ಪ್ರಧಾನ ಸುದ್ದಿ

ಬೆಂಗಳೂರಿನ ಬರ ನೀಗಲು ಸಮುದ್ರದ ನೆಂಟಸ್ತನ

ಬೆಂಗಳೂರಿನ ಬರ ನೀಗಲು ಸಮುದ್ರದ ನೆಂಟಸ್ತನ
Published On :

ಕನ್ನಡಪ್ರಭ ವಾರ್ತೆ  ಬೆಂಗಳೂರು  ಜೂ. 21-
ಸಮುದ್ರದ ನೆಂಟಸ್ತನ ಉಪ್ಪಿಗೆ ಬರ ಅನ್ನೋದು ಹಳೇ ಗಾದೆ. ರಾಜ್ಯದಲ್ಲಿ ಉಪ್ಪಿಗೆ ಬರವಿಲ್ಲದಿದ್ದರೂ ನೀರಿಗಂತೂ ಬರವಿದೆ. ಅದರಲ್ಲೂ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ರಾಜಧಾನಿ, ಅದನ್ನೂ ಮೀರಿ ಬೆಳೆಯುತ್ತಿರುವುದು ಇಲ್ಲಿನ ನೀರಿನ ಸಮಸ್ಯೆಗೆ ಸಮುದ್ರದ ನೆಂಟಸ್ತನದಲ್ಲಿ ಉತ್ತಮ ಪರಿಹಾರವಿದೆ.
ರಾಜ್ಯ ಹೊಂದಿರುವ ಸಮುದ್ರದ ನೆಂಟಸ್ತನವನ್ನು ಗಟ್ಟಿಗೊಳಿಸಿಕೊಂಡರೆ ಖಂಡಿತಾ ರಾಜಧಾನಿ ಬೆಂಗಳೂರಿನ ನೀರಿನ ಸಮಸ್ಯೆಗೆ ಸುಲಭದ, ಸೂಕ್ತ ಪರಿಹಾರ ದೊರಕಲು ಸಾಧ್ಯ. ನಿರ್ಲವಣೀಕರಣವೊಂದೇ ಅತ್ಯಂತ ಸಮರ್ಥ ಪರಿಹಾರವಾಗಿದ್ದು, ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈ ಬಗ್ಗೆ ತುರ್ತು ಗಮನ ಹರಿಸಬೇಕಿದೆ.
ಮಂಗಳೂರು ಸಮೀಪ ನಿರ್ಲವಣೀಕರಣ ಘಟಕವನ್ನು ಸ್ಥಾಪಿಸಿ, ಸಮುದ್ರದ ನೀರನ್ನು ಭಟ್ಟಿ ಇಳಿಸಿ ಪೈಪ್‌ಗಳ ಮೂಲಕ ಬೆಂಗಳೂರಿಗೆ ಪೂರೈಸುವುದು ಯೋಜನೆ. ಕಳೆದ ಶತಮಾನದ 50ರ ದಶಕದಿಂದೀಚೆಗೆ ನಗರಕ್ಕೆ ನೀರು ಪೂರೈಸುವ ಐದು ಪ್ರಮುಖ ಜಲಮೂಲ ಬತ್ತಿ ಹೋಗಿದ್ದು, ಇದೀಗ ಕಾವೇರಿಯೂ ಅದೇ ಹಾದಿಯಲ್ಲಿ ಸಾಗಿದ್ದಾಳೆ.  ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನ ರಕ್ಕಸ ದಾಹಕ್ಕೆ ಸೂಕ್ತ ಅನ್ಯ ಜಲಮೂಲವೇ ಇಲ್ಲವಾಗಿದ್ದು ಸಮುದ್ರದ ನೀರನ್ನು ಶುದ್ಧೀಕರಿಸಿ ಬಳಸುವುದೊಂದೆ ಮಾರ್ಗ.
