ಪ್ರಧಾನ ಸುದ್ದಿ

ಬೆಂಗಳೂರಿನ ಭವಿಷ್ಯಕ್ಕಾಗಿ ಸನ್ನದು

ಬೆಂಗಳೂರಿನ ಭವಿಷ್ಯಕ್ಕಾಗಿ ಸನ್ನದು
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜೂ. 6-
ಬೆಂಗಳೂರು ನಗರದ ಭವಿಷ್ಯ ನಾಗರಿಕರ ಹಿಡಿತದಲ್ಲಿರಬೇಕು ಹಾಗೂ ಆತನೇ ಅದರ ನೈಜ ಹಕ್ಕುದಾರ ಎಂಬ ಉದ್ದೇಶದಿಂದ 'ಯೋಗ್ಯ ಆಡಳಿತ- ಜವಾಬ್ದಾರಿಯುತ ಆಡಳಿತ ನಾಗರಿಕ ಸನ್ನದು' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಸಲ್ಲಿಕೆಯಾಗುತ್ತಿದೆ.
ಬೆಂಗಳೂರಿನ ನಿವಾಸಿ ಅಭಿವೃದ್ಧಿ ಸಂಘಗಳು ಮತ್ತು ನಾಗರಿಕ ಸಂಸ್ಥೆಗಳ ಸಹಯೋಗದೊಂದಿಗೆ 'ನಮ್ಮ ಬೆಂಗಳೂರು ಪ್ರತಿಷ್ಠಾನ' ಮುಖ್ಯಮಂತ್ರಿಯವರಿಗೆ ಈ ಸನ್ನದು ಸಲ್ಲಿಸುತ್ತಿದೆ. ಇದೇ ಸಂದರ್ಭದಲ್ಲಿ ನಗರದ 28 ಶಾಸಕರನ್ನು ಸನ್ಮಾನಿಸಲಾಗುತ್ತಿದೆ.
ಸುಮಾರು 300ಕ್ಕೂ ಅಧಿಕ ಸಂಘಗಳು ಹಾಗೂ ಪ್ರಜ್ಞಾವಂತ ನಾಗರಿಕರು ಸನ್ನದು ರೂಪಿಸಿವೆ. ಇದರ ಅನುಷ್ಠಾನದಿಂದ ಬೆಂಗಳೂರಿನ ಭವಿಷ್ಯದ ಮೇಲೆ ಪರಿಣಾಮ ಬೀಳಲಿದೆ ಮತ್ತು ನಿರ್ಧಾರಗಳಲ್ಲಿ ನಾಗರಿಕರ ದನಿಗೊಂದು ಅವಕಾಶ ಕೊಡುವುದರ ಜತೆಗೆ ಸಕ್ರಿಯವಾಗಿ ಪಾಲ್ಗೊಳ್ಳುವುದರ ಸ್ಪಷ್ಟ ಸೂಚನೆಯನ್ನು ಈ ಸನ್ನದು ನೀಡಲಿದೆ.
ನಮ್ಮ ಬೆಂಗಳೂರು ಪ್ರತಿಷ್ಠಾನವು ಪ್ರಾರಂಭಿಸಿರುವ 'ಯೋಗ್ಯ ಆಡಳಿತ, ಜವಾಬ್ದಾರಿಯುತ ಆಡಳಿತ' ಅಭಿಯಾನದ ಒಂದು ಭಾಗವಾಗಿ ಸನ್ನದು ರೂಪಗೊಂಡಿದೆ. ನಾಗರಿಕ ಸಂಘ- ಸಂಸ್ಥೆಗಳ ಬೇಡಿಕೆ, ನಗರ ಕ್ರಿಯಾ ಯೋಜನೆ ಮತ್ತು ನೂತನ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸನ್ನದಿನಲ್ಲಿ ಪ್ರಸ್ತಾಪಿಸಲಾಗಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನ ಮುಂದಾಳತ್ವದಲ್ಲಿ ನೂರಾರು ನಿವಾಸಿ ಅಭಿವೃದ್ಧಿ ಸಂಘಗಳು ಒಟ್ಟಾಗಿ ನಗರಕ್ಕೊಂದು ಕ್ರಿಯಾಯೋಜನೆ ಸಿದ್ದಪಡಿಸಿ ಪ್ರಸ್ತಾಪಿಸುತ್ತಿರುವುದು ಇದೇ ಮೊದಲು.          

