ಸಂವಿಧಾನ ಪೀಠದ ಕಕ್ಷೆಗೆ ಮಾತೃಭಾಷೆ

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು. 5-
ಶೈಕ್ಷಣಿಕ ಭಾಷಾ ಮಾಧ್ಯಮದ ರಗಳೆ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವೇರಿದೆ.
ಕಳೆದ 31 ವರ್ಷಗಳ ಈ ರಗಳೆ ಕುರಿತಂತೆ ಅಂತಿಮ ನಿರ್ಣಯ ನೀಡಲು ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ನಿರಾಕರಿಸಿದೆ. ಬದಲಾಗಿ ಮಾತೃಭಾಷೆ ಹಾಗೂ ಶಿಕ್ಷಣ ಮಾಧ್ಯಮದ ಕುರಿತಂತೆ 5 ಪ್ರಶ್ನೆಗಳನ್ನು ಎತ್ತಿ, ಸಂವಿಧಾನ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.
2008ರಲ್ಲಿ ಶೈಕ್ಷಣಿಕ ಮಾಧ್ಯಮ ಕುರಿತಂತೆ ರಾಜ್ಯ ಸರ್ಕಾರದ ಆಧಿಸೂಚನೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸದಾಶಿವಂ ಹಾಗೂ ನ್ಯಾ.ರಂಜನ್ ಗೊಗೊಯ್ ಅವರ ವಿಭಾಗೀಯ ಪೀಠವು ಅಂತಿಮ ಆದೇಶ ನೀಡಲು ನಿರಾಕರಿಸಿದೆ. ಈ ಪ್ರಕರಣ ಕುರಿತಂತೆ 1994ರಲ್ಲಿ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ನ್ಯಾಯಪೀಠ ಕನ್ನಡ ಭಾಷೆಯನ್ನು ಶೈಕ್ಷಣಿಕ ಮಾಧ್ಯಮವೆಂದು ಎತ್ತಿಹಿಡಿದಿದೆ. ಈ ಹಿನ್ನೆಲೆಯಲ್ಲಿ ದ್ವಿಸದಸ್ಯ ಪೀಠವು ಮತ್ತೆ ತನ್ನ ಅಭಿಪ್ರಾಯ ಹೇಳುವುದು ಉತ್ತಮವಲ್ಲ. ಸಾಂವಿಧಾನಿಕ ವಿಚಾರಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅಧಿಕ ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠವೇ ಅಂತಿಮ ತೀರ್ಪು ನೀಡುವುದು ಒಳಿತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣ ದೇಶದ ಶೈಕ್ಷಣಿಕ ಮಾಧ್ಯಮದ ವಿಚಾರವನ್ನು ಒಳಗೊಂಡ ಹಿನ್ನೆಲೆಯಲ್ಲಿ ಕೂಡಲೇ ಸಂವಿಧಾನ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿ ವಿಚಾರಣೆ ಆರಂಭಿಸುವುದು ಉತ್ತಮ. ಈ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ರೆಜಿಸ್ಟ್ರಿಗೆ ನ್ಯಾ. ಸದಾಶಿವಂ ಸೂಚಿಸಿದ್ದಾರೆ. ಕಳೆದ 3 ದಶಕಗಳಿಂದ ನಡೆಯುತ್ತಿರುವ ಭಾಷಾ ಹೋರಾಟಕ್ಕೆ ಶೀಘ್ರದಲ್ಲಿಯೇ ಅಂತಿಮ ತೆರೆ ಬೀಳುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರದ 1989 ಹಾಗೂ 1994ರ ಆದೇಶದಲ್ಲಿ ದೊಡ್ಡ ಬದಲಾವಣೆಯಿಲ್ಲ ಎನ್ನುವ ರಾಜ್ಯ ಸರ್ಕಾರದ ವಾದ ಸಮರ್ಪಕವಾಗಿದೆ. ಆದರೆ 1994ರ ಆದೇಶದಲ್ಲಿ 4 ಹೆಚ್ಚುವರಿ ಕಲಂಗಳನ್ನು ಸೇರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮಾತೃ ಭಾಷೆಯಲ್ಲಿ ಓದಬೇಕೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಓದಬೇಕೆ ಎಂಬ ಗೊಂದಲವಿದೆ. ಇದೇ ವಿಚಾರವನ್ನು ಖಾಸಗಿ ಶಾಲೆಗಳು ಹಾಗೂ ಪಾಲಕರ ಸಂಘಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿವೆ.