ಪ್ರಧಾನ ಸುದ್ದಿ

ಗೊರಿಲ್ಲಾ ನಾಡಲ್ಲಿ ನಂಟು ಬೆಸೆದ ನಮ್ಮ ಉಲ್ಲಾಸ

Published On :

ಕಿಗಾಲಿ, ರವಾಂಡಾ: ಉಲ್ಲಾಸ್, ನಾನು ವಿಶ್ವೇಶ್ವರ ಭಟ್ ಮಾತಾಡ್ತಾ ಇದೀನಿ ಎಂದೆ. ಅತ್ತ ಕಡೆಯಿಂದ ಖ್ಯಾತ ವನ್ಯಜೀವಿ ಪರಿಣತ ವ್ಯಾಘ್ರ ತಜ್ಞ ಹಾಗೂ ಆತ್ಮೀಯ ಸ್ನೇಹಿತ ಡಾ. ಉಲ್ಲಾಸ್ ಕಾರಂತ ಮಾತಾಡ ತೊಡಗಿದರು.
'ನಿಮ್ಮ ರವಾಂಡಾ ಡೈರಿಯನ್ನು ಓದುತ್ತಿದ್ದೇನೆ. ನೀವು ಆ ದೇಶಕ್ಕೆ ಹೋಗಿರೋದು, ಅದರಲ್ಲೂ ವಿಶೇಷವಾಗಿ ಗೊರಿಲ್ಲಾಗಳನ್ನು ನೋಡಲು ಹೋಗಿರೋದು, ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿರೋದು... ಬಹಳ ಸಂತಸದ ವಿಷಯ. ದೈನಂದಿನ ವಿದ್ಯಮಾನ, ರಾಜಕಾರಣಗಳನ್ನೆಲ್ಲ ಬಿಟ್ಟು ಗೊರಿಲ್ಲಾಗಳ ಬಗ್ಗೆ ಬರೆದಿರೋದು ನನಗೆ ವಿಶೇಷ ಅಂತ ಅನಿಸಿತು. ನನ್ನ ಮೂರ್ನಾಲ್ಕು ಸ್ನೇಹಿತರು ಸಹ ರವಾಂಡಾದ ಕಾಡಿನಲ್ಲಿರುವ ಗೊರಿಲ್ಲಾಗಳ ಬಗ್ಗೆ ಕಳೆದ ಇಪ್ಪತ್ತು-ಇಪ್ಪತ್ತೈದು ವರ್ಷಗಳಿಂದ ಮಹತ್ವದ ಅಧ್ಯಯನದಲ್ಲಿ ತೊಡಗಿದ್ದಾರೆ. ನನ್ನ ಸ್ನೇಹಿತರು ಅಲೆದಾಡಿದ ಪ್ರದೇಶಗಳಲ್ಲೆಲ್ಲ ನೀವೂ ಹೋಗಿದ್ದರಿಂದ ನಿಮ್ಮ ಬರಹ ಮತ್ತಷ್ಟು ಕುತೂಹಲ ಕೆರಳಿಸಿತು. ಆ ದೃಷ್ಟಿಯಿಂದ ಆಪ್ತವೆನಿಸಿತು' ಎಂದು ಡಾ. ಉಲ್ಲಾಸ್ ಕಾರಂತ ಹೇಳುತ್ತಿದ್ದರು.
ಅಷ್ಟಕ್ಕೇ ಸುಮ್ಮನಾಗದ ಅವರು ಮುಂದುವರಿಸಿದರು. 'ನನ್ನ ಸ್ನೇಹಿತರಾದ ಬಿಲ್ ವೆಬರ್ ಹಾಗೂ ಅವರ ಪತ್ನಿ ಎಮಿ ವೆಡ್ಡರ್ ಗೊರಿಲ್ಲಾಗಳ ಬಗ್ಗೆ ಜೀವಮಾನದ ಅಧ್ಯಯನ ಕೈಗೊಂಡಿದ್ದಾರೆ. ಅವರು ಕೇವಲ ಅಧ್ಯಯನಕ್ಕಷ್ಟೇ ತಮ್ಮ ಪ್ರಯತ್ನವನ್ನು ಮೀಸಲಿಡದೇ ರವಾಂಡಾದ ಪ್ರಖ್ಯಾತ ಮೌಂಟನ್ ಗೊರಿಲ್ಲಾಗಳ ಸಂರಕ್ಷಣೆ ಕಾರ್ಯದಲ್ಲೂ ತೊಡಗಿದ್ದಾರೆ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಿದವರು. ಅವರೆಲ್ಲ ನನಗೆ ಆತ್ಮೀಯರು. ಹೀಗಾಗಿ ನೀವು ರವಾಂಡಾದ ಗೊರಿಲ್ಲಾಗಳ ಬಗ್ಗೆ ಬರೆದಾಗ ನಾನು ್ಠಜಟಛಡಿಜ ಮಾಡಿಕೊಂಡೆ' ಎಂದು ಡಾ. ಉಲ್ಲಾಸ್ ಕಾರಂತ್ ವಿವರಿಸಿದರು.
