ನಮ್ಗೂ ಫ್ರೆಂಡ್ಸ್ ಬೇಕು
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರವನ್ನು ಕಿತ್ತೊಗೆಯಲು ಹೊಸ ಪಕ್ಷಗಳನ್ನು ಎನ್‌ಡಿಎ ತೆಕ್ಕೆಗೆ ತೆಗೆದುಕೊಳ್ಳುವ ಚಿಂತನೆಯನ್ನು ಬಿಜೆಪಿ ನಡೆಸಿದೆ...

ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರವನ್ನು ಕಿತ್ತೊಗೆಯಲು ಹೊಸ ಪಕ್ಷಗಳನ್ನು ಎನ್‌ಡಿಎ ತೆಕ್ಕೆಗೆ ತೆಗೆದುಕೊಳ್ಳುವ ಚಿಂತನೆಯನ್ನು ಬಿಜೆಪಿ ನಡೆಸಿದೆ. ಈ ಸಂಬಂಧ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಕೊನೆಯ ದಿನವಾದ ಭಾನುವಾರ ಯುಪಿಎಯನ್ನು ಅಧಿಕಾರದಿಂದ ದೂರವಿಡಲು ಎನ್‌ಡಿಎ ವಿಸ್ತರಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಪಕ್ಷದ ಉಪಾಧ್ಯಕ್ಷ ರವಿಶಂಕರ್ ಪ್ರಸಾದ್ ಮಂಡಿಸಿರುವ ಈ ರಾಜಕೀಯ ನಿರ್ಣಯಕ್ಕೆ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ಯುಪಿಎ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಬೆಲೆ ಏರಿಕೆಗಳಿಂದ ಜನಸಾಮಾನ್ಯರ ಬದುಕು ದುರ್ಭರವಾಗಿದೆ. ಇಂಥ ದುರಂತ ಸರ್ಕಾರಕ್ಕೆ ಉತ್ತಮ ಆಡಳಿತ ನೀಡಿದ ಇತಿಹಾಸ ಹೊಂದಿರುವ ಬಿಜೆಪಿ ಮಾತ್ರ ಪರ್ಯಾಯವಾಗಿದೆ. ದೇಶವನ್ನು ಜಾಗೃತಗೊಳಿಸುವ, ಎನ್‌ಡಿಎಯನ್ನು ವಿಸ್ತರಿಸುವ ಹಾಗೂ ನಿರ್ಣಾಯಕ ಬದಲಾವಣೆಯ ಭರವಸೆ ಮೂಡಿಸಲು ಸಕಾಲವಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಪರಿಣಾಮಕಾರಿ ಲೋಕಪಾಲ ಹಾಗೂ ಸ್ವಾಯತ್ತ ಮತ್ತು ಉತ್ತರದಾಯಿ ಸಿಬಿಐನ ಅಗತ್ಯ ಇದೆ ಬಿಜೆಪಿ ಪ್ರತಿಪಾದಿಸಿದೆ.
ಯಡಿಯೂರಪ್ಪ ಇಮೇಜ್ ಹಾಳು ಮಾಡಿದ್ರು: ಆಡ್ವಾಣಿ
ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳು ಬಂದಾಗ ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಿದ್ದು ಬಿಜೆಪಿ ವರ್ಚಸ್ಸಿಗೆ ಹೊಡೆತ ನೀಡಿತು. ಹೀಗೆಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಪ್ರತಿಪಾದಿಸಿದ್ದಾರೆ. ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರದ ವಿಚಾರವಾಗಿ ತತ್ವರಹಿತವಾಗಿ ವರ್ತಿಸಿದ್ದು ರಾಷ್ಟ್ರಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಹೊಡೆತ ನೀಡಿದೆ ಎಂದು ವಿಷಾದಿಸಿದರು.
ಕಾಂಗ್ರೆಸ್‌ಗೆ ಗಾಂಧಿ ಕುಟುಂಬ ಹಿತಾಸಕ್ತಿ ಮುಖ್ಯ: ಮೋದಿ
ಬಿಜೆಪಿಯಲ್ಲಿ ಪ್ರಮುಖ ಹುದ್ದೆ ನಿರೀಕ್ಷೆಯಲ್ಲಿರುವ ಗುಜರಾತ್ ಸಿಎಂ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ಕೊನೆಯ ದಿನ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬದ ಹಿತಾಸಕ್ತಿ ಕಾಪಾಡಲು ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ. ಗಾಂಧಿ ಕುಟುಂಬದ ಹಿತ ಕಾಯಲು ಪ್ರಧಾನಿ ಸಿಂಗ್‌ರನ್ನು ನೈಟ್ ವಾಚ್‌ಮನ್ ಆಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಗೆದ್ದಲಿನ ರೀತಿಯಲ್ಲಿ ಕಾಂಗ್ರೆಸ್ ದೇಶವನ್ನು ಹಾಳು ಮಾಡುತ್ತಿದೆ. ಗೆದ್ದಲನ್ನು ನಿವಾರಿಸುವುದು ಕಷ್ಟದ ಕೆಲಸ. ನೀವು ಒಂದು ಕಡೆ ಅವುಗಳನ್ನು ನಾಶ ಮಾಡಿದರೆ ಅವು ಇನ್ನೊಂದು ಕಡೆ ತಲೆ ಎತ್ತುತ್ತವೆ. ಬಿಜೆಪಿ ಕಾರ್ಯಕರ್ತರ ಬೆವರಿನಿಂದಷ್ಟೇ ಈ ವ್ಯಾಧಿಯನ್ನು ನಿವಾರಿಸಲು ಸಾಧ್ಯವಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


