೆಗೆ ಹೋಗುತ್ತಿರುವ ಕರ್ನಾಟಕಕ್ಕೆ ಹೆಚ್ಚಿನ ಕೊಡುಗೆ ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ.
ಘೋಷಿಸಿರುವ ಎಕ್ಸ್‌ಪ್ರೆಸ್‌ಗಳ ಪೈಕಿ ಏಳು ವಾರಕ್ಕೊಮ್ಮೆ ಸಂಚರಿಸಿದರೆ, ಎರಡು ಮಾತ್ರ ನಿತ್ಯ ಸಂಚರಿಸುವ ರೈಲುಗಳು. ಬೆಂಗಳೂರು-ಮಂಗಳೂರು ನಡುವೆ ನಿತ್ಯ ರೈಲು ಸಂಚಾರದ ಬೇಡಿಕೆಯನ್ನೂ ಪರಿಗಣಿಸಿಲ್ಲ. ವಿಸ್ತರಿತ ರೈಲುಗಳ ಪೈಕಿ ನಾಲ್ಕರಿಂದ ರಾಜ್ಯದ ಪ್ರಯಾಣಿಕರಿಗೆ ಅನುಕೂಲ, ಉಳಿದವು ಲೆಕ್ಕಕ್ಕೆ ಮಾತ್ರ.
- ರೇಣುಕಾಪ್ರಸಾದ್ ಹಾಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.