ಮತದಾರರ ಮನೆಬಾಗಿಲಿಗೆ ಗುರುತಿನ ಚೀಟಿ
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರ ತನ್ನ ಹಕ್ಕು ಚಲಾಯಿಸಲು ಅನುವಾಗುವ ಉದ್ದೇಶದಿಂದ ಮತದಾರರ ಮನೆ ಬಾಗಿಲಿಗೇ ಗುರುತಿನ ಚೀಟಿ...

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.2
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರ ತನ್ನ ಹಕ್ಕು ಚಲಾಯಿಸಲು ಅನುವಾಗುವ ಉದ್ದೇಶದಿಂದ ಮತದಾರರ ಮನೆ ಬಾಗಿಲಿಗೇ ಗುರುತಿನ ಚೀಟಿ (ಸ್ಲಿಪ್) ನೀಡುವ ವಿಶೇಷ ಕಾರ್ಯವನ್ನು ಚುನಾವಣಾ ಆಯೋಗವೇ ಮಾಡಲಿದೆ.
ಮತದಾರನ ಗುರುತಿನ ಚೀಟಿ (ಎಪಿಕ್)ಗೆ ಪರ್ಯಾಯವಾದ ಅಂದರೆ ರಾಜಕೀಯ ಪಕ್ಷಗಳು ಮನೆಗೆ ಬಂದು ಈವರೆಗೆ ನೀಡುತ್ತಿದ್ದ ಮತದಾನ ಚೀಟಿಯಂತೆಯೇ ಇರುತ್ತಿದ್ದ ಚೀಟಿಯನ್ನು ಚುನಾವಣಾ ಆಯೋಗವೇ ನೀಡಲಿದೆ. ಇದರಲ್ಲಿ ಮತದಾರನ ಭಾವಚಿತ್ರದ ಜತೆಗೆ ಮತದಾನ ಮಾಡುವ ಕೇಂದ್ರದ ವಿವರವೂ ಇರಲಿದೆ. ಈ ಮತಚೀಟಿಯನ್ನು ಮತದಾರನ ಗುರುತಿನ ಚೀಟಿಗೆ ಪರ್ಯಾಯವಾಗಿ ಬಳಸಿಕೊಳ್ಳಬಹುದು.
ಮತದಾರನ ಗುರುತಿನ ಚೀಟಿ ಇಲ್ಲದಿದ್ದರೂ ಈ ಮತಚೀಟಿ ತೋರಿಸಿ ಮತದಾನ ಮಾಡಬಹುದು. ಚುನಾವಣೆ ಆಯೋಗ ನೇಮಿಸುವ ಸಿಬ್ಬಂದಿಯೇ ಮತದಾರರ ಮನೆಗೆ ತೆರಳಿ ಈ ಚೀಟಿ ನೀಡಲಿದ್ದಾರೆ. ಅಲ್ಲದೆ, ಚುನಾವಣೆ ದಿನ ಮತಗಟ್ಟೆಯ ಸಮೀಪ ಕಿಯೋಸ್ಕ್ ಸ್ಥಾಪಿಸಿ, ಅಲ್ಲಿಯೂ ಈ ಮತಚೀಟಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಕಾರ್ಯಕಾರಿ ಅಧಿಕಾರಿ ವಿ.ಎಸ್. ಸಂಪತ್ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ರಾಜ್ಯದಲ್ಲಿ 4.19 ಕೋಟಿ ಮತದಾರರಿದ್ದು, 50,446 ಮತಗಟ್ಟೆಗಳಿರುತ್ತವೆ. ಶೇ.98.97 ರಷ್ಟು ಮತದಾರರಿಗೆ ಎಪಿಕ್ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್‌ನಲ್ಲಿ (http://ceokarnataka.kar.nic.in/) ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಖಾತರಿಪಡಿಸಿಕೊಳ್ಳಬಹುದು. ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲಾಗುತ್ತದೆ ಎಂದು ಅವರು ಹೇಳಿದರು. 11
ವೆಚ್ಚಕ್ಕೆ ಇನ್ನು ಚೆಕ್
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ 20 ಸಾವಿರಕ್ಕೂ ಹೆಚ್ಚಿನ ವೆಚ್ಚ ಮಾಡಿದರೆ ಅದನ್ನು ಚೆಕ್ ಮೂಲಕವೇ ಪಾವತಿಸಬೇಕು. ಪ್ರತ್ಯೇಕ ಬ್ಯಾಂಕ್ ಖಾತೆಯನ್ನೇ ಹೊಂದಬೇಕು.
ಕೇಂದ್ರ ಚುನಾವಣಾ ಆಯೋಗದ ಹೊಸ ನೀತಿಯಂತೆ ಇದು ಕಡ್ಡಾಯ. ಚೆಕ್‌ಬುಕ್ ಪಡೆಯಲು ವಿಳಂಬದ ಸಮಸ್ಯೆಯನ್ನು ನಿವಾರಿಸಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಹೀಗಾಗಿ, ಹಣ ಚೆಕ್ ಮೂಲಕವೇ ವರ್ಗಾವಣೆಯಾಗಬೇಕು ಎಂದು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಕಾರ್ಯಕಾರಿ ಅಧಿಕಾರಿ ವಿ.ಎಸ್. ಸಂಪತ್ ತಿಳಿಸಿದರು.
ರಾಜಕೀಯ ಪಕ್ಷಗಳ ರ್ಯಾಲಿ, ಸಮಾವೇಶಗಳಿಗೆ ಸಮ್ಮತಿ ನೀಡುವ ಪ್ರಕ್ರಿಯೆಗೆ ಏಕಗವಾಕ್ಷಿ ಪದ್ಧತಿ ಜಾರಿಗೆ ತರುವಂತೆ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಯೋಗ ಕ್ರಮ ಕೈಗೊಂಡು ಈ ಪ್ರಕ್ರಿಯೆಗೆ ಏಕಗವಾಕ್ಷಿಯಲ್ಲೇ ಉತ್ತರ ಸಿಗುವಂತೆ ಮಾಡುತ್ತದೆ. ಇದೇ ರೀತಿ, ಬೆಂಗಳೂರಿನಲ್ಲಿ ರಾಜ್ಯಾದ್ಯಂತ ಸಮ್ಮತಿ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದರು.
ಪ್ರಚಾರದ ಸಾಮಗ್ರಿಗಳಿಗೆ ಅನುಮೋದನೆ ನೀಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ಇಲ್ಲಿ ದೂರುಗಳ ಬಗ್ಗೆ ಆಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಇದರಂತೆ ರಾಜ್ಯ ಚುನಾವಣೆ ಆಯೋಗದ ಸಮಿತಿಯೂ ಬೆಂಗಳೂರಿನಲ್ಲಿದ್ದು ಇದು ಅದರ ಮೇಲಿನ ಮಟ್ಟದ ಕ್ರಮ ಕೈಗೊಳ್ಳುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


