ಪ್ರಧಾನ ಸುದ್ದಿ

ನಾವು ಇವರಿಂದ ಕಲಿಯುವುದು ಸಾಕಷ್ಟಿದೆ!

ನಾವು ಇವರಿಂದ ಕಲಿಯುವುದು ಸಾಕಷ್ಟಿದೆ!
ರವಾಂಡಾದ ಆದಿವಾಸಿಗಳ ಮಗು ಬಿಡಿಸಿದ ಗೊರಿಲ್ಲಾಗಳ ಚಿತ್ರ.
Published On :

ಕಿಗಾಲಿ, ರವಾಂಡಾ: 'ಕಾಡಿನಲ್ಲಿರುವ ಗೊರಿಲ್ಲಾಗಳನ್ನು ನೋಡಬೇಕು ಅಂದ್ರೆ ಬೆಳಗ್ಗೆ ಮೂರುವರೆ ಗಂಟೆಗೆ ಏಳಬೇಕು, ಸೂರ್ಯನ ಕಿರಣ ಮೂಡುವ ಮೊದಲು ಕಾಡಿನಲ್ಲಿರಬೇಕು. ಬೆಳಗ್ಗೆ ಎಂಟು ಗಂಟೆಯ ನಂತರ ಕಾಡಿನೊಳಗೆ ಹೊರಟರೆ ಗೊರಿಲ್ಲಾಗಳು ಒಂದು ರೌಂಡ್ ತಿಂದು, ಮಲಗಿಬಿಡುತ್ತವೆ. ಗೊತ್ತಲ್ಲ, ಗೊರಿಲ್ಲಾಗಳಿಗೆ ನಿದ್ದೆ ಬಂದರೆ ಹದಿಮೂರು ತಾಸು ಎಚ್ಚರವಾಗೊಲ್ಲ.'
ಗೊರಿಲ್ಲಾಗಳೊಂದಿಗೆ ನಲವತ್ತು ವರ್ಷಗಳನ್ನು ಕಳೆದ, ಪ್ರತಿದಿನವೂ ಅವುಗಳನ್ನು ನೋಡುವ, ಕನಿಷ್ಠ ಎರಡು ಗಂಟೆಗಳಾದರೂ ಕಳೆಯುವ ಟೂರಿಸ್ಟ್ ಗೈಡ್ ಫ್ರಾಂಕೋಸ್ ಬಿಗಿರಿಮಾನಾ ಹೇಳಿದಾಗ, ಯಾಕೋ ಅತಿಶಯೋಕ್ತಿಯಿರಬಹುದಾ ಎಂದುಕೊಂಡೆ. ಆದರೆ ಮಂಜು ಮುಸುಕಿದ ಆ ದಟ್ಟ ಕಾಡಿನಲ್ಲಿ ಅವನೊಂದಿಗೆ ಹೆಜ್ಜೆಹಾಕುವಾಗ ಆತ ಹೇಳಿದ್ದು ಎಷ್ಟು ನಿಜ ಅನಿಸಿತು.
ನಾನು ಕಾಡು ಸುತ್ತಿದ್ದು, ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದು, ಆನೆಗಳ ಹೆಜ್ಜೆಗುರುತು, ಬಿಸಿಬಿಸಿ ಲದ್ದಿ ನೋಡಿ ಹೆದರಿದ್ದು ಇಲ್ಲಿ ಮುಖ್ಯ ಅಲ್ಲ. ಅವನ್ನೆಲ್ಲ ಮುಂದೆ ಸವುಡು ಮಾಡಿಕೊಂಡು ಬರೆಯುತ್ತೇನೆ. ಆದರೆ ನನಗೆ ತೀರಾ ಮುಖ್ಯವೆನಿಸಿದ್ದು ಗೊರಿಲ್ಲಾ ವೀಕ್ಷಣೆಯ ಅನುಭವವನ್ನು ಜೀವಮಾನದ ರಸಗಳಿಗೆಯನ್ನಾಗಿ ಮಾಡಲು ಸ್ಥಳೀಯ ಜನ, ಗೊರಿಲ್ಲಾ ವನಪಾಲಕರು, ಅಧಿಕಾರಿಗಳು ಕೈಗೊಂಡ ಕ್ರಮಗಳು ಮಾತ್ರ. ಪ್ರತಿಯೊಬ್ಬ ಪ್ರವಾಸಿಗರಿಗೂ ಈ ಅನುಭವ ಆಗದೇ ಹೋಗುವುದಿಲ್ಲ.
