ಪ್ರಧಾನ ಸುದ್ದಿ

ತುಂಗಭದ್ರಾ ಡ್ಯಾಂಗೆ ಗಣಿ ತಂತು ಕುತ್ತು

Published On :

ಕನ್ನಡಪ್ರಭ ವಾರ್ತೆ  ಬಳ್ಳಾರಿ  ಜೂ. 14-
ಗಣಿಗಾರಿಕೆ ರಾಜ್ಯದ ಬೊಕ್ಕಸಕ್ಕೆ ಮಾತ್ರವಲ್ಲಿ, ರಾಜ್ಯದ ರಾಜ್ಯದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೂ ಕುತ್ತು ತಂದಿದೆ!
ಹೌದು. ಗಣಿಗಾರಿಕೆಯಿಂದ ತುಂಗಭದ್ರಾ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯವೇ ಕುಸಿದಿದೆ. ಜಲಾಶಯದ ಸಾಮರ್ಥ್ಯ ಇದೀಗ ಕೇವಲ 97 ಟಿಎಂಸಿ ಮಾತ್ರ ಇದೆ. ಗಣಿಗಾರಿಕೆ ಭೂಮ್ ಇದ್ದ 2004ರಿಂದ 2008ರ ಅವಧಿಯ 4 ವರ್ಷಗಳಲ್ಲಿ 3.485 ಟಿಎಂಸಿ ಹೂಳು ತುಂಬುವ ಮೂಲಕ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಜಲಾಶಯದ ನೀರಿನ ಸಾಮರ್ಥ್ಯ 133 ಟಿಎಂಸಿಯಿಂದ 97 ಟಿಎಂಸಿಗೆ ಇಳಿದಿದೆ. ತುಂಗೆಯಲ್ಲಿ ನೀರಿಗಿಂತ ಹೂಳಿನ ಪ್ರಮಾಣವೇ ಹೆಚ್ಚು.
60 ವರ್ಷದಲ್ಲಿ 34 ಟಿಎಂಸಿ ಹೂಳು: ತುಂಗಭದ್ರಾ ಜಲಾಶಯವನ್ನು 1953ರಲ್ಲಿ ನಿರ್ಮಿಸಿದಾಗ ಪ್ರತಿವರ್ಷ 0.427 ಟಿಎಂಸಿ ಹೂಳು ತುಂಬುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ನಿರೀಕ್ಷೆಗೆ ಮೀರಿ ಹೂಳು ತುಂಬುತ್ತಿರುವುದರಿಂದ ಇನ್ನೊಂದು ಶತಮಾನದಲ್ಲಿ ಜಲಾಶಯದ ಅಸ್ತಿತ್ವಕ್ಕೆ ಧಕ್ಕೆ ಬಂದರೂ ಆಶ್ಚರ್ಯವಿಲ್ಲ. ಜಲಾಶಯ ನಿರ್ಮಾಣದ ಆರಂಭದಲ್ಲಿ 1953ರಿಂದ 1963ರ ಅವಧಿಯಲ್ಲಿ 10.312 ಟಿಎಂಸಿ ಹೂಳು ತುಂಬಿತ್ತು. 1963ರಿಂದ 1972ರವರೆಗೆ 4 ಟಿಎಂಸಿ, 1972ರಿಂದ 1978ರವರೆಗೆ 2 ಟಿಎಂಸಿ, 1978ರಿಂದ 1981ರವರೆಗೆ 1 ಟಿಎಂಸಿ, 1981ರಿಂದ 1985ರವರೆಗೆ 2.168 ಟಿಎಂಸಿ ಹೂಳು ತುಂಬಿದೆ. 1993ರಿಂದ 2004ರವರೆಗೆ 7.16 ಟಿಎಂಸಿ, 2004ರಿಂದ 2008ರ ಕೇವಲವರೆಗೆ 3.485 ಟಿಎಂಸಿ, ಇನ್ನು 2008ರಿಂದೀಚೆಗೆ ಕನಿಷ್ಠವೆಂದರೂ 3-4 ಟಿಎಂಸಿ ಹೂಳು ತುಂಬಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಗಣಿ ಮಣ್ಣು ಜಲಾಶಯಕ್ಕೆ: ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬದಂತೆ ಮುಂಚೆನೇ ಕ್ರಮ ತೆಗೆದುಕೊಳ್ಳಬೇಕಿತ್ತು. ಜಲಾಶಯಕ್ಕೆ ನೀರು ಹರಿದು ಬರುವಲ್ಲಿ ಮಣ್ಣು ಸಂರಕ್ಷಣೆಯ ಕ್ರಮಗಳನ್ನು ಕೈಗೊಳ್ಳದಿರುವುದು ಹಾಗೂ ಹೊಸಪೇಟೆ, ಸಂಡೂರು ಸೇರಿದಂತೆ ಇತರೆ ಭಾಗಗಳಲ್ಲಿ ಅತಿಯಾದ ಗಣಿಗಾರಿಕೆ ನಡೆಸಿದ್ದರಿಂದ ಗಣಿ ತ್ಯಾಜ್ಯ, ಮಳೆಯಾದಾಗ ಮಣ್ಣು ಹಳ್ಳಕೊಳ್ಳದ ಮೂಲಕ ಜಲಾಶಯಕ್ಕೆ ಹರಿದು ಹೂಳಿನ ಪ್ರಮಾಣ ಹೆಚ್ಚುತ್ತಿದೆ.
