ಜುಲೈನಲ್ಲೇ ಅಗ್ಗದ ಅಕ್ಕಿ, ಅಂಗನವಾಡಿಗೆ ಹಾಲು

ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ.13-
ಒಂದು ರುಪಾಯಿ ಅಕ್ಕಿ ಯೋಜನೆಯನ್ನು ಜುಲೈ 10ರೊಳಗೆ ರಾಜ್ಯಾದ್ಯಂತ ಆರಂಭಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಕೇಂದ್ರದಿಂದ ಲಭ್ಯವಾಗದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ತೀರ್ಮಾನಿಸಿದೆ.
ಬಿಪಿಎಲ್ ಕಾರ್ಡುದಾರರಿಗೆ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಸಚಿವ ಸಂಪುಟ ನಿರ್ಧರಿಸಿದೆ. ಜತೆಗೆ, ಒಬ್ಬರೇ ಇರುವ ಬಿಪಿಎಲ್ ಕಾರ್ಡ್ಗೆ 10 ಕೆಜಿ ಮಾತ್ರ ಅಕ್ಕಿ ನೀಡಲು ತೀರ್ಮಾನಿಸಿದೆ. ಇಬ್ಬರಿದ್ದರೆ 20 ಕೆಜಿ ಹಾಗೂ ಇಬ್ಬರಿಗಿಂತ ಹೆಚ್ಚಿರುವ ಬಿಪಿಎಲ್ ಕಾರ್ಡ್ಗೆ 30 ಕೆಜಿ ಅಕ್ಕಿ ನೀಡಲು ನಿರ್ಧರಿಸಿದೆ.
ರಾಜ್ಯದಲ್ಲಿ ಸುಮಾರು 8 ಲಕ್ಷ ಬಿಪಿಎಲ್ ಕಾರ್ಡ್ಗಳಲ್ಲಿ ಒಬ್ಬರೇ ವ್ಯಕ್ತಿ ಇದ್ದಾರೆ. ಹೀಗಾಗಿ, ಒಬ್ಬರಿಗೆ 30 ಕೆಜಿ ಅಕ್ಕಿ ನೀಡುವುದು ಸರಿಯಲ್ಲ ಎಂದು ಸಚಿವ ಸಂಪುಟದಲ್ಲಿ ಅಭಿಪ್ರಾಯಕ್ಕೆ ಬರಲಾಯಿತು. ಅಲ್ಲದೆ ಹಿಂದಿನ ಸ್ಲ್ಯಾಬ್ ಪದ್ಧತಿಯನ್ನು ತೆಗೆದು ಹಾಕಲಾಯಿತು.
ಒಬ್ಬರು, ಇಬ್ಬರು ಹಾಗೂ ಇಬ್ಬರಿಗಿಂತ ಹೆಚ್ಚಿನ ಸದಸ್ಯರಿಗನುಗುಣವಾಗಿ ಅಕ್ಕಿ ನೀಡಲು ನಿರ್ಧರಿಸಲಾಯಿತು ಎಂದು ಸಚಿವ ಸಂಪುಟದ ತೀರ್ಮಾನವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
ಒಂದು ರುಪಾಯಿ ಅಕ್ಕಿ ಯೋಜನೆಯನ್ನು ಜುಲೈ 10ರೊಳಗೆ ರಾಜ್ಯಾದ್ಯಂತ ಒಂದೇ ದಿನ ಆರಂಭಿಸಲು ನಿರ್ಧರಿಸಲಾಗಿದೆ. ದಿನಾಂಕ ಶೀಘ್ರವೇ ನಿಗದಿಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಅಂದೇ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.
ಅಕ್ಕಿ ಯೋಜನೆಗಾಗಿ ಸುಮಾರು 4300 ಕೋಟಿ ಅಗತ್ಯವಿದೆ. ಕೇಂದ್ರದಿಂದ ಅಕ್ಕಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಆಹಾರ ಭದ್ರತೆ ಕಾಯಿದೆ ಜಾರಿಯಾದರೆ ಇದು ಸುಲಭವಾಗುತ್ತದೆ. ನಮಗೆ 2.45 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯವಿದೆ. 1.44 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬರುತ್ತಿದೆ. ಉಳಿದ ಒಂದು ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲಾಗುತ್ತದೆ.
ಒಡಿಶಾ ಹಾಗೂ ಛತ್ತೀಸ್ಗಡದಿಂದ ಅಕ್ಕಿ ಖರೀಸಲು ಆಲೋಚಿಸಲಾಗುತ್ತಿದೆ. ಈ ಬಗ್ಗೆ ಏಜೆನ್ಸಿಗಳನ್ನು ಗುರುತಿಸಲಾಗುತ್ತಿದೆ. ಟೆಂಡರ್ ಮೂಲಕ ಅಕ್ಕಿ ಖರೀದಿಸಲಾಗುತ್ತಿದೆ. ಮುಖ್ಯ ಕಾರ್ಯದರ್ಶಿಯವರ ಪ್ರಕಾರ ಸಾಗಣೆ ವೆಚ್ಚ ಎಲ್ಲ ಸೇರಿ ಒಂದು ಕೆಜಿ ಅಕ್ಕಿಗೆ 25ರಿಂದ 30 ರುಪಾಯಿ ವೆಚ್ಚವಾಗಬಹುದು ಎಂದು ಸಚಿವ ಟಿ.ಬಿ. ಜಯಚಂದ್ರ ವಿವರಿಸಿದರು.
