ಮೊಬೈಲ್ ಐಎಂಇಐ ನಂಬರನ್ನೇ ಬದಲಿಸುವ ಭೂಪರು!
ಕ.ಪ್ರ. ವಾರ್ತೆ , ಹುಬ್ಬಳ್ಳಿ , ಜು.7-
ಕಳೆದು ಹೋಗಿರುವ ಮೊಬೈಲ್ನ ಐಎಂಇಐ ನಂಬರ್ನಿಂದ ಪೊಲೀಸರು ಮೊಬೈಲ್ ಅನ್ನು ಪತ್ತೆ ಹಚ್ಚಿಕೊಡುತ್ತಾರೆಂದು ತಿಳಿದಿದ್ದೀರಾ? ತಪ್ಪು. ಕದ್ದ ಮೊಬೈಲ್ನ ಐಎಂಇಐ (International Mobile Station Equipment Identity) ನಂಬರನ್ನೇ ಬದಲಿಸುವ ನಿಷ್ಣಾತ ಭೂಪರೂ ಇದ್ದಾರೆ. ಹೀಗಾದಾಗ ಕಳೆದು ಹೋದ ನಿಮ್ಮ ದುಬಾರಿ ಮೊಬೈಲ್ ಸಿಗುವುದೇ ಇಲ್ಲ.
ಹೌದು. ಇಂಥ ಬೆಚ್ಚಿ ಬೀಳಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಮೊಬೈಲ್ ಐಎಂಇಐ ನಂಬರನ್ನೇ ಬದಲಿಸುವ ವ್ಯವಸ್ಥಿತ ಜಾಲವೊಂದು ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯದ ಕಳ್ಳರೂ ಮೊಬೈಲ್ ಐಎಂಇಐ ನಂಬರ್ ಬದಲಿಸಿಕೊಂಡು ಹೋಗಲು ಹುಬ್ಬಳ್ಳಿಗೆ ಬರುತ್ತಿದ್ದಾರೆ!
ಏನಿದು ಐಎಂಇಐ ನಂಬರ್?: ಪ್ರತೀ ಮೊಬೈಲ್ಗೂ ಒಂದು ಐಎಂಇಐ ನಂಬರ್ ಇರುತ್ತದೆ. ಮೊಬೈಲ್ ಕಳೆದು ಹೋಗಿದ್ದರೆ ಪೊಲೀಸರಿಗೆ ದೂರು ನೀಡುವಾಗ ಈ ಐಎಂಇಐ ನಂಬರ್ ದಾಖಲಿಸಲು ಪೊಲೀಸರು ಸೂಚಿಸುತ್ತಾರೆ. ಈ ನಂಬರ್ ಅನ್ನು ಮೊಬೈಲ್ ಕಂಪನಿಗೆ ರವಾನಿಸಲಾಗುತ್ತದೆ. ವಿಶೇಷ ಸಾಫ್ಟ್ವೇರ್ನಿಂದ ಕಳೆದು ಹೋಗಿರುವ ಮೊಬೈಲ್ ಆನ್ ಮಾಡಿದ ಕೂಡಲೇ ಆ ಮೊಬೈಲ್ಗೆ ಯಾವ ಸಿಮ್ ಬಳಸಲಾಗಿದೆ? ಅದು ಯಾರ ಹೆಸರಲ್ಲಿದೆ? ಮತ್ತು ಮೊಬೈಲ್ ಬಳಸಲಾಗುತ್ತಿರುವ ಸ್ಥಳದ ಮಾಹಿತಿ ಲಭ್ಯವಾಗುತ್ತದೆ. ಬಳಿಕ ಕಂಪನಿಯವರು ಈ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಾರೆ.
ನಂಬರನ್ನೇ ಬದಲಾಯಿಸುತ್ತಾರೆ!: ಹುಬ್ಬಳ್ಳಿ ಹಾಗೂ ಹೈದರಾಬಾದ್ನಲ್ಲಿರುವ ವ್ಯವಸ್ಥಿತ ಜಾಲವೊಂದು ಈ ಐಎಂಇಐ ನಂಬರನ್ನೇ ಬದಲಾಯಿಸುವಷ್ಟು ತಾಂತ್ರಿಕ ಜ್ಞಾನ ಹೊಂದಿದೆ. 'ಸಾಫ್ಟವೇರ್ ಸೆಟ್ ಅಪ್ ಬಾಕ್ಸ್'ಗೆ ಅಳವಡಿಸಿ ತಾವು ಕದ್ದ ಮೊಬೈಲ್ನ ಸೂಕ್ಷ್ಮ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತಾರಲ್ಲದೇ ಹಾಲಿ ಇರುವ ಐಎಂಇಐ ನಂಬರ್ನ್ನು ರಿಫ್ರೆಷ್ ಮಾಡುತ್ತಾರೆ.