ಈ ಸಂಬಂಧ ಹೈಫ್ಲಕ್ಸ್ ಎಂಬ ಖಾಸಗಿ ಕಂಪನಿ ಹಿಂದಿನ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರಕ್ಕೆ ಯೋಜನೆಯ ಪ್ರಸ್ತಾಪವನ್ನೂ ಸಲ್ಲಿಸಿತ್ತು. ಆದರೆ, ಆ ಬಗ್ಗೆ ಗಮನ ಹರಿಸುವ ವ್ಯವಧಾನ ರಾಜಕೀಯ ಪೈಪೋಟಿಯಲ್ಲಿ ಅವರಿಗೆ ಇಲ್ಲದೇ ಹೋದದ್ದು ದುರಂತ. ಸಿದ್ದರಾಮಯ್ಯನವರಾದರೂ ಈ ಕುರಿತು ನಿರ್ಧಾರ ಕೈಗೊಳ್ಳುವ ಕಾಳಜಿ ಮೆರೆಯಬೇಕಿದೆ.

ಸಿಂಗಾಪುರ್‌ನಲ್ಲಿ ಮೊಟ್ಟ ಮೊದಲ ಬಾರಿಗೆ 'ನ್ಯೂವಾಟರ್ ಪ್ಲಾಂಟ್‌' ಕಟ್ಟಿದ್ದು ಹೈಫ್ಲಕ್ಸ್. ಅದರ ನಂತರ ಕಟ್ಟಿದ ಒಟ್ಟು 5 ನ್ಯೂವಾಟರ್ ಪ್ಲಾಂಟ್‌ಗಳಲ್ಲಿ 2 ಹೈಫ್ಲಕ್ಸ್‌ನದ್ದು. ಸದ್ಯಕ್ಕೆ ದಿನಬಳಕೆಯ ಶೇ.2ರಷ್ಟು ನೀರು ನ್ಯೂವಾಟರ್‌ನಿಂದ ಹೋಗುತ್ತಿದೆ.
ಇದಕ್ಕೆ ಅಗತ್ಯವಿರುವ ಜಾಗವನ್ನಷ್ಟೇ ಮಂಗಳೂರಿನ ಸಮುದ್ರದ ದಂಡೆಯಲ್ಲಿ ಸರಕಾರ ಒದಗಿಸಬೇಕಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುವ ಯೋಜನೆ ನಿಗದಿತ ಅವಧಿಯ ಬಳಿಕ ಸರಕಾರಕ್ಕೆ ಹಸ್ತಾಂತರವಾಗಲಿದೆ. ಆವರೆಗೆ ಕಂಪನಿಯೇ ಅದನ್ನು ನಿರ್ವಹಿಸಿ ನೀರು ಸರಬರಾಜು ಮಾಡಲಿದೆ.
ಆಧುನಿಕ ತಂತ್ರಜ್ಞಾನ ಬಳಸಿ ನೀರನ್ನು ಮರುಬಳಕೆ ಮಾಡುವಲ್ಲಿ ಇದು ಈಗಾಗಲೇ 'ಸಿಂಗಾಪುರ ಸೂತ್ರ' ಎಂದೇ ಖ್ಯಾತವಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಬಂಡವಾಳ ಹೂಡಿಕೆ ಮಾಡಿ, ಸಂಸ್ಕರಿತ, ನಿರ್ಲವಣೀಕರಣಗೊಂಡ ನೀರನ್ನು ಬಳಸುವ ನಿಟ್ಟಿನಲ್ಲಿ ಉತ್ತೇಜನ ನೀಡುವುದು ಯೋಜನೆಯ ಉದ್ದೇಶ. ಯೋಜನೆ ತುಸು ವೆಚ್ಚದಾಯಕ ಅಂತ ಅನ್ನಿಸಿದರೂ ನೀರಾವರಿ ಯೋಜನೆಗಳಿಂದ ಪರಿಸರದ ಮೇಲಾಗುವ ಹಾನಿ, ಅರಣ್ಯ ನಾಶ, ಮುಳುಗಡೆ ಇತ್ಯಾದಿಗಳನ್ನು ತಪ್ಪಿಸಬಹುದು. ಸುಲಭದಲ್ಲಿ ಬೆಂಗಳೂರಿಗೆ ಅಗತ್ಯ ನೀರು ಸಹ ಲಭ್ಯ.
