ತಾಳಗುಪ್ಪ- ಹೊನ್ನಾವರ ರೈಲು ಮಾರ್ಗಕ್ಕೆ ಮುಕ್ತಿ ಯಾವಾಗ?
ಕ.ಪ್ರ. ವಾರ್ತೆ, ಬೆಂಗಳೂರು, ಜು.4-
ಮಲೆನಾಡು ಮತ್ತು ಬಯಲುಸೀಮೆಯನ್ನು ಒಳಗೊಂಡಿರುವ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ಅನುಕೂಲವಾಗುವ ಕೆಲವು ರೈಲು ಯೋಜನೆಗಳು ನೆನೆಗುದಿಗೆಗೆ ಬಿದ್ದಿವೆ.
ಈ ಮೂರು ಜಿಲ್ಲೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಹೊಸ ರೈಲುಗಳನ್ನು ಓಡಿಸಬೇಕೆಂಬ ಬೇಡಿಕೆಗೆ ಇನ್ನೂ ಬೆಲೆ ಸಿಕ್ಕಿಲ್ಲ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಿವರ್ಸ್ ಇಂಟರ್ಸಿಟಿ ರೈಲು ಓಡಿಸಬೇಕೆಂಬುದು ಇಲ್ಲಿನವರ ಆಗ್ರಹ ಹಾಗೂ ಮನವಿ. ಶಿವಮೊಗ್ಗದಿಂದ ಮೈಸೂರಿಗೆ ಬೆಳಗಿನ ರೈಲು ಓಡಿಸಬೇಕು ಎಂಬುದು ಜನರ ಬೇಡಿಕೆಯಾಗಿದೆ. ತಾಳಗುಪ್ಪ-ಹೊನ್ನಾವರ ಸಂಪರ್ಕ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಮುಗಿದಿದೆ. ಆದರೆ, ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ, ಈ ಯೋಜನೆ ಕುಂಟುತ್ತಾ ಸಾಗಿದೆ. ದಾವಣಗೆರೆ ಜನರಿಗೆ ಲಾಭವಾಗುವ ತುಮಕೂರು-ಹಿರಿಯೂರು-ಚಿತ್ರದುರ್ಗ- ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಆದರೆ, ಕೆಲವೆಡೆ ಭೂಸ್ವಾಧೀನ ತೀವ್ರಗತಿಯಲ್ಲಿ ನಡೆಯುತ್ತಿಲ್ಲ. ಮತ್ತೊಂದೆಡೆ ಹರಿಹರ-ಕೊಟ್ಟೂರು ರೈಲು ಮಾರ್ಗದ ಎಲ್ಲ ಕಾರ್ಯಗಳು ಸಂಪೂರ್ಣವಾಗಿವೆ. ಆದರೆ, ಭೂಮಿ ಕಳೆದುಕೊಂಡಿರುವ ಹರಿಹರ ಮತ್ತು ಹರಪನಹಳ್ಳಿ ತಾಲೂಕಿನ ಕೆಲವು ರೈತರು ನ್ಯಾಯಯುತ ಪರಿಹಾರ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಸುಮಾರು 2 ದಶಕದಷ್ಟು ಹಳೆಯದಾದ ಕಡೂರು-ಚಿಕ್ಕಮಗಳೂರು ರೈಲು ಮಾರ್ಗ ಪೂರ್ತಿಗೊಂಡಿದ್ದು, ರೇಲ್ವೆ ಗೇಟ್ಗಳ ನಿರ್ಮಾಣದ ಕಾಮಗಾರಿ ಮಾತ್ರ ಬಾಕಿ ಇದ್ದು, ಈ ಕೆಲಸವೂ ಪೂರ್ತಿಗೊಂಡರೆ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. ಈಗಾಗಲೇ ಪ್ರಾಯೋಗಿಕವಾಗಿ ರೈಲು ಓಡಿಸಲಾಗಿದೆ. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರೆ, ಈ ಭಾಗದ ಅನೇಕ ಯೋಜನೆಗಳು ಶೀಘ್ರವೇ ಜಾರಿಯಾಗುವುದರಲ್ಲಿ ಸಂಶಯವೇ ಇಲ್ಲ.
ಆಗಬೇಕಿರುವುದೇನು?
