74 ವಿದ್ಯಾರ್ಥಿಗಳಿಗೆ ಒಬ್ಬನೇ ಶಿಕ್ಷಕ!
ದೇವರಾಜು ಕಪ್ಪಸೋಗೆ
ಕ.ಪ್ರ. ವಾರ್ತೆ ಚಾಮರಾಜನಗರ ಜು.20
ಕಾಡುಗಳ್ಳ, ನರಹಂತಕ ವೀರಪ್ಪನ್ ಹುಟ್ಟೂರು ಕೊಳ್ಳೇಗಾಲ ತಾಲೂಕು ಗೋಫಿನಾಥಂ ಸರ್ಕಾರಿ ಪ್ರೌಢಶಾಲೆಗೆ ಈಗ ಶಿಕ್ಷಕರ ಕೊರತೆ ಕಾಡುತ್ತಿದೆ.
ಕಾಡಂಚಿನ ಗೋಪಿನಾಥಂ ಶಾಲೆಯನ್ನು ಸುತ್ತಮುತ್ತಲಿನ ಸುಮಾರು 35 ಕಿ.ಮೀ. ಸುತ್ತಳತೆಯ 8 ಗ್ರಾಮಗಳ ಮಕ್ಕಳು ಅವಲಂಬಿಸಿದ್ದು, ಒಬ್ಬರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹದೇಶ್ವರ ಬೆಟ್ಟ ಬಿಟ್ಟರೆ ಗಡಿನಾಡಿನಲ್ಲಿ ಸುಮಾರು 35 ಕಿ.ಮೀ. ವ್ಯಾಪ್ತಿಯಲ್ಲಿ ಪ್ರೌಢಶಾಲೆಯೇ ಇಲ್ಲ. ಹೀಗಾಗಿ ಗುಡ್ಡಗಾಡು ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರ ಚಾಮರಾಜನಗರ ಕೇಂದ್ರದಿಂದ ಸುಮಾರು 155 ಕಿ.ಮೀ. ದೂರದಲ್ಲಿರುವ ಗೋಫಿನಾಥಂಗೆ 2005-06ನೇ ಸಾಲಿನಲ್ಲಿ ಪ್ರೌಢಶಾಲೆ ಮಂಜೂರು ಮಾಡಿತು. ಇದರಿಂದಾಗಿ ಗೋಪಿನಾಥಂ, ಪುದೂರು, ಹಾಸೂರು, ಆಲಂಬಾಡಿ, ಕೋಟೆಯೂರು, ಮಾರಿಕೊಟ್ಟೈ, ಜಂಜುಟಪಟ್ಟಿ, ಅಪ್ಕಾಂಟಿ ಗ್ರಾಮಗಳ ಮಕ್ಕಳಿಗೆ ಪ್ರೌಢಶಾಲೆ ಭಾಗ್ಯ ದೊರೆಯಿತು.
ಅಂದಿನಿಂದ ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ಕಂಡ ಶಾಲೆಗೆ ಸರ್ಕಾರ 5 ಕೊಠಡಿ, ಅಡುಗೆಮನೆ ಮತ್ತು ಶೌಚಾಲಯ ನಿರ್ಮಿಸುವ ಮೂಲಕ ಎಲ್ಲ ಸೌಲಭ್ಯ ನೀಡಿತು. ಶಿಕ್ಷಕರ ಸಂಖ್ಯೆಯೂ ಹೆಚ್ಚಾದ ಪರಿಣಾಮ 2010-11ರಲ್ಲಿ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿತು. ನಂತರ ಇದ್ದ 6 ಮಂದಿ ಶಿಕ್ಷಕರ ಪೈಕಿ ಪ್ರತಿ ವರ್ಷ ಶಿಕ್ಷಕರು ಕಡಿಮೆಯಾದರು. ಪರಿಣಾಮವಾಗಿ 2011-12ರಲ್ಲಿ ಶೇ.85 ಮತ್ತು 2012-13ರಲ್ಲಿ ಶೇ. 81ರಷ್ಟು ಫಲಿತಾಂಶ ಪಡೆಯಿತು. ಸದ್ಯ 9ನೇ ತರಗತಿಯಲ್ಲಿ 42, ಹತ್ತನೇ ತರಬೇತಿಯಲ್ಲಿ 32 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಶಿಕ್ಷಕರ ವರ್ಗಾವಣೆ: ಕಳೆದ ಶೈಕ್ಷಣಿಕ ವರ್ಷದಲ್ಲಿ ಇದ್ದ ಮೂವರು ಶಿಕ್ಷಕರ ಪೈಕಿ ಈ ಬಾರಿ ಮುಖ್ಯೋಪಾಧ್ಯಾಯ ಆರ್. ಮಹೇಶ್ ಕೊಳ್ಳೇಗಾಲ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ವರ್ಗಾವಣೆಯಾಗಿದ್ದು, ಹಿಂದಿ ಶಿಕ್ಷಕಿ ಆರ್. ಭಾಗ್ಯಮ್ಮ ಅವರಿಗೆ ಕೊಳ್ಳೇಗಾಲ ಎಸ್ವಿಕೆ ಪ್ರೌಢಶಾಲೆಗೆ ವರ್ಗಾವಣೆಯಾಗಿದೆ. ಹೀಗಾಗಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕ ಆರ್. ಮಂಜುನಾಥ್ ಅವರು ಪ್ರಭಾರ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗ ಇವರೊಬ್ಬರೇ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಬೋಧನೆ ಮಾಡಬೇಕಿದೆ.
