ಪ್ರಧಾನ ಸುದ್ದಿ

ಬಿಜೆಪಿಗೆ ಹು ಆರ್ ಯೂ ಎನ್ನುತ್ತಾ ಜೆಡಿಯು?

Published On :

ನವದೆಹಲಿ/ಪಟನಾ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟ ಕಟ್ಟುತ್ತಿದ್ದಂತೆ ಎನ್‌ಡಿಎ ಪ್ರಮುಖ ಅಂಗಪಕ್ಷ ಜೆಡಿಯು ಹೊರಗೆ ಹೆಜ್ಜೆ ಇಡುವ ಕಾರ್ಯಕ್ಕೆ ಚಾಲನೆ ನೀಡಿದೆ.
ಸದ್ಯ ಮೋದಿಗೆ ಪ್ರಚಾರ ಸಮಿತಿ ನೇತೃತ್ವ ವಹಿಸಲಾಗಿದೆ. ಮುಂದೆ ಅವರನ್ನೇ ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಬಹುದಾಗಿದೆ. ಹೀಗಾಗಿ ಈಗಲೇ ನಾವು ನಮ್ಮ ದಾರಿ ನೋಡಿಕೊಳ್ಳಬೇಕಾಗಿದೆ ಎಂದು ಜೆಡಿಯು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಆಡ್ವಾಣಿ ರಾಜಿನಾಮೆ ಪ್ರಹಸನದಿಂದ ಸುಸ್ತಾಗಿರುವ ಬಿಜೆಪಿಗೆ ಇದು ಒಂದು ದೊಡ್ಡ ಹೊಡೆತವಾಗಿದೆ. ಎನ್‌ಡಿಎನಲ್ಲಿ ಜೆಡಿಯು ಎರಡನೇ ಅತ್ಯಂತ ದೊಡ್ಡ ಪಕ್ಷವಾಗಿದೆ. ಹೀಗಾಗಿ ಜೆಡಿಯು ಕಳೆದುಕೊಂಡರೆ ಮೈತ್ರಿಕೂಟಕ್ಕೆ ದೊಡ್ಡ ನಷ್ಟವಂತೂ ಗ್ಯಾರಂಟಿ ಎಂಬಂತಾಗಿದೆ.
ಈ ಹಿನ್ನೆಲೆಯಲ್ಲಿಯೇ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಜೆಡಿಯು ಅಧ್ಯಕ್ಷ ಶರದ್ ಯಾದವ್ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಮೈತ್ರಿಕೂಟ  ತೊರೆಯದಂತೆ ಅವರು ಮನವಿ ಮಾಡಿದ್ದಾರೆ. ಗುರುವಾರದಿಂದ ಎರಡು ದಿನ ನಿತೀಶ್ ಕುಮಾರ್ ಅವರು ಸೇವಾಯಾತ್ರೆ ಕೈಗೊಳ್ಳಲಿದ್ದಾರೆ. ಇದು ಮುಗಿಸಿ ಬಂದ ಬಳಿಕ ಶನಿವಾರ ಅವರು ಮೈತ್ರಿಕೂಟದಿಂದ ಹೊರಗೆ ಕಾಲಿಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋದಿ ವಿರುದ್ಧ ಆಕ್ರೋಶ:
ಜೆಡಿಯು ನಾಯಕರು ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ದಾರ್ ಪಟೇಲ್ ಅವರ ಹೆಸರು ಪ್ರಸ್ತಾಪಿಸುತ್ತಿರುವ ನರೇಂದ್ರ ಮೋದಿ ಅವರನ್ನು, 2002ರಲ್ಲಿ ಒಂದೊಮ್ಮೆ ಪಟೇಲ್ ಅವರೇ ಗೃಹ ಮಂತ್ರಿಯಾಗಿದ್ದರೆ ವಜಾ ಮಾಡುತ್ತಿದ್ದರು ಎಂದು ಹೇಳಿದ್ದಾರೆ.      
ಅಲ್ಲದೆ 2002ರ ಗೋಧ್ರೋತ್ತರ ಗಲಭೆ ಮರೆಯುವ ಸಂಗತಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಡಿಎ ಮೈತ್ರಿಕೂಟಕ್ಕೇ ಮತ: ಬಿಹಾರ ಮತದಾರರು ಕೇವಲ ಜೆಡಿಯುಗೆ ಮತ ನೀಡಿಲ್ಲ, ಎನ್‌ಡಿಎ ಮೈತ್ರಿಕೂಟಕ್ಕೆ  ಮತ ನೀಡಿದ್ದಾರೆ. ಹೀಗಾಗಿ ಜೆಡಿಯು ನಾಯಕರು ಒಕ್ಕೂಟವನ್ನು ಗೌರವಿಸಬೇಕು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಒಂದು ವೇಳೆ ಜೆಡಿಯು ಬಿಜೆಪಿ ಸಂಗ ಬಿಡುವುದಾದರೆ ಹೊಸದಾಗಿ ಚುನಾವಣೆಗೆ ಹೋಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಮಧ್ಯೆ ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಬಿಜೆಪಿ ಸಂಗ ಮುರಿದುಕೊಂಡರೆ, ಬಹುಮತಕ್ಕೆ ಇನ್ನೂ ನಾಲ್ಕು ಶಾಸಕರ ಬೆಂಬಲ ಅಗತ್ಯವಿದೆ. ನಿತೀಶ್ ಕುಮಾರ್ ಅವರು ಈಗಾಗಲೇ ಪಕ್ಷೇತರ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಮತ್ತೆ ಮಾತುಕತೆ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ,  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಒಡಿಶಾ ಸಿಎಂ ನವೀನ್ ಪಾಟ್ನಾಯಕ್ ಅವರು ಒಕ್ಕೂಟ ರಂಗ ಕಟ್ಟಲು ಮುಂದಾಗಿದ್ದಾರೆ. ಈಗಾಗಲೇ ಮಮತಾ ಬ್ಯಾನರ್ಜಿ ಮತ್ತು ನಿತೀಶ್ ಕುಮಾರ್ ಈ ನಿಟ್ಟಿನಲ್ಲಿ ಕೆಲ ಹೆಜ್ಜೆ ಇಟ್ಟಿದ್ದಾರೆ. ನಿತೀಶ್ ಕುಮಾರ್ , ತಮ್ಮ ಪರವಾಗಿ ಮಾತುಕತೆ ನಡೆಸಲು ಕೋಲ್ಕತಾಗೆ ಜೆಡಿಯು ಮುಖಂಡ ಕೆ.ಸಿ. ತ್ಯಾಗಿ ಅವರನ್ನು ಕಳುಹಿಸಿದ್ದರು. ಬುಧವಾರ ಮಮತಾ ಬ್ಯಾನರ್ಜಿ ಮತ್ತು ತ್ಯಾಗಿ ಒಕ್ಕೂಟ ರಂಗದ ಬಗ್ಗೆ ಚರ್ಚೆ ನಡೆಸಿದ್ದು, ಜೆಡಿಯು ಎನ್‌ಡಿಎ ತೊರೆಯುವುದು ಬಹುತೇಕ ನಿಶ್ಚಯವಾಗಿದೆ. ಇದಷ್ಟೇ ಅಲ್ಲ, ಮಮತಾ ಬ್ಯಾನರ್ಜಿ  ಒಡಿಶಾ ಸಿಎಂ ನವೀನ್ ಪಾಟ್ನಾಯಕ್ ಜೊತೆಗೂ ದೂರವಾಣಿ ಮೂಲಕ ಮಾತನಾಡಿದ್ದಾರೆ. ಒಕ್ಕೂಟಕ್ಕೆ ಬೆಂಬಲ ಕೋರಿದ್ದಾರೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನವಾಗಿದೆ.  ನಿತೀಶ್  ಕೂಡ ಪಾಟ್ನಾಯಕ್‌ರ ದೆಹಲಿ ರ್ಯಾಲಿಗೆ ಬೆಂಬಲ ನೀಡಿದ್ದಾರೆ.

