ವಕ್ಫ್ ಜೇನುಗೂಡಿಗೆ ಸರ್ಕಾರದ ಕೈ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜೂ. 6
ಕೊನೆಗೂ ಸರ್ಕಾರ ವಕ್ಫ್ ಜೇನುಗೂಡಿಗೆ ಕೈ ಹಾಕಿದೆ. ಏಕೆಂದರೆ ರಾಜ್ಯಾದ್ಯಂತ ನಡೆದಿರುವ ಬಹುಕೋಟಿ ಮೌಲ್ಯದ ವಕ್ಫ್ ಸ್ವತ್ತಿನ ಒತ್ತುವರಿ, ಪರಭಾರೆ ವಿರುದ್ಧ ಸಮರ ಸಾರಿರುವ ಸರ್ಕಾರ ಆಸ್ತಿಯನ್ನು ಮರಳಿ ಪಡೆಯಲು ಎರಡು ಹಂತಗಳಲ್ಲಿ ಕಾರ್ಯಪಡೆ ರಚಿಸಿದೆ.
ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ ವಕ್ಫ್ ಆಸ್ತಿ ಅಕ್ರಮಗಳಿಗೆ ಸಂಬಂಧಿಸಿದಂತೆ 2012ರ ಮಾರ್ಚ್ನಲ್ಲಿಯೇ ಸರ್ಕಾರಕ್ಕೆ 7,500 ಪುಟಗಳ ವರದಿ ಸಲ್ಲಿಸಿತ್ತು. ಅಲ್ಲದೆ ಕಳೆದು ಹೋಗಲಿರುವ 2 ಲಕ್ಷ ಕೋಟಿ ಮೌಲ್ಯದ ವಕ್ಫ್ ಸ್ವತ್ತನ್ನು ಉಳಿಸಿಕೊಳ್ಳಲು ವಿಶೇಷ ಕಾರ್ಯಪಡೆ ರಚಿಸಿ ಕ್ರಿಯಾಶೀಲವಾಗುವಂತೆ ಶಿಫಾರಸು ಮಾಡಿತ್ತು. ವಕ್ಫ್ ಮಂಡಳಿ ಅಧಿಕಾರಿಗಳು, ರಾಜಕೀಯ ನಾಯಕರು, ಭೂ ಮಾಫಿಯಾ, ಮಧ್ಯವರ್ತಿಗಳ ಹಾವಳಿಯಲ್ಲೇ ವಕ್ಫ್ ಬಹುಕೋಟಿ ಆಸ್ತಿ ಕಳೆದು ಹೋಗಿದ್ದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಶಿಫಾರಸಿನಂತೆ ಆಗಿನ ಬಿಜೆಪಿ ಸರ್ಕಾರ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಕಾರ್ಯಪಡೆ ರಚನೆಗೆ ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳ ಮೇ 10ರಂದೇ ಸರ್ಕಾರದಿಂದ 2 ಹಂತಗಳ ಕಾರ್ಯಪಡೆ ರಚನೆಯಾಗಿರುವ ಅಧಿಕೃತ ಆದೇಶವೂ ಹೊರಬಿದ್ದಿದೆ.
ಕಾರ್ಯಪಡೆಯ ಕೆಲಸವೇನು?: ರಾಜ್ಯ ಸರ್ಕಾರ ರಚಿಸಿರುವ ಕಾರ್ಯಪಡೆಗಳ ಪೈಕಿ ಜಿಲ್ಲಾ ಮಟ್ಟದಲ್ಲಿ ಈ ಕೆಳಗಿನ ಕೆಲಸ ಕಾರ್ಯಗಳು ಪ್ರತಿ ತಿಂಗಳೂ ಕಡ್ಡಾಯವಾಗಿ ನಡೆಯಲೇಬೇಕು.
ಅಲ್ಪಸಂಖ್ಯಾತರ ಆಯೋಗ ತನ್ನ ವರದಿಯಲ್ಲಿ ಅಕ್ರಮವಾಗಿ ಕೈ ಬಿಟ್ಟು ಹೋಗಿರುವ ವಕ್ಫ್ ಸ್ವತ್ತುಗಳೆಂದು ಸೂಚಿಸಿರುವ ಆಸ್ತಿಗಳೊಂದಿಗೆ ಜಿಲ್ಲೆಯಲ್ಲಿರುವ ಇತರೆ ಎಲ್ಲ ಆಸ್ತಿಗಳನ್ನೂ ಗುರುತಿಸಿ ಮರಳಿ ಪಡೆಯಲು ಕಾನೂನು ಕ್ರಮ ಕೈಗೊಳ್ಳಬೇಕು.
ವಕ್ಫ್ ಆಸ್ತಿ ಎಂದು ಗುರುತಿಸಲಾಗಿರುವ ಆಸ್ತಿಗಳ ಮೂಲ ದಾಖಲಾತಿ ನಿರ್ವಹಿಸಲು ಅಗತ್ಯ ಕ್ರಮ ಜರುಗಿಸಬೇಕು.
ಸ್ವಾಧೀನದಲ್ಲಿರುವ ಮತ್ತು ಮರಳಿ ಪಡೆದಿರುವ ಎಲ್ಲ ಆಸ್ತಿಗಳನ್ನೂ ಸರ್ಕಾರದ ಅನುದಾನದಿಂದ ಬೇಲಿ ಹಾಕುವ, ಆವರಣ ಗೋಡೆ ಕಟ್ಟುವ ಮೂಲಕ ಸಂರಕ್ಷಿಸಬೇಕು.