ನಾನು ಅಷ್ಟು ಹೊತ್ತು ಮಧ್ಯೆ ಬಾಯಿ ಹಾಕದೇ ಎಲ್ಲವನ್ನೂ ಕೇಳುತ್ತಾ, ನನ್ನ ಕುತೂಹಲವನ್ನು ಅದುಮಿ ಹಿಡಿದುಕೊಂಡು ಸುಮ್ಮನೆ ಅವರ ಮಾತಿಗೆ ಕಿವಿಯಾಗಿದ್ದೆ.
ಉಲ್ಲಾಸ್, ನಾನು ನಿಮಗೆ ಹೇಳಬೇಕೆಂದಿದ್ದು ಅವರ ಬಗ್ಗೆ ಗೊತ್ತಾ? ನಾನು ನಿಮ್ಮ ಆತ್ಮೀಯ ಸ್ನೇಹಿತರಾದ ಬಿಲ್‌ವೆಬರ್ ಹಾಗೂ ಎಮಿವೆಡ್ಡರ್ ಅವರನ್ನು ಆಫ್ರಿಕಾದ ಕಾಡಿನಲ್ಲಿ ಭೇಟಿಯಾಗಿದ್ದೆ. ನಿಮ್ಮ ಬಗ್ಗೆ ತುಂಬಾ ಹೊತ್ತು ಮಾತಾಡಿದೆವು. ಬಹಳ ಸಂತಸವಾಯಿತು ಎಂದೆ. ಉಲ್ಲಾಸ್‌ಗೆ ಮಾತೇ ಹೊರಡಲಿಲ್ಲ. ನಾವಿಬ್ಬರೂ ಒಂದು ಕ್ಷಣ ಮೌನವಾಗಿ ಬಿಟ್ಟೆವು.
ಅಂದು ಬೆಳಗಿನ ಜಾವ ಗೊರಿಲ್ಲಾ ದರ್ಶನ ಚಾರಣಕ್ಕೆಂದು ನಾವು ಸುಮಾರು ಮೂವತ್ತು ಮಂದಿ ರವಾಂಡಾ-ಕಾಂಗೋ ಗಡಿ ಪ್ರದೇಶದಲ್ಲಿರುವ ವಿರುಂಗ ಪರ್ವತದ ತಪ್ಪಲಿನಲ್ಲಿರುವ ಬೇಸ್ ಕ್ಯಾಂಪ್‌ನಲ್ಲಿ ಸೇರಿದ್ದೆವು. ಆರು-ಏಳು ಜನರಿರುವ ಐದು ಪ್ರತ್ಯೇಕ ತಂಡಗಳನ್ನು ಮಾಡಿ ಬೇರೆ ಬೇರೆ ದಿಕ್ಕಿನಲ್ಲಿ ನಾವು ಚಾರಣಕ್ಕೆ ಹೊರಡುವವರಿದ್ದೆವು. ನಮ್ಮ ತಂಡದಲ್ಲಿ ಇಬ್ಬರು ಗೈಡ್‌ಗಳು, ನಾಲ್ವರು ಸಹಾಯಕರು, ಇಬ್ಬರು ಶಸ್ತ್ರಧಾರಿ ರಕ್ಷಕರ ಹೊರತಾಗಿ ಆರು ಮಂದಿ ಇದ್ದೆವು. ಚಾರಣಕ್ಕೆ ಹೊರಡುವ ಮುನ್ನ ಕಾಡಿನಲ್ಲಿ ಅನುಸರಿಸಬೇಕಾದ ನಿಯಮ, ಕ್ರಮ, ನಡೆ-ನುಡಿಗಳ ಬಗ್ಗೆ ಗೈಡ್ ನಮಗೆ ವಿವರಿಸುತ್ತಿದ್ದ. ಆರಂಭಿಕ ಬ್ರೀಫಿಂಗ್ ಆದ ಬಳಿಕ ಪರಸ್ಪರ ಪರಿಚಯ, ಹಸ್ತಲಾಘವವೆಲ್ಲ ಮುಗಿಯಿತು.
ನಮ್ಮ ತಂಡ ಬೇಸ್ ಕ್ಯಾಂಪ್‌ನಿಂದ ಕಾಡಿನ ಕಡೆಗೆ ಹೊರ ಟಿತು. ನಮ್ಮ ತಂಡದಲ್ಲಿ ಕರ್ನಾಟಕದಲ್ಲಿ ರವಾಂಡಾದ ಗೌರವ ಪ್ರತಿನಿಧಿ ಮೋಹನ್ ಸುರೇಶ್ ಸಹ ಇದ್ದರು. ನಾವಿಬ್ಬರೂ ಕನ್ನಡದಲ್ಲಿ ಎಲ್ಲರ ಬಗ್ಗೆ ತಮಾಷೆ ಮಾಡುತ್ತಾ, ಕುಶಾಲು ಮಾಡುತ್ತಾ ಅರಣ್ಯದೊಳಗೆ ಹೆಜ್ಜೆ ಹಾಕುತ್ತಿದ್ದೆವು.  

ನಮ್ಮ ಗುಂಪಿನಲ್ಲಿದ್ದ ಆ ಇಬ್ಬರು ದಂಪತಿಗಳು ಮಾತ್ರ ಬಹಳ ಗಂಭೀರವಾಗಿದ್ದರು. ತಮ್ಮ ತಮ್ಮೊಳಗೆ ಚರ್ಚಿಸುತ್ತಿದ್ದರು. ಅರ್ಧರ್ಧ ಕಿಮೀ ನಡೆದು ದಣಿವಾರಿಸಿಕೊಳ್ಳಲು ನಿಂತಾಗ ತಾವು ಕಂಡಿದ್ದೆಲ್ಲವನ್ನೂ ನೋಟ್ಸ್ ಮಾಡಿಕೊಳ್ಳುತ್ತಿದ್ದರು. ಅವರ ಗಂಭೀರ ಅಧ್ಯಯನಕ್ಕೆ ತೊಡಕಾಗಬಹುದೆಂದು ನಾನು ಅವರೊಂದಿಗೆ ಮಾತಾಡಲು ಹೋಗದೇ ಅಂತರ ಕಾಪಾಡಿಕೊಂಡಿದ್ದೆ.
   ಸುಮಾರು ಮೂರು ಗಂಟೆಗಳ ಕಾಲ ಆ ದುರ್ಗಮ ಕಾಡಿನಲ್ಲಿ ನಡೆದ ಬಳಿಕ ಗೊರಿಲ್ಲಾ ನೋಡುವ ತವಕ ಜಾಸ್ತಿಯಾಗುತ್ತಲೇ ಇತ್ತು. ಅದು ಯಾವ ಕ್ಷಣದಲ್ಲಾದರೂ ಪ್ರತ್ಯಕ್ಷವಾಗುವ ಸಾಧ್ಯತೆಯಿತ್ತು. ಈ ದಂಪತಿಗಳು ಹೆಗಲಿಗೆ ನಾಲ್ಕೈದು ಕೆಮರಾ, ವಿಡಿಯೋ ಕೆಮರಾಗಳನ್ನು ಇಳಿಬಿಟ್ಟುಕೊಂಡು ಯುದ್ಧಕ್ಕೆ ಸಜ್ಜಾದವರಂತೆ ಅಣಿಯಾಗಿದ್ದರು. ಕೈಯಲ್ಲಿನ ನೋಟ್‌ಬುಕ್‌ಗಳ ಹಾಳೆಗಳು ಒಂದರಿಂದ ಮತ್ತೊಂದಕ್ಕೆ ಜೀಕುತ್ತಿದ್ದವು.
