ಮಾರಿಷಸ್ನಲ್ಲೂ ಗಣಿ ಅಕ್ರಮ ತನಿಖೆ
ಕನ್ನಡಪ್ರಭ ವಾರ್ತೆ ಬಳ್ಳಾರಿ ಜು. 14-
ಅಕ್ರಮ ಗಣಿಗಾರಿಕೆಯ ತನಿಖೆ ರಾಜ್ಯ, ದೇಶದಲ್ಲಿ ನಡೆದದ್ದಾಯಿತು. ಇದೀಗ ಈ ತನಿಖೆಯ ವ್ಯಾಪ್ತಿ ವಿದೇಶಕ್ಕೆ ವ್ಯಾಪಿಸಿದೆ!
ಎಎಂಸಿ(ಅಸೋಸಿಯೇಟೆಡ್ ಮೈನಿಂಗ್ ಕಂಪನಿ) ಪಾಲುದಾರ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮೀ ಅರುಣಾ ಅವರ ವ್ಯವಹಾರಗಳನ್ನು ಪತ್ತೆ ಹಚ್ಚಲು 10 ದಿನಗಳಿಂದ ಸಿಬಿಐ ಡಿಐಜಿ ಆರ್. ಹಿತೇಂದ್ರ ಅವರ ನೇತೃತ್ವದ ಅಧಿಕಾರಿಗಳ ತಂಡ ಮಾರಿಷಸ್ನಲ್ಲಿ ಬೀಡುಬಿಟ್ಟಿದೆ. ಸುಮಾರು 480 ಕೋಟಿ ಅಕ್ರಮದ ಬಗ್ಗೆ ತನಿಖೆ ಕೈಗೊಳ್ಳಲು ಸಿಬಿಐ ಅಧಿಕಾರಿಗಳು ಮಾರಿಷಸ್ಗೆ ತೆರಳಿದ್ದಾರೆ ಎಂದು ಅಧಿಕೃತ ಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.
ಜಿಜೆಆರ್ ಇಂಟರ್ ನ್ಯಾಷನಲ್ ಹೋಲ್ಡಿಂಗ್ಸ್ ಲಿಮಿಟೆಡ್, ಜಿಜೆಆರ್ ಹೋಲ್ಡಿಂಗ್ಸ್ ಹಾಗೂ ಜಿಎಲ್ಎ ಟ್ರೇಡಿಂಗ್ ಇಂಟರ್ ನ್ಯಾಷನಲ್ ಎಂಬ ಕಂಪನಿಗಳು ಜನಾರ್ದನ ರೆಡ್ಡಿ ಹಾಗೂ ಲಕ್ಷ್ಮೀ ಅರುಣಾ ಅವರ ಹೆಸರಿನಲ್ಲಿ ನೋಂದಣಿಯಾಗಿವೆ ಎಂಬ ಮಾಹಿತಿಯನ್ನಾಧರಿಸಿ ಸಿಬಿಐ ತನಿಖೆಗೆ ಮುಂದಾಗಿದೆ.
ವಿದೇಶದಲ್ಲೂ ಹಣ ಹೂಡಿಕೆ: ಜನಾರ್ದನ ರೆಡ್ಡಿ ಅವರು ಕೆಲವು ಕಂಪನಿಗಳ ಮೂಲಕ ಗಣಿಗಾರಿಕೆಯಿಂದ ಬಂದ ಹಣವನ್ನು ಹೂಡಿಕೆ ಮಾಡಿದ್ದಾರೆ. ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿ ಸಿಬಿಐಗೆ ಇದೆ ಎಂದು ಹೇಳಲಾಗುತ್ತಿದೆ. ಸಿಬಿಐ ಅಧಿಕಾರಿಗಳು ಬಳ್ಳಾರಿ ಸೇರಿದಂತೆ ಇತರ ಕಡೆಗಳಲ್ಲಿ ತನಿಖೆ ನಡೆಸಿದ್ದು, ಜನಾರ್ದನ ರೆಡ್ಡಿ ಅವರ ಹಲವು ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ. ಆದರೆ ಅವರು ಗಳಿಸಿರುವ ಆಸ್ತಿಗೂ ಹಾಗೂ ಸಿಬಿಐ ಗುರುತಿಸಿರುವ ರೆಡ್ಡಿ ಆಸ್ತಿಗೂ ಸಾಕಷ್ಟು ವ್ಯತ್ಯಾಸವಿದೆ.
ಅನುಮತಿ ಕೋರಿದ್ದ ಸಿಬಿಐ: ರಾಜ್ಯದಲ್ಲಿರುವ ಎಎಂಸಿ ಕಂಪನಿ ನಡೆಸಿದೆ ಎನ್ನಲಾಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ 2012ರ ಮೇ 30ರಂದು ಸಲ್ಲಿಸಿದ ಪ್ರಿಲಿಮಿನರಿ ಚಾರ್ಜ್ಶೀಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ಚಾರ್ಜ್ಶೀಟ್ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ರೆಡ್ಡಿ ಬೇನಾಮಿ ಕಂಪನಿಗಳ ಹೆಸರಿನಲ್ಲಿ ಹೂಡಿರುವ ಟ್ರೇಡಿಂಗ್, ಬ್ಯಾಂಕ್ ಖಾತೆಗಳ ಕುರಿತು ತನಿಖೆ ನಡೆಸುವ ಉದ್ದೇಶದಿಂದ ಸಿಂಗಾಪೂರ್, ಸ್ವಿರ್ಜೆಲೆಂಡ್, ಮಾರಿಷಸ್ ಸೇರಿದಂತೆ ಇತರ ದೇಶಗಳಲ್ಲಿ ತನಿಖೆಗೆ ಅನುಮತಿ ಕೋರಿತ್ತು. ಮಾರಿಷಸ್ನಲ್ಲಿ ತನಿಖೆ ಕೈಗೊಳ್ಳಲು ಅನುಮತಿ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ದೇಶಗಳ ಅನುಮತಿ ಕೋರಲಾಗಿದೆ. ಅನುಮತಿ ಸಿಕ್ಕ ತಕ್ಷಣ ಆ ದೇಶಗಳಿಗೂ ಸಿಬಿಐ ತಂಡ ತೆರಳಿ ತನಿಖೆ ನಡೆಸುವ ಸಾಧ್ಯತೆ ಇದೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