ಪರಭಾರೆಯಾಗಿರುವ ವಕ್ಫ್ ಸ್ವತ್ತುಗಳನ್ನು ಕಾನೂನು ಪ್ರಕಾರ ಮರಳಿ ಪಡೆಯಬೇಕು. ಆಗ ಮುಂದೆಯೂ ಕಾನೂನು ಬಾಹಿರ ಪರಭಾರೆಯಾಗದಂತೆ ಎಚ್ಚರವಹಿಸಲು ಖಾತೆಯ ಇತರೆ ಹಕ್ಕಿನ ಕಾಲಂನಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದಿಸಲು ಕ್ರಮ ಜರುಗಿಸಬೇಕು.
ಕೈ ತಪ್ಪಿ ಹೋಗಿರುವ ವಕ್ಫ್ ಆಸ್ತಿಗಳನ್ನು ವಾಪಸು ಪಡೆಯಲು ಮೇಲ್ಮನವಿಗಳನ್ನು ಸಲ್ಲಿಸಿ ಸಕ್ಷಮ ನ್ಯಾಯಾಲಯಗಳಲ್ಲಿ ಸೂಕ್ತ ಆದೇಶ ಪಡೆದು ಆಸ್ತಿಗಳ ಸ್ವಾಧೀನಕ್ಕೆ ಮುಂದಾಗಬೇಕು.
ವಕ್ಫ್ ಆಸ್ತಿಗಳನ್ನು ಹಿಂದಿನಿಂದಲೂ ಕಾನೂನು ಪ್ರಕಾರ ಯಾವುದೇ ಪ್ರಕ್ರಿಯೆ ಜರುಗಿಸದೆ ಸಾರ್ವಜನಿಕ ಉದ್ದೇಶಗಳಿಗೆ ಸ್ವಾಧೀನ ಪಡಿಸಿಕೊಂಡಿರುವುದನ್ನು ಗುರುತಿಸಿ ಅದಕ್ಕೆ ಬರಬೇಕಾದ ಪರಿಹಾರ ಧನವನ್ನು ಪಡೆದು ಸದರಿ ಜಮೀನು ವಕ್ಫ್ ಮಾಡಿದ ಉದ್ದೇಶಕ್ಕೆ ಸಂಸ್ಥೆಯವರು ಉಪಯೋಗಿಸುವಂತೆ ಕ್ರಮ ಜರುಗಿಸಬೇಕು.
ರಾಜ್ಯ ಮಟ್ಟದಲ್ಲಿ ತ್ರೈಮಾಸಿಕ ಪರಿಶೀಲನೆ: ರಾಜ್ಯ ಮಟ್ಟದ ಕಾರ್ಯಪಡೆ ವಕ್ಫ್ ಆಸ್ತಿಗಳ ಪರಿಶೀಲನೆಗೆ, ಚರ್ಚೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಜಿಲ್ಲಾ ಮಟ್ಟದ ಕಾರ್ಯಪಡೆಯ ವರದಿಗಳನ್ನು ಹಾಗೂ ಪ್ರಗತಿಯನ್ನು ಪರಿಶೀಲಿಸಬೇಕು. ಜಿಲ್ಲಾ ಮಟ್ಟದ ಅಧ್ಯಕ್ಷರು ಆಯಾ ತಿಂಗಳು ತಮ್ಮ ವ್ಯಾಪ್ತಿಯಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಸಾಧಿಸಲಾದ ಪ್ರಗತಿಯ ಮಾಹಿತಿ ರಾಜ್ಯ ಕಾರ್ಯಪಡೆಗೆ ಆಯಾ ತಿಂಗಳ 10ನೇ ತಾರೀಖಿನೊಳಗೆ ಸಲ್ಲಿಸಬೇಕು.
ಏನಿದು ವಕ್ಫ್ ಆಸ್ತಿ?
ಮುಸ್ಲಿಂ ಸಮುದಾಯದಲ್ಲಿರುವ ಕಡು ಬಡವರಿಗೆ ಉಪಯೋಗವಾಗುವ ಉದ್ದೇಶದಿಂದ ಕಾಲಾಂತರದಿಂದ ಬಂದಿರುವ ಸ್ವತ್ತಿದು. ಇವುಗಳ ರಕ್ಷಣೆಗೆ ರಾಜ್ಯ ಸರ್ಕಾರ ಕಾಯ್ದೆ ಪ್ರಕಾರ ವಕ್ಫ್ ಬೋರ್ಡ್ ರಚಿಸಿ ಮುಂದಡಿ ಇಟ್ಟಿತು. ಮಸೀದಿಗಳು, ಈದ್ಗಾಗಳು, ಖಬರಸ್ತಾನ್ (ರುದ್ರ ಭೂಮಿಗಳು), ಅನಾಥಾಲಯಗಳೆಲ್ಲವೂ ವಕ್ಫ್ ಆಸ್ತಿ ಅಡಿಯಲ್ಲಿಯೇ ಗುರುತಿಸಲ್ಪಡುತ್ತವೆ.
ವಕ್ಫ್ ಆಸ್ತಿಗಳ ಸಂರಕ್ಷಣೆಗೆ 2 ಹಂತದ ಕಾರ್ಯಪಡೆ ರಚನೆ ಸ್ವಾಗತಾರ್ಹ ವಿಷಯ. ಅಲ್ಪಸಂಖ್ಯಾತರ ಆಯೋಗದ ವರದಿಯಲ್ಲಿ 2 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಹಗರಣ, ರಾಜಕಾರಣಿಗಳ ಹೆಸರೊಂದಿಗೆ ಬಯಲಾಗಿದೆ. ಈ ವರದಿಯಲ್ಲಿನ ಸಂಗತಿಗಳ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ತನಿಖೆ ಶುರುಮಾಡಲಿ.
-ಎಸ್. ಕೆ. ಕಾಂತಾ, ಮಾಜಿ ಮಂತ್ರಿ
- ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