ಗೊರಿಲ್ಲಾ ಪ್ರತ್ಯಕ್ಷವಾಯಿತು! ಎಲ್ಲರೂ ಮೈಯೆಲ್ಲಾ ಕಣ್ಣಾಗಿ ದಿಟ್ಟಿಸುತ್ತಿದ್ದರೆ, ಈ ದಂಪತಿಗಳು ಮಾತ್ರ ಆ ಕಾಡಿನಲ್ಲಿ ನಿಂತುಕೊಂಡು, ಬಗ್ಗಿಕೊಂಡು, ಮಲಗಿಕೊಂಡು, ತೆವಳಿಕೊಂಡು, ಉರುಳಿಕೊಂಡು ಮುಳ್ಳು ಕಲ್ಲುಗಳನ್ನು ಲೆಕ್ಕಿಸದೇ ಫೋಟೋ ಕ್ಲಿಕ್ಕಿಸುತ್ತಿದ್ದರು. ಗೊರಿಲ್ಲಾಗಳ ಜತೆ ಮಾತಾಡುವ (Gorilla Whisperer)ಅವುಗಳ ವರ್ತನೆ, ಹಾವಭಾವ ಅರ್ಥಮಾಡಿಕೊಳ್ಳುವ ನಮ್ಮ ಗೈಡ್ ಜತೆ ಒಳದನಿಯಲ್ಲಿ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ಮೊದಲ ಬಾರಿಗೆ ಗೊರಿಲ್ಲಾ ನೋಡಿದಾಗ ಆಗುವ ಕುತೂಹಲ, ವಿಸ್ಮಯ, ಅಚ್ಚರಿ, ಉದ್ವೇಗ, ತಹತಹ, ಕಾತರ, ನಿರೀಕ್ಷೆ ಆ ಗಂಡ-ಹೆಂಡತಿಯರಲ್ಲೂ ಇತ್ತು. ಆದರೆ ಅವರಿಬ್ಬರಲ್ಲಿ ಅದು ನಮ್ಮೆಲ್ಲರಿಗಿಂತ ತುಸು ಜಾಸ್ತಿ ಎಂಬಷ್ಟು ಹೆಚ್ಚಾಗಿತ್ತು.
ಸುಮಾರು ಎರಡು ತಾಸು ನಾವು ಗೊರಿಲ್ಲಾಗಳನ್ನು ಹಿಂಬಾಲಿಸಿ ಕಾಡಿನಲ್ಲಿ ಹೋದೆವು. ನಾನು ಹೈರಾಣಾಗಿ ಹೋಗಿದ್ದೆ. ನನ್ನ ಗಮ್‌ಬೂಟು ಒಳಗಿನಿಂದ ಕಚ್ಚಲು, ಚುಚ್ಚಲು ಶುರು ಮಾಡಿತ್ತು. ಆದರೆ ಈ ದಂಪತಿಗಳು ಮಾತ್ರ ಅವರನ್ನು ಹಿಂಬಾಲಿಸುವುದನ್ನು ಬಿಡುತ್ತಿರಲಿಲ್ಲ. ಇದೊಂದು ಜೀವಮಾನದ ಅನುಭವ ಎಂದು ನಾನು ಸಮಾಧಾನ ಮಾಡಿಕೊಂಡೇ ಕಾಡಿನಲ್ಲಿ ಎಷ್ಟು ದೂರ ಬೇಕಾದರೂ ಹೋಗಬಹುದು. ಆದರೆ ಅದೇ ಹಾದಿಯಲ್ಲಿ ವಾಪಸ್ ಬರಬೇಕಲ್ಲ?
'ನೀವು ಗೊರಿಲ್ಲಾಗಳನ್ನು ನೋಡೋದು ಮುಖ್ಯ ಅಲ್ಲ. ಅವುಗಳ ಜತೆ ಇರೋದು ಮುಖ್ಯ. ಎರಡು ಗಂಟೆ ಇದ್ದರೆ ನಿಮಗಾದ ಆಯಾಸವೆಲ್ಲ ಮಾಯವಾಗಿ ಬಿಡುತ್ತದೆ' ಎಂದು ಆ ದಂಪತಿಗಳು ನನಗೆ ಒಳದನಿಯಲ್ಲಿ ಹೇಳಿದರು. ಮುಂದೆ ಗೊರಿಲ್ಲಾ ಸೊಪ್ಪು, ಸದೆ ತಿನ್ನುತ್ತಾ ಉರುಳಾಡಿಕೊಂಡು ತನ್ನ ಮರಿಗಳೊಂದಿಗೆ ಆಡುತ್ತಿತ್ತು.
