ಗಣಿಗೆ ಬಿದ್ದ ಬದುಕು

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ.28
ಗಣಿಗಾರಿಕೆಯ ಒಂದು ಮುಖ ಲಾಭದ ಪ್ರತೀಕವಾದರೆ, ಮತ್ತೊಂದು ಮುಖ ದಿವಾಳಿಯ ಪ್ರತೀಕವೂ ಹೌದು!
ಗಣಿ ಮೋಹಕ್ಕೆ ಬಿದ್ದ ಅದೆಷ್ಟೋ ಕುಟುಂಬಗಳು ಈಗ ಬೀದಿಗೆ ಬೀಳುವ ಹಂತಕ್ಕೆ ಬಂದಿವೆ. ಗಣಿಯನ್ನು ನೆಚ್ಚಿಕೊಂಡು ರಾತ್ರೋರಾತ್ರಿ ಶ್ರೀಮಂತರಾಗಲು ಹೋದವರ ಮನೆಗಳು, ಇದೀಗ ಬ್ಯಾಂಕುಗಳ ಮೂಲಕ ಹರಾಜಿಗೆ ಬಂದಿವೆ. ಇದು ಗಣಿ ಮಾಲೀಕರ ಕಥೆಯಲ್ಲ! ಪೋಷಕರ ಮಾತು ಕೇಳದೆ ಡಿಗ್ಗಿಂಗ್, ಟ್ರಾನ್ಸ್ಪೋರ್ಟ್, ಟ್ರೇಡಿಂಗ್, ಲೋಡಿಂಗ್ ಸೇರಿದಂತೆ ಇತರ ಡೀಲ್ಗಳಲ್ಲಿ ಹಣ ತೊಡಗಿಸಿಕೊಂಡು ಕೈ ಸುಟ್ಟುಕೊಂಡವರ ಕಥೆ. ಇದೊಂದು ರೀತಿ 'ಅನ್ಟೋಲ್ಡ್ ಸ್ಟೋರಿ'. ಬ್ಯಾಂಕ್ವೊಂದರಲ್ಲಿ ಗಣಿಗಾಗಿ ಸಾಲ ಮಾಡಿದವರ ಪರಿಸ್ಥಿತಿಯತ್ತ ಕಣ್ಣು ಹಾಯಿಸಿದಾಗ ಕಂಡಿದ್ದು ಬರೀ ಕಣ್ಣೀರಿನ ಕಥೆ. ಗಣಿ ಮೋಹಕ್ಕೆ ಬಿದ್ದು ಮನೆಗಳನ್ನು ಅಡವಿಟ್ಟು ಇದೀಗ ಬಿಕಾರಿಯಾಗುವ ಹಂತದಲ್ಲಿದ್ದಾರೆ. ಸಾಲ ನೀಡಿದ ಬ್ಯಾಂಕುಗಳು ಹರಾಜಿಗೆ ಮುಂದಾಗಿವೆ.
ಇದು ಕೇವಲ ಆಸ್ತಿ ಹರಾಜಿನ ಮಾತು ಅಷ್ಟೇ ಅಲ್ಲ, ಇದರ ಜತೆ ಮಾನಕ್ಕೂ ಸಂಚಕಾರ ಬಂದಿದೆ. ಇದೀಗ ಆ ಕುಟುಂಬಗಳು ಹೇಳಲೂ ಆಗದ, ನುಂಗಲೂ ಆಗದ ಪರಿಸ್ಥಿತಿಯಲ್ಲಿವೆ. ಇಂತಹ ಕುಟುಂಬಗಳ ಮೂರು ನಿದರ್ಶನಗಳು ಇಲ್ಲಿವೆ.
ಪ್ರಕರಣ 1
ನಿವೃತ್ತಿಯ ಹಣ
ಅದಿರಿನಲ್ಲಿ ಹೋಮ!
ಬೋರಪ್ಪ (ಹೆಸರು ಬದಲಾಯಿಸಿದೆ). ಇವರು ನಿವೃತ್ತ ಸರ್ಕಾರಿ ನೌಕರ. ಸೇವಾವಧಿಯಲ್ಲೇ ಕಷ್ಟಪಟ್ಟು 20 ಲಕ್ಷ ಖರ್ಚು ಮಾಡಿ ಮನೆ ಕಟ್ಟಿದ್ದರು. ನಿವೃತ್ತಿಯ ದಿನಗಳಲ್ಲಿ ಅವರಿಗೆ ಪಿಎಫ್, ಇನ್ನಿತರ ಹಣ 10 ರಿಂದ 15 ಲಕ್ಷ ಬಂದಿತ್ತು. ನೆಮ್ಮದಿಯ ನಿವೃತ್ತ ಜೀವನ ಕಳೆಯಬಹುದೆಂಬ ಲೆಕ್ಕಚಾರವಿತ್ತು. ಅವರ ಮಗ 1 ಲಕ್ಷ ಗಣಿಯಲ್ಲಿ ತೊಡಗಿಸಿ, ಎರಡು ದಿನಗಳಲ್ಲಿ 1.25 ಲಕ್ಷ ಪಡೆಯುವ ವ್ಯವಹಾರದ ರುಚಿಕಂಡರು.
