ಹೈ-ಕ ಭಾಗಕ್ಕೆ ಮತ್ತೆ ಕಂಟಕ

ವಿಶೇಷ ಸ್ಥಾನಮಾನ: ತರಾತುರಿ ನೀತಿ, ನಿಯಮ ಜಾರಿಗೆ ಸಜ್ಜು
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜೂ.9-
ಬಹು ವರ್ಷಗಳ ಹೋರಾಟದ ನಂತರ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಲಭಿಸಿದೆ. ಅದರೆ, ಈ ಸೌಲಭ್ಯ ಪಡೆದುಕೊಳ್ಳಲು ಸರ್ಕಾರ ತರಾತುರಿಯಲ್ಲಿ ನೀತಿ-ನಿಯಮ ರೂಪಿಸಿದರೆ ಮತ್ತೆ ಅನ್ಯಾಯವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರ ಹೈ-ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಘೋಷಣೆ ಮಾಡಿ ಅರ್ಧ ವರ್ಷ ಕಳೆಯುತ್ತ ಬಂತು. ಚುನಾವಣೆ ಹಿನ್ನೆಲೆಯಲ್ಲಿ ಇಷ್ಟು ದಿನ ನೀತಿ-ನಿಯಮ ರೂಪಿಸುವ ಕೆಲಸ ಆಗಲಿಲ್ಲ. ಹೀಗಾಗಿ ಒಂದು ತಿಂಗಳಲ್ಲಿ ನೀತಿ-ನಿಯಮ ರೂಪಿಸಿ ಅಧಿಸೂಚನೆ ಹೊರಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಅದಕ್ಕೆ ತಕ್ಕಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಿಂಗಳೊಳಗೆ ಈ ಕೆಲಸ ಮುಗಿಸುವುದಾಗಿ ಹೇಳಿದ್ದಾರೆ.
ಈ ತರಾತುರಿಯಲ್ಲಿ ನೀತಿ-ನಿಯಮ ರೂಪಿಸಿದರೆ ಹೈ-ಕಕ್ಕೆ ನಿಜವಾಗಿಯೂ ಸಿಗಬೇಕಾದ ಸ್ಥಾನಮಾನದ ಬದಲು ಮತ್ತದೇ ಅನ್ಯಾಯವಾಗಬಹುದು ಮತ್ತು ಇತರ ಪ್ರದೇಶಗಳಿಂದ ಅಲ್ಲಿನ ಜನ ದೂರವಾಗುವ ಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಈ ಆತಂಕಕ್ಕೆ ಕಾರಣ ಸರ್ಕಾರ ಈಗಾಗಲೇ ರೂಪಿಸಿರುವ ನೀತಿ-ನಿಯಮಗಳ ಕರಡು. ಅದರ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಅದರಲ್ಲಿರುವ ಅಂಶಗಳನ್ನು ಗಮನಿಸಿದಾಗ ಹೈ-ಕ ಪ್ರದೇಶಕ್ಕೆ ಮಾರಕವಾಗಿ ಪರಿಣಮಿಸಬಹುದು ಎಂಬುದು ಜನರ ಆತಂಕ.
ಸ್ಥಳೀಯರು ಅಂದರೆ ಯಾರು?: ಉದ್ಯೋಗ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡುವಾಗ ಸ್ಥಳೀಯರಿಗೆ ಆದ್ಯತೆ ಎನ್ನಲಾಗುತ್ತದೆ. ಆಗ ಸ್ಥಳೀಯರು ಅಂದರೆ ಯಾರು ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಈಗ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಕರಡು ಪ್ರತಿಯಲ್ಲಿ ಹೈ-ಕ ಪ್ರದೇಶದಲ್ಲಿ ಸತತ 10 ವರ್ಷಗಳ ವ್ಯಾಸಂಗ ಮಾಡಿದ ವ್ಯಕ್ತಿಯನ್ನು, ಹೈ-ಕ ಪ್ರದೇಶದಲ್ಲಿ ಜನಿಸಿದ ವ್ಯಕ್ತಿಯನ್ನು ಸ್ಥಳೀಯರು ಎಂದು ಪರಿಗಣಿಸಲಾಗುತ್ತದೆ.