ಆ ದಟ್ಟ ಕಾನನದಲ್ಲಿ ನಾವು ಗೊರಿಲ್ಲಾಗಳ ಕುಟುಂಬದೊಂದಿಗೆ ಎರಡು-ಎರಡೂವರೆ ಗಂಟೆ ಕಳೆದಿದ್ದು ಗೊತ್ತೇ ಆಗಲಿಲ್ಲ. ನಾವೆಲ್ಲ ಹೊರಡಲು ಅಣಿಯಾದೆವು. ಆದರೆ ಈ ದಂಪತಿಗಳು ಮಾತ್ರ ಫೋಟೋ ತೆಗೆಯುವುದು, ವಿಡಿಯೋ ಚಿತ್ರಿಸಿಕೊಳ್ಳುವುದು ಹಾಗೂ ನೋಟ್ಸ್ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ನನಗೆ ಅವರ ತಾದಾತ್ಮ್ಯತನ, ಆಸಕ್ತಿ, ಶ್ರದ್ಧೆ, ಕಳಕಳಿ ವಿಶೇಷವಾಗಿ ಕಂಡಿತು. ಒಂದು ರೀತಿಯಲ್ಲಿ ಅವರ ಆಸಕ್ತಿ ನಮ್ಮಲ್ಲಿಯೂ ಪ್ರೇರಣೆಯನ್ನು ತುಂಬಿತು.
ಗೊರಿಲ್ಲಾಗಳಿಂದ ಬೀಳ್ಕೊಡುವ ಸಮಯ ಬಂತು. ಒಲ್ಲದ ಮನಸ್ಸಿನಿಂದ ಈ ದಂಪತಿಗಳು ಅವುಗಳಿಗೆ ವಿದಾಯ ಹೇಳಿ ಕಾಡಿನಿಂದ ಹೆಜ್ಜೆ ಹಾಕಲಾರಂಭಿಸಿದರು.
ವಾಪಸ್ ಬರುವಾಗ ಆ ದಂಪತಿಗಳು ನನ್ನ ಹತ್ತಿರ ಬಂದು, 'ನೀವು ಬೆಂಗಳೂರಿನವರು ಅಂತ ಆರಂಭದಲ್ಲಿ ಹೇಳಿದಿರಿ. ನಿಮ್ಮಲ್ಲೊಂದು ಪ್ರಶ್ನೆ ಕೇಳಬಹುದಾ?' ಎಂದಾಗ, 'ಅಯ್ಯೋ ಅದಕ್ಕೇನಂತೆ? ದಯವಿಟ್ಟು ಕೇಳಿ' ಎಂದೆ.
'ನಿಮಗೆ ಉಲ್ಲಾಸ್ ಕಾರಂತ ಗೊತ್ತಾ?' ಎಂದು ಕೇಳಿದರು.
'ಉಲ್ಲಾಸ್ ನನ್ನ ಆತ್ಮೀಯರು. ನಾನು ಬಹುವಾಗಿ ಇಷ್ಟಪಡುವ, ಗೌರವಿಸುವ ಆಪ್ತ ಸ್ನೇಹಿತರಲ್ಲಿ ಅವರೂ ಒಬ್ಬರು. ಅದ್ಸರಿ, ಅವರಿಗೂ -ನಿಮಗೂ ಹೇಗೆ ಪರಿಚಯ?' ಎಂದು ಕೇಳಿದೆ.
'ನಾನು ಬಹುವಾಗಿ ಇಷ್ಟಪಡುವ, ಗೌರವಿಸುವ ಆಪ್ತ ಸ್ನೇಹಿತರಲ್ಲಿ ಉಲ್ಲಾಸ್ ಕೂಡಾ ಒಬ್ಬರು. ನೀವು ಅವರ ಕ್ಲೋಸ್ ಫ್ರೆಂಡ್ ಅಂದ ಮೇಲೆ ನನ್ನ ಕ್ಲೋಸ್‌ಫ್ರೆಂಡ್ ಸಹ' ಎಂದು ನನ್ನನ್ನು ತಬ್ಬಿಕೊಂಡು, ಹೆಂಡತಿಯನ್ನು ಕರೆದು 'ಇವರು ಉಲ್ಲಾಸ್ ಕಾರಂತ ಫ್ರೆಂಡಂತೆ, ಬಾ...ಬಾ...' ಎಂದು ಕರೆದರು. ಅಲ್ಲಿ ತನಕ ಅವರಿಬ್ಬರ ಪರಿಚಯವಾದರೂ ಹೆಸರು ಮನಸ್ಸಿನಲ್ಲಿ ದಾಖಲಾಗಿರಲಿಲ್ಲ.
