ಪ್ರಧಾನ ಸುದ್ದಿ

ದ್ವೇಷ ರಾಜಕಾರಣ ಸಿದ್ದು ಹುಟ್ಟುಗುಣ

Published On :

- ರಾಘವೇಂದ್ರ ಭಟ್
ಕ.ಪ್ರ.ವಾರ್ತೆ   ಬೆಂಗಳೂರು   ಜು. 20
ದ್ವೇಷ ರಾಜಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮಜಾತ ಗುಣ. ಎಷ್ಟೇ ಎತ್ತರದ ಸ್ಥಾನ ಏರಿದರೂ ಅವರ ಹುಟ್ಟುಗುಣ ಬದಲಾಯಿಸಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭಾವಚಿತ್ರವನ್ನು ತಮ್ಮ ಕೊಠಡಿಯಿಂದ ತೆಗೆಸುವ ಮೂಲಕ ತಮ್ಮ ಹೃದಯ ವೈಶಾಲ್ಯತೆಯನ್ನು ಅವರು ಅನಾವರಣಗೊಳಿಸಿದ್ದಾರೆ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವದ ಕುರಿತು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ವ್ಯಾಖ್ಯಾನ.
'ಕನ್ನಡಪ್ರಭ'ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯನವರ ವ್ಯಕ್ತಿತ್ವ ವಿಮರ್ಶೆ ಮಾಡಿರುವ ಅವರು, ಎದುರಾಳಿಗಳನ್ನು ಲಘುವಾಗಿ ಪರಿಗಣಿಸುವುದೇ ಅವರ ಮನೋಧರ್ಮ. ದ್ವೇಷ ರಾಜಕಾರಣ ಹೊರತು ಪಡಿಸಿ ಬೇರೆ ಏನನ್ನೂ ಅವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂದರ್ಶನದ ಪೂರ್ಣಪಾಠ ಹೀಗಿದೆ....
ಸತ್ಯ ಹೇಳುತ್ತೇನೆ. ನಾನು ಸಿದ್ದರಾಮಯ್ಯನವರನ್ನು ತೀರಾ ಹತ್ತಿರದಿಂದ ಕಂಡವನಲ್ಲ. ಅವರ ಅಂತರಂಗದ ತುಮುಲಗಳು ನನಗೆ ಗೊತ್ತಿಲ್ಲ. ಆದರೆ ಪರಿಕ್ಷಾರ್ಥಿಯಂತೆ ದೂರದಲ್ಲಿ ನಿಂತು ಅವರ ನಡವಳಿಕೆಗಳನ್ನು ಆಳವಾಗಿ ಗಮನಿಸಿದ್ದೇನೆ.       