ಮತದಾನ ಪ್ರಮಾಣ ಏರಿಕೆ: ಬೆಂಗಳೂರು ನಗರದ ಪರಿಣಾಮಕಾರಿ ಆಡಳಿತಕ್ಕಾಗಿ ಸರ್ಕಾರದ ಮೇಲೆ ಒತ್ತಡಹಾಕಲು ಈ ಅಭಿಯಾನ ಪ್ರಾರಂಭಿಸಲಾಗಿದೆ. 'ಯೋಗ್ಯರಿಗೆ ಮತ ಚಲಾಯಿಸಿ, ಹೊಣೆಯರಿತು ಮತ ಚಲಾಯಿಸಿ' ಎಂಬ ಜಾಗೃತಿ ಅಭಿಯಾನವೂ ಇದರ ಭಾಗವಾಗಿತ್ತು. ಇದರಿಂದ ನಗರದಲ್ಲಿ ಮತದಾನ ಪ್ರಮಾಣ ಏರಿಕೆಯಾಗಿರುವುದು ಗಮನಾರ್ಹ ಬೆಳವಣಿಗೆ.
ಆರ್ಥಿಕ ಹಾಗೂ ವ್ಯವಹಾರಿಕ ದೃಷ್ಟಿಯಲ್ಲಿ ಬೆಂಗಳೂರು ನಗರವು ಬೆಳೆಯುತ್ತಿದೆ. ಆದರೆ ಮೂಲಭೂತ ಸೌಕರ್ಯಗಳು ಇದರೊಟ್ಟಿಗೆ ಅಭಿವೃದ್ಧಿ ಹೊಂದದಿರುವುದು ಆತಂಕಕ್ಕೆ ಕಾರಣವಾಗಿದೆ.
ಸರ್ಕಾರ ಅಥವಾ ಅಧಿಕಾರಿ ವರ್ಗದಿಂದ ಮಾತ್ರ ಈ ಬದಲಾವಣೆ ಸಾಧ್ಯವಿಲ್ಲ. ಸಂಘ ಸಂಸ್ಥೆಗಳು ಹಾಗೂ ನಗರದ ಜವಾಬ್ದಾರಿಯುತ ಜನತೆ ಸರ್ಕಾರದೊಂದಿಗೆ ಕೈಗೂಡಿಸಬೇಕು, ಇದು ಅನಿವಾರ್ಯ ಕೂಡ.

ಒತ್ತಾಯಿಸಬೇಕಾದೀತು: ಸಾರ್ವಜನಿಕ ಸಂಪತ್ತಿನ ನಿರ್ವಹಣೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ, ದೀರ್ಘಾವಧಿ ಒಪ್ಪಂದಗಳ ಮುಖಾಂತರ ಗುಣಮಟ್ಟದ ಸಾರ್ವಜನಿಕ ಸೇವೆಗಳ ನಿರೀಕ್ಷೆಯನ್ನು ಈ ಸನ್ನದು ಹೊಂದಿದೆ. ಇದು ಜನರ ಧ್ವನಿಯಾಗಿದ್ದು, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಆಶಯವಿದೆ.
ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೇ ನಾಗರಿಕರು ಸಕ್ರಿಯರಾಗಿ ಒತ್ತಾಯಿಸಬೇಕಾದೀತು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ನಿರ್ದೇಶಕಿ ಮಹಾಲಕ್ಷ್ಮಿ ಪಾರ್ಥಸಾರಥಿ ಹೇಳಿದ್ದಾರೆ.