ಗೊರಿಲ್ಲಾ ದರ್ಶನಕ್ಕೆ ಹೊರಡುವ ಮುನ್ನ ಪಾಲಿಸಬೇಕಾದ ನಿಯಮಗಳ ಬಗ್ಗೆ ಟೂರಿಸ್ಟ್ ಗೈಡ್ ವಿವರಿಸುವಾಗ ಮೊದಲು ಹೇಳಿದ್ದು-'ಯಾವುದೇ ಕಾರಣಕ್ಕೂ ಕಾಡಿನಲ್ಲಿ ಪ್ಲಾಸ್ಟಿಕ್ ಬ್ಯಾಗ್, ಕ್ಯಾರಿಬ್ಯಾಗ್‌ಗಳನ್ನು ಒಯ್ಯುವಂತಿಲ್ಲ. ಒಯ್ಯದಿದ್ದರೆ ಅಲ್ಲಿ ಅವುಗಳನ್ನು ಬಿಸಾಡುವ ಪ್ರಮೇಯ ಎದುರಾಗುವುದಿಲ್ಲ. ನೀರಿನ ಬಾಟಲಿ ಹೊರತಾಗಿ ಮತ್ತೇನನ್ನೂ ತೆಗೆದುಕೊಂಡು ಹೋಗುವಂತಿಲ್ಲ. ಕಾಡಿನಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾದ ಪ್ರಸಂಗ ಬಂದರೆ ಯಾವುದೇ ಕಟ್ಟಳೆಗಳಿಲ್ಲ.    
ಆದರೆ ಮಲವಿಸರ್ಜನೆ ಮಾಡಬೇಕಾದ ಸಂದರ್ಭ ಎದುರಾದರೆ, ಒಂದಡಿ ಹೊಂಡ ತೆಗೆದು ಮಲವಿಸರ್ಜನೆ ಮಾಡಿ, ಆನಂತರ ಅದನ್ನು ಮಣ್ಣಿನಲ್ಲಿ ಮುಚ್ಚಬೇಕು. ಇನ್ನು ಸಿಗರೇಟು, ಬೀಡಿ, ತಂಬಾಕು ಸೇವನೆಗೆ ಅವಕಾಶ ಇಲ್ಲವೇ ಇಲ್ಲ. ಯಾಕೆಂದರೆ ನಿಮಗೆ ಅಂಟಿದ ಚಟ, ಗೊರಿಲ್ಲಾಗಳಿಗೂ ಅಂಟೀತು.'
ವಿರುಂಗ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಆ ಅರಣ್ಯದಲ್ಲಿ ನಾವು ಕನಿಷ್ಠ ಹನ್ನೆರಡು ಕಿಮೀ ನಡೆದಿರಬಹುದು, ಪ್ರತಿದಿನ ಸಾವಿರಾರು ಪ್ರವಾಸಿಗರು ಚಾರಣ ಮಾಡುವ ಆ ಕಾನನದಲ್ಲಿ ಒಂದೇ ಒಂದು 'ಪೇಟೆವಸ್ತು'ಗಳು ಕಣ್ಣಿಗೆ ಬೀಳಲಿಲ್ಲ.
'ಇದು ಗೊರಿಲ್ಲಾಗಳು ವಾಸಿಸುವ ಅರಣ್ಯ. ಇದು ನಮಗೆ ಪೂಜಾ ಮಂದಿರವಿದ್ದಂತೆ. ಅವುಗಳಿಗೆ ಉತ್ತಮ ಬೀಡನ್ನು ಒದಗಿಸದೇ ಅವುಗಳ ಸಂರಕ್ಷಣೆ ಬಗ್ಗೆ ಎಷ್ಟು ಮಾತಾಡಿ ಏನು ಪ್ರಯೋಜನ?' ಎಂದ ಟೂರಿಸ್ಟ್ ಗೈಡ್.
