ಪ್ರಧಾನ ಸುದ್ದಿ

ಜುಲೈ 1ರಿಂದಲೇ ಮಕ್ಕಳಿಗೆ ಹಾಲೋಪಚಾರ

Published On :

ಕ.ಪ್ರ. ವಾರ್ತೆ  ಬೆಂಗಳೂರು  ಜೂ.17
ಸರ್ಕಾರದ ನಿರ್ಧಾರದಂತೆ ಶಾಲಾ ಮಕ್ಕಳಿಗೆ ಜುಲೈ 1ರಿಂದಲೇ ಹಾಲು ವಿತರಿಸಲು ಕೆಎಂಎಫ್ ಮುಂದಾಗಿದೆ.
ಜುಲೈ 1ರಿಂದ ಐದು ತಿಂಗಳ ಕಾಲ ಲೂಸ್ ಹಾಲನ್ನು ವಿತರಿಸುವುದು ಮತ್ತು ನವೆಂಬರ್ 1ರಿಂದ ಟೆಟ್ರಾ ಪ್ಯಾಕ್ ಮೂಲಕ 150 ಮಿಲಿ ಲೀಟರ್ ಹಾಲು ವಿತರಿಸಲು ಸೋಮವಾರ ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
1 ರಿಂದ 10ನೇ ತರಗತಿವರೆಗಿನ ಎಲ್ಲ ಶಾಲಾ ಮಕ್ಕಳಿಗೆ ತಲಾ 150 ಮಿಲಿ ಲೀಟರ್‌ನಂತೆ ಹಾಲು ವಿತರಿಸಲು ಸರ್ಕಾರ ನಿರ್ಧರಿಸಿತ್ತು. ಈ ಕುರಿತಂತೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಹಾಲು ವಿತರಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹಿರಿಯ ನಿರ್ದೇಶಕ ರೇವಣಸಿದ್ದಪ್ಪ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಪ್ರಸ್ತುತ ಕೆಎಂಎಫ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ 55 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಸರ್ಕಾರ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ರು. 2ರಿಂದ 4ಕ್ಕೆ ಹೆಚ್ಚಿಸಿರುವುದರಿಂದ ಬರುವ ಹಾಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸುಮಾರು 60 ಲಕ್ಷ ಲೀಟರ್ ಸಂಗ್ರಹವಾಗುವ ನಿರೀಕ್ಷೆಯಿದೆ. ಪ್ರಸ್ತುತ ಶಾಲಾ ಮಕ್ಕಳಿಗೆ ವಿತರಿಸಲು ಸುಮಾರು 6.5 ಲಕ್ಷ ಲೀಟರ್ ಹಾಲು ಬೇಕು ಎಂದು ಅಂದಾಜು ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುವಾಸಿತ ಹಾಲು: ಜುಲೈ 1ರಿಂದಲೇ ಟೆಟ್ರಾಪ್ಯಾಕ್ ಮೂಲಕ ಸುವಾಸಿತ ಹಾಲು ವಿತರಿಸುವ ಬಗ್ಗೆ ಕೆಎಂಎಫ್ ಯೋಚಿಸಿತ್ತಾದರೂ ಭಾರೀ ಪ್ರಮಾಣದಲ್ಲಿ ಟೆಟ್ರಾಪ್ಯಾಕ್ ಸಿದ್ಧಪಡಿಸುವುದು ಕಷ್ಟಸಾಧ್ಯ. ಮೇಲಾಗಿ ಒಂದು ಬಾರಿ ಟೆಟ್ರಾಪ್ಯಾಕ್ ಮೂಲಕ ಹಾಲು ವಿತರಿಸಲು ಆರಂಭಿಸಿದರೆ ಮಧ್ಯೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ನವೆಂಬರ್ 1ರಿಂದ ಟೆಟ್ರಾಪ್ಯಾಕ್ ಮೂಲಕ ಸುವಾಸಿತ ಹಾಲು ವಿತರಿಸಲು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ. ಅದುವರೆಗೆ ಅಂದರೆ ಜುಲೈ 1ರಿಂದ ಅಕ್ಟೋಬರ್ ಅಂತ್ಯದವರೆಗೆ ಲೂಸ್ ಹಾಲನ್ನು ಮಕ್ಕಳಿಗೆ ವಿತರಿಸಲಾಗುತ್ತದೆ.
ಟೆಟ್ರಾಪ್ಯಾಕ್ ಮೂಲಕ ನೀಡುವ ಹಾಲಿಗೆ ಸಕ್ಕರೆ ಸೇರಿದಂತೆ ವಿವಿಧ ಫ್ಲೇವರ್‌ಗಳನ್ನು ಅಳವಡಿಸಿ ಮಕ್ಕಳಿಗೆ ವಿತರಿಸಲಾಗುವುದು. ಇದರಿಂದ ಹಾಲನ್ನು ಹೆಚ್ಚು ದಿನ ಹಾಳಾಗದಂತೆ ಸಂರಕ್ಷಿಸುವುದರ ಜತೆಗೆ ಮಕ್ಕಳಿಗೆ ಗುಣಮಟ್ಟದ ಸುವಾಸಿತ ಹಾಲು ವಿತರಿಸಿದಂತಾಗುತ್ತದೆ. ಸರ್ಕಾರವೇ ಈ ಮೊತ್ತವನ್ನು ಭರಿಸುವುದರಿಂದ ಕೆಎಂಎಫ್‌ಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ಕಾರಣಕ್ಕೆ ಟೆಟ್ರಾಪ್ಯಾಕ್ ಹಾಲು ವಿತರಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ಅಭಿನಂದನೆ: ಕೆಎಂಎಫ್ ವ್ಯಾಪ್ತಿಯಲ್ಲಿ ಹಾಲು ಸಂಗ್ರಹ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಹೆಚ್ಚುವರಿ ಹಾಲಿನ ನಿರ್ವಹಣೆ ಹೊರೆಯಾಗುತ್ತಿದ್ದುದರಿಂದ ಸಂಸ್ಥೆಗೆ ನಷ್ಟವಾಗುತ್ತಿತ್ತು.
ಇದೀಗ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಹಾಲು ವಿತರಿಸಲು ನಿರ್ಧರಿಸಿರುವುದರಿಂದ ಸುಮಾರು 6.5 ಲಕ್ಷ ಲೀಟರ್ ಹಾಲು ವಿಲೇವಾರಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ ಸರ್ಕಾರಕ್ಕೆ ರೇವಣಸಿದ್ದಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ಪಶು ಆಹಾರ ದರ ಏರಿಕೆ ಪ್ರಸ್ತಾಪ:  ಸಭೆಯಲ್ಲಿ ಪಶು ಆಹಾರ ದರ ಹೆಚ್ಚಿಸುವ ಬಗ್ಗೆ ಪ್ರಸ್ತಾವ ಮಂಡಿಸಲಾಯಿತಾದರೂ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನು ಒಂದು ವಾರ ಪರಿಸ್ಥಿತಿ ಅವಲೋಕಿಸಿ ಅಗತ್ಯಬಿದ್ದರೆ ಪ್ರತಿ ಕೆ.ಜಿ ಪಶು ಆಹಾರದ ದರವನ್ನು 50ಪೈಸೆಯಷ್ಟು ಏರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಪಶು ಆಹಾರ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೆಎಂಎಫ್ ಮುಕ್ತ ಮಾರುಕಟ್ಟೆಯಿಂದ ಖರೀದಿಸುತ್ತಿದೆ. ಇತ್ತೀಚೆಗೆ ಕಚ್ಚಾ ಸಾಮಗ್ರಿಗಳ ಬೆಲೆ ಏರುತ್ತಲೇ ಇದೆ. ಜತೆಗೆ ಈ ಕಚ್ಚಾ ಸಾಮಗ್ರಿಗಳಿಗೆ ರಾಜ್ಯ ಸರ್ಕಾರ ಶೇ. 5.5ರಷ್ಟು ತೆರಿಗೆಯನ್ನೂ ವಿಧಿಸುತ್ತಿದೆ. ಈ ತೆರಿಗೆಯನ್ನು ರದ್ದುಗೊಳಿಸುವಂತೆ ಸರ್ಕಾರಕೆ ಈಗಾಗಲೇ ಅನೇಕ ಬಾರಿ ಪ್ರಸ್ತಾವ ಸಲ್ಲಿಸಲಾಗಿತ್ತು.
ಇದೀಗ ಹೊಸ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ. ಸರ್ಕಾರ ಕಚ್ಚಾ ಸಾಮಗ್ರಿಗಳಿಗೆ ತೆರಿಗೆ ವಿನಾಯಿತಿ ನೀಡಿದರೆ ಅದನ್ನು ಪರಿಗಣಿಸಿ ಪಶು ಆಹಾರ ದರವನ್ನು ಪರಿಷ್ಕರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.

