ಅಂಕಕ್ಕೆ ಬೇಡ ಆತಂಕ, ರಿಲ್ಯಾಕ್ಸ್
ಇದು ಪರೀಕ್ಷೆಯ ಸಮಯ, ಹೌದು, ಮಾರ್ಚ್ ಬಂತೆಂದರೆ ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷೆಗಳ ಸರಣಿ ಆರಂಭವಾಗುತ್ತದೆ...

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.3
ಇದು ಪರೀಕ್ಷೆಯ ಸಮಯ, ಹೌದು, ಮಾರ್ಚ್ ಬಂತೆಂದರೆ ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷೆಗಳ ಸರಣಿ ಆರಂಭವಾಗುತ್ತದೆ. ಪರೀಕ್ಷೆ ಎಂಬ ಜ್ವರ ಅವರನ್ನು ದಟ್ಟವಾಗಿ ಆವರಿಸಿಕೊಳ್ಳುತ್ತದೆ. ಆದರೆ, ಪರೀಕ್ಷೆ ಎಂಬುದು ಭೂತವಲ್ಲ, ನೀವು ಇಷ್ಟಪಟ್ಟು ಆರಾಮದಿಂದ ಓದಿದರೆ ಆದೂ ಆಟವಾಗಬಲ್ಲದು.
ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಬರೆಯುತ್ತಿರುವ ಎಲ್ಲ 1.04 ಕೋಟಿ ಮಕ್ಕಳಿಗೆ ಶುಭಾಷಯಗಳು. ಅದರಲ್ಲೂ ವಿಶೇಷವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ 8.49 ಲಕ್ಷ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುತ್ತಿರುವ 6.13 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆ ಹಸನಾಗಲಿ ಎಂಬುದು 'ಕನ್ನಡಪ್ರಭ'ದ ಆಶಯ.
ಮಾರ್ಚ್ ಮೊದಲ ವಾರದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಪರ್ವ ಆರಂಭವಾಗಲಿದೆ. ರಾಜ್ಯದಲ್ಲಿರುವ 1.04 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಈ ಪರೀಕ್ಷೆಗಳು ಭವಿಷ್ಯವನ್ನು ಹಸನಾಗಿಸಲು ನೆರವಾಗುತ್ತವೆ, ಆದರೆ ಇದೇ ಪರೀಕ್ಷೆ ಜೀವನದ ಅಂತ್ಯವಲ್ಲ. ಇದೊಂದು ಮೆಟ್ಟಿಲಷ್ಟೆ. ಈ ಮೆಟ್ಟಿಲು ಏರುವ ಪ್ರಯಾಣ ಸುಖಕರವಾಗಿರಲಿ ಎಂಬ ಕಾರಣದಿಂದ 'ಕನ್ನಡಪ್ರಭ'ವು ಕೆಲ ಟಿಪ್ಸ್ ನೀಡುತ್ತಿದೆ. 2012-13ನೇ ಸಾಲಿನ ಪರೀಕ್ಷೆ ನಿಮ್ಮ ಜೀವನದಲ್ಲಿ ಹರುಷ ತರಲಿ ಎಂಬುದು ಪತ್ರಿಕೆಯ ಆಶಯ.
ಮಾ.13ರಿಂದ ದ್ವಿತೀಯ ಪಿಯುಸಿ, ಏ.1ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗುತ್ತದೆ. ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಇವೆರಡು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವುದು ಅನಿವಾರ್ಯ ಕೂಡ.
ತರಗತಿ ಹಾಗೂ ನಿಗದಿತ ಪಠ್ಯಗಳನ್ನು ಮುಗಿಸಿ ಎಲ್ಲರೂ ಮನೆಯಲ್ಲಿ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ.
ಕಳೆದ 9 ತಿಂಗಳ ಅವಧಿಯಲ್ಲಿ ನೀವು ಹೇಗೆ ವಿದ್ಯಾಭ್ಯಾಸ ಮಾಡಿದ್ದೀರಿ ಎನ್ನುವುದನ್ನು ಈ ಕ್ಷಣಕ್ಕೆ ಮರೆತುಬಿಡಿ, ಆದರೆ ಅಭ್ಯಾಸ ಮಾಡಿರುವುದನ್ನು ಮರೆಯಬೇಡಿ. ಮುಂದಿನ ಒಂದು ತಿಂಗಳುಗಳ ಕಾಲದ ನಿಮ್ಮ ಜೀವನಕ್ರಮ, ಅಭ್ಯಾಸ ನಿಯಮಗಳು ಪರೀಕ್ಷೆಯ ಯಶಸ್ಸಿನ ಮೇಲೆ ಪರಿಣಾಮ ಬೀಳಲಿವೆ. ಮುಂದಿನ 30 ದಿನವು ನಿಮ್ಮ ಜೀವನದ ಅತಿ ಶಿಸ್ತಿನ ದಿನವಾಗಿದ್ದರೆ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ.
