ಕಾಪ್ಟರ್ ಕಾಂಡ ಜೆಪಿಸಿಗೆ
ಸಮಿತಿಯಲ್ಲಿ ರಾಜ್ಯಸಭೆಯ 20 ಸಂಸದರು, ಸಮಿತಿಯಲ್ಲಿ 30 ಮಂದಿ ಸದಸ್ಯರು; ಮೂರು ತಿಂಗಳಲ್ಲಿ ವರದಿ ಸಲ್ಲಿಕೆಗೆ ಸೂಚನೆ...

ನವದೆಹಲಿ: ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲಿದೆ. ಈ ಸಂಬಂಧದ ನಿರ್ಣಯಕ್ಕೆ ರಾಜ್ಯಸಭೆ ಒಪ್ಪಿಗೆ ನೀಡಿದೆ.
ಪ್ರಮುಖ ಪ್ರತಿಪಕ್ಷ ಬಿಜೆಪಿ, ತೃಣಮೂಲ ಕಾಂಗ್ರೆಸ್ ಮತ್ತು ಜೆಡಿಯುನ ವಿರೋಧದ ಹೊರತಾಗಿಯೂ ಕೇಂದ್ರ ಸರ್ಕಾರ ಈ ನಿರ್ಣಯ ಪ್ರಕಟಿಸಿದೆ.
ದೇಶದ ತೆರಿಗೆದಾರರ ಹಣ ಪೋಲಾಗಲು ಬಿಡುವುದಿಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಜಂಟಿ ಸಂಸದೀಯ ಸಮಿತಿ ಈ ಸಂಬಂಧ ತನಿಖೆ ನಡೆಸಿ ವರದಿ ನೀಡಲಿದೆ ಎಂದು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರು ರಾಜ್ಯಸಭೆಯಲ್ಲಿ ಹೇಳಿದರು.
ರಾಜ್ಯಸಭೆಯಲ್ಲಿ ಚರ್ಚೆ ನಡೆದ ನಂತರ 30 ಸದಸ್ಯರ ಜೆಪಿಸಿ ರಚನೆ ಕುರಿತ ನಿರ್ಣಯವನ್ನು ರಾಜ್ಯಸಭೆ ಅಂಗೀಕರಿಸಿತು. ಆದರೆ ಬಿಜೆಪಿ, ಜೆಡಿಯು, ಟಿಎಂಸಿ, ಸಿಪಿಐ, ಎಜಿಪಿ ಸಭಾತ್ಯಾಗ ನಡೆಸಿದವು.
ಈ ಕುರಿತಂತೆ ನಿರ್ಣಯ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಅವರು, ಜೆಪಿಸಿ ಕಾರ್ಯ ವಿಧಾನದ ಬಗ್ಗೆ ಸದನಕ್ಕೆ ವಿವರಣೆ ನೀಡಿದರು. ಇನ್ನು 3 ತಿಂಗಳಲ್ಲಿ ಸಮಿತಿ ವರದಿ ನೀಡಲಿದೆ ಎಂದರು. ಅಲ್ಲದೆ ಸಭಾತ್ಯಾಗ ನಡೆಸಿದ ವಿಪಕ್ಷ ಸದಸ್ಯರ ಕ್ರಮ ವಿರೋಧಿಸಿದ ಅವರು, ವಿಷಯದಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಈ ಕುರಿತಂತೆ ನಡೆದ ಚರ್ಚೆಯಲ್ಲಿ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 3600 ಕೋಟಿಯ ವ್ಯವಹಾರ ಮತ್ತು 360 ಕೋಟಿ ಕಿಕ್ಬ್ಯಾಕ್ ಸಲ್ಲಿಕೆಯಾಗಿದೆ ಎಂದು ಗೊತ್ತಿದ್ದರೂ ಸಹ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಆಪಾದಿತರನ್ನು ರಕ್ಷಿಸಲು ಹೊರಟಿದೆ ಎಂದು ಅರುಣ್ ಜೇಟ್ಲಿ ನೇತೃತ್ವದಲ್ಲಿ ವಿಪಕ್ಷ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರು ಸರ್ಕಾರ ಯಾವುದೇ ಆರೋಪಿಗಳನ್ನು ರಕ್ಷಿಸಲು ಹೊರಟಿಲ್ಲ. ಈಗಾಗಲೇ 11 ಮಂದಿ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ಇವರೆಲ್ಲರ ಕುರಿತಂತೆ ವಿಚಾರಣೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನನ್ನ ಇಲಾಖೆಯಲ್ಲಿ ಇದುವರೆಗೆ ಯಾರನ್ನೂ ರಕ್ಷಿಸಿದ ಉದಾಹರಣೆಗಳಿದ್ದರೆ ತೋರಿಸಿ ಎಂದರು. ಜೊತೆಗೆ ಜೆಪಿಸಿ ರಚನೆಯನ್ನೂ ಸಮರ್ಥಿಸಿಕೊಂಡರು.