ಈ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠವು 1994ರಲ್ಲಿ ತನ್ನ ಅಭಿಪ್ರಾಯ ತಿಳಿಸಿದೆ. ಅಂದಿನ ಆದೇಶದ ಪ್ರಕಾರ ಪ್ರಾಥಮಿಕ ಶಿಕ್ಷಣದ ಮಾಧ್ಯಮವು ಕರ್ನಾಟಕ್ಕಕೆ ಸಂಬಂಧಿಸಿ ಕನ್ನಡದಲ್ಲಿಯೇ ಇರಬೇಕು. ಈಗ ಇದೇ ವಿಚಾರ ಹಾಗೂ ಅಧಿಸೂಚನೆ ಮೇಲೆ ಮತ್ತೊಂದು ವಿಭಾಗೀಯ ಪೀಠ ತನ್ನ ಆದೇಶ ನೀಡುವುದು ಸರಿಯಲ್ಲ. ವಿದ್ಯಾರ್ಥಿ ಅಥವಾ ಪಾಲಕರು ಮಾತ್ರ ಶಿಕ್ಷಣದ ಮಾಧ್ಯಮ ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ. ಸರ್ಕಾರ ಈ ಕುರಿತಂತೆ ಮಧ್ಯ ಪ್ರವೇಶಿಸುವುದು ಸೂಕ್ತವಲ್ಲ ಎಂಬ ಪಾಲಕರ ಸಂಘ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ವಾದವನ್ನು ನಾವು ಒಪ್ಪಿಕೊಂಡರೆ ಇದೇ ಕೋರ್ಟ್ನ ವಿಭಾಗೀಯ ಪೀಠದ ಆದೇಶಕ್ಕೆ ವಿರೋಧಾಭಾಸವಾಗುತ್ತದೆ. ಇದನ್ನು ಸುಪ್ರೀಂ ಕೋರ್ಟ್ನ ಪೂರ್ಣ ಪೀಠ ಮಾತ್ರ ಪರಿಶೀಲಿಸಬೇಕಿದೆ. ಅರ್ಜಿಯಲ್ಲಿ ಪ್ರಸ್ತಾಪವಾಗಿರುವ ವಿಚಾರಗಳು ಈ ದೇಶದ ಭಾವಿ ನಾಗರಿಕರ ಜೀವನವನ್ನು ನಿರ್ಧರಿಸುವ ಅಂಶಗಳಾಗಿವೆ. ಪ್ರಾಥಮಿಕ ಶಿಕ್ಷಣವು ಒಬ್ಬ ವಿದ್ಯಾರ್ಥಿಯ ಜೀವನವನ್ನು ರೂಪಿಸಲು ಪ್ರಮುಖ ಪಾತ್ರವಹಿಸುತ್ತದೆ. ವಿದ್ಯಾರ್ಥಿಯ ಆಲೋಚನಾ ಲಹರಿ ಹಾಗೂ ಸಂವಹನ ಕೌಶಲ್ಯವನ್ನು ಪ್ರಾಥಮಿಕ ಶಿಕ್ಷಣದ ಗುಣಮಟ್ಟವು ನಿರ್ಧರಿಸುತ್ತದೆ. ವಿದ್ಯಾರ್ಥಿಯ ಭದ್ರ ಬುನಾದಿಗೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಮುಖ್ಯವಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯಗಳ ಮಾನ್ಯತೆಯನ್ನು ಭಾಷೆಗಳನ್ನಾಧರಿಸಿ ರೂಪಿಸಲಾಗಿದೆ ಎಂಬ ವಿಚಾರವನ್ನು ಮರೆಯುವಂತಿಲ್ಲ. ಈ ವಿಚಾರದಲ್ಲಿ ದೇಶದ ನಾಗರಿಕರ ಮೂಲಭೂತ ಹಕ್ಕುಗಳು ಅಡಗಿವೆ. ಇದಲ್ಲದೇ ಮುಂದಿನ ಜನಾಂಗಗಳ ಭವಿಷ್ಯವನ್ನು ನಮ್ಮ ಆದೇಶ ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಸಾಕಷ್ಟು ಸಾಂವಿಧಾನಿಕ ವಿಚಾರಗಳಿವೆ. ಸಂವಿಧಾನ ಪೀಠವೇ ಇದನ್ನು ನಿರ್ಧರಿಸಬೇಕು. ಆದರೆ ಸಂವಿಧಾನ ಪೀಠದೆದುರು ನಮಗೆ ಬಂದಿರುವ 5 ಸಂಶಯಗಳನ್ನು ಇಡುತ್ತಿದ್ದೇವೆ. ಇದರ ಜತೆಗೆ ಇನ್ನಿತರ ಅಂಶಗಳನ್ನು ಸಂವಿಧಾನ ಪೀಠ ಗಣನೆಗೆ ತೆಗೆದುಕೊಳ್ಳಬಹುದು.