ಗೊರಿಲ್ಲಾ ಕಾಡಿನೊಳಗೆ ಹೋಗುವುದಕ್ಕಿಂತ ಮುನ್ನ ಮುಸಾಂಜೆ ಎಂಬ ನಮ್ಮ ಮಲೆನಾಡಿನ ಊರನ್ನು ನೆನಪಿಸುವ ಕಿರುಪಟ್ಟಣದಲ್ಲಿ ನಾಲ್ಕೈದು ಕಿಮೀ ಕ್ರಮಿಸಬೇಕು. ಇಕ್ಕೆಲಗಳಲ್ಲೂ ಗೊರಿಲ್ಲಾಗಳನ್ನೇ ನೆಚ್ಚಿಕೊಂಡಿರುವ ಆದಿವಾಸಿಗಳ ನೂರಾರು ಕುಟುಂಬಗಳಿವೆ. ಅವರಲ್ಲಿ ಬಡತನವಿರಬಹುದು, ಆದರೆ ಆತ್ಮೀಯತೆಯಲ್ಲಿ ನಿಜಕ್ಕೂ ಶ್ರೀಮಂತರೇ. ಬಾಲಕರಾದಿಯಾಗಿ ಕುಟುಂಬದ ಎಲ್ಲಾ ಸದಸ್ಯರೂ ಹೊರಬಂದು, 'ಹಲೋ ಗುಡ್‌ಮಾರ್ನಿಂಗ್, ಹೌ ಆರ್ ಯು, ಹ್ಯಾವ್ ಎ ಗುಡ್‌ಟೈಮ್‌' ಎಂದು ಶುಭಾಶಯ ಹೇಳಿ ಹೋಗುವ ಅಪರೂಪದ ಆತಿಥ್ಯ. ತಮ್ಮ ಗುಡಿಸಲಿನಿಂದ ಆರಂಭವಾಗುವ ಅವರ ಸ್ವಚ್ಛತೆಯ ಪ್ರಜ್ಞೆ ಇಡೀ ಊರನ್ನು ಆವರಿಸಿ, ಕಾಡಿನ ತನಕ ವಿಸ್ತರಿಸಿದೆ. ಎಂಟು ಸಾವಿರ ಜನಸಂಖ್ಯೆಯಿರುವ ಆ ಊರಲ್ಲಿ ಕಸ, ಕಡ್ಡಿ, ಹೊಲಸು ಇಲ್ಲವೇ ಇಲ್ಲ. ರಸ್ತೆ ಬದಿಯಲ್ಲಿ ನಾರುವ ಚರಂಡಿಗಳಿಲ್ಲ, ರಸ್ತೆಯಲ್ಲಿ ಹೊಂಡಗಳಿಲ್ಲ. ಅವರು ವಾಸಿಸುವ ಮನೆಗಳಿಂದ ಅವರು ಅಷ್ಟೇನೂ ಅನುಕೂಲಸ್ಥರಲ್ಲ ಎಂದು ಭಾವಿಸಬಹುದು. ಆದರೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬಡತನ ಅಡ್ಡಿಬಂದಿಲ್ಲ. ಬಡಮಕ್ಕಳು ರಸ್ತೆ ಬದಿ ಬಂದು ಭಿಕ್ಷೆ ಬೇಡುವುದಿಲ್ಲ. ಅದರ ಬದಲು ತಾವೇ ಬಿಡಿಸಿದ ಗೊರಿಲ್ಲಾ ಚಿತ್ರಗಳನ್ನು ತೋರಿಸುತ್ತಾರೆ. ಪ್ರವಾಸಿಗರಿಗೆ ಖುಷಿಯಾದರೆ ಒಂದೆರಡು ಡಾಲರ್ ಕೊಡಬಹುದು. ತಾವು ಬಿಡಿಸಿದ ಚಿತ್ರಗಳನ್ನು ಖರೀದಿಸಬೇಕೆಂದು ವರಾತ ಮಾಡುವುದಿಲ್ಲ.