ಬಳಿಕ ಮೊಬೈಲ್ ಅನ್ನು ತಾವೇ ಸಿದ್ಧ ಪಡಿಸಿಕೊಂಡಿರುವ 'ಹಾರ್ಡ್ವೇರ್ ಪ್ರೊಫೆಷನಲ್ ಟೂಲ್ ಬಾಕ್ಸ್'ವೊಂದಕ್ಕೆ ಅಳವಡಿಸಿ ರೂಟ್ಫೈಲ್ನಲ್ಲಿ ಎಂಟರ್ ಆಗುತ್ತಾರೆ. ಜಿಫ್ಫೋನ್ ಟೂಲ್, ಚೆಕ್ ಐಎಂಇಐ, 2ಟಿವೆರ್ ವಾಲ್ಯೂಮ್ನಂಥ ಸಾಫ್ಟ್ವೇರ್ ಮೂಲಕ ಐಎಂಇಐ ನಂಬರ್ನ ಕೊನೆಯ ಎರಡು ಅಥವಾ ಮೂರು ನಂಬರನ್ನು ಬದಲಾಯಿಸಿ ರಿಆ್ಯಕ್ಟಿವೇಟ್ ಮಾಡಿಕೊಳ್ಳುತ್ತಾರೆ. ಹೀಗಾದಾಗ ಪೊಲೀಸರು ಐಎಂಇಐ ನಂಬರ್ ಮೂಲಕ ಏನೇ ಕಸರತ್ತು ಮಾಡಿದರೂ ಮೊಬೈಲ್ ಕಳ್ಳರನ್ನು ಬಂಧಿಸಲು ಸಾಧ್ಯವಾಗುವುದಿಲ್ಲ.
ಕಂಪನಿಯಿಂದಲೇ ಹ್ಯಾಕ್: ಮೊಬೈಲ್ ಕಂಪನಿಯಲ್ಲಿ ಮೊಬೈಲ್ಗೆ ಐಎಂಇಐ ನಂಬರ್ ನೀಡುವ ವಿಧಾನವನ್ನು ಐಎಂಇಐ ನಂಬರ್ ಬದಲಾಯಿಸುವವರು ಹ್ಯಾಕ್ ಮಾಡುತ್ತಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ಕಂಪನಿಯಿಂದ ಕೆಲಸ ತ್ಯಜಿಸಿ ಬಂದವರು ಇಂಥ ದಂಧೆ ಮಾಡುತ್ತಿರುವವರಿಗೆ ಸಾಥ್ ನೀಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಐಎಂಇಐ ನಂಬರ್ ಬದಲಾಯಿಸುವ ದಂಧೆಗೆ ಹೈದರಾಬಾದ್ನಲ್ಲಿರುವ ವ್ಯಕ್ತಯೊಬ್ಬರು ಮಾಸ್ಟರ್ ಮೈಂಡ್ ಆಗಿದ್ದು, ಹುಬ್ಬಳ್ಳಿಯಲ್ಲಿ ಕೆಲವರನ್ನು ಇಟ್ಟುಕೊಂಡು ಈ ದಂಧೆಗೆ ಇಳಿದಿದ್ದಾರೆ.
ರಾಜ್ಯ-ಹೊರ ರಾಜ್ಯದ ಗ್ರಾಹಕರು: ಐಎಂಇಐ ನಂಬರ್ ಬದಲಾಯಿಸಿಕೊಂಡು ಹೋಗಲು ಹುಬ್ಬಳ್ಳಿಗೆ ಬೆಂಗಳೂರು, ಮಂಗಳೂರು, ಮುಂಬೈ, ಹೈದರಾಬಾದ್ ಕಳ್ಳರೂ ಇಲ್ಲಿಗೆ ಬರುತ್ತಿದ್ದಾರೆ. ಮೊಬೈಲ್ವೊಂದರ ಐಎಂಇಐ ನಂಬರ್ ಬದಲಾಯಿಸಲು ಕನಿಷ್ಠ ಎರಡು ದಿನಗಳು ತೆಗೆದುಕೊಳ್ಳಲಿದ್ದು, ಇದಕ್ಕೆ 3ರಿಂದ 4 ಸಾವಿರದವರೆಗೆ ಚಾರ್ಜ್ ಮಾಡುತ್ತಾರೆ.
ಸ್ಯಾಮ್ಸಂಗ್ ಮೊಬೈಲೇ ಹೆಚ್ಚು: ಇತ್ತೀಚೆಗೆ ಸ್ಯಾಮ್ಸಂಗ್ ಮೊಬೈಲ್ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಕಳ್ಳರು ಈ ಬ್ರಾಂಡ್ನ ಮೊಬೈಲ್ನ ಐಎಂಇಐ ನಂಬರ್ ಬದಲಾಯಿಸಲು ಮುಂದಾಗುತ್ತಿದ್ದಾರೆ. ಜತೆಗೆ ಸ್ಯಾಮ್ಸಂಗ್ ಮೊಬೈಲ್ನ ಐಎಂಇಐ ನಂಬರ್ ಬದಲಾಯಿಸುವುದೂ ಸುಲಭವಂತೆ.
ಕಳೆದ ಒಂದಿಷ್ಟು ತಿಂಗಳಿನಿಂದ ಕಳ್ಳತನವಾಗಿರುವ ಮೊಬೈಲ್ ಮೊದಲಿನಂತೆ ಪತ್ತೆಯಾಗುತ್ತಿಲ್ಲವೆಂಬುದು ನಿಜ. ಐಎಂಇಐ ನಂಬರ್ ಬದಲಾಯಿಸುವ ಬಗ್ಗೆ ಸಂಶಯವಿತ್ತು, ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡು, ಅಕ್ರಮ ದಂಧೆ ನಡೆಸುವವರನ್ನು ಬಂಧಿಸಲಾಗುವುದು.
- ಶ್ರೀನಾಥ ಜೋಶಿ, ಮಹಾನಗರ ಅಪರಾಧ ಮತ್ತು ಸಂಚಾರಿ ಡಿಸಿಪಿ
- ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

