ಪ್ರತ್ಯೇಕ ಮಂಗಳೂರು ರೈಲು ವಿಭಾಗ ಆರಂಭವಾಗುತ್ತಾ?
ಕ.ಪ್ರ. ವಾರ್ತೆ, ಬೆಂಗಳೂರು, ಜು.5-
ಸಮುದ್ರ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ನೆರವಾಗ ಬಲ್ಲ ಅನೇಕ ರೈಲು ಯೋಜನೆಗಳು ನೆನೆಗುದಿಗೆಗೆ ಬಿದ್ದಿವೆ. ಅಷ್ಟೇ ಅಲ್ಲದೆ, ಕೊಡಗು ಜಿಲ್ಲೆಗೆ ಉಪಯೋಗವಾಗುವ ಎರಡು ಯೋಜನೆಗಳಿಗೆ ಶ್ರೀಕಾರ ಸಿಕ್ಕಿದೆ. ಆದರೆ, ಪ್ರಗತಿ ಅಷ್ಟಕಷ್ಟೇ.
ಅತಿ ಹೆಚ್ಚು ಆದಾಯ ತರುವ ಪ್ರದೇಶವಾಗಿರುವ ಮಂಗಳೂರಿಗೆ ಪ್ರತ್ಯೇಕ ರೈಲು ವಿಭಾಗರ ರಚನೆ ಮಾಡಬೇಕು ಎಂಬುದು ಬಹು ದಿನಗಳ ಬೇಡಿಕೆ. ಈಗ ಮಂಗಳೂರು ಪ್ರದೇಶ ಕೇರಳದ ಪಾಲ್ಘಾಟ್ ಜತೆ ಸೇರ್ಪಡೆಯಾಗಿರುವುದರಿಂದ ಲಾಭವೆಲ್ಲ ಕೇರಳ ಪಾಲಾಗುತ್ತಿದೆ. ಅಲ್ಲದೆ, ಕೊಂಕಣ ರೇಲ್ವೆಯೊಂದಿಗೆ ಮಂಗಳೂರು ಕೇಂದ್ರವನ್ನು ಸೇರಿಸಬೇಕು. ಇದಕ್ಕಾಗಿ ಅನೇಕ ಪ್ರಯತ್ನಗಳು ನಡೆದಿವೆ. ಆದರೆ, ಫಲಿತಾಂಶ ಇನ್ನೂ ಸಿಕ್ಕಿಲ್ಲ. ಪಣಂಬೂರು-ಮಂಗಳೂರು ದ್ವಿಪಥ ಹಳಿ ನಿರ್ಮಾಣಕ್ಕೆ 175 ಕೋಟಿ ಬೇಕಿದೆ. ಆದರೆ, ಸರ್ಕಾರ ಕಳೆದ ಮೂರು ವರ್ಷದಿಂದ, ವರ್ಷಕ್ಕೆ 5ರಿಂದ 10 ಕೋಟಿ ಮಾತ್ರ ನೀಡುತ್ತಿದೆ. ಹಾಗಾಗಿ, ಈ ಕಾಮಗಾರಿ ವಿಳಂಬವಾಗುತ್ತಿದೆ. ಮಂಗಳೂರು-ಸುಬ್ರಹ್ಮಣ್ಯ-ಅಹ್ಮದಾಬಾದ್- ದಿಲ್ಲಿ ಮಾರ್ಗವಾಗಿ ಹೊಸ ರೈಲು ಓಡಿಸಬೇಕೆಂಬ ಬೇಡಿಕೆ ಕೂಡಾ ಈಡೇರಿಲ್ಲ. ಇನ್ನು ಉಡುಪಿ ಜಿಲ್ಲೆಗೆ ನೆರವಾಗಬಲ್ಲ ಕೊಚ್ಚುವೇಲಿಯಿಂದ ಡೆಹ್ರಾಡೂನ್ಗೆ ಹೋಗುವ ರೈಲು ಉಡುಪಿಯಲ್ಲಿ ನಿಲುಗಡೆಯಾಗಬೇಕಿದೆ. ರೋಹದಿಂದ ತೂಕೂರ್ವರೆಗೆ ದ್ವಿಪಥ ಟ್ರ್ಯಾಕ್ ನಿರ್ಮಾಣವಾಗಬೇಕೆಂಬುದು ಇಲ್ಲಿನವ ಆಗ್ರಹ.
ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಗೆ ಸಮೀಕ್ಷೆ ಮುಗಿದಿದೆ. ಆದರೆ, 2 ವರ್ಷಗಳಿಂದ ಯೋಜನೆ ನೆನೆಗುದಿಗೆಗೆ ಬಿದ್ದಿದೆ. ಕುಶಾಲನಗರ ಮತ್ತು ಗೋಣಿಕೊಪ್ಪಲಿಗೆ ರೈಲು ಸಂಚಾರ ಸಾಧ್ಯವಾದರೆ ಕೊಡಗಿನ ವಾಣಿಜ್ಯ ಬೆಳೆಗಳಾದ ಕಾಫಿ, ಬತ್ತ, ಅಂತೋರಿಯಂ ಪುಷ್ಪೋದ್ಯಮಕ್ಕೆ ಭಾರಿ ನೆರವಾಗಲಿದೆ. ಆದರೆ, ರಾಜ್ಯದ ಈ ಯೋಜನೆಗಳನ್ನು ತೀವ್ರಗತಿಯಲ್ಲಿ ಪೂರ್ಣಿಗೊಳಿಸಲಾಗುವುದೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ಆಗಬೇಕಿರುವುದೇನು?