ಆಂಧ್ರಪ್ರದೇಶಕ್ಕೆ ವರದಾನ: ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ತುಂಗಭದ್ರಾ ಜಲಾಶಯದ ನೀರು ಕರ್ನಾಟಕ ಹಾಗೂ ಆಂಧ್ರಪ್ರದೇಶಕ್ಕೆ ಹಂಚಿಕೆಯಾಗಿದೆ. ಆಂಧ್ರಪ್ರದೇಶಕ್ಕೆ ಮಳೆಗಾಲದಲ್ಲಿ ಜಲಾಶಯಕ್ಕೆ ಬರುವ ಹೆಚ್ಚಿನ ನೀರು ಹರಿದು ಹೋಗಿ ವರದಾನವಾಗಿದೆ. ಆದರೆ ಜಲಾಶಯದ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಕರ್ನಾಟಕಕ್ಕೆ ನಿಗದಿತ ನೀರನ್ನು ಬಳಸಲು ಸಾಧ್ಯವಾಗಿಲ್ಲ. ಇದರಿಂದ ಕರ್ನಾಟಕ ಜಲಾಶಯದ ನೀರನ್ನು ಸಂಪೂರ್ಣ ಬಳಸಲು ಪರ್ಯಾಯ ಮಾರ್ಗ ಅನುಸರಿಸದ ಹೊರತು ತುಂಗಭದ್ರೆ ನಂಬಿರುವ ರೈತರ ಹಿತ ಕಾಯಲು ಸಾಧ್ಯವಾಗದು.
ನಿಗದಿತ ನೀರು ಬಳಕೆಯಾಗಿಲ್ಲ: ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಪ್ರಕಾರ ಕರ್ನಾಟಕ ಹಾಗೂ ಆಂಧ್ರಪ್ರದೇಶ 230 ಟಿಎಂಸಿ ಬಳಸುವಂತೆ ನೀರನ್ನು ಹಂಚಲಾಗಿತ್ತು. ಅದರಲ್ಲಿ ಕರ್ನಾಟಕಕ್ಕೆ 151.49 ಟಿಎಂಸಿ ಇದ್ದರೆ, ಆಂಧ್ರಪ್ರದೇಶಕ್ಕೆ 78.51 ಟಿಎಂಸಿ ನೀರು ಬಳಸಲು ಸೂಚಿಸಿತ್ತು. ಆದರೆ 60 ವರ್ಷಗಳಲ್ಲಿ ಎರಡು ರಾಜ್ಯಗಳು ನಿಗದಿಗೊಳಿಸಿದ ನೀರನ್ನು 1980-81ರಲ್ಲಿ ಬಿಟ್ಟರೆ, ಇಲ್ಲಿಯವರೆಗೆ ಯಾವ ವರ್ಷದಲ್ಲೂ ಸಂಪೂರ್ಣವಾಗಿ ಬಳಸಿಲ್ಲ. ಜಲಾಶಯದ ಒಳಹರಿವು ಮಾತ್ರ ಸರಾಸರಿ 256.5 ಕ್ಯುಸೆಕ್ ಇರುತ್ತದೆ.
ಆದರೆ ವರ್ಷದಿಂದ ವರ್ಷಕ್ಕೆ ಜಲಾಶಯ ಹೂಳು ತುಂಬಿ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದು ಆಂಧ್ರಪ್ರದೇಶದ ಪಾಲಿನ ನೀರಿಗೆ ಸ್ವಲ್ಪ ಕುತ್ತು ಬಂದರೂ, ಆದರೆ ದುಪ್ಪಟ್ಟು ನಷ್ಟ ಕರ್ನಾಟಕದವರಿಗೆ ಆಗುತ್ತದೆ. ಕೇಂದ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸರ್ಕಾರಗಳು ಕೂಡಲೇ ಎಚ್ಚೆತ್ತು ಹೂಳು ತೆಗೆಯಲು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ರಾಜ್ಯಕ್ಕಂತೂ ಆಪತ್ತು ಕಟ್ಟಿಟ್ಟ ಬುತ್ತಿ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.