ಕಾಂಗ್ರೆಸ್ ಆಹ್ವಾನ
ಜೆಡಿಯು, ಎನ್‌ಡಿಎ ತ್ಯಜಿಸುವ ಬಗ್ಗೆ ಸುಳಿವು ನೀಡುತ್ತಿದ್ದಂತೆ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಬಿಜೆಪಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದು ಖಚಿತ. ಹೀಗಾಗಿ ಜಾತ್ಯತೀತ ಪಕ್ಷಗಳೆಲ್ಲವೂ ಯುಪಿಎ ಸೇರಬಹುದು ಎಂದು ಕಾಂಗ್ರೆಸ್ ಆಹ್ವಾನ ನೀಡಿದೆ. ಈ ಮೂಲಕ ಜೆಡಿಯುಗೆ ನೇರವಾಗಿಯೇ ಆಹ್ವಾನ ನೀಡಿದೆ.

ಸಿನಿಮಾ ನೋಡಲಿ
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಚಲನಚಿತ್ರ ನೋಡುತ್ತಾ, ಬ್ಲಾಗ್ ಬರೆಯುತ್ತಾ ಕಾಲ ಕಳೆಯಲಿ ಎಂದು ಜೆಡಿಯು ನಾಯಕ ಶಿವಾನಂದ ತಿವಾರಿ ವ್ಯಂಗ್ಯವಾಡಿದ್ದಾರೆ. ಬಿಜೆಪಿಯಲ್ಲಿ ಈಗ ಆಡ್ವಾಣಿ ಕಾಲ ಮುಗಿಯಿತು. ಇನ್ನು ಏನಿದ್ದರೂ ಮೋದಿ ಕಾಲ. ಹೀಗಾಗಿ ಅವರು ನಿವೃತ್ತಿ ತೆಗೆದುಕೊಂಡು ಕಾಲ ಕಳೆಯಲಿ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.