ಪ್ರಧಾನ ಸುದ್ದಿ

ತಲೆ ಎತ್ತಲಿವೆ 'ಕರ್ನಾಟಕ ಪಬ್ಲಿಕ್ ಶಾಲೆ'

Published On :

ಕ.ಪ್ರ. ವಾರ್ತೆ  ಬೆಂಗಳೂರು  ಜೂ.13-
ಹಾಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿರುವುದರಿಂದ ಸಕಲ ಸೌಕರ್ಯಗಳಿರುವ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಅಂತಹ ಶಾಲೆಗಳಿಗೆ 'ಕರ್ನಾಟಕ ಪಬ್ಲಿಕ್ ಶಾಲೆ' ಎಂಬ ಹೆಸರಿಡಲಾಗಿದೆ. ಈ ಶಾಲೆಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ಇಲಾಖೆ ತೀರ್ಮಾನಿಸಿದೆ.
ಇಲ್ಲಿಂಟು ಸಕಲ ಸವಲತ್ತು: ಆಕರ್ಷಕ ಕಟ್ಟಡ, ಶೌಚಾಲಯ, ವಿಶಾಲವಾದ ಆಟದ ಮೈದಾನ, ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ ಸೌಲಭ್ಯ, ಸುಸಜ್ಜಿತವಾದ ಪುಸ್ತಕ ಭಂಡಾರ ಪ್ರತಿ ವಿಷಯಕ್ಕೂ ಹಾಗೂ ವಿಭಾಗಗಳಿಗೂ ಪ್ರತ್ಯೇಕ ಶಿಕ್ಷಕರು ಸೇರಿದಂತೆ ಎಲ್ಲ ಸೌಕರ್ಯಗಳೂ ಈ ಶಾಲೆಗಳಲ್ಲಿ ಇರಲಿವೆ.
ನಡೆದಿದೆ ಚರ್ಚೆ: ಕಳೆದ ತಿಂಗಳು ಶಿಕ್ಷಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನವೀಕೃತ ಶಾಲೆಗಳ ರೂಪುರೇಷೆ ಕುರಿತು ಚರ್ಚಿಸಲಾಗಿದೆ. ಶಾಲೆಗಳನ್ನು ಯಾವ ರೀತಿ ಸ್ಥಾಪಿಸಬೇಕು, ಯಾವ ವರ್ಷದಿಂದ ಆರಂಭಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಯುತ್ತಿದ್ದು, ಜಿಲ್ಲಾ ಉಪ ನಿರ್ದೇಶಕರಿಂದ ಪ್ರಸ್ತಾವನೆ ಪಡೆಯಲು ನಿರ್ಧರಿಸಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಎಲ್ಲಾ ಕಡೆ ಸ್ಥಾಪಿಸಲಾಗುವುದಿಲ್ಲ.ಖಾಸಗಿ ಶಾಲೆಗಳು ಇಲ್ಲದ ಕಡೆ ಅಥವಾ ಕಡಿಮೆ ಇರುವ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಆರಂಭವಾಗಲಿದೆ.