'ನನ್ನ ಹೆಸರು ಬಿಲ್‌ವೆಬರ್, ಈಕೆ ನನ್ನ ಪತ್ನಿ ಎಮಿ ವೆಡ್ಡರ್‌' ಎಂದರು.
ಉಲ್ಲಾಸ್ ಹಾಗೂ ತಮ್ಮ ಪರಿಚಯ, ಉಲ್ಲಾಸ್ ಬಗ್ಗೆ ತಮಗಿರುವ ಗೌರವ, ಒಡನಾಟಗಳನ್ನೆಲ್ಲ ಹೇಳಿದರು. ಆದರೆ ತಮ್ಮ ಬಗ್ಗೆ ಹೆಚ್ಚು ಹೇಳಿಕೊಳ್ಳಲಿಲ್ಲ. ಕಾಡಿನಲ್ಲಿ ನಾವು ರಿವರ್ಸ್‌ಗಿಯರ್‌ನಲ್ಲಿ ನಡೆಯಲಾರಂಭಿಸಿದೆವು. ದಣಿವು ತುಂಬಿದ ದೇಹ ಬೇಸ್‌ಕ್ಯಾಂಪ್ ಯಾವಾಗ ಬರುವುದೋ ಎಂದು ಹವಣಿಸುತ್ತಿತ್ತು. ಎಲ್ಲರೂ ಕಾಲೆಳೆದುಕೊಂಡು ಹೇಗೋ ಹಾಗೋ ಹೊರಟ ಜಾಗಕ್ಕೆ ಬಂದು ತಲುಪಿದೆವು. ಬೇಸ್ ಕ್ಯಾಂಪ್‌ನಲ್ಲಿ ನಿಲ್ಲಿಸಿದ್ದ ಕಾರಿನಿಂದ ಬಿಲ್‌ವೆಬರ್ ಒಂದು ಪುಸ್ತಕವನ್ನು ತಂದು ನನ್ನ ಕೈಗಿತ್ತರು- In the kingdom of Gorillas: Fragile species in a Dangerous Land.ಎಂಬುದು ಶೀರ್ಷಿಕೆ.
      ಇಪ್ಪತ್ತು ವರ್ಷಗಳ ಕಾಲ ರವಾಂಡಾದ ಕಾಡಿನಲ್ಲಿ ತಿರುಗಿ, ಅಧ್ಯಯನ ಮಾಡಿ ಬರೆದ ಕೃತಿ! ಆತನ ಪಾದವನ್ನೊಮ್ಮೆ ಕಣ್ಣಿಗೆ ಒತ್ತಿಕೊಳ್ಳಬೇಕು ಎನಿಸಿತು.
ಅಲ್ಲಿ ತನಕ ಆವಯ್ಯ ತಾನು ಗೊರಿಲ್ಲಾ ಪರಿಣಿತ ಎಂದಾಗಲಿ, ಅವುಗಳ ಬಗ್ಗೆ ಪುಸ್ತಕ ಬರೆದಿದ್ದೇನೆ ಎಂದಾಗಲಿ, ಅವುಗಳ ಬಗ್ಗೆ ಅಷ್ಟು ಗೊತ್ತು, ಇಷ್ಟು ಗೊತ್ತು ಎಂದಾಗಲಿ ಹೇಳಿಕೊಳ್ಳಲಿಲ್ಲವಲ್ಲ!? ಮೊದಲ ಬಾರಿಗೆ ಗೊರಿಲ್ಲಾಗಳನ್ನು ನೋಡುವಾಗಿನ ಕುತೂಹಲವನ್ನೇ ಇನ್ನೂ ಇಟ್ಟುಕೊಂಡಿದ್ದಾನಲ್ಲಾ!?
ಬಿಲ್ ನಿನಗೊಂದು ಶರಣು ಎಂದೆ.
ಉಲ್ಲಾಸ್‌ಗೆ ನಾನು ಕೇಳಿದ್ದೇನೆಂದು ಹೇಳಿ ಎಂದರು ಬಿಲ್ ಹಾಗೂ ಎಮಿ. ಮುಂದೆ ಇವರಿಬ್ಬರ ಗೊರಿಲ್ಲಾ ಎಂಬ ತಪಸ್ಸಿನ ಅಧ್ಯಯನದ ಬಗ್ಗೆ ಬರೆಯುತ್ತೇನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.