ಪಾಲಕರೇ ಒತ್ತಡ ಹೇರಬೇಡಿ
ನನ್ನ ಮಗ ಅಥವಾ ಮಗಳು ಪಕ್ಕದ ಮನೆಯವರ ಮಕ್ಕಳಿಗಿಂತ ಹೆಚ್ಚು ಅಂಕ ಗಳಿಸಬೇಕು, ಮುಂದೆ ಬರಬೇಕು ಎಂಬ ಆಸೆಯಿಂದ ಅನವಶ್ಯಕ ಒತ್ತಡ ಹೇರಬೇಡಿ. ಪರೀಕ್ಷೆಯ ಭೂತ ಓಡಿಸುವ ಪ್ರಯತ್ನ ಮಾಡಬೇಕೇ ಹೊರತು, ಹೆದರಿಸುವ ಕೆಲಸ ಬೇಡ. ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಒತ್ತಡ ಕಡಿಮೆಮಾಡುವ ಕಾಯಕ ನಿಮ್ಮದಾಗಿರಲಿ. ಬೈದು ಕೂರಿಸಿದ ತಕ್ಷಣ ಓದುತ್ತಾರೆ ಅಥವಾ ಅದು ತಲೆಗೆ ಹೋಗುತ್ತದೆ ಎಂಬ ವಿಚಾರ ಬೇಡ. ಇದು ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು.
ಯಶಸ್ಸಿಗೆ ಟಿಪ್ಸ್
ಪರೀಕ್ಷೆಗೆ ತಯಾರಿ ನಡೆಸಿದ ಬಳಿಕ ನಿಮಗೆ ನೀವೇ ಪ್ರಶ್ನಿಸಿಕೊಂಡು ಪರೀಕ್ಷಿಸಿಕೊಳ್ಳಿ. ನೀವೇ ಪ್ರಶ್ನೆಗಳನ್ನು ತಯಾರಿಸಿಕೊಂಡು ನಿಗದಿತ ಸಮಯದಲ್ಲಿ ಉತ್ತರಿಸುವ ಪ್ರಯತ್ನ ಮಾಡಿ.
ಪರೀಕ್ಷೆ ತಯಾರಿ ನೆಪದಲ್ಲಿ ಅತಿಯಾಗಿ ನಿದ್ದೆ ಕೆಡಬೇಡಿ, ನಿದ್ದೆಯು ಹಿತ-ಮಿತವಾಗಿರಲಿ.
ಓದಬೇಕೆಂಬ ಹಂಬಲದಲ್ಲಿ ಇಡೀ ದಿನ ಅಭ್ಯಸಿಸುವುದು ಉತ್ತಮವಲ್ಲ. ಆಗಾಗ ವಿರಾಮ ತೆಗೆದುಕೊಳ್ಳಿ ಪರೀಕ್ಷೆಗೆ ಓದಿ ಆಗಲಿಲ್ಲ ಎಂದು ಅಳುವವರು ಅಥವಾ ವ್ಯಥೆ ಪಡುವವರ ಸಂಖ್ಯೆ ದೊಡ್ಡದಿದೆ. ಆದರೆ ಬಹುತೇಕರು ಇದೇ ವ್ಯಥೆಯಲ್ಲಿಯೇ ಕಾಲ ಕಳೆಯುತ್ತಾರೆ. ಬದಲಾಗಿ ಓದಿಲ್ಲ ಎನ್ನುವುದನ್ನು ಮರೆತು, ಏನು ಓದಬಹುದು ಎಂಬ ಬಗ್ಗೆ ಗಮನ ನೀಡಿ.
ಓದಿರುವ ವಿಷಯಗಳನ್ನು ಸಂಕ್ಷಿಪ್ತಗೊಳಿಸಿ ನೋಟ್ ಮಾಡಿಕೊಂಡಿರಿ, ಕೊನೆಯ ಕ್ಷಣ ಅಥವಾ ಪರೀಕ್ಷೆಯ ಹಿಂದಿನ ದಿನ ದೊಡ್ಡ ಪುಸ್ತಕ ಓದುವ ಬದಲು, ಈ ನೋಟ್ಸ್ ಓದಿದರೆ ಮಾನಸಿಕ ಒತ್ತಡ ನಿಯಂತ್ರಿಸಬಹುದು.
ನೋಟ್ಸ್ ಮಾಡುವ ಸಂದರ್ಭದಲ್ಲಿ ಪ್ರಶ್ನೆಗಳ ಪಟ್ಟಿಯನ್ನು ತಯಾರಿಸಿಕೊಳ್ಳಿ.
ಪರೀಕ್ಷೆಯ ಅಂತಿಮ ಘಟ್ಟದಲ್ಲಿರುವುದರಿಂದ ರೆಫರೆನ್ಸ್ ಪುಸ್ತಕಗಳನ್ನು ಓದುವ ಗೋಜಿಗೆ ಹೋಗಬೇಡಿ, ಇದು ನಿಮ್ಮ ಒತ್ತಡ ಮತ್ತಷ್ಟು ಹೆಚ್ಚಿಸಬಹುದು.
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


