ಬಿಎಸ್ಸಾರ್ ಕಾಂಗ್ರೆಸ್ ಬಿಜೆಪಿಯಲ್ಲಿ ವಿಲೀನ?
ಕನ್ನಡಪ್ರಭ ವಾರ್ತೆ ಬಳ್ಳಾರಿ ಜು. 13
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕೆಜೆಪಿ ಸ್ಥಾಪಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುವ ಕುರಿತು ಬಿಸಿ ಸುದ್ದಿ ಇರುವಾಗಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸುಳಿಯುತ್ತಿದೆ. ಬಿಜೆಪಿ ಬಿಟ್ಟು ಬಿಎಸ್ಆರ್ ಕಾಂಗ್ರೆಸ್ ಹುಟ್ಟು ಹಾಕಿದ ಶಾಸಕ ಬಿ.ಶ್ರೀರಾಮುಲು ಈಗ ಮತ್ತೆ ಮಾತೃ ಪಕ್ಷಕ್ಕೆ ಹತ್ತಿರುವಾಗುವ ಸುದ್ದಿ ಹೊರ ಬಿದ್ದಿದೆ.
ಅಷ್ಟೇ ಅಲ್ಲ, ಇದಕ್ಕೆ ಪುಷ್ಟಿ ನೀಡುವಂತೆ ಸಂಘ ಪರಿವಾರದ ಹಿನ್ನೆಲೆಯಿರುವ ಬಿಎಸ್ಸಾರ್ ಕಾಂಗ್ರೆಸ್ನ ಹಿರಿಯ ಮುಖಂಡರೊಬ್ಬರು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಬಿಜೆಪಿ ಮುಖಂಡ ಅನಂತ್ಕುಮಾರ್, ಆರ್ಎಸ್ಎಸ್ ಮುಖಂಡ ಸಂತೋಷ್ಜೀ ಸೇರಿದಂತೆ ಇತರರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ರೆಡ್ಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಯಿಂದ ಹಸಿರು ನಿಶಾನೆ ಸಿಕ್ಕಿದ್ದು, ಕೇಂದ್ರದ ವರಿಷ್ಠರೊಂದಿಗೆ ಮಾತುಕತೆ ನಡೆಯುವುದೊಂದು ಬಾಕಿ ಇದೆ.
ಬಿಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಮುಖಂಡರ ಮಧ್ಯೆ ಈಗಾಗಲೇ ಮೊದಲ ಸುತ್ತಿನ ಮಾತುಕತೆ ನಡೆದಿರುವುದನ್ನು ಬಿಸ್ಸಾರ್ ಕಾಂಗ್ರೆಸ್ ಮೂಲಗಳು 'ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿವೆ.
ಜನಾರ್ದನ ರೆಡ್ಡಿಗೂ ಓಕೆ: ಬಿಜೆಪಿಯಲ್ಲಿ ಶ್ರೀರಾಮುಲುಗೆ ಆದ್ಯತೆ ನೀಡಿದರೆ ಬಿಜೆಪಿ ಸೇರುವ ಬಗ್ಗೆ ಜನಾರ್ದನ ರೆಡ್ಡಿ ಕಡೆಯಿಂದ ಯಾವುದೇ ತಕರಾರೂ ಇಲ್ಲ ಎಂಬ ಮಾತುಗಳು ಬಿಎಸ್ಸಾರ್ ಕಾಂಗ್ರೆಸ್ನಲ್ಲಿ ಕೇಳಿ ಬರುತ್ತಿವೆ.ಅಕ್ರಮ ಗಣಿಗಾರಿಕೆ ಆರೋಪ, ಸಿಬಿಐ ತನಿಖೆಯಿಂದ ನಲುಗಿರುವ ಬಿಎಸ್ಸಾರ್ ಕಾಂಗ್ರೆಸ್ ಕೊಂಚ ರಾಜಕೀಯದಿಂದ ದೂರವಿದ್ದರೆ, ಹಿಂಬಾಲಕರ ರಾಜಕೀಯ ಭವಿಷ್ಯ ಮಂಕಾಗಲಿದೆ. ಇದರಿಂದ ರಾಜಕೀಯವಾಗಿ ನಿರ್ದಿಷ್ಟ ನಿರ್ಣಯ ಕೈಗೊಳ್ಳಬೇಕಾದ ಅನಿವಾರ್ಯತೆ ಈ ನಾಯಕರಿಗಿದೆ. ಆದರೆ, ಜನಾರ್ದನ ರೆಡ್ಡಿ ಜೈಲಿಗೆ ಹೋದಾಗ ಬಿಜೆಪಿಯ ಯಾವೊಬ್ಬ ಮುಖಂಡರೂ ಭೇಟಿ ಮಾಡಿ, ಸಾಂತ್ವನ ಹೇಳಿಲ್ಲ ಎಂಬ ನೋವು ಈಗಲೂ ರೆಡ್ಡಿ ಬಳಗದಲ್ಲಿದೆ. ಏನೇ ಆದರೂ ಉಭಯ ಪಕ್ಷಗಳಿಗೂ ಅನುಸರಿಸಿಕೊಂಡು ಹೋಗುವುದು ಅನಿವಾರ್ಯ.