'ಗೊರಿಲ್ಲಾಗಳೇ ಇಲ್ಲಿನ ಜನರ ಜೀವಾಳ. ಅದಕ್ಕಿಂತ ಹೆಚ್ಚಾಗಿ ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳೆಲ್ಲ ಗೊರಿಲ್ಲಾಗಳ ಸುತ್ತವೇ ಸುತ್ತುತ್ತಿವೆ. ಒಂದು ಮರ ಕಡಿಯುವ ಮುನ್ನ ಗಿಡ ನೆಡುವ ವಿವೇಕ ಆದಿವಾಸಿಗಳಲ್ಲಿ ಮೂಡಿದೆ. ಕಾಡಿನ ರಕ್ಷಣೆಯಿಂದಾಗಿ ಗೊರಿಲ್ಲಾಗಳು ಉಳಿಯುವಂತಾಗಿದೆ. ಅವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಗೊರಿಲ್ಲಾಗಳಿಂದಾಗಿ ಕಾಡು ವಿಸ್ತರಿಸುತ್ತಿದೆ. ಇಲ್ಲಿರುವ 612 ಗೊರಿಲ್ಲಾಗಳು ಇಡೀ ಸಮುದಾಯ, ಪ್ರಾಂತ, ಪ್ರದೇಶ ಹಾಗೂ ದೇಶದ ಭವಿಷ್ಯವನ್ನು ನಿರ್ಧರಿಸುತ್ತಿರುವುದು ವಿಚಿತ್ರವಾದರೂ ಸತ್ಯ. ರವಾಂಡಾಕ್ಕೆ ಗೊರಿಲ್ಲಾ ನೋಡಲು ಬಂದವರು, ಮತ್ತೊಮ್ಮೆ ಬರದೇ ಹೋಗುವುದಿಲ್ಲ. ಗೊರಿಲ್ಲಾ ದರ್ಶನಕ್ಕೆ ಬಂದವರಿಗೆ ಒಂದು ಉತ್ತಮ ಅನುಭವ, ಅತ್ಯುತ್ತಮ ಆತಿಥ್ಯ ನೀಡುವುದು ನಮ್ಮ ಕರ್ತವ್ಯ. ನಮ್ಮ ದೇಶದಲ್ಲಿ ಗೊರಿಲ್ಲಾಗಳಿಲ್ಲದಿದ್ದರೆ ನಮ್ಮ-ನಿಮ್ಮ ಮುಖಾಮುಖಿ, ಭೇಟಿಯಾಗಿ ಸಂಬಂಧ ಕುದುರುತ್ತಿತ್ತಾ?' ಎಂದು ಟೂರಿಸ್ಟ್ ಗೈಡ್ ಬಿಗಿರಿಮಾನಾ ಹೇಳಿದಾಗ, ಅವನ ಮಾತುಗಳು ಹೃದಯಕ್ಕೆ ನಾಟಿದವು.
ಆತನ ಜತೆಗೆ ಐದಾರು ತಾಸು ಕಳೆದದ್ದೇ ಗೊತ್ತಾಗಲಿಲ್ಲ. ಕಾಡು - ನಾಡು - ಪ್ರಾಣಿ - ಮನುಷ್ಯರ ನಡುವೆ ಎಂಥ ಆಪ್ತ, ಸನಿಹ ಹಾಗೂ ಅನ್ಯೋನ್ಯ ಸಂಬಂಧವಿದೆಯೆಂಬುದನ್ನು ಆತ ಹೆಜ್ಜೆ ಹೆಜ್ಜೆಗೆ ಮನವರಿಕೆ ಮಾಡಿಕೊಡುತ್ತಿದ್ದ.
ನಾವು ಇವರಿಂದ ಕಲಿಯುವುದು ಸಾಕಷ್ಟಿದೆ!

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.