10ರಿಂದ 40 ಎಜಿಡಿ ತ್ಯಾಜ್ಯ ಪರಿಷ್ಕರಣೆಗೊಳಗಾದ ನೀರಿನ ಯೋಜನೆ (ಡಿಬಿಒಟಿ/ಪಿಪಿಪಿ ಬೇಸಿಸ್)ಯನ್ನು ರಾಜ್ಯಾದ್ಯಂತ ವಿಸ್ತರಿಸಿ ಹೆಚ್ಚುವರಿ ನೀರನ್ನು ಸರಬರಾಜು ಮಾಡಿದರೆ ಬೆಂಗಳೂರಿನ ನೀರನ್ನು ಉಳಿಸಬಹುದು. ಇನ್ನೂ ಒಂದು ಸಂಗತಿಯೆಂದರೆ ನೀರನ್ನು ಕಾರ್ಖಾನೆಗಳೂ ಬಳಸಬಹುದು. ಇದರಿಂದ ಸದ್ಯಕ್ಕೆ ಕಾರ್ಖಾನೆಗಳಲ್ಲಿ ಬಳಕೆಯಾಗುತ್ತಿರುವ ಕಾವೇರಿ ನೀರನ್ನು ಕುಡಿಯುವ ನೀರಾಗಿ ಬಳಸಬಹುದು. 'ಡೀ ಸಾಲಿನೇಶನ್‌' ಅಥವಾ ನಿರ್ಲವಣೀಕರಣದ ಹಲವು ಪ್ರಯೋಗಗಳೂ ಹಲವೆಡೆ ಯಶ ಕಂಡಿವೆ. ಭಾರತದ 'ಕನಸುಗಾರ ರಾಷ್ಟ್ರಪತಿ'ಯಾಗಿದ್ದ ಡಾ. ಅಬ್ದುಲ್ ಕಲಾಂ ಇಂಥ ಪ್ರಯೋಗಗಳು ಹೆಚ್ಚಬೇಕೆಂದು ಮೊದಲಿಂದಲೂ ಪ್ರತಿಪಾದಿಸುತ್ತಲೇ ಬರುತ್ತಿದ್ದಾರೆ. ಅಲಹಾಬಾದ್, ಚೆನ್ನೈನಲ್ಲಿ ಇವು ನಡೆಯುತ್ತಿವೆಯಾದರೂ ಭಾರತದಲ್ಲಿ ಇನ್ನೂ ವ್ಯಾಪಕವಾಗಿಲ್ಲ. ಸೂರತ್‌ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಪ್ರತಿದಿನಕ್ಕೆ 40,000 ಎಮ್ ಕ್ಯೂಬ್ ನೀರು ಪೂರೈಸುತ್ತಿದೆ. ಸಿಂಗಾಪೂರ್‌ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಪ್ರತಿದಿನಕ್ಕೆ 72,000 ಎಮ್ ಕ್ಯೂಬ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಏಷ್ಯಾದ ಅತಿ ದೊಡ್ಡ ಬಯೋ ರಿಯಾಕ್ಟರ್ ಪ್ಲಾಂಟ್ ಪ್ರತಿದಿನಕ್ಕೆ 68,000 ಎಮ್ ಕ್ಯೂಬ್ ನೀರಿನ ಸಾಮರ್ಥ್ಯ ಹೊಂದಿದೆ. ಆ ನಿಟ್ಟಿನಲ್ಲಿ ಯಶಸ್ಸು ನಮ್ಮದಾದರೆ ಭವಿಷ್ಯದ ದಿನಗಳ ನೀರಿನ ಸಮಸ್ಯೆಗೆ ಉತ್ತರ ದೊರಕಿದಂತಾದೀತು.

ಬೆಂಗಳೂರಿಗೆ ಬೇರೆ ದಾರಿ ಇಲ್ಲ
ಬೆಂಗಳೂರಿನ ನೀರಿನ ಬಳಕೆಯ ಇತಿಹಾಸ ಇಂದಿನ ಜನಸಂಖ್ಯೆಯ ಹೆಚ್ಚಳ ಪ್ರಮಾಣ ಹಾಗೂ ನೇರ ಕಣಜ  ಕೊರತೆಯ ಪ್ರವೃತ್ತಿಯನ್ನು ಗಮನಿಸಿದರೆ ಕಾವೇರಿಯೂ ಪೂರ್ತಿ ಬತ್ತಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೀಗ ಯಾವುದೇ ನದಿ ಅಸ್ತಿತ್ವದಲ್ಲಿಲ್ಲ. 50 ವರ್ಷಗಳ ಹಿಂದೆ ಇತ್ತೆನ್ನಲಾದ 262 ಕೆರೆಗಳ ಪೈಕಿ ಈಗ ಕೇವಲ 81 ಕೆರೆಗಳಷ್ಟೇ ಸಜೀವ.
