ಬಾಗಲಕೋಟೆ- ಕುಡಚಿ ರೈಲು ಮಾರ್ಗ ಮುಗಿಯೋದು ಯಾವಾಗ?
ಕ.ಪ್ರ. ವಾರ್ತೆ , ಬೆಂಗಳೂರು , ಜೂ.30
ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟೆಗಳಲ್ಲಿ ರೈಲು ಜಾಲ ವ್ಯವಸ್ಥಿತವಾಗಿಯೇ ಇದೆ. ಆದರೆ, ಜನರ ಅನುಕೂಲಕ್ಕಾಗಿ ಇನ್ನಷ್ಟು ಹೊಸ ಮಾರ್ಗಗಳನ್ನು ಹಾಕಬೇಕಿದ್ದು, ಕೆಲವೊಂದಿಷ್ಟು ಹೊಸ ರೈಲುಗಳನ್ನು ಓಡಿಸಬೇಕೆಂಬುದು ಇಲ್ಲಿಯ ಜನರ ಬಹು ದಿನಗಳ ಬೇಡಿಕೆ. ಆದರೆ, ಇಂಥ ಬೇಡಿಕೆಗಳಿಗೆ ಇದುವರೆಗೆ ಮನ್ನಣೆ ಸಿಕ್ಕಿಲ್ಲ ಎಂಬುದು ಬೇರೆ ಮಾತು.
ಈಗ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾಗಿರುವುದರಿಂದ ಈ ಮೂರು ಜಿಲ್ಲೆಗಳ ರೈಲು ಯೋಜನೆಗಳಿಗೆ ವೇಗ ದಕ್ಕಬಹುದು ಎಂಬ ಭರವಸೆ ಇಲ್ಲಿನ ಜನರದ್ದು. ವಿಶೇಷವಾಗಿ ಬಾಗಲಕೋಟೆ- ಕುಡಚಿ ರೈಲು ಮಾರ್ಗ ನಿರ್ಮಾಣ ತೀವ್ರಗತಿಯಲ್ಲಿ ಸಾಗುತ್ತಿಲ್ಲ. ಸುಮಾರು ನೂರು ವರ್ಷಗಳಷ್ಟು ಹಳೆಯದಾದ ಆಲಮಟ್ಟಿ- ಯಾದಗಿರಿ ಮಾರ್ಗ ರೈಲು ಯೋಜನೆ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ರೇಲ್ವೆ ಬಜೆಟ್ನಲ್ಲಿ ಈ ಯೋಜನೆ ಪ್ರಸ್ತಾಪಗೊಂಡಿದೆ. ನಾಲ್ಕು ಬಾರಿ ಸರ್ವೆ ಕೂಡಾ ಮುಗಿದಿದೆ. ಆದರೆ, ಇನ್ನೂ ಯೋಜನೆ ಅನುಷ್ಠಾನಗೊಂಡಿಲ್ಲ. ಬಿಜಾಪುರದಿಂದ ದೆಹಲಿ, ವಾರಣಾಸಿ, ಚೆನ್ನೈ, ಗೋವಾ ಮಾರ್ಗಗಳಲ್ಲಿ ಹೊಸ ರೈಲು ಓಡಿಸಬೇಕೆಂಬ ಇಲ್ಲಿನವರ ಕೂಗಿಗೆ ಇನ್ನೂ ಕಿಮ್ಮತ್ತು ಸಿಕ್ಕಿಲ್ಲ.
ಈ ಮೂರು ಜಿಲ್ಲೆಗಳಿಗೆ ಲಾಭ ತರುವ ಕೆಲವು ರೈಲು ಮಾರ್ಗಗಳ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿದಂತೆ ಅನೇಕ ತೊಡಕುಗಳಿವೆ. ಆದರೆ, ಇಲ್ಲಿನ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರಗಳು ಅವುಗಳನ್ನು ನಿವಾರಿಸುವುದಕ್ಕೆ ಹೆಚ್ಚಿನ ಶ್ರಮ ಹಾಕುತ್ತಿಲ್ಲ. ಹಾಗಾಗಿ, ಬಹುತೇಕ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಹೊಸ ಬೇಡಿಕೆಗಳಿಗಂತೂ ಬೆಲೆ ದೊರೆಯುತ್ತಿಲ್ಲ. ರಾಜಕಾರಣಿಗಳು ಮತ್ತು ಸರ್ಕಾರಗಳ ಇಚ್ಛಾಶಕ್ತಿ ಇದ್ದರೆ ಇಲ್ಲಿರುವ ಯೋಜನೆಗಳು ಮುಗಿಯುವುದು ಬಹಳ ಕಷ್ಟವೇನಲ್ಲ.
ಯಾವ ಯೋಜನೆಗಳು ಆಗಬೇಕು? ಈಗಿರುವ ಯೋಜನೆಗಳು ಹೇಗಿವೆ?
1. ಆಲಮಟ್ಟಿ-ಯಾದಗಿರಿ, ಶಹಬಾದ್-ಬಿಜಾಪುರ, ಬಿಜಾಪುರ-ಶೇಡಬಾಳ, ಆಲಮಟ್ಟಿ-ಕೊಪ್ಪಳ ರೈಲು ಮಾರ್ಗಗಳು ಆಗಬೇಕಿದೆ.
2. ನೂರು ವರ್ಷದ ಹಳೆಯದಾದ ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಯೋಜನೆ ಅನುಷ್ಠಾನಗೊಳ್ಳಬೇಕಿದೆ.
