ಸರ್ಕಾರೇತರ ಶಾಲೆಗಳಿಗಿಲ್ಲ ಎಂಪಿ ಅನುದಾನ
ಕ.ಪ್ರ.ವಾರ್ತೆ ಮಂಗಳೂರು ಜು.13
ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಇನ್ನು ಬೊಗಸೆಯೊಡ್ಡಿ ಸಂಸದರಿಂದ ಅನುದಾನ ಬೇಡುವಂತಿಲ್ಲ.
ಇದುವರೆಗೆ ಅನುದಾನ ನೀಡುತ್ತಿದ್ದುದಕ್ಕೆ ಕೇಂದ್ರ ಸರ್ಕಾರವೇ ಕಡಿವಾಣ ಹಾಕಿದೆ. ಇಷ್ಟು ಮಾತ್ರವಲ್ಲ ಯಾವುದೇ ಟ್ರಸ್ಟ್ ಅಥವಾ ಸಮುದಾಯ ಭವನಕ್ಕೂ ಸಂಸದರ ನಿಧಿಯಿಂದ ಅನುದಾನ ನೀಡುವಂತಿಲ್ಲ. ಹಲವು ವರ್ಷಗಳಿಂದಲೂ ಸಂಸದರ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆಂದು ಬಳಸಲಾಗುತ್ತಿದೆ. ಈಗ ಮಾತ್ರ ಅದನ್ನು ಬಳಸದಂತೆ ಸೂಚಿಸಲಾಗಿದೆ. ಈ ಬಗ್ಗೆ ಕಳೆದ ವರ್ಷವೇ ಆದೇಶ ಹೊರಡಿಸಿದ್ದರೂ ಈಗ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಕಳೆದ ವರ್ಷದವರೆಗೆ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ತಲಾ 2 ಲಕ್ಷ ನೀಡಲಾಗುತ್ತಿತ್ತು. ಇದನ್ನು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ನೀಡುತ್ತಿದ್ದರು. ಶಾಲಾ ಕಟ್ಟಡ ನಿರ್ಮಾಣ, ಶೌಚಾಲಯ, ಕಾಂಪೌಂಡ್ ಹೀಗೆ ಶಾಲೆಯ ಮೂಲಸೌಕರ್ಯಕ್ಕೆ ವ್ಯಯಿಸಲಾಗುತ್ತಿತ್ತು. ಅನುದಾನಿತ ಶಾಲೆಗೆ ಸರ್ಕಾರದಿಂದ ಅನುದಾನ ರೂಪದಲ್ಲಿ ಮೊತ್ತ ಬಂದರೂ ಅದು ಸಾಕಾಗುತ್ತಿರಲಿಲ್ಲ. ಹಾಗಾಗಿ ಸಂಸದರ, ರಾಜ್ಯಸಭಾ ಸದಸ್ಯರ, ವಿಧಾನಪರಿಷತ್ತು ಸದಸ್ಯರ ನಿಧಿಯನ್ನೂ ಸೇರಿಸಲಾಗುತ್ತಿತ್ತು. ಇದಲ್ಲದೆ ತಾಲೂಕಲ್ಲಿ ಸಮುದಾಯ ಭವನ ನಿರ್ಮಾಣಕ್ಕೂ ಸಂಸದರ ನಿಧಿ ಬಳಕೆಯಾಗುತ್ತಿತ್ತು. ಆಯಾ ಜಿಲ್ಲಾಡಳಿತ ಸಂಸದರ ನಿಧಿಯನ್ನು ಸಂಸದರು ಶಿಫಾರಸು ಮಾಡಿದ ಕಾಮಗಾರಿಗಳಿಗೆ ಅಂಕಿತ ಹಾಕುತ್ತಿತ್ತು.
ಹೊರಗಿಟ್ಟದ್ದು ಯಾಕೆ?: ಸಂಸದರ ನಿಧಿಯನ್ನು ಅನುದಾನಿತ ಶಾಲೆಗಳ ಮೂಲಸೌಕರ್ಯ ವೃದ್ಧಿಗೆ ನೀಡುತ್ತಿದ್ದರೂ ಬಹುತೇಕ ಕಡೆಗಳಲ್ಲಿ ಪ್ರಭಾವಿಗಳ ಟ್ರಸ್ಟ್ಗೆ ಸೇರುತ್ತಿತ್ತು. ಇದು ದುರುಪಯೋಗವಾಗುವುದು ಕಂಡುಬಂದ ಹಿನ್ನೆಲೆಯಲ್ಲಿ ಕಠಿಣ ಮಾರ್ಗದರ್ಶನ ಅಳವಡಿಸುವ ಬದಲು ಕೇಂದ್ರ ಅನುದಾನ ನೀಡದಂತೆ ಆದೇಶಿಸಿದೆ.
ಶಾಲೆಗಳ ವಿಚಾರ ಹೀಗಾದರೆ, ಸಮುದಾಯ ಭವನ ಅನುದಾನವನ್ನೂ ರದ್ದುಪಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಹಿಂದುಳಿದ ವರ್ಗಗಳಿಗೆ ನೆರವಾಗುವ ಸಮುದಾಯ ಭವನಕ್ಕೂ ಕೇಂದ್ರ ಅಡ್ಡಗಾಲು ಹಾಕಿದ್ದೇಕೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದರಿಂದ ಸಮುದಾಯ ಭವನ ನಿರ್ಮಾಣಕ್ಕೆ ಬೇರೆ ಅನುದಾನಕ್ಕೆ ಕೈಯೊಡ್ಡಬೇಕಾಗಿದೆ.
5 ಕೋಟಿಗೆ ಏರಿಕೆ: ಸಂಸದರ ನಿಧಿಯನ್ನು ವಾರ್ಷಿಕ 2 ಕೋಟಿಯಿಂದ ಈಗ 5 ಕೋಟಿಗೆ ಹೆಚ್ಚಿಸಲಾಗಿದೆ. ಇದೇ ವೇಳೆ ಅನುದಾನಿತ ಶಾಲೆ, ಸಮುದಾಯ ಭವನಕ್ಕೆ ಅನುದಾನ ನೀಡಲು ನಿರ್ಬಂಧ ಹೇರಿ ಅದಕ್ಕೆ ಬದಲಿ ಪ್ರಸ್ತಾಪ ಮಾಡಿದೆ. ಈಗಾಗಲೇ ಸಂಸದರ ನಿಧಿಯಿಂದ ರಸ್ತೆ, ಕುಡಿಯುವ ನೀರು, ಎಸ್ಸಿ, ಎಸ್ಟಿ ಅಭಿವೃದ್ಧಿ ಯೋಜನೆ ಇತ್ಯಾದಿಗಳಿಗೆ ಹೆಚ್ಚು ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಲಾಗಿದೆ. ಕಳೆದ ವರ್ಷ ಅನುದಾನಿತ ಶಾಲೆಗಳ ಅಭಿವೃದ್ಧಿಗೆ ಕಳುಹಿಸಿದ ಪಟ್ಟಿಗೆ ಒಪ್ಪಿಗೆ ಸಿಗದೆ ಸರ್ಕಾರದಿಂದ ವಾಪಸ್ ಬಂದಿದೆ. ಇದರಿಂದ ಇನ್ನು ಮುಂದೆ ಅನುದಾನಿತ/ಖಾಸಗಿ ಶಾಲೆ, ಸಮುದಾಯ ಭವನಗಳಲ್ಲಿ 'ಸಂಸದರ ನಿಧಿ' ಕಾಮಗಾರಿ ಬೋರ್ಡ್ ಕಾಣಸಿಗದು.
ಅನುದಾನಿತ ಶಾಲೆಗಳಿಗೆ, ಸಮುದಾಯ ಭವನಕ್ಕೆ ಸಂಸದರ ನಿಧಿ ನೀಡಲು ಅವಕಾಶ ಬೇಕು. ಇವೆಲ್ಲವೂ ಶಾಶ್ವತ ಕೆಲಸವಾದ್ದರಿಂದ ಸಮುದಾಯದ ಉಪಯೋಗಕ್ಕೆ ಸಿಗುತ್ತದೆ. ಬೇರೆ ಬೇರೆ ಅನುದಾನ ಸೇರಿ ತ್ವರಿತ ಅಭಿವೃದ್ಧಿ ಸಾಧ್ಯ. ರಸ್ತೆ, ಕುಡಿಯುವ ನೀರಿಗೆ ಬೇರೆ ಯೋಜನೆಗಳಿಂದಲೂ ಅನುದಾನ ನೀಡಲು ಸಾಧ್ಯವಿದೆ.
- ನಳಿನ್ ಕುಮಾರ್ ಕಟೀಲ್, ಸಂಸದ
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