ಇನ್ನು ಅಂತರ್ಜಲದ ಮಟ್ಟ ಹೇಳುವ ಹಾಗಿಲ್ಲ. ಈ ಎಲ್ಲ ಕಾರಣಗಳಿಂದ ನೀರು ಹಾಗೂ ವಿದ್ಯುತ್ ವಿಷಯದಲ್ಲಿ ಹೈಟೆಕ್ ಸಿಟಿ ಸಂಪೂರ್ಣ ಪರಾವಲಂಬಿ. 1530ರಲ್ಲಿ ಕೆಂಪೇಗೌಡರಿಂದ ನಿರ್ಮಾಣವಾದ ಈ ಉದ್ಯಾನನಗರಿಗೆ 1896ರವರೆಗೂ ಹಲಸೂರು ಕೆರೆಯಿಂದ ನೀರು ಪೂರೈಕೆಯಾಗುತ್ತಿತ್ತು.
ಅದೂ ಸಾಲದಾದಾಗ 1932ರವರೆಗೆ ಹೇಸರಘಟ್ಟದಿಂದ ನೀರು ತರಲಾಯಿತು. 1933ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಪೂರೈಕೆ ಆರಂಭ. ಆಗ ಬೆಂಗಳೂರಿನ ಜನಸಂಖ್ಯೆ ಸರಿಸುಮಾರು 3.5 ಲಕ್ಷ. ಕೊನೆಗೆ ಬಂದದ್ದು ತೊರೆಕಾಡನಹಳ್ಳಿ ಯೋಜನೆ. ಆ ನಂತರ ಅರ್ಕಾವತಿ ಒಡಲಿಗೆ ಖನ್ನ ಹಾಕಲಾಯಿತು. 1974ರ ಒಟ್ಟಿಗೆ ಅರ್ಕಾವತಿ ಬತ್ತಿ ಹೋಯಿತು. ಕೊನೆಗೂ 74ರಲ್ಲಿ ಕಾವೇರಿಯನ್ನು ರಾಜಧಾನಿಗೆ ಎಳೆತರಲಾಯಿತು. ಮೊದಲ ಬಾರಿಗೆ ಸೌತ್‌ಎಂಡ್ ವೃತ್ತದ ಬಳಿ ಕಾವೇರಿ ಚಿಮ್ಮಿದಾಗ ಇನ್ನೆಂದೂ ರಾಜಧಾನಿಗೆ ದಾಹ ಇಲ್ಲ ಎಂದುಕೊಂಡಿದ್ದೇವೆ. ಇದೀಗ ಕಾವೇರಿಯ ನಾಲ್ಕು ಹಂತಗಳು ಅನುಷ್ಠಾನಗೊಂಡಿವೆ. 1530ರಿಂದ ಈವರೆಗೆ ಬೆಂಗಳೂರಿಗೆ ನೀರು ಪೂರೈಸಿದ 5 ಜಲಮೂಲಗಳು ಈಗ ಅಸ್ತಿತ್ವದಲ್ಲಿಲ್ಲ.
ಆದರೂ ನಮ್ಮ ದಾಹ ನೀಗಿಲ್ಲ. ಕಾವೇರಿ ಕಳೆದ 8 ವರ್ಷಗಳಿಂದ ಫೆಬ್ರವರಿಯಲ್ಲೇ ಬತ್ತಲಾರಂಭಿಸಿದ್ದಾಳೆ. ಕಳೆದ ಏಪ್ರಿಲ್ ವೇಳೆಗೆ ತಲಕಾವೇರಿ ಹಾಗೂ ಬೆಂಗಳೂರಿನ ನಡುವೆ ಮೂರು ಕಡೆ ಕಾವೇರಿ ಅಸ್ತಿತ್ವವೇ ಕಾಣದ ಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ಬೋರ್‌ವೆಲ್‌ಗಳಿವೆ ಎಂಬುದು ಒಂದು ಅಂದಾಜು. ಈ ಪೈಕಿ 1 ಲಕ್ಷ ಬೋರ್‌ವೆಲ್‌ಗಳು ಬೆಂಗಳೂರು ಒಂದರಲ್ಲೇ ಕೇಂದ್ರೀಕೃತವಾಗಿವೆ. ಕೈಗಾರಿಕೆ ಮಾತ್ರವಲ್ಲ ದಿನನಿತ್ಯದ ಮನೆಬಳಕೆ, ಕೊನೆಗೆ ಕೃಷಿಗೂ ಈ ಬೋರ್‌ವೆಲ್‌ಗಳು ಹೀರಿ ಬಿಡುತ್ತಿರುವ ಅಂತರ್ಜಲವೇ ಬಳಕೆಯಾಗುತ್ತಿದೆ.