ಇಲ್ಲಿ ಕೆಲವು ತಾಂತ್ರಿಕ ಅಂಶಗಳು ತೊಂದರೆ ಉಂಟು ಮಾಡುತ್ತವೆ. ಹೈ-ಕ ಪ್ರದೇಶಕ್ಕೆ ಉದ್ಯೋಗಕ್ಕೆಂದು (ಬ್ಯಾಂಕ್, ಸರ್ಕಾರಿ, ಖಾಸಗಿ) ಸಾಮಾನ್ಯವಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಕಲಿಯಲು 4-5 ವರ್ಷ ಬೇಕಾಗುತ್ತದೆ. ಅದರಲ್ಲೇ ಉನ್ನತ ಶಿಕ್ಷಣ ಮಾಡಿದರೆ ಮತ್ತೆರಡು ವರ್ಷ. ಒಟ್ಟು 6-7 ವರ್ಷ ಇದರಲ್ಲೇ ಆಗಿಬಿಡುತ್ತದೆ. ಆರಂಭದಲ್ಲಿ ಅಥವಾ ನಂತರ 3-4 ವರ್ಷ ಹೈ-ಕ ಭಾಗದಲ್ಲೇ ಕಲಿತು ಬಿಟ್ಟರೆ ಉತ್ತರ ಭಾರತೀಯ ಕೂಡ ಹೈ-ಕದ ಸ್ಥಳೀಯರಾಗಿಬಿಡುತ್ತಾರೆ.
ಜನನದ ಆಧಾರದ ಮೇಲೆ ಸ್ಥಳೀಯ ಎಂದು ಪರಿಗಣಿಸಿದರೂ ಕಷ್ಟವಿದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಾಯಿ ಮನೆಯಲ್ಲಿ ಹೆರಿಗೆ ಆಗುವುದು ನಮ್ಮ ಸಂಸ್ಕೃತಿ. ಹೈ-ಕ ಪ್ರದೇಶಕ್ಕೆ ಬೇರೆ ಕಡೆಯಿಂದ ವಿವಾಹವಾದ ಮಹಿಳೆ ಹೆರಿಗೆಗೆ ತಾಯಿ ಮನೆಗೆ ಹೋಗುತ್ತಾಳೆ. ಆಗ ಆ ಮಕ್ಕಳು ಹೈ-ಕ ಭಾಗದ ಹೊರಗೆ ಜನಿಸಿದಂತಾಗುತ್ತದೆ. ಅದೇ ರೀತಿ ಹೈ-ಕ ಪ್ರದೇಶದ ಮಹಿಳೆಯನ್ನು ಬೇರೆ ಪ್ರದೇಶದವರು ವಿವಾಹವಾದರೆ, ಆಕೆ ಹೆರಿಗೆಗೆಂದು ಹೈ-ಕ ಭಾಗದಲ್ಲಿರುವ ತಾಯಿ ಮನೆಗೆ ಬರುತ್ತಾಳೆ. ಆಗ ಅವರ ಮಕ್ಕಳು ಹೈ-ಕ ಭಾಗದ ಸ್ಥಳೀಯರಾಗಿ ಬಿಡುತ್ತಾರೆ. ಇನ್ನು ಉದ್ಯೋಗಕ್ಕೆಂದು ಬಂದು ಹೈ-ಕ ಭಾಗದಲ್ಲಿ ಹೆರಿಗೆ ಆದವರೂ ಸ್ಥಳೀಯರಾಗುವ ಅಪಾಯವೂ ಇದೆ. ನಿಯಮ ರೂಪಿಸುವಾಗಲೇ ಇದಕ್ಕೆ ಪರಿಹಾರ ಕಾಣಿಸಬೇಕಿದೆ. ಉದ್ಯೋಗದಲ್ಲಿ ಮೀಸಲು ನೀಡುವ ಸಂದರ್ಭದಲ್ಲಿ ಎ ಮತ್ತು ಬಿ ಗ್ರೇಡ್ ಹುದ್ದೆಯಲ್ಲಿ ಶೇ.70ರಷ್ಟು ಮೀಸಲು ನೀಡಲು ಉದ್ದೇಶಿಸಲಾಗಿದೆ. ಹೀಗೆ ಮಾಡುವುದರಿಂದ ಹೈ-ಕದಲ್ಲಿರುವ 70-80 ಹುದ್ದೆಗಳು ಮಾತ್ರ ಲಭ್ಯವಾಗುತ್ತವೆ. ಒಮ್ಮೆ ನೇಮಕವಾದರೆ 20-30 ವರ್ಷ ಮತ್ತೆ ಅವಕಾಶವಿರುವುದಿಲ್ಲ. ಯಾಕೆಂದರೆ ಈ ಮೀಸಲಿನಲ್ಲಿ ನೇಮಕವಾದವರನ್ನು ಬೇರೆ ಪ್ರದೇಶಕ್ಕೆ ವರ್ಗ ಮಾಡಲು ಅವಕಾಶವಿಲ್ಲ. ಡಿ ಗ್ರೇಡ್ ಹುದ್ದೆಗಳು ಸಂಪೂರ್ಣವಾಗಿ ಹೈ-ಕ ಪ್ರದೇಶದವರಿಗೇ ಮೀಸಲು ಇರುತ್ತವಾದರೂ ಮೇಲಿನ ಹುದ್ದೆಗಳಿಗೆ ಅವಕಾಶ ಕಡಿಮೆ.
ಹೀಗೆ ಮಾಡುವುದರಿಂದ ಹೈ-ಕ ಭಾಗದ ಅಧಿಕಾರಿಗಳು ಆ ಪ್ರದೇಶಕ್ಕೇ ಸೀಮಿತರಾಗುತ್ತಾರೆ. ಅದರ ಬದಲು ಎ ಮತ್ತು ಬಿ ಗ್ರೇಡ್ ಹುದ್ದೆಗಳಿಗೆ ಹೊರಗಿನ ಪ್ರದೇಶದಲ್ಲಿ ಶೇ.20ರಷ್ಟು ಮೀಸಲು ಕೊಡುವುದರಿಂದ ಬೇರೆ ಪ್ರದೇಶಗಳಲ್ಲೂ ಅವರಿಗೆ ಅವಕಾಶ ದೊರೆಯುವ ಜತೆಗೆ, ಹೆಚ್ಚು ಅವಕಾಶಗಳ ಜತೆಗೆ ಬೇರೆ ಪ್ರದೇಶದ ಜನರ ಜತೆ ಬೆರೆತಂತಾಗುತ್ತದೆ ಎಂಬ ವಾದ ಮಂಡಿಸಲಾಗುತ್ತಿದೆ.
ಹೈ-ಕ ಪ್ರದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಸೀಟು ಮೀಸಲು ದೊರೆಯುವುದು ಉತ್ತಮವೇ. ಹೈ-ಕ ಪ್ರದೇಶದಲ್ಲಿ 15 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಒಟ್ಟು 7000 ಸೀಟುಗಳು ಲಭ್ಯವಿದ್ದು, ಮೀಸಲಿನಲ್ಲಿ 5000 ಸೀಟುಗಳು ಹೈ-ಕ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತವೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.21ರಷ್ಟು ಹೈ-ಕ ಜನರಿದ್ದಾರೆ. ಆದರೆ ಶೇ.7ರಷ್ಟು ಎಂಜಿನಿಯರಿಂಗ್ ಸೀಟುಗಳು ಮಾತ್ರ ಹೈ-ಕ ಭಾಗಕ್ಕೆ ದೊರೆತಂತಾಗುತ್ತದೆ ಎಂಬುದು ಅಲ್ಲಿನ ಜನರ ಕೊರಗು. ಹೈ-ಕ ಪ್ರದೇಶದಲ್ಲಿ 5 ವೈದ್ಯಕೀಯ ಕಾಲೇಜುಗಳಿವೆ. ಅವುಗಳಲ್ಲಿರುವ 480 ಸೀಟುಗಳಲ್ಲಿ ಹೈ-ಕದವರಿಗೆ ಮೀಸಲಿನಲ್ಲಿ 350 ಸೀಟುಗಳು ಲಭ್ಯವಾಗುತ್ತವೆ. ಇದು ಕೂಡ ತುಂಬ ಕಡಿಮೆ.
- ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


