ಪ್ರಧಾನ ಸುದ್ದಿ

ಹಕ್ಕುಚ್ಯುತಿ ಪ್ರಸ್ತಾಪ ಗವರ್ನರ್ ಗರಂ

ಹಕ್ಕುಚ್ಯುತಿ ಪ್ರಸ್ತಾಪ ಗವರ್ನರ್ ಗರಂ
Published On :

ಬೆಂಗಳೂರು: ಅಕ್ರಮವಾಗಿ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ವರದಿ ಸಿದ್ಧಪಡಿಸಿರುವ ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕಾರ್ಯಪಡೆ ಮಾಜಿ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಸದನ ನಿರ್ಧರಿಸುವುದು ಸರಿಯಲ್ಲ ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆ ಶಾಸಕರು ಮತ್ತು ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟ ಕುತೂಹಲಕರ ಘಟ್ಟ ತಲುಪಿದಂತಾಗಿದೆ. ಮಂಗಳವಾರ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ರಾಜ್ಯಪಾಲರ ಕುರಿತು ಟೀಕೆ ಕೇಳಿ ಬಂದಿತ್ತು. ನಂತರ ರಾಜ್ಯಪಾಲರು 'ಅಲ್ಲಿ ಕುಳಿತುಕೊಂಡು ಮಾತಾಡುವವರೆಲ್ಲ ಏನು ಎಂಬುದು ಗೊತ್ತು' ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.
ಶನಿವಾರ ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲರು ಸದನದ ಕಲಾಪಗಳ ಕುರಿತು ಮಾತನಾಡಿದರು.
ಪ್ರಜಾಪ್ರಭುತ್ವಕ್ಕೆ ಅರ್ಥ ಎಲ್ಲಿದೆ?: ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಬಾಲಸುಬ್ರಮಣಿಯನ್ ಒಳ್ಳೆಯ ವರದಿ ನೀಡಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹವರ ಮೇಲೆ ಸದನವು  ಹಕ್ಕುಚ್ಯುತಿ ಮಂಡಿಸಲು ಮುಂದಾಗಿರುವುದು ಸರಿಯಲ್ಲ. ಹಾಗಾದರೆ, ಪ್ರಜಾಪ್ರಭುತ್ವಕ್ಕೆ ಅರ್ಥ ಎಲ್ಲಿದೆ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.
ಗಂಭೀರ ವಿಷಯ ಚರ್ಚಿಸುತ್ತಿಲ್ಲ: ಬಡವರ ಕಾಲೋನಿಗಳ ಮೇಲೆ ಬೃಹತ್ ಕಂಪನಿಗಳು ನಡೆಸುತ್ತಿರುವ ಸವಾರಿಗೆ ಬ್ರೇಕ್ ಹಾಕಬೇಕು. ನಿವೃತ್ತ ಅಧಿಕಾರಿಗಳು ಮತ್ತು ಬಡವರು ವಾಸಿಸುವ ಸ್ಥಳವನ್ನು ಬೃಹತ್ ಕಂಪನಿಗಳು ಮಾರಾಟ ಮಳಿಗೆ ಪ್ರಾರಂಭಿಸಲು ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿವೆ. ಇದರಿಂದ ಬಡವರು ಬೀದಿ ಪಾಲಾಗಬೇಕಾಗುತ್ತದೆ ಇಂತಹ ವಿಚಾರಕ್ಕೆ ಸರ್ಕಾರ ಬ್ರೇಕ್ ಹಾಕಬೇಕು. ಸದನದಲ್ಲಿ ಹೆಚ್ಚಿನ ಗಂಭೀರ ವಿಷಯದ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ ಎಂದರು.
ಸರ್ಕಾರದ ಹಸ್ತಕ್ಷೇಪ: ರಾಜ್ಯವು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಬೇಕಾದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ) ಅವಶ್ಯವಿದೆ.
ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಬೇಕಿದೆ. ಬೆಂಗಳೂರು, ಮೈಸೂರು, ಧಾರವಾಡ ವಿಶ್ವವಿದ್ಯಾಲಯಗಳ ಕಾರ್ಯ ವೈಖರಿ ಬೇಸರ ತಂದಿದೆ. ಇದಕ್ಕೆ ಕಾರಣ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಹಸ್ತಕ್ಷೇಪ. ನಾನು ಇದನ್ನು ಪ್ರಶ್ನಿಸಿದರೆ ನನ್ನ ವಿರುದ್ಧವೇ ಅಪವಾದ ಮಾಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಊಟ ನೀಡುವ ಬದಲು ಸಾಯಿಸಿ: ಬಿಹಾರದಲ್ಲಿ ಬಿಸಿ ಊಟ ಸೇವಿಸಿ ನೂರಾರೂ ಮಕ್ಕಳು ತೊಂದರೆಗೀಡಾದ ಘಟನೆ ಎಲ್ಲರಿಗೂ ನೆನಪಿದೆ.
ಸರ್ಕಾರ ಮಕ್ಕಳಿಗೆ ಇಂತಹ ಕೆಟ್ಟ ಬಿಸಿ ಊಟ ನೀಡಿ ಸಾಯಿಸುವ ಬದಲು, ನೇರವಾಗಿ ಸಾಯಿಸಿ ಬಿಡಲಿ.
ಸಂಸತ್ ಸದಸ್ಯರು ಈ ಬಗ್ಗೆ ಯಾವುದೇ ವಿಚಾರ ಮಂಡಿಸದಿರುವುದು ದುರಂತ ಎಂದು ಸರ್ಕಾರದ ಅಡಳಿತ ವೈಖರಿ ಬಗ್ಗೆ ಟೀಕೆ ಮಾಡಿದರು.
ಉತ್ತಮ ನಾಗರಿಕನಾಗಬೇಕು: ನಮ್ಮದು ಸಂಸ್ಕೃತಿ ನಾಡು. ಆಚಾರ್ಯದೇವೋ ಭವ ಎಂದು ಹೇಳುತ್ತೇವೆ. ಆದರೆ, ಯಾವೊಬ್ಬ ವಿದ್ಯಾರ್ಥಿಯೂ ಗುರುಗಳಿಗೆ ಮತ್ತು ಪೋಷಕರಿಗೆ ಗೌರವ ಸೂಚಿಸುತ್ತಿಲ್ಲ. ಮನುಷ್ಯ ಎಂದು ಹುಟ್ಟಿದ ಮೇಲೆ ಒಬ್ಬ ಉತ್ತಮ ನಾಗರಿಕನಾಗಬೇಕು ಎಂಬುದನ್ನು ಮರೆಯಬಾರದು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಆರ್.ಅನಂತನ್ ಬರೆದಿರುವ 'ರಿ ಥಿಂಕಿಂಗ್ ಟ್ಯಾಗೋರ್‌' ಪುಸ್ತಕ ಬಿಡುಗಡೆ ಮತ್ತು ಅರ್ಥಶಾಸ್ತ್ರಜ್ಞರಾದ ಪ್ರೊ. ಐಷರ್ ಜಡ್ಜ್ ಅಹ್ಲುವಾಲಿಯಾ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಸನ್ಮಾನಿಸಿದರು. ನ್ಯಾ.ಎಂ.ಎನ್.ವೆಂಕಟಾಚಲಯ್ಯ,
ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ, ಕಿರಣ್ ಮಜುಂದಾರ್ ಷಾ, ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಎಸ್.ಸಿ.ಶರ್ಮಾ, ಪ್ರೊ.ಕೆ.ಎಂ.ಕಾವೇರಿಯಪ್ಪ ಮತ್ತಿತರರು ಭಾಗವಹಿಸಿದ್ದರು.

ಓದುಗರ ಅಭಿಪ್ರಾಯಕ್ಕೆ ಸ್ವಾಗತ
ಸರ್ಕಾರಿ ಭೂಮಿ ಒತ್ತುವರಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸರ್ಕಾರಿ ಭೂಮಿ ಒತ್ತುವರಿ ತೆರವು ಹಾಗೂ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷರೂ ಆಗಿದ್ದ ಬಾಲಸುಬ್ರಮಣಿಯನ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂದು ವಿಧಾನ ಮಂಡಲದ ಉಭಯ ಸದನದಲ್ಲಿ ಕೆಲ ಶಾಸಕರು ಒತ್ತಾಯಿಸಿದ್ದಾರೆ. ಶಾಸಕರ ಈ ಅಭಿಪ್ರಾಯ ಸರಿಯೋ ಅಥವಾ ತಪ್ಪೋ ಎಂಬ ಬಗ್ಗೆ ಓದುಗರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಪತ್ರಿಕೆಗೆ ಅಂಚೆ ಅಥವಾ ಇ-ಮೇಲ್ ಮೂಲಕ ಕಳುಹಿಸಬಹುದು.

ನಮ್ಮ ವಿಳಾಸ
ಕನ್ನಡಪ್ರಭ, ನಂ1, ಕ್ವೀನ್ಸ್ ರಸ್ತೆ, ಬೆಂಗಳೂರು-560001
ಇ-ಮೇಲ್ anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.