1. ಈ ಭಾಗದ ಬಹುದಿನಗಳ ಬೇಡಿಕೆಯಾದ ತಾಳಗುಪ್ಪ-ಹೊನ್ನಾವರ ಸಂಪರ್ಕ ರೈಲು ಮಾರ್ಗ ಇನ್ನೂ ಪೂರ್ತಿಯಾಗಿಲ್ಲ. ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ. ಇಲ್ಲಿ ರೈಲು ಅರಣ್ಯ ಪ್ರದೇಶದಲ್ಲಿ ಸುರಂಗಮಾರ್ಗವಾಗಿ ಸಾಗಲಿದೆ. ಹಾಗಾಗಿ, ರಾಜ್ಯ ಸರ್ಕಾರ ತನ್ನ ಪಾಲಿನ 2000 ಕೋಟಿ ನೀಡಿದರೆ ಯೋಜನೆ ಆರಂಭಿಸುವುದಾಗಿ ರೇಲ್ವೆ ಇಲಾಖೆ ಹೇಳುತ್ತದೆ. ಆದರೆ, ರಾಜ್ಯ ಸರ್ಕಾರದಿಂದ ಇನ್ನು ಅಂಥ ಪ್ರಯತ್ನಗಳು ಆಗಿಲ್ಲ.
2. ತುಮಕೂರು-ಹಿರಿಯೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಎರಡು ಪ್ರದೇಶಗಳಲ್ಲಿ ಸರ್ವೇ ಕಾರ್ಯ ಮುಗಿದಿದೆ. ಭೂಮಿ ಎಷ್ಟು ಅಗತ್ಯ ಎಂಬುದರ ಬಗ್ಗೆ ಈಗಾಗಲೇ ತುಮಕೂರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆಯಾಗಿದ್ದು, ಶೀಘ್ರವೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.
3. ಶಿವಮೊಗ್ಗ-ಹರಿಹರ ರೈಲು ಮಾರ್ಗದಲ್ಲಿ ಹರಿಹರ-ಹೊನ್ನಾಳಿ ನಡುವಿನ ಮಾರ್ಗದ ಸರ್ವೇ ಕಾರ್ಯ ಮುಗಿದಿದೆ. ಆದರೆ, ಶಿವಮೊಗ್ಗ-ಹೊನ್ನಾಳಿ ನಡುವೆ ಫಲವತ್ತಾದ ಕೃಷಿ ಭೂಮಿ ಇರುವುದರಿಂದ ರೈತರು ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಈ ಯೋಜನೆ ಕುಂಠಿತಗೊಂಡಿದೆ.
4. ಹರಿಹರ-ಕೊಟ್ಟೂರು ರೈಲು ಮಾರ್ಗದ ಎಲ್ಲ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ರೈತರು ಸಮರ್ಪಕ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗಾಗಿ, ಈ ಮಾರ್ಗದಲ್ಲಿ ರೈಲುಗಳು ಓಡಿಸಲು ಸಾಧ್ಯವಾಗಿಲ್ಲ. ಈ ಸರ್ಕಾರ ನ್ಯಾಯಯುತ ಪರಿಹಾರ ನೀಡಿದರೆ, ಈ ಪ್ರದೇಶದ ಜನರಿಗೆ ಈ ಮಾರ್ಗ ಲಾಭ ತರಲಿದೆ.
5. ದಾವಣಗೆರೆ ಜಿಲ್ಲೆಯ ತೋಳಹುಣಸೆ ರೈಲು ನಿಲ್ದಾಣ ಹೆಚ್ಚುವರಿ ಹಳಿ ಹಾಗೂ ಹೊಸ ಸ್ಟೇಷನ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭವಾಗಬೇಕಿದೆ.
6. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಿವರ್ಸ್ ಇಂಟರ್ಸಿಟಿ ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬೆಳಗಿನ ರೈಲು ಓಡಿಸಬೇಕೆಂಬ ಬೇಡಿಕೆ ಇದೆ.
7. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ಕುರಿತು ಬಜೆಟ್ನಲ್ಲಿ ಘೋಷಣೆಯಾಗಿದೆ. ಆದರೆ, ಈ ಮಾರ್ಗ ಅರಣ್ಯ ಪ್ರದೇಶದಲ್ಲಿ ಸಾಗುವುದರಿಂದ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಬೇಕಿದೆ.
8. ಶಿವಮೊಗ್ಗ ನಗರದ ಹೊಳೆಹೊನ್ನೂರು ರಸ್ತೆ ಹಾಗೂ ಸವಳಂಗ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕಿದೆ.
9. ಶಿವಮೊಗ್ಗ-ಬೆಂಗಳೂರು ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತಿಸಬೇಕೆಂಬುದು ಹೊಸ ಬೇಡಿಕೆ.
10. ಶಿವಮೊಗ್ಗ ಜಿಲ್ಲೆಯ ಜೇಡಕಟ್ಟೆ ಬಳಿ ಮೇಲುಸೇತುವೆ ನಿರ್ಮಾಣವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