ಕೆಎಂಎಫ್ ಎಂಡಿ, ಸಿಇಒ ಆಗಿ ಪ್ರೇಮನಾಥ್
ಕೆಎಂಎಫ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಅವರನ್ನು ಪೂರ್ಣಕಾಲಿಕ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲು ಸಂಸ್ಥೆಯ ಆಡಳಿತ ಮಂಡಳಿ ಸಭೆ ಸಮ್ಮತಿಸಿದೆ. ಇದರ ಜತೆಗೆ ಪ್ರೇಮನಾಥ್ ಅವರನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಯೂ ನೇಮಕ ಮಾಡಲಾಗಿದೆ. ತಕ್ಷಣದಿಂದಲೇ ಈ ತೀರ್ಮಾನ ಜಾರಿಗೆ ಬಂದಿದ್ದು, ಪ್ರೇಮನಾಥ್ ಅವರು ಸೋಮವಾರ ಸಂಜೆಯೇ ಪೂರ್ಣಕಾಲಿಕ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ. ವೆಂಕಟರಾಮು ಅವರನ್ನು ಅಧಿಕಾರದಿಂದ ಮುಕ್ತಗೊಳಿಸಿ ಪ್ರೇಮನಾಥ್ ಅವರನ್ನು ಈ ಸ್ಥಾನಕ್ಕೆ ಪ್ರಭಾರವಾಗಿ ನೇಮಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.