ರಾತ್ರೋರಾತ್ರಿ ಶ್ರೀಮಂತಿಕೆಯ ಕನಸು ಕಂಡು, ಇನ್ನು ಹೆಚ್ಚು ಹಣ ತೊಡಗಿಸಿದರೆ, ದ್ವಿಗುಣ ಹಣ ಬರುತ್ತದೆ ಎಂಬ ಲೆಕ್ಕಾಚಾರ ಮಾಡಿದರು. ತಂದೆ ಬೋರಪ್ಪ ಕಟ್ಟಿಸಿದ ಮನೆಯನ್ನು ಬ್ಯಾಂಕಿನಲ್ಲಿ ಅಡವಿಟ್ಟು ರು. 20 ಲಕ್ಷ ಸಾಲ ಪಡೆದು, ಗಣಿಯಲ್ಲಿ ತೊಡಗಿಸಿದರು. ಆದರೆ, ಅದಿರು ರಫ್ತುನಿಷೇಧ ಹಾಗೂ ಗಣಿಗಾರಿಕೆಯ ಕಟ್ಟುನಿಟ್ಟಿನ ನಿಯಮ ಪಾಲನೆಯಿಂದಾಗಿ 20 ಲಕ್ಷ ಹಿಂದಕ್ಕೆ ಬರಲೇ ಇಲ್ಲ! ಇದೀಗ ಬೋರಪ್ಪನ ಮನೆ ಹರಾಜಿಗೆ ಬಂದಿದೆ. ನಿವೃತ್ತ ಜೀವನದಲ್ಲಿ ಸುಖ ಸಂತೋಷದಿಂದ ಇರಬೇಕಾದ ಬೋರಪ್ಪ, ಮಗನ ರಾತ್ರೋರಾತ್ರಿ ಶ್ರೀಮಂತನಾಗಬೇಕೆಂಬ ಆಸೆ ಇಡೀ ಕುಟುಂಬ ನೆಮ್ಮದಿಯನ್ನೇ ಕಿತ್ತುಕೊಂಡಿದೆ.
ಪ್ರಕರಣ 2
ರೈತನಿಗೂ ಬಂದಿತ್ತು, ಗಣಿ ಆಸೆ!
ಕೆಂಚಲಿಂಗನಗೌಡ (ಹೆಸರು ಬದಲಾಯಿಸಿದೆ). 70 ವರ್ಷದಿಂದ ನೀರಾವರಿ ವ್ಯವಸಾಯ ಮಾಡಿದ ರೈತ. ಗ್ರಾಮದಲ್ಲಿ ಉತ್ತಮ ಹೆಸರುಳ್ಳ, ಬೇರೆಯವರಿಗೆ ಸಾಲ ಕೊಡುವ, ಉತ್ತಮ ಬೆಳೆ ಬೆಳೆಯುವ ರೈತರು. ಅವರು ಬಳ್ಳಾರಿಯಲ್ಲಿ ದೊಡ್ಡದೊಂದು ಬಂಗಲೆ ಕಟ್ಟಿಕೊಂಡು, ಮೊಮ್ಮಕ್ಕಳು ತಾನು, ತನ್ನ ಮಕ್ಕಳಂತೆ ರೈತರಾಗಬಾರದು ಎಂಬ ಆಸೆಯಿಂದ ವಿದ್ಯಾಭ್ಯಾಸ ಮಾಡಿಸಲು ಅಲ್ಲಿಯೇ ನೆಲೆಸಿದ್ದಾರೆ. ಆದರೆ ಗಣಿ ಬೂಮ್ ಇದ್ದಾಗ ಅವರ ಮಕ್ಕಳಲ್ಲಿ ಗಣಿಯಿಂದ ಕೋಟ್ಯಂತರ ಹಣ ಸಂಪಾದಿಸಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಟ್ರೇಡಿಂಗ್, ಲೋಡಿಂಗ್, ಡಿಗ್ಗಿಂಗ್, ಟ್ರಾನ್ಸ್ಪೋರ್ಟಿಂಗ್ ಹೀಗೆ ಇತರ ಡೀಲ್ಗಳಲ್ಲಿ ಹಣ ತೊಡಗಿಸಲು ತಂದೆಯನ್ನು ಕಾಡಿಬೇಡಿ ಬಂಗಲೆಯನ್ನು ಬ್ಯಾಂಕಿಗೆ ಅಡವಿಟ್ಟು 20 ರಿಂದ 30 ಲಕ್ಷ ಸಾಲ ಪಡೆದಿದ್ದಾರೆ. ಆದರೆ ಗಣಿಯಲ್ಲಿ ತೊಡಗಿಸಿದ ಹಣ ಹಿಂದಕ್ಕೆ ಬಾರದೆ, ಇದೀಗ ಮನೆ ಹರಾಜಿಗೆ ಬ್ಯಾಂಕ್ ನೋಟಿಸ್ ಹೊರಡಿಸಿದೆ. ಇನ್ನೊಬ್ಬರಿಗೆ ಸಾಲ ಕೊಡುತ್ತಿದ್ದ ರೈತ, ಮಕ್ಕಳು ಮಾಡಿದ ತಪ್ಪಿಗೆ, ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ಇದೀಗ ಗ್ರಾಮದಲ್ಲಿರುವ ಹೊಲ ಅಥವಾ ಇತರ ಆಸ್ತಿ ಮಾರಾಟ ಮಾಡಿ ಬ್ಯಾಂಕಿಗೆ ಹಣ ಕಟ್ಟಿ ಮಾನ ಹೋಗುವುದನ್ನು ನಿಲ್ಲಿಸಲು ಮುಂದಾಗಿದ್ದಾರೆ.
ಪ್ರಕರಣ 3
ಗುತ್ತಿಗೆದಾರನಿಗೆ ಗಣಿ ಚಪಲ
ಸುಯೋಧನ (ಹೆಸರು ಬದಲಾಯಿಸಿದೆ). ಇವರು ಸಿವಿಲ್ ಕಂಟ್ರಾಕ್ಟರ್. ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಲಾರಿಗಳಿಗೆ ತುಂಬಾ ಬೇಡಿಕೆ ಇತ್ತು.
ಮನೆಯನ್ನು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದು ಲಾರಿ ಖರೀದಿಗೆ ಹಾಗೂ ಗಣಿಯಲ್ಲಿ ಹಣ ತೊಡಗಿಸಿಕೊಂಡಿದ್ದಾರೆ. ಸ್ವಲ್ಪ ದಿನಗಳ ಕಾಲ ಲಾರಿಗಳು ಓಡಾಟವಿತ್ತು. ಆದರೆ, ಗಣಿಗಾರಿಕೆ ಸ್ಥಗಿತದಿಂದ ಲಾರಿಗಳನ್ನು ನಿಲ್ಲಿಸುವ ಜೊತೆಗೆ ಗಣಿಯಲ್ಲಿ ಹೂಡಿದ್ದ ಹಣ ಹಿಂದಕ್ಕೆ ಬಾರದೆ ಬ್ಯಾಂಕಿಗೆ ಸಾಲ ಕಟ್ಟಲಾರದೆ, ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇವರ ಮನೆಯೂ ಹರಾಜಿಗೆ ಬರುವ ಹಂತದಲ್ಲಿದೆ.
ಹರಾಜಿಗೆ ಮುಂದಾದ ಬ್ಯಾಂಕುಗಳು
ಇದು ಒಂದು ಬ್ಯಾಂಕಿನಲ್ಲಿನ ಕೆಲವೇ ನಿದರ್ಶನ ಮಾತ್ರ. ಅದೇ ಬ್ಯಾಂಕಿನಲ್ಲಿ ಇಂತಹ ಬಹಳಷ್ಟು ಪ್ರಕರಣಗಳಿವೆ. ಬ್ಯಾಂಕುಗಳಲ್ಲಿ ಮಾಹಿತಿ ಪಡೆಯುತ್ತಾ ಹೋದರೆ ನೂರಾರು, ಸಾವಿರಾರು ಕುಟುಂಬಗಳು ಗಣಿಗಾರಿಕೆಯಿಂದ ರಾತ್ರೋರಾತ್ರಿ ಶ್ರೀಮಂತರಾಗಲು ಹೋಗಿ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿವೆ. ಇದೀಗ ಬ್ಯಾಂಕುಗಳು ಕೂಡ ಸಾಲ ಕಟ್ಟದಿರುವ ಗ್ರಾಹಕರನ್ನು ಪತ್ತೆ ಹಚ್ಚಿ, ನೋಟಿಸ್ ನೀಡಿ, ಕೋರ್ಟ್ ಮೆಟ್ಟಿಲೇರಿಸುವ ಜೊತೆಗೆ, ಹರಾಜು ಪ್ರಕ್ರಿಯೆಗೆ ಮುಂದಾಗಿವೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


