ಸಾಕಾರಗೊಳ್ಳುವುದೇ ಅಶ್ವಿನಿ ಕನಸುಗಳು?

ಕ.ಪ್ರ.ವಾರ್ತೆ , ಬೆಂಗಳೂರು , ಜು. 30
'ನನಗೆ ಕೇವಲ ಎರಡು ವರ್ಷದ ಮಟ್ಟಿಗೆ ಸರ್ಕಾರ ಅಂಗವಿಕಲರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಅವಕಾಶ ಇರುವ ಒಂದು ಸಂಪೂರ್ಣ ಅಧಿಕಾರಯುತ ಹುದ್ದೆ ನೀಡಲಿ. ಆ ಅವಧಿಯಲ್ಲಿ ಈ ರಾಜ್ಯದ ಅಂಗವಿಕಲರ ಶಿಕ್ಷಣ ಪ್ರಮಾಣವನ್ನು ಕನಿಷ್ಠ ಶೇ. 10ರಷ್ಟು ಹೆಚ್ಚಿಸುತ್ತೇನೆ. ಒಂದು ವೇಳೆ ನನ್ನಿಂದ ಅದು ಸಾಧ್ಯವಾಗದಿದ್ದಲ್ಲಿ ಸರ್ಕಾರ ನನ್ನನ್ನು ಆ ಹುದ್ದೆಯಲ್ಲಿ ಮುಂದುವರಿಸುವುದೇ ಬೇಡ...'
ಇದು ವಿಶ್ವಸಂಸ್ಥೆಯಿಂದ ಜಾಗತಿಕ ಶಿಕ್ಷಣ ಯುವ ಸಾಹಸಿ ಪ್ರಶಸ್ತಿ ಪುರಸ್ಕೃತರಾಗಿ ದಿನ ಬೆಳಗಾಗುವುದರೊಳಗೆ ವಿಶ್ವವಿಖ್ಯಾತರಾದ ರಾಜ್ಯದ ಅಂಗವಿಕಲ ಸಾಹಸಿ ಅಶ್ವಿನಿ ಅಂಗಡಿ ಅವರ ಕೋರಿಕೆ ಹಾಗೂ ಕನಸು.
ವಿಶ್ವಸಂಸ್ಥೆ ಪ್ರಶಸ್ತಿ ಪಡೆದ ಬಳಿಕ ನಿಮ್ಮ ಮುಂದಿನ ಗುರಿ-ಕನಸು ಏನು ಎಂಬ ಬಗ್ಗೆ ಕನ್ನಡಪ್ರಭ ನಡೆಸಿದ ಸಂದರ್ಶನದಲ್ಲಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಲಂಡನ್ ಮೂಲದ ಲಿಯೋನಾರ್ಡ್ ಚೆಸೈರ್ ಡಿಸೆಬಿಲಿಟಿ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಅಂಗವಿಕಲರ ಶಿಕ್ಷಣ ಕುರಿತು ಕೆಲಸ ಮಾಡುತ್ತಿದ್ದೇನೆ. ಅದು ಭಾರತದಲ್ಲಿ ಬೆಂಗಳೂರು, ರಾಂಚಿ, ಭೋಪಾಲ್, ಮುಂಬೈ ಮತ್ತು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆ ಎಲ್ಲಾ 5 ಕೇಂದ್ರಗಳಿಗೆ ತೆರಳಿ ಅಲ್ಲಿನ ಅಂಗವಿಕಲ ಮಕ್ಕಳ ಶಿಕ್ಷಣ ಹಾಗೂ ಸಾಂವಿಧಾನಿಕ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದೇನೆ. ಹೀಗೆ ಅಂಗವಿಕಲರ ಶಿಕ್ಷಣ ಕುರಿತಂತೆ ಯಂಗ್ ವಾಯ್ಸ್ ಎಂಬ ಹೆಸರಿನಲ್ಲಿ ಆ ಸಂಸ್ಥೆ ನಡೆಸುತ್ತಿರುವ ಈಗಿನ ಯೋಜನೆ ಮೂರು ವರ್ಷ ಅವಧಿಯದ್ದು. ಈಗಾಗಲೇ 2 ವರ್ಷಕ್ಕೂ ಅಧಿಕ ಅವಧಿ ಮುಗಿದಿರುವ ಆ ಯೋಜನೆಯಲ್ಲಿ ಕಳೆದ ಎರಡು ತಿಂಗಳಿನಿಂದ ತೊಡಗಿಸಿಕೊಂಡಿದ್ದೇನೆ. ಇದೇ ಡಿಸೆಂಬರ್ನಲ್ಲಿ ಆ ಯೋಜನೆ ಪೂರ್ಣಗೊಳ್ಳಲಿದೆ. ಆ ಬಳಿಕ ಕೂಡ ಅದೇ ಸಂಸ್ಥೆ ಜತೆ ಮುಂದುವರಿಯುವಂತೆ ಆ ಸಂಸ್ಥೆಯವರು ನನಗೆ ಹೇಳುತ್ತಿದ್ದಾರೆ. ಆದರೆ, ನನಗೆ ನಮ್ಮ ರಾಜ್ಯದ ಅಂಗವಿಕಲರು ಹಾಗೂ ಅವರ ಶಿಕ್ಷಣದ ಬಗ್ಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂಬ ಮಹದಾಸೆ ಇದೆ.
ಸರ್ಕಾರೇತರ ಸಂಸ್ಥೆಗಳಲ್ಲಿ ಅವರದ್ದೇ ಆದ ಮಿತಿಗಳಿರುತ್ತವೆ. ಅಲ್ಲಿ ನಾವಂದುಕೊಂಡ ಹಾಗೆ ಕಾರ್ಯನಿರ್ವಹಿಸುವುದು ಅಸಾಧ್ಯ. ಹಾಗಾಗಿ, ಸರ್ಕಾರವೇ ಒಂದು ಪೂರ್ಣ ಅಧಿಕಾರ ಹಾಗೂ ಜವಾಬ್ದಾರಿಯುತ ಹುದ್ದೆ ನೀಡಿದರೆ ನಾನಂದುಕೊಂಡಿರುವುದನ್ನು ಸಾಧಿಸಲು ಸಾಧ್ಯ ಎಂಬುದು ಅಶ್ವಿನಿ ಅನಿಸಿಕೆ.
2010ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ರಾಜ್ಯದಲ್ಲಿ ಶೇ. 10ರಷ್ಟು ಅಂಗವಿಕಲರು ಸುಶಿಕ್ಷಿತರಿದ್ದಾರೆ. ಆದರೆ, ರಾಜ್ಯದಲ್ಲಿ ಎಷ್ಟು ಅಂಗವಿಕಲರಿದ್ದಾರೆ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಎಲ್ಲೂ ಇಲ್ಲ. ಜನಗಣತಿಯಲ್ಲಿ ಕೂಡ ಅಂತಹದ್ದೊಂದು ವರ್ಗೀಕರಣ ಇದೆಯೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ, ಜನಗಣತಿಗೆ ಬಂದವರು ನಿಮ್ಮ ಮನೆಯಲ್ಲಿ ಎಷ್ಟು ಮಂದಿ ಅಂಗವಿಕಲರಿದ್ದಾರೆ ಎಂದು ಅವರಾಗಿಯೇ ಕೇಳಿದ ಉದಾಹರಣೆಗಳಿಲ್ಲ. ನಮ್ಮ ಮನೆಗೆ ಗಣತಿಗೆ ಬಂದವರ್ಯಾರೂ ಹಾಗೆ ಕೇಳಿಲ್ಲ. ಅಷ್ಟರಮಟ್ಟಿಗೆ ಅಂಗವಿಕಲರು ನಗಣ್ಯರಾಗಿದ್ದಾರೆ. ಅಂಥವರಿಗೆ ನ್ಯಾಯಯುತ ಸೌಲಭ್ಯ, ಸವಲತ್ತು ಸಿಗಬೇಕಿದ್ದರೆ ಅಂಗವೈಕಲ್ಯ ಅನುಭವಿಸಿದವರಿಗೇ ಅಂಗವಿಕಲರ ಕಲ್ಯಾಣ ಕುರಿತ ಉನ್ನತ ಹುದ್ದೆ ಲಭಿಸಬೇಕು. ನನಗೆ ಅಂತಹ ಹುದ್ದೆ ನೀಡಿ ಅವಕಾಶ ಕಲ್ಪಿಸಿದರೆ, ಸಾಧಿಸಿ ತೋರಿಸುವೆ ಎನ್ನುತ್ತಾರೆ ಅಶ್ವಿನಿ.
