ಸರ್ವೆ: ಕೊನೆಗೂ ಈಡೇರಿತು ಬೇಡಿಕೆ
ರಾಮನಗರ: ಸರ್ಕಾರಿ 'ಅ'ವ್ಯವಸ್ಥೆಗೆ ಬಲಿಯಾದ ವೃದ್ಧ ರೈತನ ಕಡೆಯ ಆಸೆ ಕೊನೆಗೂ ಮಣ್ಣಾಗುವ ಮುನ್ನ ಈಡೇರಿದೆ. ಆರು ವರ್ಷಗಳಿಂದ ಭೂಮಿಯ ಸರ್ವೆ ಕಾರ್ಯ ಮುಗಿಸಲು ಸತಾಯಿಸಿದ್ದ ಅಧಿಕಾರಿಗಳು ರೈತ ಆತ್ಮಹತ್ಯೆ ಮಾಡಿಕೊಂಡ ಬಳಿಕ ಜಮೀನು ಸರ್ವೆ ಮುಗಿಸಿ ಪ್ರಕರಣಕ್ಕೆ 'ಎಳ್ಳು ನೀರು' ಬಿಟ್ಟಿದ್ದಾರೆ.
ಜಮೀನು ಸರ್ವೆ ಪ್ರಕರಣ ಸಂಬಂಧ ಅಧಿಕಾರಿಗಳ ಧೋರಣೆಗೆ ಬೇಸತ್ತು ಗಂಗಯ್ಯ ಶುಕ್ರವಾರ ನಗರದ ಮಿನಿ ವಿಧಾನಸೌಧದ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಘ, ವಿವಿಧ ಪಕ್ಷ ಮತ್ತು ಸಂಘಟನೆಗಳಿಂದ ಚಳವಳಿ ಭುಗಿಲೆದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸ್ಥಿತಿ ಎದುರಾಗಿತ್ತು. ಆಗ ಎಚ್ಚೆತ್ತುಕೊಂಡ ಅಧಿಕಾರಿಗಳು ಧೂಳು ಹಿಡಿದಿದ್ದ ಕಡತದಿಂದ ಗಂಗಯ್ಯನ ಅರ್ಜಿ ಹೊರ ತೆಗೆದಿದ್ದಾರೆ.
ಶನಿವಾರ ಬೆಳಗ್ಗೆಯೇ ತಾಳವಾಡಿಯ ಜಮೀನು ಅಳತೆಗೆ ಇಳಿದು, ಸರ್ವೆ ನಂ.165ರ ಪೈಕಿ ಗಂಗಯ್ಯ ಅವರಿಗೆ ಸೇರಿದ 27 ಗುಂಟೆ ಜಮೀನಿನ ಸರ್ವೆ ಮುಗಿಸಿ ಹದ್ದುಬಸ್ತು ನಿಗದಿಪಡಿಸಿದರು. ತಹಸೀಲ್ದಾರ್ ಹನುಮಂತರಾಯಪ್ಪ, ಸರ್ವೆ ಅಧೀಕ್ಷಕ ಮತ್ತು ಸಿಬ್ಬಂದಿ ಪೊಲೀಸ್ ರಕ್ಷಣೆಯೊಂದಿಗೆ ಈ ಕೆಲಸವನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಬಳಿಕ ಜಮೀನಿನ ನಕಾಶೆ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲಾಯಿತು. ಈ ಕೆಲಸ ಎಂದೋ ಆಗಿದ್ದರೆ ಗಂಗಯ್ಯ ಅವರ ಪ್ರಾಣ ಉಳಿಸಬಹುದಿತ್ತು. ಮೂಲತಃ ರಾಮನಗರ ತಾಲೂಕು ಜಾಲಮಂಗಲದ ಗಂಗಯ್ಯ ಅವರು ಮಾಗಡಿಯಲ್ಲಿ ವಾಸವಿದ್ದರು. ಮೃತರ ಪುತ್ರಿ ವಾಸವಿರುವ ಲಕ್ಷ್ಮೀಪುರ ಗ್ರಾಮದಲ್ಲಿ ಗಂಗಯ್ಯ ಅಂತ್ಯಕ್ರಿಯೆ ಸಂಜೆ ನೆರವೇರಿತು.
ಕಡೆಗೂ ಬಾರದ ಡಿಸಿ: ರಾಮನಗರದಲ್ಲಿ ಪ್ರತಿಯೊಂದು ಗಂಭೀರ ಸಮಸ್ಯೆ ಎದುರಾದಾಗಲೂ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ದೂರ ಉಳಿದರು. ಗಂಗಯ್ಯ ಆತ್ಮಹತ್ಯೆ ಮಾಹಿತಿ ದೊರೆತಾಗ ಅವರು ಕೇಂದ್ರ ಸ್ಥಾನದಲ್ಲೇ ಇದ್ದರು. ಆಸ್ಪತ್ರೆಗೆ ತೆರಳಿ ಕಳೆಬರದ ಅಂತಿಮ ದರ್ಶನ ಪಡೆಯುವ ಗೋಜಿಗೂ ಹೋಗಲಿಲ್ಲ. ಆಸ್ಪತ್ರೆ ಎದುರು ಪ್ರತಿಭಟಿಸುತ್ತಿದ್ದ ರೈತರ ದೂರು-ದುಮ್ಮಾನ ಕೇಳುವುದಕ್ಕೂ ಮುಂದಾಗಲಿಲ್ಲ. ತಮ್ಮ ಬದಲು ಅಪರ ಡಿಸಿ ಎಂ.ಎಸ್.ಅರ್ಚನಾ ಅವರನ್ನು ಸಾಗ ಹಾಕಿದರು. ಈ ಬಗ್ಗೆ ಸ್ವತಃ ಶಾಸಕ ಕೆ.ರಾಜು ಸಹಿತ
ಪ್ರತಿಭಟನಾಕಾರರು ಕಿಡಿ ಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

