ಮುಕ್ತ ಮಾರುಕಟ್ಟೆ ತುಟ್ಟಿ ಮಾಡುವ ಅಕ್ಕಿ ಯೋಜನೆ

ಬೆಂಗಳೂರು: ಅಗ್ಗದ ದರದಲ್ಲಿ ಅಕ್ಕಿ ವಿತರಿಸುವ ಸರ್ಕಾರದ ಯೋಜನೆ ಗ್ರಾಹಕ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಲಿದ್ದು ಅಕ್ಕಿ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಬಿಪಿಎಲ್ ಕಾರ್ಡ್ದಾರರಿಗೆ ಕೆ.ಜಿ.ಗೆ 1ರಂತೆ 30 ಕೆಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಯೋಜನೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಆದರೆ ಆಗಸ್ಟ್ ಮೊದಲ ವಾರದಿಂದಲೇ ಅಕ್ಕಿ ಬೆಲೆ ಗಗನಕ್ಕೆ ಏರಲಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
ಛತ್ತೀಸ್ಗಡದಿಂದ ಅಕ್ಕಿ ಖರೀದಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆಯಾದರೂ ಅದಕ್ಕೆ ಅಗತ್ಯವಾದ ದಾಸ್ತಾನು ಸದ್ಯಕ್ಕೆ ರಾಜ್ಯದಲ್ಲಿ ಇಲ್ಲ. ಹೀಗಾಗಿ ಲೆವಿ ಸಂಗ್ರಹ ಮಾಡುವುದು ಅನಿವಾರ್ಯ. ಲೆವಿ ಸಂಗ್ರಹ ನೀತಿ ಈಗಾಗಲೇ ರಾಜ್ಯದಲ್ಲಿ ಇದೆಯಾದರೂ ವರ್ತಕರು ತಲೆಬಿಸಿ ಮಾಡಿಕೊಳ್ಳುವಷ್ಟು ಪ್ರಮಾಣದಲ್ಲಿ ಇಲ್ಲ.
ಆದರೆ ಬಡವರಿಗೆ ಕಡಿಮೆ ದರದಲ್ಲಿ ಅಕ್ಕಿ ಕೊಡಬೇಕಿದ್ದರೆ, ಭಾರಿ ಪ್ರಮಾಣದಲ್ಲಿ ಲೆವಿ ಸಂಗ್ರಹಿಸಿ ದಾಸ್ತಾನು ಮಾಡಲೇಬೇಕು. ಇದರಿಂದ ಸೃಷ್ಟಿಯಾಗುವ ಹೊರೆಯನ್ನು ವರ್ತಕರು ಮಾರುಕಟ್ಟೆ ಮೇಲೆಯೇ ಹೇರುವುದರಿಂದ ಮಧ್ಯಮ ವರ್ಗದವರು ಬೆಲೆ ಏರಿಕೆ ಕಷ್ಟವನ್ನು ಎದುರಿಸಲೇಬೇಕಾಗುತ್ತದೆ.
ಪ್ರಸ್ತುತ ರಾಜ್ಯದಲ್ಲಿ ಇರುವ ಲೆವಿ ನೀತಿ ಪ್ರಕಾರ, ವರ್ತಕರು ಶೇ.33.33 ರಷ್ಟು ಭತ್ತ ಹಾಗೂ ಅಕ್ಕಿಯನ್ನು ರಾಜ್ಯ ಸರ್ಕಾರಕ್ಕೆ ಲೆವಿ ರೂಪದಲ್ಲಿ ನೀಡಬೇಕು. ಆದರೆ ಪಡಿತರ ವ್ಯವಸ್ಥೆಗೆ ಭಾರಿ ಪ್ರಮಾಣದಲ್ಲಿ ಅಕ್ಕಿ ಅವಶ್ಯಕತೆ ಇಲ್ಲದೇ ಇದ್ದುದರಿಂದ ಲೆವಿ ಸಂಗ್ರಹಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒತ್ತು ನೀಡಿರಲಿಲ್ಲ.
ಆಹಾರ ಹಾಗೂ ನಾಗರಿಕ ಪೂರೈಕೆ ವೆಬ್ಸೈಟ್ ಪ್ರಕಾರ, ಈಗಿನ ಲೆವಿ ಸಂಗ್ರಹ ನೀತಿ ಬತ್ತ (ಕಚ್ಚಾ ) ಕ್ವಿಂಟಲ್ಗೆ ರು. 1605.40, ಎ ಗ್ರೇಡ್ ಬತ್ತ- ರು. 1650.90, ಅರೆಬೆಂದ ಬತ್ತ (ಪ್ಯಾರಾ ಬಾಯಿಲ್ಡ್ ಕಾಮನ್ )- ರು. 1597.40, ಅರೆಬೆಂದ ಬತ್ತ (ಪ್ಯಾರಾ ಬಾಯಿಲ್ಡ್) ಗ್ರೇಡ್ ಎ- ರು. 1642.20 ನಷ್ಟು ಇದೆ. ಇದರ ಆಧಾರದಲ್ಲಿ ಲೆವಿ ಕೊಡುವ ವರ್ತಕರೇ, ಅಕ್ಕಿ ದರ ದಿಕ್ಕು ತಪ್ಪುವಂತೆ ಮಾಡುತ್ತಾರೆ. ಹೀಗಿರುವಾಗ ಲೆವಿ ಪ್ರಮಾಣ ಜಾಸ್ತಿಗೊಳಿಸಿದರೆ ಅಕ್ಕಿ ದರ ಗಗನಕ್ಕೆ ಏರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕರದಾತರು ಕಂಗಾಲು : ಇದರ ನಡುವೆ ಅಗ್ಗದ ಅಕ್ಕಿ ಯೋಜನೆಯಿಂದ ಕರದಾತರೂ ಕಂಗಾಲಾಗಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಾಣಿಜ್ಯ ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಚಳಿ ಜ್ವರ ಹಿಡಿಸಿದೆ. ಅಕ್ಕಿ ಯೋಜನೆಗೆ ಹಣ ಎಲ್ಲಿಂದ ತರುತ್ತೀರಿ ಎಂಬ ಪ್ರಶ್ನೆಗೆ ' ನನ್ನ ಎಲ್ಲ ಕರದಾತರು ಈ ಮಹತ್ವಾಕಾಂಕ್ಷೆ ಯೋಜನೆಗೆ ಹಣ ನೀಡುತ್ತಾರೆ ' ಎನ್ನುವ ಮೂಲಕ ಬಜೆಟ್ನಲ್ಲಿ ತೆರಿಗೆ ಹೆಚ್ಚಳದ ಮುನ್ಸೂಚನೆ ನೀಡಿದ್ದಾರೆ.