ನಗರಕ್ಕೆ ಸದ್ಯದ ಸನ್ನಿವೇಶದಲ್ಲಿ ನಿತ್ಯ 900 ಮಿಲಿಯನ್ ಲೀಟರ್‌ಗಳಷ್ಟು ನೀರು ಸರಬರಾಜು ಆಗುತ್ತಿದೆ. ಸರಿ ಸುಮಾರು 17 ಟಿಎಂಸಿಯಷ್ಟು ನೀರು ಬೇಕೇ ಬೇಕಿದೆ. ಕಾವೇರಿಯಿಂದ ಎಲ್ಲ ವಿವಾದದ ಹೊರತಾಗಿ ಈಗಿನ ಸನ್ನಿವೇಶದಲ್ಲೇ ಇದನ್ನು ಪೂರೈಸಲಾಗುತ್ತಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ನಿರ್ಲವಣೀಕರಣದಂಥ ಮಾರ್ಗ ಕಂಡುಕೊಳ್ಳವುದು ಅನಿವಾರ್ಯ.

ಬಾಷ್ಪೀಭವನ ವಿಧಾನ
ಮಧ್ಯ ಪ್ರಾಚ್ಯ ದೇಶಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಬಾಷ್ಪೀಭವನ ವಿಧಾನ ಉಪ್ಪು ನೀರನ್ನು ಸಿಹಿಯಾಗಿ ಪರಿವರ್ತಿಸುವ ಪ್ರಕ್ರಿಯೆಗಳಲ್ಲೇ ಒಂದಷ್ಟು ಭರವಸೆ ಮೂಡಿಸಿರುವಂಥದ್ದು. ಹಾಗಾದರೆ ಏನಿದು ಬಾಷ್ಪೀಭವನ?  ಪ್ರಾಥಮಿಕ ಶಾಲೆಗಳಲ್ಲಿ ನಾವು ಮಳೆ ಬರುವುದು ಹೇಗೆಂಬ ಬಗ್ಗೆ ಕಲಿತದ್ದನ್ನು ಸ್ವಲ್ಪ ನೆನಪಿಸಿಕೊಳ್ಳೋಣ. ಭೂಮಿಯ ಮೇಲೆ ನದಿ, ಕೆರೆ, ಹೊಂಡ, ಸಮುದ್ರದ ನೀರು ಬಿಸಿಲಿಗೆ ಕಾದು ಆವಿಯ ರೂಪದಲ್ಲಿ ಮೇಲೇರುತ್ತದೆ. ಆಗಸದಲ್ಲಿ ಇದು ಮೋಡದ ಸ್ವರೂಪ ಪಡೆದುಕೊಳ್ಳುತ್ತದೆ. ಅಲ್ಲಿ ತಣ್ಣನೆಯ ವಾತಾವರಣದ ಸ್ಪರ್ಶ ಪಡೆದು ಕರಗಿ ಮತ್ತೆ ನೀರಿನ ರೂಪ ಪಡೆದು ಮಳೆಯಾಗಿ ಭೂಮಿಗೆ ಬೀಳುತ್ತದೆ. ಇದೇ ಸೂತ್ರ ನೀರು ಸಂಸ್ಕರಣೆಯಲ್ಲೂ ಬಳಕೆಯಾಗುತ್ತದೆ.