 ದ್ವೇಷ ರಾಜಕಾರಣ ಅವರ ಹುಟ್ಟುಗುಣ ಎಂಬುದು ನನಗೆ ಅರ್ಥವಾಗಿದೆ. ಮುಖ್ಯಮಂತ್ರಿಯಾಗುವುದಕ್ಕೆ ಮುನ್ನವೇ ಅವರು ತಮ್ಮ ನಡೆ-ನುಡಿಯಲ್ಲಿ ಈ ಸ್ವಭಾವ ಪ್ರದರ್ಶಿಸಿದ್ದಾರೆ. ಸ್ಥಾನ ಬಲದಿಂದ ಅವರ ಜನ್ಮಜಾತ ಸ್ವಭಾವ ಬದಲಾಗುತ್ತದೆ ಎಂದು ನಿರೀಕ್ಷಿಸುವುದೇ ತಪ್ಪು.
ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಗೊಂಡ ಮರುದಿನ ಕುಮಾರಸ್ವಾಮಿ ಅವರಂಥ ಪ್ರತಿಪಕ್ಷ ನಾಯಕನೇ ನನಗೆ ಬೇಕು ಎಂದಿದ್ದರು. ಇದನ್ನು ಗಂಭೀರವಾಗಿ ಹೇಳಿದ್ದರೋ, ವ್ಯಂಗ್ಯ ಮಾಡಿದ್ದರೋ ಗೊತ್ತಿಲ್ಲ. ಅವರು ಮೆಚ್ಚಿಕೊಳ್ಳಲಿ ಎಂಬ ನಿರೀಕ್ಷೆಯನ್ನು ನಾನಂತೂ ಹೊಂದಿಲ್ಲ. ಏಕೆಂದರೆ ಎದುರಾಳಿಗಳನ್ನು ಅವರು ಸದಾ ಲಘುವಾಗಿಯೇ ಪರಿಗಣಿಸುತ್ತಾರೆ. ಚುನಾವಣೆಗೆ ಮುನ್ನವೇ ಅವರ ಈ ನಡವಳಿಕೆ ಬಹಿರಂಗವಾಗಿತ್ತು. ಒಬ್ಬ ಮಾಜಿ ಪ್ರಧಾನ ಮಂತ್ರಿ ದೂರವಾಣಿ ಕರೆ ಮಾಡಿ ಮಾತನಾಡಲು ಬಯಸಿದರೆ, ನಾನು ಸ್ನಾನಕ್ಕೆ ಹೋಗಿದ್ದೇನೆ ಎಂದು ಹೇಳಿ. ಬೆಳಗ್ಗೆ ಬೆಳಗ್ಗೆ ತಲೆ ತಿನ್ನುತ್ತಾರೆ ಎಂದು ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡಿದ್ದು ಎಲ್ಲರಿಗೂ ಗೊತ್ತು. ಅಧಿಕಾರಕ್ಕೆ ಬಂದ ನಂತರವೂ ಇದೇ ಮನೋಭಾವ ಮುಂದುವರಿಸುತ್ತಿದ್ದಾರೆ. ದೇವೇಗೌಡರ ಭಾವಚಿತ್ರವನ್ನು ತಮ್ಮ ಕೊಠಡಿಯಿಂದ ತೆಗೆಸಿದ್ದು ಅದಕ್ಕೊಂದು ಉದಾಹರಣೆ. ಈ ವಿಚಾರದ ಬಗ್ಗೆ ನಾನು ಏನನ್ನು ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ಹೀಗಾಗಿ ಸದನದಲ್ಲಿ ನಾನಾಗಲಿ, ರೇವಣ್ಣನವರಾಗಲಿ ಈ ಬಗ್ಗೆ ಧ್ವನಿ ಎತ್ತದೆ ಮೌನಕ್ಕೆ ಶರಣಾದೆವು. ಸದನದ ಒಳಗೆ ಹಾಗೂ ಸ್ಪೀಕರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಏನೇನು ಮಾತನಾಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸುವುದಕ್ಕೆ ನಾನು ಹೋಗುವುದಿಲ್ಲ. ಆದರೆ ಅವರ ಹೃದಯ ವೈಶಾಲ್ಯತೆ ಏನು ಎಂಬುದು ಮಾತ್ರ ಅರ್ಥವಾಗಿದೆ.
ಆಸಕ್ತಿ ಕಳೆದುಕೊಂಡಿಲ್ಲ: ವಿಧಾನಸಭೆ ಚುನಾವಣೆ ಸೋಲಿನಿಂದ ನಾನು ಹತಾಶನಾಗಿದ್ದೇನೆ. ಆಸಕ್ತಿ ಕಳೆದುಕೊಂಡಿದ್ದೇನೆ. ಸದನದ ಒಳಗೆ-ಹೊರಗೆ ನಿರ್ಲಿಪ್ತನಾಗಿರುತ್ತೇನೆ ಎಂಬ ಮಾತುಗಳು ನನ್ನ ಕಿವಿಗೆ ಬಿದ್ದಿವೆ. ಸೋಲಿನಿಂದ
ನನಗೆ ಬೇಸರವಾಗಿರುವುದು ನಿಜ, ಆದರೆ ಉತ್ಸಾಹ ಕಳೆದುಕೊಂಡಿಲ್ಲ. ಬಹುಶಃ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲುಗೊಳಿಸುವ ಸಂದರ್ಭದಲ್ಲಿ ನನ್ನ ಕಾರ್ಯವೈಖರಿ ಕಂಡವರು ಈ ರೀತಿ ವ್ಯಾಖ್ಯಾನ ಮಾಡಬಹುದು. ಆದರೆ ಅದು ತಪ್ಪು. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಮಾತ್ರ ಕಳೆದಿದೆ. ಸರ್ಕಾರದ ಸರಿ-ತಪ್ಪುಗಳನ್ನು ಅಳೆಯುವುದಕ್ಕೆ ಇದು ಸೂಕ್ತ ಕಾಲವಲ್ಲ.
ಸೋಮವಾರದಿಂದ ನೋಡಿ: ಮೊನ್ನೆ ವಿಧಾನಸಭಾ ಕಲಾಪ ಸಂದರ್ಭದಲ್ಲಿ ನಾನು ಕೆಲ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡುವಾಗ ಕೆಲವಷ್ಟು ಸುಳ್ಳಿನ ಕಂತೆಗಳನ್ನು ಹೆಣೆದಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ. ರಾಜಸ್ವ ಕೊರತೆ ಇದೆ ಎಂದು ಸುಳ್ಳು ಹೇಳಿದ್ದಾರೆ. ಆರು
ಬಾರಿ ಆಯವ್ಯಯ ಮಂಡಿಸಿದ ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗಾಗಲಿ, ಜಗದೀಶ್ ಶೆಟ್ಟರ್ ಅವರಿಗಾಗಲಿ ಸಿದ್ದರಾಮಯ್ಯನವರು ಸುಳ್ಳು ಹೇಳಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ನನಗೆ ಬಜೆಟ್ ಮಂಡಿಸಿದ ಅನುಭವ ಇಲ್ಲ. ಆದರೂ ಲೋಪ-ದೋಷಗಳನ್ನು ಹೆಕ್ಕಿದ್ದೇನೆ. ಮಾತ್ರವಲ್ಲ ಸದನದಲ್ಲಿ ಈ ಬಗ್ಗೆ ಪ್ರಸ್ತಾಪವನ್ನೂ ಮಾಡಿದ್ದೇನೆ. ಸೋಮವಾರ ನಾನು ಬಜೆಟ್ ಮೇಲೆ ಚರ್ಚೆ ಮಾಡುವವನಿದ್ದೇನೆ. ಕುಮಾರಸ್ವಾಮಿ ಆಸಕ್ತಿ ಕಳೆದುಕೊಂಡಿದ್ದಾರೆ, ಅವರಿಗೆ ಉತ್ಸಾಹವಿಲ್ಲ ಎಂಬ ಟೀಕೆಗಳಿಗೆ ಆಗ ಉತ್ತರ ಸಿಗುತ್ತದೆ.
ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ನನ್ನ ಪರಿಶ್ರಮಕ್ಕೆ ಸೂಕ್ತ ಫಲ ಸಿಕ್ಕಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಂಖ್ಯಾಬಲದ ದೃಷ್ಟಿಯಿಂದ ನಮ್ಮ ಶಕ್ತಿ ಹೆಚ್ಚಿದೆ. ನನ್ನ ಆಸೆ-ನಿರೀಕ್ಷೆ ಕೈಗೆಟುಕಿಲ್ಲ ಎಂಬುದು ಸತ್ಯವಾದರೂ ಜನತಾ ತೀರ್ಮಾನವನ್ನು ಒಪ್ಪಿಕೊಂಡಿದ್ದೇನೆ. ಬಹುಶಃ ಕುಮಾರಸ್ವಾಮಿ ಇನ್ನೂ ಪರಿಪಕ್ವವಾಗಿ ಬೆಳೆಯಲಿ, ಪ್ರತಿಪಕ್ಷ ಸಾಲಿನಲ್ಲಿ ಕುಳಿತು ಇನ್ನಷ್ಟು ಕಲಿಯಲಿ ಎಂದು ಜನತೆ ಆಶೀರ್ವಾದ ಮಾಡಿದ್ದಾರೆ ಎಂದುಕೊಂಡಿದ್ದೇನೆ. ಅವರ ನಿರೀಕ್ಷೆಯನ್ನು ಈ ಬಾರಿಯೂ ಹುಸಿ ಮಾಡುವುದಿಲ್ಲ. 'ಕಾಯುವಿಕೆಗಿಂತ ಅನ್ಯ ತಪವು ಬೇಕೆ' ಎಂಬ ದಾಸವಾಣಿಯಲ್ಲಿ ನನಗೆ ನಂಬಿಕೆ ಇದೆ.