3. ಬಿಜಾಪುರದಿಂದ ದೆಹಲಿ, ವಾರಣಾಸಿ, ಚೆನ್ನೈ, ಗೋವಾ ಮಾರ್ಗವಾಗಿ ನೂತನ ರೈಲು ಓಡಿಸಬೇಕು ಎಂಬುದು ಇಲ್ಲಿನವರ ಬೇಡಿಕೆ.
4. ಶಹಬಾದ್-ಬಿಜಾಪುರ, ಬಿಜಾಪುರ-ಶೇಡಬಾಳ ಯೋಜನೆಗಳಿಗೆ 2009-10ರ ರೇಲ್ವೆ ಬಜೆಟ್ನಲ್ಲಿ ಪ್ರಸ್ತಾಪವಾಗಿ 3 ಬಾರಿ ಸರ್ವೆ ನಡೆದಿದೆ. ಆದರೆ, ಇದುವರೆಗೂ ಒಂದಿಂಚು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ.
5. ಬೆಳಗಾವಿ-ಕಿತ್ತೂರು-ಧಾರವಾಡ, ಬಾಗಲಕೋಟೆ-ಬೆಳಗಾವಿ (ರಾಮದುರ್ಗ, ಸವದತ್ತಿ ಮಾರ್ಗವಾಗಿ) ಹೊಸ ರೈಲು ಮಾರ್ಗ ನಿರ್ಮಾಣವಾಗಬೇಕಿದೆ.
6. ಮುಂಬೈ- ಬಿಜಾಪುರ ರೈಲನ್ನು ಬಾಗಲಕೋಟೆವರೆಗೂ ಮತ್ತು ಬೆಂಗಳೂರು-ಧಾರವಾಡ ಇಂಟರ್ಸಿಟಿ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ.
7. 110 ಕೋಟಿ ವೆಚ್ಚದಲ್ಲಿ 141 ಕಿ.ಮೀ. ಉದ್ದದ ಬಾಗಲಕೋಟೆ- ಕುಡಚಿ ನೂತನ ರೈಲು ಮಾರ್ಗ ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರ ತನ್ನ ಪಾಲಿನ 408 ಕೋಟಿ ನೀಡಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಮಾರ್ಗ ನಿರ್ಮಾಣ ಕುಂಟುತ್ತಾ ಸಾಗಿದೆ. ಇದೇ ರೈಲು ಮಾರ್ಗವನ್ನು ರಾಯಚೂರುವರೆಗೂ ವಿಸ್ತರಿಸಬೇಕೆಂಬ ಬೇಡಿಕೆ ಇದೆ. ಆದರೆ, ಕಳೆದ ಹತ್ತು ವರ್ಷಗಳಿಂದ ಈ ಬೇಡಿಕೆಗೆ ರಾಜ್ಯ ಸರ್ಕಾರದಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಲಿ ಸ್ಪಂದನೆ ದೊರೆತಿಲ್ಲ.
8. ಗದಗ-ಬಾಗಲಕೋಟೆ-ಬಿಜಾಪುರ ಮಧ್ಯದ ಬ್ರಾಡ್ಗೇಜ್ ಹಳಿಯನ್ನು ಮತ್ತಷ್ಟು ಸಬಲಗೊಳಿಸಬೇಕು. ಗದಗದಿಂದ ಬಾಗಲಕೋಟೆ ಮಾರ್ಗವಾಗಿ ದೆಹಲಿ, ಮುಂಬೈಗೆ ನೇರಸಂಪರ್ಕ ಕಲ್ಪಿಸುವ ಹೊರ ರೈಲು ಓಡಿಸಬೇಕು.
9. ಬಿಜಾಪುರದಿಂದ ಬಾಗಲಕೋಟೆ-ಗದಗ-ಬಳ್ಳಾರಿ ಸಂಪರ್ಕಿಸುವ ಪ್ಯಾಸೆಂಜರ್ ರೈಲು ಓಡಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ.
10. ಬೆಳಗಾವಿಯಿಂದ ಸಂಕೇಶ್ವರ, ನಿಪ್ಪಾಣಿ ಮಾರ್ಗವಾಗಿ ಕೊಲ್ಲಾಪುರ ಹಾಗೂ ಕೊಲ್ಲಾಪುರದಿಂದ ನಿಪ್ಪಾಣಿ, ಸವದತ್ತಿ ಮಾರ್ಗವಾಗಿ ಧಾರವಾಡವರೆಗೆ ರೈಲು ಮಾರ್ಗ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇದೆ. ಆದರೆ, ಇದುವರೆಗೂ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ.
ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಲಾಭ ತರುವ ಕೆಲವು ರೈಲು ಮಾರ್ಗಗಳ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿದಂತೆ ಅನೇಕ ತೊಡಕುಗಳಿವೆ. ಆದರೆ, ಇಲ್ಲಿನ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರಗಳು ಅವುಗಳನ್ನು ನಿವಾರಿಸುವುದಕ್ಕೆ ಹೆಚ್ಚಿನ ಶ್ರಮ ಹಾಕುತ್ತಿಲ್ಲ. ರಾಜಕಾರಣಿಗಳು ಮತ್ತು ಸರ್ಕಾರಗಳ ಇಚ್ಛಾಶಕ್ತಿ ಇದ್ದರೆ ಇಲ್ಲಿರುವ ಯೋಜನೆಗಳು ಮುಗಿಯುವುದು ಬಹಳ ಕಷ್ಟವೇನಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