ಏಕಾಂಗಿ ಹೋರಾಟ ಕಷ್ಟ: ಶ್ರೀರಾಮುಲು ಬಿಎಸ್ಸಾರ್ ಕಾಂಗ್ರೆಸ್ ಕಟ್ಟಿ ನಿರೀಕ್ಷಿತ ಸಾಧನೆ ಕಾಣುವಲ್ಲಿ ವಿಫಲವಾಗಿದ್ದಾರೆ. ಮತ್ತೊಂದು ವಿಧಾನಸಭೆ ಚುನಾವಣೆ ಎದುರಿಸಲು ಇನ್ನೂ 5 ವರ್ಷಗಳು ಕಾಯಬೇಕು. ಅಷ್ಟು ವರ್ಷಗಳ ಕಾಲ ಏಕಾಂಗಿಯಾಗಿ ಹೋರಾಡುತ್ತಾ, ಪಕ್ಷ ಕಟ್ಟುವುದು ಸುಲಭವಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರ ಪ್ರಾದೇಶಿಕ ಪಕ್ಷಗಳತ್ತ ಒಲವು ತೋರುವುದೂ ಅಷ್ಟು ಸುಲಭದ ಮಾತಲ್ಲ. ಈ ಎಲ್ಲ ಕಾರಣಗಳಿಂದ ಸಹಜವಾಗಿಯೇ ಪರ್ಯಾಯ ದಾರಿ ನೋಡಿಕೊಳ್ಳುವಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಬಿಜೆಪಿ ತಳ್ಳಲ್ಪಟ್ಟಿದ್ದರಿಂದ, ಆ ಪಕ್ಷದ ರಾಜ್ಯ ನಾಯಕರಿಗೂ ಈ ವಿಲೀನ ಅನಿವಾರ್ಯವಾಗಿದೆ.
ಸಿಬಿಐನಿಂದ ತೊಂದರೆ ಭೀತಿ: ಬಿಜೆಪಿಯೊಂದಿಗೆ ಗುರುತಿಸಿಕೊಂಡರೆ ಸಿಬಿಐ ಇನ್ನಷ್ಟು ಕಿರಿಕಿರಿ ಕೊಡುತ್ತದೆ ಎಂಬ ಭಯವೂ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರಲ್ಲಿದೆ. ಆದರೂ ಜನಾರ್ದನ ರೆಡ್ಡಿ ಈಗಾಗಲೇ ಜೈಲಿಗೆ ಹೋಗಿದ್ದು, ಸಿಬಿಐ ಇನ್ನೇನು ಮಾಡಲು ಸಾಧ್ಯ ಎಂಬ ಮಾತುಗಳೂ ಪಕ್ಷದ ಮುಖಂಡರಿಂದ ಕೇಳಿ ಬರುತ್ತಿದೆ.
'ಶತ್ರುವಿನ ಶತ್ರು ಪರಮ ಮಿತ್ರ' ಎಂಬಂತೆ ಬಿಜೆಪಿ, ಬಿಎಸ್ಸಾರ್ ಕಾಂಗ್ರೆಸ್ಗೀಗ ಇರುವ ಏಕೈಕ ಶತ್ರು ಕಾಂಗ್ರೆಸ್ ಮಾತ್ರ. ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿದರೆ ಕಾಂಗ್ರೆಸ್ಗೆ ಪೆಟ್ಟು ನೀಡಬಹುದು ಎಂಬ ಲೆಕ್ಕಾಚಾರ ಈ ಎರಡು ಪಕ್ಷಗಳದ್ದು. ಎಲ್ಲವೂ ಅಂದುಕೊಂಡಂತೆ ನಡೆದರೆ ಬಿಜೆಪಿಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ವಿಲೀನವಾಗುವುದರಲ್ಲಿ ಅನುಮಾನವೇ ಇಲ್ಲ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