ಮತ್ತೆ ದೆಹಲಿ ರಾಜಕಾರಣಕ್ಕೆ ಹೋಗುವುದು ಜನಾಭಿಪ್ರಾಯಕ್ಕೆ ವಿರುದ್ಧ
ದೆಹಲಿ ರಾಜಕಾರಣದ ನಕ್ಷೆ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ನೀವು ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ? ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ದೆಹಲಿ ಅಧಿಕಾರದ ಚುಕ್ಕಾಣಿಯನ್ನು ಎನ್‌ಡಿಎ ಅಥವಾ ಯುಪಿಎ ಮಿತ್ರಕೂಟ ಹಿಡಿಯುತ್ತದೆಯೋ, ತೃತೀಯರಂಗ ಮತ್ತೆ ಅಧಿಕಾರಕ್ಕೆ ಬರುತ್ತದೆಯೋ ಎಂಬುದನ್ನು ಕಾಲ ನಿರ್ಧರಿಸುತ್ತದೆ. ಆದರೆ ದೆಹಲಿ ರಾಜಕಾರಣವನ್ನು ಲಕ್ಷ್ಯದಲ್ಲಿರಿಸಿಕೊಂಡು ನಾನು ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಈ ನಾಡಿನ ಜನರ ಭಾವನೆಗೆ ವಿರುದ್ಧ ಎಂಬುದು ನನ್ನ ಅಭಿಪ್ರಾಯ ಎಂದರು.