ಪ್ರಸ್ತಾವನೆ ಸಲ್ಲಿಸಲು ಸೂಚನೆ
ಶಾಲೆಗಳ ಪ್ರಾರಂಭಿಸುವ ಬಗ್ಗೆ ಮೊದಲು ಸಮೀಕ್ಷೆ ಮುಖ್ಯ. ಹೀಗಾಗಿ ಖಾಸಗಿ ಶಾಲೆಗಳು ಇಲ್ಲ ಅಥವಾ ಕಡಿಮೆ ಇವೆ ಎಂಬ ಮಾಹಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಅಧಿಕಾರಿಗಳಿಂದ ಪಡೆದು ಪ್ರಸ್ತಾವನೆಯನ್ನು ಜೂ.21ರೊಳಗೆ ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಿದೆ.  ಶಾಲೆಗಳನ್ನು ವಿಲೀನಗೊಳಿಸದಂತೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಪ್ರಾಯೋಗಿಕವಾಗಿ ಒಂದು ಪರ್ಯಾಯ ವ್ಯವಸ್ಥೆ ನೀಡಲು ಈ ಚಿಂತನೆ ನಡೆಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ  (ಪ್ರಾಥಮಿಕ ಶಿಕ್ಷಣ) ನಿರ್ದೇಶಕ ಎ.ದೇವಪ್ರಕಾಶ್ ಹೇಳಿದ್ದಾರೆ.
ಯಾಕಾಗಿ ಈ ನಿರ್ಧಾರ?: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಮೂಲ ಸೌಕರ್ಯಗಳಾದ ಆಟದ ಮೈದಾನ, ಪೀಠೋಪಕರಣ, ಗ್ರಂಥಾಲಯ, ಆರೋಗ್ಯ ಸೇವೆ, ಕ್ರೀಡಾ ಸಾಮಗ್ರಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಒದಗಿಸಲು ಅವಕಾಶವಾಗುತ್ತಿಲ್ಲ. ಇದರಿಂದ ಶಾಲೆಗಳಲ್ಲಿ ನಿರೀಕ್ಷಿತ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ನೂತನ ಶಾಲೆ ನಿರ್ಮಾಣದ ಬಗ್ಗೆ ಚಿಂತಿಸಲಾಗಿದೆ. ಚಿಕ್ಕ ಚಿಕ್ಕ ಜನವಸತಿ ಪ್ರದೇಶಗಳಲ್ಲಿ ಅತೀ ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕರಿರುವುದರಿಂದ ಎಲ್ಲಾ ತರಗತಿಗಳಿಗೆ ಎಲ್ಲಾ ವಿಷಯಗಳಿಗೂ ನಿಗಧಿಪಡಿಸಿರುವಷ್ಟು ಸಮಯ ಬೋಧನೆ ಮತ್ತು ಕಲಿಕೆಗೆ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳ ಕಲಿಕೆಯ ಸಾಧನೆಗೆ ಅಡ್ಡಿ ಪಡಿಸಿದಂತಾಗುತ್ತದೆ ಎಂಬ ಕೂಗು ಪೋಷಕರಿಂದ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಡಿಡಿಪಿಐಗಳು ಮಾಹಿತಿ ನೀಡಬೇಕಿರುವ ಅಂಶಗಳು
-  ತರಗತಿ,ಆಟದ ಮೈದಾನ, ಕಂಪ್ಯೂಟರ್ ಸೌಲಭ್ಯ, ಶಿಕ್ಷಕರ  ಸಂಖ್ಯೆ, ಕೊಠಡಿಗಳ ಸಂಖ್ಯೆ.
- ದೊಡ್ಡ ಶಾಲೆ ಪ್ರಾರಂಭಿಸಲು ಆಯ್ಕೆ ಮಾಡಿರುವ ನಕ್ಷೆ
-  ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಹೆಸರು
-  ಶಾಲೆಗಳಲ್ಲಿ ಅವಶ್ಯವಿರುವ ಶಿಕ್ಷಕರು (ವಿಷಯವಾರು)
-  ಶಾಲೆ ನಿರ್ಮಾಣಕ್ಕೆ ಭೌಗೋಳಿಕ ಆಡಚಣೆ ಬಗ್ಗೆ ವಿವರ

 2012ರ ಅಂಕಿ ಅಂಶ
44,672  ಒಟ್ಟಾರೆ ಸರ್ಕಾರಿ ಶಾಲೆಗಳು
19,773   ಆಟದ ಮೈದಾನ ಇಲ್ಲದಿರುವ ಶಾಲೆ
11,848   ಕಾಪೌಂಡ್ ಇಲ್ಲದಿರುವ ಶಾಲೆ
2,03,950   ಒಟ್ಟು ಶಾಲಾ ಕೊಠಡಿ ಇರುವುದು
58,688    ರಿಪೇರಿಗೆ ಒಳಪಡಬೇಕಾಗಿರುವ ಕೊಠಡಿ

ಸದ್ಯಕ್ಕೆ ಇದು ಚಿಂತನಾ ಮಟ್ಟದಲ್ಲಿದೆ. ಶಾಲೆಗಳನ್ನು ಯಾವ ರೀತಿ ಸ್ಥಾಪಿಸಬೇಕು ಏನು ಮಾಡಬೇಕು ಎಂಬುವುದರ ಬಗ್ಗೆ ಜಿಲ್ಲಾ ಉಪ ನಿರ್ದೇಶಕರಿಂದ ಮಾಹಿತಿ ಬಂದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು.
- ಎ.ದೇವಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ

- ದೇವರಾಜ್ ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.