ಆದರೆ, ಕನಸಿನ ಸಾಕಾರಕ್ಕಾಗಿ ಯಾರೊಬ್ಬರ ಬಳಿ ಹೋಗಿ ಅಂಗಲಾಚುವುದು ಆಕೆಗೆ ಇಷ್ಟವಿಲ್ಲ. ಏಕೆಂದರೆ, ತಾನಾಗೇ ಹೋದರೆ ಎಲ್ಲರೂ ತನ್ನನ್ನು ಅನುಕಂಪದಿಂದ ನೋಡುತ್ತಾರೆ ವಿನಃ ತನ್ನ ಅರ್ಹತೆಯಿಂದಲ್ಲ. ಕಡೇಪಕ್ಷ ನನ್ನ ಸಾಧನೆ ಗುರುತಿಸಿ ವಿಶ್ವಸಂಸ್ಥೆ ನೀಡಿರುವ ಪ್ರಶಸ್ತಿಯ ಮೌಲ್ಯ ತಿಳಿದಾದರೂ ಸರ್ಕಾರ ತಾನಾಗಿಯೇ ಪ್ರೋತ್ಸಾಹ ಅಥವಾ ನೆರವು ನೀಡುತ್ತದೆ ಎಂಬುದು ಅಶ್ವಿನಿಯ ನಿರೀಕ್ಷೆ.
ವಿಶ್ವಸಂಸ್ಥೆ ಪ್ರಶಸ್ತಿ ಸಿಕ್ಕ ಬಳಿಕ ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಅಶ್ವಿನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ. ಅದನ್ನು ಹೊರತುಪಡಿಸಿದರೆ, ಅವರ ಮುಂದಿನ ಗುರಿ ಏನು ಅಥವಾ ಮುಂದಿನ ಸಾಧನೆಗೆ ಸರ್ಕಾರದಿಂದ ಆಗಬೇಕಿರುವ ಸಹಾಯ ಏನು ಎಂಬುದರ ಬಗ್ಗೆ ಯಾರೂ ವಿಚಾರಿಸಿಲ್ಲ ಎಂಬುದು ಅವರ ಅಳಲು.
ಮತ್ತೊಂದೆಡೆ, ವಿಶ್ವಸಂಸ್ಥೆಯ ಅಧ್ಯಕ್ಷ ಬಾನ್ ಕಿ ಮೂನ್ ಅವರು ಸೇರಿದಂತೆ ವಿದೇಶಿ ಮೂಲದ ಹಲವು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಆಕೆಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿರುವುದು ಮಾತ್ರವಲ್ಲ, ಆಕೆ ಜತೆ ನಿರಂತರ ಸಂವಹನದಲ್ಲಿದ್ದಾರೆ.
ರಾಜ್ಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸದಿದ್ದರೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟ ಅಶ್ವಿನಿ ಮುಂದೆ ವಿದೇಶಕ್ಕೆ ಹಾರಿ ಅಲ್ಲಿನ ಸಂಸ್ಥೆ-ಜನತೆಗಾಗಿ ದುಡಿಯುವಂತಾದರೂ ಅಚ್ಚರಿಯಿಲ್ಲ.
-ರವಿಕಾಂತ ಕುಂದಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