1. ಕೇರಳದ ಪಾಲ್ಘಾಟ್ನಿಂದ ಬೇರ್ಪಡಿಸಿ ಮಂಗಳೂರಿಗೆ ಪ್ರತ್ಯೇಕ ರೈಲು ವಿಭಾಗ ಆರಂಭವಾಗಬೇಕು. ಕೊಂಕಣ ರೇಲ್ವೆಯೊಂದಿಗೆ ಮಂಗಳೂರು ಕೇಂದ್ರ ಸೇರ್ಪಡಿಸಬೇಕು. ಬೆಂಗಳೂರು-ಮಂಗಳೂರು ರೈಲನ್ನು ಸೇಲಂ, ಕೊಣ್ಣೂರು ಮಾರ್ಗವಾಗಿ ಓಡಿಸದೆ, ಅರಸೀಕೆರೆ ಮಾರ್ಗವಾಗಿ ಓಡಿಸಿದರೆ ಹೆಚ್ಚಿನ ಲಾಭವಾಗುತ್ತದೆ. ಇದರಿಂದಾಗಿ 36 ಗಂಟೆಗಳಷ್ಟು ಸುದೀರ್ಘವಾದ ಪ್ರಯಾಣ ತಪ್ಪಿದಂತಾಗುತ್ತದೆ.
2. ಸುರತ್ಕಲ್-ಮಂಗಳೂರು ಮಧ್ಯೆ ಹಾಗೂ ನೇತ್ರಾವತಿ ಸೇತುವೆಯಿಂದ ಕಂಕನಾಡಿ, ಮಂಗಳೂರುವರೆಗೆ ದ್ವಿಪಥ ಟ್ರ್ಯಾಕ್ ನಿರ್ಮಾಣವಾಗಬೇಕು.
3. 2006ರಲ್ಲಿ ಮಂಗಳೂರು-ಶ್ರವಣಬೆಳಗೂಳ ರೈಲು ಸಂಚಾರಕ್ಕೆ ಪರಾವನಿಗೆ ಸಿಕ್ಕಿದ್ದರೂ ಇದುವರೆಗೂ ರೈಲು ಸಂಚಾರ ಆರಂಭವಾಗಿಲ್ಲ. ಕೇವಲ ಒಂದು ಬಾರಿ ಮಾತ್ರ ರೈಲು ಓಡಿದೆ.
4. ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು-ಕಾರವಾರ ಹಗಲು ರೈಲು ಪ್ರತಿ ದಿನ ಓಡುವಂತಾಗಬೇಕು.
5. ಮಂಗಳೂರು-ಸುಬ್ರಹ್ಮಣ್ಯ-ಅಹ್ಮದಾಬಾದ್- ದಿಲ್ಲಿ ಹಾಗೂ ವಾಸ್ಕೋ-ಮಡ್ಗಾಂವ್-ಮಂಗಳೂರು ಮಧ್ಯೆ ಪ್ಯಾಸೆಂಜರ್ ಹೊಸ ರೈಲು ಬಿಡಬೇಕು ಎಂಬುದು ಜನರ ಆಗ್ರಹವಾಗಿದೆ.
6. ಗೋವಾದಿಂದ ಮಂಗಳೂರಿಗೆ ಬೆಳಗಿನ ಜಾವ ರೈಲು ಬರುವ ವ್ಯವಸ್ಥೆಯಾಗಬೇಕಿದೆ. ಪುಶ್ಫುಲ್ ರೈಲು ಕಾರವಾರದಿಂದ ಮಂಗಳೂರಿಗೆ ಬರುವುದಕ್ಕೆ ಆದ್ಯತೆ ದೊರೆಯಬೇಕಿದೆ.
7. ಮೈಸೂರು- ಕುಶಾಲನಗರ ರೈಲು ಮಾರ್ಗ ಯೋಜನೆಗೆ ಸರ್ವೆ ಕಾರ್ಯ ಮುಗಿದಿದೆ. ಯೋಜನೆ ಜಾರಿ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಅಂತೆಯೇ, ಮೈಸೂರು- ಕೆ.ಆರ್. ನಗರ- ಕುಶಾಲನಗರ ಮಧ್ಯೆ ರೇಲ್ವೆ ಯೋಜನೆ ಪ್ರಸ್ತಾವನೆ ಇದೆ. ಇನ್ನೂ ಕೈಗೂಡಿಲ್ಲ.
8. ಮೈಸೂರು- ಗೋಣಿಕೊಪ್ಪ ಮಾರ್ಗವಾಗಿ ಕೇರಳದ ತಲಚೇರಿಗೆ ರೈಲು ಮಾರ್ಗ ಯೋಜನೆ ಪ್ರಸ್ತಾವನೆ ಇದೆ. ಕೇರಳಿಗರಿಂದ ಇದಕ್ಕೆ ಹೆಚ್ಚಿನ ಒತ್ತಡವಿದೆ.
9. ನಂದಿಕೂರು ಬಜಗೋಳಿ-ಉಜಿರೆ-ಚಾರ್ಮುಡಿ-ಹಳೆ ಮೂಡಿಗೆರೆ ಮಧ್ಯೆ ರೈಲು ಮಾರ್ಗ ನಿರ್ಮಿಸಬೇಕೆಂಬ ಬೇಡಿಕೆ ಇದೆ.
10. ಮಂಗಳೂರು ಸೆಂಟ್ರಲ್ ರೇಲ್ವೆ ನಿಲ್ದಾಣದಲ್ಲಿ ಈಗ 3 ಫ್ಲಾಟ್ಫಾರಂ ಇವೆ. ಆದರೆ, ಇನ್ನು ಎರಡು ಫ್ಲಾಟ್ಫಾರಂ ನಿರ್ಮಾಣ ಮಾಡಬೇಕಾದ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