ಉತ್ತಮ ವೇದಿಕೆ: 'ನಾವು ಯಾವಾಗಲೂ ಸರ್ಕಾರವನ್ನೆ ದೂಷಿಸಲು ಸಾಧ್ಯವಿಲ್ಲ. ನಿವಾಸಿ ಅಭಿವೃದ್ಧಿ ಸಂಸ್ಥೆಯ ಸದಸ್ಯರಾಗಿ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನದೊಂದಿಗೆ ಕೂಡಿಕೊಂಡು ನಗರಕ್ಕಾಗಿ ಯೋಜನೆ ಪ್ರಸ್ತಾಪಿಸಲಾಗಿದೆ. ಇದರ ಜತೆಗೆ ನಿರಂತರವಾಗಿ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ನಗರಕ್ಕಾಗಿ ತಮ್ಮ ದನಿಯನ್ನು ತಲುಪಿಸುವಂತಾಗಲು ಎಲ್ಲ ನಾಗರಿಕ ಸಂಸ್ಥೆಗಳಿಗೆ ಹಾಗೂ ನಿವಾಸಿ ಅಭಿವೃದ್ಧಿ ಸಂಘಗಳಿಗೆ ಇದೊಂದು ಉತ್ತಮ ವೇದಿಕೆ' ಎಂದು ಈಶಾನ್ಯ ಬೆಂಗಳೂರು ನಿವಾಸಿ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಾಜಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ನಿರ್ಲಕ್ಷಿಸಲು ಸಾಧ್ಯವಿಲ್ಲ: ಸಂಘಟಿತವಾಗಿ ಹೋದರೆ ಸರ್ಕಾರವನ್ನು ಮಣಿಸಲು ಸಾಧ್ಯವಿದೆ. ಇದರಿಂದ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯುತ್ತದೆ.
ಪ್ರತಿಯೊಬ್ಬ ನಾಗರಿಕನೂ ಈ ವೇದಿಕೆ ಮೂಲಕ ಸರ್ಕಾರಕ್ಕೆ ತನ್ನ ಸಮಸ್ಯೆ ಹೇಳಿಕೊಳ್ಳಬಹುದು. ಸಂಘಟಿತ ಬೆಂಬಲದಿಂದ ಸಮಸ್ಯೆಗಳನ್ನು ತೋರಿಸಿದಾಗ ಆಡಳಿತ ವ್ಯವಸ್ಥೆ ನಿರ್ಲಕ್ಷಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಹೆಬ್ಬಾಳ ಸಂಘದ ಮುಖ್ಯಸ್ಥ ವಿದ್ಯಾಧರ್ ಹೇಳುತ್ತಾರೆ.

ನಾಗರಿಕರ ಸನ್ನದಿನಲ್ಲೇನಿದೆ?

ಪ್ರಜಾತಂತ್ರ ಹಾಗೂ ನಾಗರಿಕರ ಪರ ಆಡಳಿತ
ಬೆಂಗಳೂರು ಮಹಾನಗರದ ಆಡಳಿತವು ಸಾರ್ವಜನಿಕರ ಹಿತಾಸಕ್ತಿಯ ಪರವಾಗಿರಬೇಕು. ನಗರದ ಪ್ರತಿಯೊಬ್ಬ ವ್ಯಕ್ತಿಯೂ ಆಡಳಿತ ವೈಖರಿ ಬಗ್ಗೆ ಪಾರದರ್ಶಕ ಅಭಿಪ್ರಾಯ ಹೊಂದಿರಬೇಕು. ನಗರದ ಅಭಿವೃದ್ಧಿ ವಿಚಾರವು ಜನರಿಂದಲೇ ರೂಪಗೊಂಡು ಜನರಿಗಾಗಿ ಆಗಬೇಕು.