ಪೀಠದ ಪಂಚ ಪ್ರಶ್ನೆ
- ಮಾತೃಭಾಷೆ ಎಂದರೇನು? ವಿದ್ಯಾರ್ಥಿಸ್ನೇಹಿ ಭಾಷೆ ಎಂಬುದು ಮಾತೃಭಾಷೆಯಾದರೆ ಇದನ್ನು ನಿರ್ಧರಿಸುವವರಾರು?
- ವಿದ್ಯಾರ್ಥಿ ಅಥವಾ ಪಾಲಕರು ಶೈಕ್ಷಣಿಕ ಮಾಧ್ಯಮವನ್ನು ನಿರ್ಧರಿಸುವ ಹಕ್ಕು ಹೊಂದಿದ್ದಾರೆಯೆ?
- ಮಾತೃಭಾಷೆಯನ್ನು ಶಿಕ್ಷಣ ಮಾಧ್ಯವನ್ನಾಗಿ ಕಡ್ಡಾಯ ಮಾಡಿದಲ್ಲಿ ಸಂವಿಧಾನದ 14, 19, 29 ಹಾಗೂ 30ನೇ ವಿಧಿ ಉಲ್ಲಂಘನೆಯಾಗುತ್ತದೆಯೆ?
- ಸರ್ಕಾರಿ ಮಾನ್ಯ ಶಾಲೆಗಳೆಂದರೆ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಸೇರುತ್ತವೆಯೆ?
- ಸಂವಿಧಾನದ 350-ಎ ವಿಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆಯೆ? ಅಲ್ಪಸಂಖ್ಯಾತರು ತಮ್ಮ ಮಾತೃಭಾಷೆಯನ್ನು ಶೈಕ್ಷಣಿಕ ಮಾಧ್ಯಮವನ್ನಾಗಿ ಬಳಸಬಹುದೆ?
ಪ್ರಕರಣವೇನು?
ಸಾಹಿತಿ ಡಾ.ವಿ.ಕೃ.ಗೋಕಾಕ್ ವರದಿ ಆಧರಿಸಿ 1982ರ ಜು. 20ರಲ್ಲಿ ಶೈಕ್ಷಣಿಕ ಭಾಷಾ ಮಾಧ್ಯಮ ಕುರಿತಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು. ಈ ಪ್ರಕಾರ ರಾಜ್ಯದಲ್ಲಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕನ್ನಡವನ್ನೇ ಶೈಕ್ಷಣಿಕ ಮಾಧ್ಯಮವಾಗಿ ಸ್ವೀಕರಿಸಬೇಕು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಹೋರಾಟವು 1989ರಲ್ಲಿ ಸುಪ್ರೀಂ ಆದೇಶದ ಮೂಲಕ ಕೊನೆಗೊಂಡಿತ್ತು. ಆ ಬಳಿಕ ಕನ್ನಡ ಮಾಧ್ಯಮ ಶಿಕ್ಷಣವನ್ನು 10ನೇ ತರಗತಿ ಬದಲಾಗಿ 4ನೇ ತರಗತಿವರೆಗೆ ಕಡ್ಡಾಯ ಮಾಡಲಾಯಿತು. 1989ರ ಜೂ.19ರಂದು ಸರ್ಕಾರ ಹೊರಡಿಸಿದ ಈ ಆದೇಶವನ್ನು ಮತ್ತೆ ಸುಪ್ರೀಂವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೊಂಡೊಯ್ದವು. ಆದರೆ ರಾಜ್ಯದ ಆದೇಶವನ್ನು ಸುಪ್ರೀಂ ಕೂಡ ಎತ್ತಿಹಿಡಿಯಿತು. ಮತ್ತೆ 1994ರಲ್ಲಿ ಮಾಧ್ಯಮ ನೀತಿಗೆ ಕೆಲ ಬದಲಾವಣೆ ತರಲಾಯಿತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮತ್ತೆ ಪಿಐಎಲ್ ದಾಖಲಾಯಿತು. 14 ವರ್ಷಗಳ ಕಾನೂನು ಹೋರಾಟದ ಬಳಿಕ 2008ರಲ್ಲಿ ವಿಭಾಗೀಯ ಪೀಠ ತೀರ್ಪು ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