ಇದಕ್ಕೆ ತೀವ್ರವಾಗಿ ವಿರೋಧಿಸಿದ ಅರುಣ್ ಜೇಟ್ಲಿ ಅವರು ಜೆಪಿಸಿಯ ಅಗತ್ಯತೆಯನ್ನೇ ಪ್ರಶ್ನಿಸಿದರು. ಮುಂದಿನ ಚುನಾವಣೆ ಒಳಗೆ ವರದಿ ಬರಲು ಸಾಧ್ಯವೇ ಇಲ್ಲ. ಅಲ್ಲದೆ ನಿಮಗೆ ವಿರೋಧ ಪಕ್ಷಗಳ ಸಾಲಿನಲ್ಲಿರುವ ಸಂಸದರೊಬ್ಬರನ್ನು ಜೆಪಿಸಿಯ ಮುಖ್ಯಸ್ಥರನ್ನಾಗಿ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಸರ್ಕಾರಕ್ಕೆ ನಿಜವಾದ ಆಪಾದಿತರಿಗೆ ಶಿಕ್ಷೆ ಕೊಡಿಸುವ ಉದ್ದೇಶ ಇದ್ದಂತಿಲ್ಲ ಎಂದು ಆರೋಪಿಸಿದರು.
ಹಗರಣ ಬಯಲಿಗೆ ಬಂದು ಇಷ್ಟು ದಿನಗಳಾದರೂ ಸಹ ಆಪಾದಿತರ ವಿರುದ್ಧ ಇನ್ನೂ ಏಕೆ ಎಫ್ಐಆರ್ ದಾಖಲಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ನನ್ನ ಇಲಾಖೆಯಲ್ಲಿ ಇದುವರೆಗೆ ಯಾರನ್ನೂ ರಕ್ಷಿಸಿರುವ ಬಗ್ಗೆ ಉದಾಹರಣೆ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಈ ಸಂಬಂಧ ಜಂಟಿ ಸಂಸದೀಯ ಸಮಿತಿ ವಿಚಾರಣೆ ನಡೆಸಲಿದೆ. ದೋಷಿಗಳಿಗೆ ಶಿಕ್ಷೆಯಾಗಲಿದೆ.
- ಎ.ಕೆ. ಆ್ಯಂಟನಿ, ರಕ್ಷಣಾ ಸಚಿವ
ಕೇಂದ್ರ ಸರ್ಕಾರ ತಪ್ಪಿತಸ್ಥರ ರಕ್ಷಣೆಗೆ ಹೊರಟಿದೆ. ಜೆಪಿಸಿಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಸಂಭವ ಕಡಿಮೆ, ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ವರದಿ ಬರುವುದೇ ಇಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ವಿಪಕ್ಷ ಸಂಸದರೊಬ್ಬರನ್ನು ಜೆಪಿಸಿ ನಾಯಕನನ್ನಾಗಿ ಮಾಡಲಿ.
- ಅರುಣ್ ಜೇಟ್ಲಿರಾಜ್ಯಸಭಾ ವಿಪಕ್ಷ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