  • ಬೆಂಗಳೂರು ಮಹಾನಗರ ವ್ಯಾಪ್ತಿಗೆ ಬರುವ ಜಲಮಂಡಳಿ, ಬಿಬಿಎಂಪಿ ಹಾಗೂ ಇತರ ಸಂಸ್ಥೆಗಳನ್ನು ಬಿಬಿಎಂಪಿ ಅಡಿಯಲ್ಲಿ ತಂದು ಹೊಸ ಕಾಯಿದೆ ರೂಪಿಸಬೇಕು.
  • ವಾರ್ಡ್ ಸಮಿತಿ ಸದಸ್ಯರನ್ನು ನೇಮಕ ಮಾಡುವ ಬದಲು ಆಯ್ಕೆ ಪ್ರಕ್ರಿಯೆ ನಡೆಸಬೇಕು.
  • ಲೋಕಾಯುಕ್ತ ಕಾಯಿದೆ ಶಕ್ತಗೊಳಿಸಬೇಕು.
  • ಕರ್ನಾಟಕ ಪಾರದರ್ಶಕ ಕಾಯಿದೆಗೆ ತಿದ್ದುಪಡಿ ತರಬೇಕು.
  • ನಗರದ ಅಧಿಕೃತ ವೆಬ್‌ತಾಣ ಹಾಗೂ ನಗರಾಭಿವೃದ್ಧಿ ಆಡಳಿತ ಸಂಸ್ಥೆ ಪ್ರಾರಂಭಿಸಬೇಕು.
ಪಾರದರ್ಶಕ ಆಡಳಿತ
  • ನಗರಕ್ಕೆ ಸಂಬಂಧಪಟ್ಟ ಶಾಸಕರು, ಸಂಸದರು ಹಾಗೂ ಕಾರ್ಪೊರೇಟರ್‌ಗಳ ನಿಧಿ, ಇಲಾಖಾವಾರು ಅನುದಾನ ಸೇರಿದಂತೆ ಇತರ ಸಾರ್ವಜನಿಕ ಹಣಗಳ ಬಗ್ಗೆ ಮಾಹಿತಿಯು ಎಲ್ಲರಿಗೂ ಲಭ್ಯವಿರಬೇಕು.
  • ಎಲ್ಲ ಶಾಸಕರು, ಕಾರ್ಪೊರೇಟರ್‌ಗಳು ಪ್ರಗತಿ ಪರಿಶೀಲನಾ ಸಭೆ ನಡೆಸಿ ವರದಿ ಪ್ರಕಟಿಸಬೇಕು.
  • ಬಿಬಿಎಂಪಿಯ ಎಲ್ಲ ಸಾರ್ವಜನಿಕ ಕೆಲಸಗಳನ್ನು ಸಕಾಲದಡಿಯಲ್ಲಿ ತರಬೇಕು.
ಜನಸ್ನೇಹಿ ನಗರ
  • ರಾಜಕಾಲುವೆ ಮೇಲೆ ನಿರ್ಮಿಸಿಲಾಗಿರುವ ಅಕ್ರಮ ಕಟ್ಟಡಗಳ ತೆರವು ಮಾಡಬೇಕು.
  • ನಗರದ ಜಲ ಸಂರಕ್ಷಣೆಗಾಗಿ ಕೆರೆಗಳನ್ನು ರಕ್ಷಿಸಬೇಕು.
  • ಬೆಂಗಳೂರಿಗರಿಗಾಗಿ ವಿಶೇಷ ಆರೋಗ್ಯ ಹಾಗೂ ವಿಮಾ ಯೋಜನೆ ಪ್ರಾರಂಭಿಸಬೇಕು.
  • ವಾಹನ ದಟ್ಟಣೆ ಪ್ರದೇಶದಲ್ಲಿ ಫ್ಲೈ-ಓವರ್, ರ್ಯಾಪಿಡ್ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಜಾರಿ ಮಾಡಬೇಕು.
  • ಉಪನಗರಗಳಿಗೆ ಸೇರುವ ರಸ್ತೆ ಹಾಗೂ ಹೊರವರ್ತುಲ ರಸ್ತೆಗಳನ್ನು ಸಿಗ್ನಲ್‌ರಹಿತಗೊಳಿಸಬೇಕು.
  • ನಮ್ಮ ಮೆಟ್ರೋ ಫೇಸ್-1 ಮತ್ತು 2ನ್ನು 3 ವರ್ಷದೊಳಗೆ ಮುಗಿಸಬೇಕು.
  • ಸ್ಲಂ ರಹಿತ ನಗರಕ್ಕಾಗಿ ಕಡಿಮೆ ವೆಚ್ಚ ಹಾಗೂ ಸುರಕ್ಷಿತ ಮನೆಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಬೇಕು.

ಆಡಳಿತದಲ್ಲಿ ಸಹಭಾಗಿತ್ವ
ಪ್ರಜಾತಂತ್ರ ಬಲಗೊಳ್ಳಲು ಸಾರ್ವಜನಿಕರ ಸಹಭಾಗಿತ್ವದ ಅಗತ್ಯವಿದೆ. ಅಧಿಕಾರದಲ್ಲಿದ್ದವರು ನಗರಕ್ಕೆ ಸಂಬಂಧಿಸಿದ ಯೋಜನೆ ರೂಪಿಸುವಾಗ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು.

  • ವಾರ್ಡ್ ಸಮಿತಿ ಹಾಗೂ ನೆರೆಹೊರೆ ಸಮಿತಿ ಸ್ಥಾಪಿಸಿ ಆಡಳಿತ ವ್ಯವಸ್ಥೆಯನ್ನು ಬಲ ಸಂವರ್ಧನೆ ಮಾಡಬೇಕು.
  • ನಗರಕ್ಕೆ ಸಂಬಂಧಿಸಿದ ಯಾವುದೇ ನಿಯಮ ರಚಿಸುವಾಗ ಆಡಳಿತಶಾಹಿಗಳು ಸಾರ್ವಜನಿಕರ ಸಲಹೆ ಪಡೆಯಬೇಕು.
  • ಯೋಜನೆಗಳ ಬಗ್ಗೆ ಸ್ಪಷ್ಟತೆಹೊಂದಿರಬೇಕು.
  • ಬೆಂಗಳೂರು ಮಹಾನಗರದ ಯೋಜನಾ ಆಯೋಗ ರಚಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.