ಉದ್ಯಮಿಯೊಬ್ಬರ ಪ್ರಕಾರ ಸಿದ್ದರಾಮಯ್ಯನವರು ಕೈಗಾರಿಕಾ ಹಾಗೂ ವಾಣಿಜ್ಯ ಕ್ಷೇತ್ರದ ವಿವಿಧ ಉತ್ಪನ್ನಗಳ ಮೇಲೆ ಈ ಬಾರಿ ಶೇ.50ರಿಂದ ಶೇ.70ರ ವರೆಗೆ ಕರ ಜಾಸ್ತಿ ಮಾಡಿದರೂ ಆಶ್ಚರ್ಯವಿಲ್ಲ. ಸರ್ಕಾರ ಈ ರೀತಿ ನಾವು ಎಲ್ಲಿ ಹೋಗಬೇಕು ? ಎಂಬ ಪ್ರಶ್ನೆ ಸಹಜ. ನಾವು ಮುಕ್ತ ಮಾರುಕಟ್ಟೆಯ ಮೇಲೆ ಈ ಭಾರ ಹಾಕುತ್ತೇವೆ. ಹೀಗಾಗಿ ಅಕ್ಕಿ ಯೋಜನೆಯ ಬಿಸಿಯನ್ನು ರಾಜ್ಯದ ಶೇ.50ರಷ್ಟು ಮಧ್ಯಮ ಹಾಗೂ ನಗರವಾಸಿ ದುಡಿಯುವ ವರ್ಗವೇ ಭರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಗತ್ಯವಸ್ತುಗಳೂ ತುಟ್ಟಿ : ಇಷ್ಟು ಮಾತ್ರವಲ್ಲ ಸಿದ್ದರಾಮಯ್ಯನವರು ತಮ್ಮ ಬಜೆಟ್ನಲ್ಲಿ ಅಗತ್ಯವಸ್ತುಗಳ ಮೇಲೂ ಕರ ವಿಧಿಸುವ ಸಾಧ್ಯತೆ ದಟ್ಟವಾಗಿದೆ. ಸದ್ಯಕ್ಕೆ ಅಗತ್ಯ ವಸ್ತುಗಳ ಮೇಲೆ ಸರ್ಕಾರ ಯಾವುದೇ ರೀತಿಯ ಕರ ವಿಧಿಸುತ್ತಿಲ್ಲ. ಆದರೆ ಬಡವರಿಗೆ ಕೊಡುವ ಅಕ್ಕಿಯಿಂದ ಮಧ್ಯಮ ವರ್ಗದವರು ಬಳಸುವ ಬೇಳೆ-ಕಾಳುಗಳ ಬೆಲೆ ಪ್ರತಿ ಕೆಜಿ ಮೇಲೆ ರು. 2ರಿಂದ 3 ಅಧಿಕವಾಗುವ ಸಾಧ್ಯತೆ ಇದೆ.
ಆಗಸ್ಟ್ನಲ್ಲಿ ತುಟ್ಟಿ ಖಚಿತ
ಕನ್ನಡಪ್ರಭದ ಜತೆ ಮಾತನಾಡಿದ ಎಫ್ಕೆಸಿಸಿಐ ವಾಣಿಜ್ಯ ವಿಭಾಗದ ಅಧ್ಯಕ್ಷರಾದ ರಮೇಶ್ಚಂದ್ರ ಲಹೋಟಿ, ಅಕ್ಕಿ ಯೋಜನೆಯಿಂದ ಖಂಡಿತವಾಗಿಯೂ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಾಗುತ್ತದೆ. ಇದರ ಪರಿಣಾಮ ಮಾರುಕಟ್ಟೆ ಮೇಲೆ ಬೀಳಲಿದೆ ಎಂದರು. ಇನ್ನು ಯೋಜನೆ ಆರಂಭವಾಗಿಲ್ಲ, ಹೀಗಾಗಿ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಲೆವಿ ಸಂಗ್ರಹ ಹೆಚ್ಚುವುದರಿಂದ ಅಕ್ಕಿ ಬೆಲೆ ಗಗನಕ್ಕೆ ಏರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾತ್ರವಲ್ಲ ಇದರಿಂದ ಸರ್ಕಾರ ವಾಣಿಜ್ಯ ರಂಗದ ಮೇಲೆ ಅಧಿಕ ತೆರಿಗೆ ವಿಧಿಸಲಿದೆ. ಇದರ ಹೊರೆ ಮಧ್ಯಮ ವರ್ಗದವರ ಮೇಲೆ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
- ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