ರಾಗಿ, ಜೋಳ, ಗೋದಿ
ಜೋಳ, ರಾಗಿ, ಗೋದಿಯನ್ನೂ ವಿತರಿಸಬೇಕು ಎಂಬ ವಿಷಯವನ್ನು ವಿಧಾನಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ್ದರು. ಈ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಜೋಳ, ರಾಗಿ ಹಾಗೂ ಗೋದಿಯನ್ನು ಒಂದು ಕೆಜಿಗೆ ಒಂದು ರುಪಾಯಿಯಂತೆ ಬಿಪಿಎಲ್ ಕಾರ್ಡ್ದಾರರಿಗೆ ವಿತರಿಸಲಿದೆ ಎಂದು ಜಯಚಂದ್ರ ಹೇಳಿದ್ದಾರೆ.
ಅಂಗನವಾಡಿಗೆ ಹಾಲು
ರಾಜ್ಯದಲ್ಲಿರುವ 64,518 ಅಂಗನವಾಡಿಗಳಲ್ಲಿರುವ ಮಕ್ಕಳಿಗೆ ಸುಮಾರು ಏಳು ಲಕ್ಷ ಲೀಟರ್ ಹಾಲು ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪ್ರತಿ ಲೀಟರ್ ಹಾಲಿಗೆ 4 ರುಪಾಯಿ ಪ್ರೋತ್ಸಾಹಧನ ನೀಡುವ ಯೋಜನೆಯಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದೆ. ಹಾಲಿನಿಂದ ಇತರೆ ಉತ್ಪನ್ನಗಳನ್ನು ಮಾಡಿದರೆ ನಷ್ಟವಾಗುತ್ತದೆ. ಹೀಗಾಗಿ, ಅಂಗನವಾಡಿ ಮಕ್ಕಳಿಗೆ ಹಾಲು ನೀಡಲು ಆಲೋಚಿಸಲಾಗುತ್ತಿದೆ.
ರಾಜ್ಯದಲ್ಲಿ ಪ್ರತಿದಿನ 54 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ 34 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. 20 ಲಕ್ಷ ಲೀಟರ್ ಹಾಲಿನಲ್ಲಿ 10 ಲಕ್ಷ ಲೀಟರ್ ಹಾಲನ್ನು ಮಾತ್ರ ಪೌಡರ್ ಮಾಡುವ ಸಾಮರ್ಥ್ಯ ಇದೆ. 10 ಲಕ್ಷ ಲೀಟರ್ ಹಾಲು ಪೌಡರ್ ಮಾಡಿದರೆ ಪ್ರತಿ ಲೀಟರ್ಗೆ 6 ರುಪಾಯಿಯಂತೆ ಸುಮಾರು 40 ಕೋಟಿ ನಷ್ಟವಾಗುತ್ತದೆ. ಹೀಗಾಗಿ ಇನ್ನೂ 10 ಲಕ್ಷ ಲೀಟರ್ ಹಾಲು ಹೆಚ್ಚಾಗುತ್ತಿದೆ. ಈ ಹಾಲನ್ನು ಅಂಗನವಾಡಿ ಮಕ್ಕಳಿಗೆ ನೀಡುವ ಸಲಹೆ ಸಚಿವ ಸಂಪುಟದಲ್ಲಿ ಬಂದಿದೆ ಎಂದು ಪಶುಸಂಗೋಪನೆ ಸಚಿವ ಜಯಚಂದ್ರ ತಿಳಿಸಿದರು.
ಕೆಎಂಎಫ್ಗೆ ನಷ್ಟ ಉಂಟಾಗಬಾರದು. ಜತೆಗೆ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವೂ ನಿಲ್ಲಬಾರದು, ಖರೀದಿಗೂ ರಜೆ ಇರಬಾರದು ಎಂಬ ನಿರ್ಧಾರ ಸರ್ಕಾರದ್ದಾಗಿದೆ. ಹೀಗಾಗಿ, 7 ಲಕ್ಷ ಲೀ. ಹಾಲನ್ನು ಅಂಗನವಾಡಿ ಮಕ್ಕಳಿಗೆ ವಿತರಿಸುವ ಸಲಹೆ ಸಿಎಂಗೆ ನೀಡಲಾಗಿದೆ. ಈ ಬಗ್ಗೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ರಾಜ್ಯದಲ್ಲಿ ಗುಣಮಟ್ಟದ ಹಾಲು ವಿತರಿಸಲು ಸರ್ಕಾರ ಬದ್ಧವಾಗಿದ್ದು, ಹೊರ ರಾಜ್ಯದಿಂದ ಕಳಪೆ ಹಾಲು ಸರಬರಾಜಾಗುತ್ತಿದ್ದರೆ ಅದನ್ನು ನಿಲ್ಲಿಸಲು ಅಧಿ ಕಾರಿಗಳಿಗೆ ಸೂಚಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


