ಮೈತ್ರಿ ಮುರಿಯಲು ಘೋಷಣೆ ಮಾತ್ರ ಬಾಕಿ
ನವದೆಹಲಿ: ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸದ ಹೊರತು ಮೈತ್ರಿಕೂಟದಲ್ಲಿ ಮುಂದುವರಿಯುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ಜೆಡಿಯು ರವಾನಿಸಿದೆ. ಇದರಿಂದ ಬಿಜೆಪಿ ಮತ್ತು ಜೆಡಿಯು 17 ವರ್ಷಗಳಷ್ಟು ದೀರ್ಘ ಮೈತ್ರಿ ಮುರಿಯುವುದು ಬಹುತೇಕ ಖಚಿತ ವಾಗಿದೆ. ಈ ಕುರಿತ ಅಂತಿಮ ಘೋಷಣೆ ಭಾನುವಾರ ನಡೆಯಲಿರುವ ಜೆಡಿಯು ನಿರ್ಣಾಯಕ ಸಭೆಯಲ್ಲಿ ಹೊರಬೀಳಲಿದೆ ಎನ್ನಲಾಗಿದ್ದರೂ ಅದಕ್ಕೂ ಮೊದಲೇ ಪಕ್ಷ ತನ್ನ ನಿಲುವು ಪ್ರಕಟಿಸಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗಳಿಂದ ಬಿಹಾರದ ಜೆಡಿಯು ಮತ್ತು ಬಿಜೆಪಿ ದೋಸ್ತಿ ಸರ್ಕಾರ ಮುರಿದ ಮನೆಯಾಗಿ ಪರಿವರ್ತನೆಯಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎನ್ನುವಂತೆ ಮೈತ್ರಿ ಕುರಿತು ಚರ್ಚಿಸಲು ನಿತೀಶ್ ತಮ್ಮ ನಿವಾಸದಲ್ಲಿ ಕರೆದಿದ್ದ ಸಭೆಗೆ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಹಾಗೂ ಸಚಿವ ಕಿಶೋರ್ ಕುಮಾರ್ ಯಾದವ್ ಗೈರು ಹಾಜರಾಗಿದ್ದಾರೆ. ಮಾತುಕತೆಗೆ ಇನ್ನು ಏನೂ ಉಳಿದಿಲ್ಲ ಎಂಬರ್ಥದ ಸಂದೇಶ ರವಾನಿಸಿದ್ದಾರೆ. ಜತೆಗೆ, ನಿತೀಶ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳುವ ಸಂಬಂಧ ರಾಜ್ಯಪಾಲರಿಗೆ ಪತ್ರ ನೀಡುವ ಬೆದರಿಕೆಯನ್ನೂ ಅವರು ಹಾಕಿದ್ದಾರೆ.
ಸ್ವಲ್ಪ ತಡೆಯಿರಿ: ಒಂದು ಕಡೆ ನಿತೀಶ್ ಕುಮಾರ್ ಎನ್ಡಿಎ ಮೈತ್ರಿಕೂಟದಿಂದ ಹೊರಬರುವ ಸ್ಪಷ್ಟ ಸಂದೇಶ ನೀಡಿದ್ದರೆ ಇನ್ನೊಂದು ಕಡೆ ಬಿಜೆಪಿ ರಾಷ್ಟ್ರೀಯ ನಾಯಕರು ಮೈತ್ರಿ ಉಳಿಸಲು ಸಾಧ್ಯವಾದ ಎಲ್ಲಾ ಪ್ರಯತ್ನ ಮುಂದುವರಿಸುತ್ತಿದ್ದಾರೆ. ಪ್ರಧಾನಿ ಅಭ್ಯರ್ಥಿ ಘೋಷಿಸುವವರೆಗೆ ಕಾಯಿರಿ ಎನ್ನುವ ಸಂದೇಶವನ್ನು ಬಿಜೆಪಿ ಮುಖಂಡರು ರವಾನಿಸಿದ್ದಾರೆ.
ಆರೆಸ್ಸೆಸ್ ಪ್ರವೇಶ
ನರೇಂದ್ರ ಮೋದಿ ವಿಚಾರದಲ್ಲಿ ಬಿಜೆಪಿಯ ಮೇಲೆ ಒತ್ತಡ ಹಾಕುವ ಜೆಡಿಯು ಕ್ರಮ ದೇಶದ ಪಾಲಿಗೆ ಒಳ್ಳೆಯದಲ್ಲ ಎಂದು ಆರ್ಎಸ್ಎಸ್ ಅಭಿಪ್ರಾಯಪಟ್ಟಿದೆ. ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿಯ ಸಾರಥಿಯನ್ನಾಗಿ ಮಾಡಲಾಗಿದೆ. ಹಾಗಂತ ಅವರು ಪ್ರಧಾನಿ ಅಭ್ಯರ್ಥಿಯಾದಂತಲ್ಲ. ಪ್ರಧಾನಿ ಅಭ್ಯರ್ಥಿ ಘೋಷಣೆಗೆ ಸಾಕಷ್ಟು ಕಾಲಾವಕಾಶ ಇದೆ. ಆಗ ಎಲ್ಲಾ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರ್ಎಸ್ಎಸ್ನ ಮುಖವಾಣಿ ಆರ್ಗನೈಸರ್ ಸಂಪಾದಕೀಯದಲ್ಲಿ ಹೇಳಲಾಗಿದೆ. ಈ ಮೂಲಕ ನಿತೀಶ್ ಆತುರದ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರ್ಎಸ್ಎಸ್ ಪರೋಕ್ಷವಾಗಿ ಟೀಕಿಸಿದೆ. ಜತೆಗೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರದಿಂದ ಹೊರಗಿಡಲು ಎನ್ಡಿಎ ಒಗ್ಗಟ್ಟು ಪ್ರದರ್ಶಿಸಬೇಕೆಂದೂ ಅಭಿಪ್ರಾಯಪಟ್ಟಿದೆ.
ಜೆಡಿಯು ಜಾತ್ಯತೀತ ಹಾಗೂ ಸಮಾನ ಮನಸ್ಕ ಪಕ್ಷವಾಗಿದೆ. ಆ ಪಕ್ಷವು ತನ್ನ ಸಿದ್ಧಾಂತಕ್ಕೆ ಹೋಲಿಕೆಯಾಗದ ಬಿಜೆಪಿ ಜತೆ ಸಖ್ಯ ಹೊಂದಿದೆ.
-ಭಕ್ತಚರಣ್ ದಾಸ್ಕಾಂಗ್ರೆಸ್ ವಕ್ತಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