ಶಿಕ್ಷಕರ ಸಭೆ, ಡಿಡಿಪಿಐ ಮೀಟಿಂಗ್ ಇದ್ದಲ್ಲಿ ಶಾಲೆಗೆ ಮೂರು ದಿನ ರಜೆ ಹಾಕಿ ಹೋಗಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. ಬೆಟ್ಟಗುಡ್ಡಗಳಿಂದ ಆವೃತ್ತವಾದ ಗೋಫಿನಾಥಂಗೆ ಒಂದು ಕಡೆಯಿಂದ ತೆರಳು ಕನಿಷ್ಠ 6 ಗಂಟೆ ಬೇಕು. ಈ ಊರಿಗೆ ಇರುವುದು ಎರಡೇ ಬಸ್. ಹೀಗಾಗಿ ಇಲ್ಲಿಗೆ ನಿಯೋಜಿಸುವ ಶಿಕ್ಷಕರು ಅಲ್ಲೇ ವಾಸ್ತವ್ಯ ಹೂಡುವುದು ಅನಿವಾರ್ಯ.
ಎಲ್ಲದಕ್ಕೂ ಇವರೆ: ಜಿಲ್ಲಾ ಕೇಂದ್ರಕ್ಕೆ ಮುಖ್ಯೋಪಾಧ್ಯಾಯರು ಬರಬೇಕಾದರೆ ಹಿಂದಿನ ದಿನವೇ ಮಧ್ಯಾಹ್ನದ ನಂತರ ಶಾಲೆಗೆ ರಜೆ ನೀಡಿ ತೆರಳಬೇಕು. ನಂತರ ಜಿಲ್ಲಾ ಕೇಂದ್ರದಲ್ಲಿ ಕೆಲಸ ಮುಗಿಸಿ ಅಂದೇ ತೆರಳಲು ಸಾಧ್ಯವಿಲ್ಲ. ಹೀಗಾಗಿ 3ನೇ ದಿನ ಗೋಪಿನಾಥಂ ತಲುಪುವ ವೇಳೆಗೆ ಮಧ್ಯಾಹ್ನವಾಗುತ್ತದೆ. ಹೀಗಾಗಿ ಮೂರು ದಿನಗಳ ಕಾಲ ಮಕ್ಕಳಿಗೆ ರಜೆ ನೀಡುವುದು ಅನಿವಾರ್ಯವಾಗಿದೆ.
ಶಿಕ್ಷಕರು ವರ್ಗಾವಣೆಯಾಗಿರುವುದರಿಂದ ಕಲಿಕೆಯಲ್ಲಿ ಹಿಂದುಳಿದ ಗುಡ್ಡಗಾಡು ಮಕ್ಕಳಿಗೆ ಇರುವ ಏಕೈಕ ಶಿಕ್ಷಕ ಎಲ್ಲಾ ವಿಷಯ ಬೋಧನೆ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗಿದ್ದು, ಶಾಲೆಗೆ ಹೆಚ್ಚುವರಿ ಶಿಕ್ಷಕರು ಅಥವಾ ಅತಿಥಿ ಶಿಕ್ಷಕರನ್ನು ಕೂಡಲೇ ನಿಯೋಜಿಸಬೇಕಿದೆ.
ಕಾಡಂಚು ಮತ್ತು ಗಡಿ ಪ್ರದೇಶದಲ್ಲಿ ಸರ್ಕಾರ ಪ್ರೌಢಶಾಲೆ ತೆರೆದ ಪರಿಣಾಮ ಮಕ್ಕಳು ವಿದ್ಯಾವಂತರಾಗುತ್ತಿದ್ದರು. ಇದೀಗ ಸರ್ಕಾರ ಉತ್ತಮ ಶಾಲೆ ನಿರ್ಮಿಸಿ ಇದ್ದ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದರಿಂದ ಏಕೈಕ ಶಿಕ್ಷಕರು ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಶಾಲೆಗೆ ಶಿಕ್ಷಕರನ್ನು ನಿಯೋಜಿಸದಿದ್ದರೆ ಬೀಗ ಹಾಕಬೇಕಾಗುತ್ತದೆ.
ಟಿ ಅಯ್ಯನ್ ದೊರೆ, ಎಸ್ಡಿಎಂಸಿ ಅಧ್ಯಕ್ಷ, ಗೋಫಿನಾಥಂ.
ಶಿಕ್ಷಕರ ವರ್ಗಾವಣೆ ಹಿನ್ನೆಲೆಯಲ್ಲಿ ಗೋಪಿನಾಥಂ ಸರ್ಕಾರಿ ಪ್ರೌಢಶಾಲೆಯಲ್ಲಿ ಇದ್ದ ಮೂವರು ಶಿಕ್ಷಕರ ಪೈಕಿ ಇಬ್ಬರು ವರ್ಗವಾಗಿದ್ದು, ಈ ಬಾರಿ ಕೌನ್ಸೆಲಿಂಗ್ನಲ್ಲಿ ಗೋಫಿನಾಥಂ ಶಾಲೆಯನ್ನು ಯಾರೂ ಆಯ್ಕೆ ಮಾಡಿಕೊಂಡಿಲ್ಲ. ಇದರಿಂದಾಗಿ ಏಕೈಕ ಶಿಕ್ಷಕರೇ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು, ಕೂಡಲೇ ಹೆಚ್ಚುವರಿ ಶಿಕ್ಷಕರ ನಿಯೋಜನೆ ಅಥವಾ ಅತಿಥಿ ಶಿಕ್ಷಕರನ್ನು ನಿಯೋಜಿಸುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು.
ಟಿ ಡಾ.ಎನ್.ಚಂದ್ರೇಗೌಡ, ಡಿಡಿಪಿಐ, ಚಾಮರಾಜನಗರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

