ಪ್ರವಾಹ ಭೀತಿ

ಕನ್ನಡಪ್ರಭ ವಾರ್ತೆ ಬೆಂಗಳೂರು ಜು. 4
ಕಳೆದ ಎರಡ್ಮೂರು ವರ್ಷಗಳಿಂದ ಅನಾವೃಷ್ಟಿ ಕಂಡಿದ್ದ ರಾಜ್ಯ ಇದೀಗ ಅತಿವೃಷ್ಟಿಯತ್ತ ಜಾರುತ್ತಿದೆ.
ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವುದರಿಂದ ಅತಿವೃಷ್ಟಿ ಎದುರಿಸಲು ಸಜ್ಜಾಗುವಂತೆ ಸರ್ಕಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಪ್ರವಾಹದಿಂದ ಜನ ತೊಂದರೆಗೊಳಗಾಗುವ ಪರಿಸ್ಥಿತಿ ಬಂದರೆ ಅಂಥವರನ್ನು ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಗಳಿಗೆ ಸೂಚಿಸಿದ್ದಾರೆ.
ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿನ ಬಹುತೇಕ ನದಿಗಳು ಗುರುವಾರವೂ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದವು. ದಕ್ಷಿಣ ಕನ್ನಡದ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಾಗಾಗಿ, ಜಿಲ್ಲೆಯ ಎಲ್ಲ ನದಿಗಳು ರೌದ್ರರೂಪ ತಾಳಿದ್ದು, ನಾಲ್ವರು ಬಲಿಯಾಗಿದ್ದಾರೆ. ಇದೇ ವೇಳೆ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಒಬ್ಬ ಮಳೆಗೆ ಅಸು ನೀಗಿದ್ದಾನೆ. ಒಟ್ಟು ಐವರು ಮೃತಪಟ್ಟಂತಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲ ಪೂರ್ತಿ ಜಲಾವೃತವಾಗಿದ್ದು, ಕಾವೇರಿ ನದಿ ರೌದ್ರಾವತಾರ ತಾಳಿದೆ. ಪ್ರವಾಹದಿಂದಾಗಿ ಹಲವಾರು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.
ಮಡಿಕೇರಿ, ಮಂಗಳೂರು ಸಂಪರ್ಕ ಕೂಡಾ ಕಡಿತಗೊಂಡಿದೆ. ಜಿಲ್ಲೆಯ ಮಳೆ ದೈವ ಪಾಡಿ ಇಗ್ಗುತ್ತಪ್ಪ ದೇವಾಲಯ 10 ವರ್ಷದ ಬಳಿಕ ಇದೇ ಮೊದಲು ಜಲಾವೃತವಾಗಿದೆ. ಭಾಗಮಂಡಲ ವ್ಯಾಪ್ತಿಯ 16 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಮಂಗಳೂರಿನ ಮಳವೂರಿನ ಅಣೆಕಟ್ಟೆಯಲ್ಲಿ ಕಸಕಡ್ಡಿ, ಮರದ ತುಂಡು, ಹೂಳು ತುಂಬಿ ಬ್ಲಾಕ್ ಆಗಿದ್ದು, ಹತ್ತಿರದ ಮನೆಗಳಿಗೆ ನೀರು ನುಗ್ಗಿದೆ. ಗಂಜಿ ಕೇಂದ್ರಗಳನ್ನು ಕೂಡಾ ತೆರೆಯಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.
ಬಸ್ತಿಪಡ್ಪುನಲ್ಲಿರುವ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಮನೆ ಕೂಡಾ ಜಲಾವೃತವಾಗಿದೆ. ಮನೆಯ ಸದಸ್ಯರನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಮಲೆನಾಡಿನ ತುಂಗಾ, ಶರಾವತಿ, ವರದಾ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ನದಿಪಾತ್ರದ ತಗ್ಗು ಪ್ರದೇಶದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಮಳೆಯ ತೀವ್ರತೆ ಎಷ್ಟಿದೆ ಎಂದರೆ, ಲಿಂಗನಮಕ್ಕಿ ಜಲಾಶಯಕ್ಕೆ ಗುರುವಾರ ಒಳಹರಿವಿನ ಪ್ರಮಾಣ ಒಂದು ಲಕ್ಷ ಕ್ಯುಸೆಕ್ ದಾಟಿತ್ತು! ತುಂಗಾ ಜಲಾಶಯಕ್ಕೆ 90 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಪಕ್ಷಿಧಾಮ ಇನ್ನು ಜಲಾವೃತದಿಂದ ಮುಕ್ತವಾಗಿಲ್ಲ. ವೆಯನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಗುರುವಾರ 40 ಸಾವಿರ ಕ್ಯುಸೆಕ್ ನೀರಿನ ಒಳಹರಿವು ಇತ್ತು. ಅದೇ ರೀತಿ, ಹಾರಂಗಿ ಜಲಾಶಯಕ್ಕೆ 25 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 22,500 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಕೆಆರ್ಎಸ್ ಅಣೆಕಟ್ಟೆ ನೀರಿನ ಪ್ರಮಾಣ 95 ಅಡಿಗೆ ಏರಿಕೆಯಾಗಿದೆ. ಗುರುವಾರ ಕೆಆರ್ಎಸ್ಗೆ 25 ಸಾವಿರ ಕ್ಯುಸೆಕ್ ಒಳ ಹರಿವು ಇತ್ತು.