ನಿರ್ಲವಣೀಕರಣ ವಿಧಾನ
ಸಮುದ್ರದ ನೀರನ್ನು ಬೃಹತ್ ತೊಟ್ಟಿಗಳಿಗೆ ಹಾಯಿಸಲಾಗುತ್ತದೆ. ಅಲ್ಲಿ ಅದನ್ನು ಶಾಖಕ್ಕೊಳಪಡಿಸಿ ಆವಿಯಾಗುವಂತೆ ಮಾಡಲಾಗುತ್ತದೆ. ಹೀಗೆ ಆವಿಯಾದ ಉಪ್ಪು ನೀರು ಮೇಲೇರಿ ಕಂಟೈನರ್‌ಗಳತ್ತ ನುಗ್ಗುತ್ತದೆ. ಅಲ್ಲಿ ಅದನ್ನು ತಂಪುಗೊಳಿಸಲಾಗುತ್ತದೆ. ತಕ್ಷಣ ಆವಿ ಸಣ್ಣ ಸಣ್ಣ ಹನಿಗಳಾಗಿ ಮಾರ್ಪಟ್ಟು ಲೋಹದ ತಟ್ಟೆಗಳ ಮೇಲೆ ಕುಳಿತುಕೊಳ್ಳುತ್ತದೆ. ಇವೆಲ್ಲ ಸಂಗ್ರಹಗೊಂಡು ಪೈಪುಗಳಲ್ಲಿ ಜಾರಿ ಇನ್ನೊಂದು ತೊಟ್ಟಿಯಲ್ಲಿ ಸಂಗ್ರಹಗೊಳ್ಳುತ್ತದೆ. ಅಲ್ಲಿಗೆ ನೀರು ತನ್ನೆಲ್ಲ ಪಾಪ ತೊಳೆದುಕೊಂಡು ಸಂಸ್ಕಾರ ಪಡೆದಂತಾಗುತ್ತದೆ. ಇಂಥ ಬಟ್ಟಿ ಇಳಿಸುವ ಪ್ರಕ್ರಿಯೆ ಒಂದು ತೆರನಾದುದಾದರೆ, ನೀರಿನ ಪ್ರತಿಲೋಮ ಅನುಸರಣ ಇನ್ನೊಂದು ಬಗೆ.
ಯಾವುದೇ ದ್ರವ ಪದಾರ್ಥ ಹೆಚ್ಚು ಸಾಂದ್ರತೆಯ ಪ್ರದೇಶದಿಂದ ಕಡಿಮೆ ಸಾಂದ್ರತೆಯೆಡೆಗೆ ಹರಿಯುವ ಗುಣ ಹೊಂದಿರುತ್ತದೆ. ಇದನ್ನು 'ಆಸ್ಮಾಸಿಸ್‌' ಎನ್ನಲಾಗುತ್ತದೆ. ಹೀಗೆ ಹರಿಯುವ ದ್ರವ ಪದಾರ್ಥ ಒಂದು ಹಂತದಲ್ಲಿ ಸಮತೋಲನ ಸ್ಥಿತಿ ಪಡೆಯುತ್ತದೆ. ಇಲ್ಲಿಗೆ ಹರಿವು ನಿಲ್ಲುತ್ತದೆ. ನಂತರ ಉಕ್ಕುವುದು. ಇದೇ ಹರಿವು ತಿರುವು ಮುರುವಾದರೆ, ಅಂದರೆ ಕಡಿಮೆ ಸಾಂದ್ರತೆಯ ಪ್ರದೇಶದಿಂದ ಹೆಚ್ಚು ಸಾಂದ್ರತೆಯೆಡೆಗೆ ಹರಿಸುವುದೇ ರಿವರ್ಸ್ ಆಸ್ಮಾಸಿಸ್ ಅಥವಾ ಪ್ರತಿಲೋಮ ಅನುಸರಣ. ಹೀಗೆ ಗುಣಕ್ಕೆ ವಿರುದ್ಧ ಹರಿಯುವಿಕೆಯ ಸಂದರ್ಭದಲ್ಲಿ ದ್ರವ ಪದಾರ್ಥ ತನ್ನೊಡಲಲ್ಲಿರುವ ಭಾರದ ಕಣಗಳನ್ನು ಕಳೆದುಕೊಳ್ಳುತ್ತದೆ. ಇದೇ ತಂತ್ರ ಬಳಸಿ ನೀರನ್ನು ಮೇಲ್ಮುಖವಾಗಿ ತೀವ್ರ ಒತ್ತಡದಲ್ಲಿ ಹಾಯಿಸಲಾಗುತ್ತದೆ. ಮಧ್ಯದಲ್ಲಿ ಅಳವಡಿಸಲಾಗಿರುವ ಮೆಂಬ್ರೇನ್‌ಗಳು ನೀರಿನಲ್ಲಿರುವ ಲವಣಾಂಶವನ್ನು ತಡೆಯುತ್ತದೆ. ಇಲ್ಲಿ ಎಷ್ಟು ಒತ್ತಡದಲ್ಲಿ ನೀರನ್ನು ತಳ್ಳಲಾಗಿದೆ, ಎಷ್ಟು ಮೆಂಬ್ರೇನ್‌ಗಳನ್ನು ಅಳವಡಿಸಲಾಗಿರುತ್ತದೆ, ಅವುಗಳ ರಂಧ್ರ ಎಷ್ಟು ಸೂಕ್ಷ್ಮವಾಗಿವೆ, ನೀರಿನಲ್ಲಿ ಎಷ್ಟು ಪ್ರಮಾಣದಲ್ಲಿ ಉಪ್ಪಿನಂಶವಿದೆ ಎಂಬುದರ ಮೇಲೆ ನೀರಿನ ಶುದ್ಧತೆಯನ್ನು ನಿರ್ಧರಿಸಲಾಗುತ್ತದೆ.

ಎಲ್ಲೆಡೆ ಜನಪ್ರಿಯ
ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇಂಥ ಪ್ರಯತ್ನಗಳು ನಡೆದಿವೆ. ಅಂಕಿ ಅಂಶದ ಪ್ರಕಾರ, ಜಗತ್ತಿನಲ್ಲಿ 7500ಕ್ಕೂ ಹೆಚ್ಚು ನಿರ್ಲವಣೀಕರಣ ಘಟಕಗಳಿವೆ. ಈ ಪೈಕಿ ಶೇ.60ರಷ್ಟು ಮಧ್ಯಪ್ರಾಚ್ಯದಲ್ಲೇ ಇವೆ. ಸೌದಿ ಅರೇಬಿಯಾದಲ್ಲಿನ ಬೃಹತ್ ಘಟಕ 128 ಎಂಜಿಡಿಯಷ್ಟು ಶುದ್ಧ ನೀರನ್ನು ಉತ್ಪತ್ತಿ ಮಾಡುತ್ತಿದೆ. ಇದನ್ನು ಬಿಟ್ಟರೆ ಶೇ.12ರಷ್ಟು ಘಟಕಗಳು ಅಮೆರಿಕದಲ್ಲಿವೆ. ಅದರಲ್ಲೂ ಕೆರೇಬಿಯಾ ಹಾಗೂ ಫ್ಲೋರಿಡಾಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ. ಹಾಗಾದರೆ ಏನಿದು ನಿರ್ಲವಣೀಕರಣ ಪ್ರಕ್ರಿಯೆ? ಪ್ರಶ್ನೆ ಸಹಜ. ಸಮುದ್ರದ ನೀರು, ತ್ಯಾಜ್ಯ ನೀರಿನಲ್ಲಿ ಕರಗಿರಬಹುದಾದ ಉಪ್ಪು ಸೇರಿದಂತೆ ಹಲವು ಖನಿಜಾಂಶಗಳನ್ನು ಬೇರ್ಪಡಿಸುವ ಪ್ರಕ್ರಿಯೆ. ಖನಿಜಾಂಶಗಳನ್ನು ಬೇರ್ಪಡಿಸಲು ಹಲವು ವಿಧಾನಗಳಿವೆ. ಬಾಷ್ಪೀಭವನ, ಪ್ರತಿಲೋಮ ಅನುಸರಣ, ಸೂರ್ಯ ಕಿರಣಗಳ ಬಳಕೆ, ಅಣುಶಕ್ತಿ ಬಳಕೆಯಿಂದ ನೀರನ್ನು ಶುದ್ಧೀಕರಿಸುವುದು ಹೆಚ್ಚು ಬಳಕೆಯಲ್ಲಿರುವ ಪದ್ಧತಿಗಳು.

- ರಾಧಾಕೃಷ್ಣ ಎಸ್. ಭಡ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.