ಯಡಿಯೂರಪ್ಪ ಬುದ್ಧಿವಂತರು
ವಿಧಾನಸಭೆ ಕಲಾಪ ಸಂದರ್ಭದಲ್ಲಿ ಮಾತ್ರವಲ್ಲ ಹೊರಗಡೆಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೆಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸೇತರ ಶಕ್ತಿಗಳು ಒಂದಾಗಬೇಕು ಎಂದು ಅವರು ನೀಡಿರುವ ಹೇಳಿಕೆ ರಾಜಕೀಯ ಲೆಕ್ಕಾಚಾರದಿಂದ ಕೂಡಿದೆ. ಅವರೊಬ್ಬ ಬುದ್ಧಿವಂತ ರಾಜಕಾರಣಿ. ತಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದಲೇ ಇಂಥ ಲೆಕ್ಕಾಚಾರದ ರಾಜಕೀಯ ದಾಳ ಉರುಳಿಸಿದ್ದಾರೆ. ನಾನು ಸದನದಲ್ಲಿ ಅವರನ್ನು ಭೇಟಿ ಮಾಡಿದ್ದನ್ನು ಬಿಟ್ಟರೆ ಅವರ ಜತೆ ಎಲ್ಲಿಯೂ ಮಾತನಾಡಿಲ್ಲ. ಜೆಡಿಎಸ್‌ಗೆ ಅವರ ಸಖ್ಯದ ಅಗತ್ಯವಿಲ್ಲ.


ಅಪ್ಪನ ಅಂಕೆ ಮೀರಿ ಹೋಗಿಲ್ಲಕುಮಾರಸ್ವಾಮಿ ಅವರ ಅಪ್ಪನ ಕೈ ಮೀರಿ ಹೋದರು, ಹೀಗಾಗಿ ಚುನಾವಣೆಯಲ್ಲಿ ಸೋಲಾಯ್ತು ಎಂಬ ಮಾತು ಕೇಳಿ ಬರುತ್ತಿದೆಯಲ್ಲ? ಎಂಬ ಪ್ರಶ್ನೆಗೆ ಕುಮಾರಸ್ವಾಮಿ ನೀಡಿದ ಉತ್ತರ ಇದು. ನಾನು ಜೀವನದಲ್ಲಿ ಒಮ್ಮೆ ಮಾತ್ರ ದೇವೇಗೌಡರ ಮಾತು ಮೀರಿದ್ದೆ. ಪಕ್ಷವನ್ನು ಉಳಿಸಬೇಕು ಎಂಬ ಕಾರಣಕ್ಕಾಗಿ ಮಾತ್ರ ಬಿಜೆಪಿ ಜತೆ ಕೈ ಜೋಡಿಸಿ ಅಧಿಕಾರ ಹಂಚಿಕೊಂಡೆ. ಅದನ್ನು ಹೊರತು ಪಡಿಸಿದರೆ ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ನಾನು ಅಪ್ಪನ ಅಂಕೆ ಮೀರಿ ಹೋಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯನ್ನು ಅವರ ಮಾರ್ಗದರ್ಶನದಲ್ಲೇ ಎದುರಿಸಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಯನ್ನೂ ಅವರ ಮಾರ್ಗದರ್ಶನದಲ್ಲಿ ಎದುರಿಸಿ ನಮ್ಮ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳುತ್ತೇವೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.