ಸಹಜ ಸ್ಥಿತಿಯತ್ತ ಉತ್ತರ ಕನ್ನಡ: ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕೊಂಚ ತಗ್ಗಿದ್ದು, ಉಕ್ಕೇರಿದ್ದ ಗಂಗಾವಳಿ ನದಿ ತುಸು ಶಾಂತವಾಗಿದೆ. ಹಾಗಾಗಿ ಗಂಜಿ ಕೇಂದ್ರದಲ್ಲಿ ಆಶ್ರಯಪಡೆದಿದ್ದ ಅನೇಕರು ತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆ.
ಕಟ್ಟೆಚ್ಚರ ವಹಿಸಿ: ಸಿದ್ದು
ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅತಿವೃಷ್ಟಿಯಿಂದ ಅನಾಹುತಗಳು ಸಂಭವಿಸದಂತೆ ಎಲ್ಲಾ ಕಡೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರವಾಹದಿಂದ ಜನ ತೊಂದರೆಗೊಳಗಾಗುವ ಪರಿಸ್ಥಿತಿ ಬಂದರೆ ಅಂಥವರನ್ನು ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಅವರು ತಿಳಿಸಿದರು.
1 ಲಕ್ಷ ಕ್ಯುಸೆಕ್ ನೀರು!
ಮಲೆನಾಡು ಪ್ರದೇಶದ ಶರಾವತಿ ನದಿಯಲ್ಲಿ ಪ್ರವಾಹ ಏರುಮುಖವಾಗಿದ್ದು, ಗುರುವಾರ ಲಿಂಗನಮಕ್ಕಿ ಜಲಾಶಯದ ಒಳಹರಿವು 1 ಲಕ್ಷ ಕ್ಯುಸೆಕ್ ದಾಟಿತ್ತು. ತುಂಗಾ ಜಲಾಶಯಕ್ಕೂ ಒಳಹರಿವು 90 ಸಾವಿರ ಕ್ಯುಸೆಕ್ ಇತ್ತು. ಇದರೊಂದಿಗೆ ಜಲಾಶಯ ಸಂಗ್ರಹದಲ್ಲಿ ವ್ಯಾಪಕ ಏರಿಕೆ ಕಂಡಿದೆ. ಸಾಗರ ತಾಲೂಕಿನ ಬೀಸನಗದ್ದೆ ಗ್ರಾಮದಲ್ಲಿ ವರದಾ ನದಿಯ ಪ್ರವಾಹ ಇಳಿಕೆಯಾಗಿಲ್ಲ. ಈ ಗ್ರಾಮ ಇನ್ನೂ ಜಲಾವೃತವಾಗಿದೆ. ಜಿಲ್ಲೆಯ ಮಲೆನಾಡ ತಾಲೂಕುಗಳಲ್ಲಿ ಮಳೆ ಕಡಿಮೆಯಾಗಿದೆ. ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಬಳಿ ರಸ್ತೆಯ ಮೇಲೆ ಇನ್ನೂ ನೀರು ಹರಿಯುತ್ತಿದ್ದು, ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿವೆ. ಮಂಡಗದ್ದೆ ಪಕ್ಷಿಧಾಮದ ನಡುಗಡ್ಡೆ ಸಂಪೂರ್ಣ ಜಲಾವೃತವಾಗಿದೆ. ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಹಾಗೂ ಲಕ್ಕುಂದ ಗ್ರಾಮಗಳಲ್ಲಿಯೂ ಸಹ ಪ್ರವಾಹ ಇಳಿಕೆಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


