ಸಂಜುಗೆ ಜೈಲೇ ಗತಿ
ಬಾಲಿವುಡ್ ನಟ ಸಂಜಯ್ ದತ್ಗೆ ಇನ್ನು ಮೂರೂವರೆ ವರ್ಷ ಜೈಲೇ ಗ್ಯಾರಂಟಿ. ಸುಪ್ರೀಂಕೋರ್ಟ್ನಲ್ಲಾದರೂ ಜೈಲು...

ನವದೆಹಲಿ/ಮುಂಬೈ: ಬಾಲಿವುಡ್ ನಟ ಸಂಜಯ್ ದತ್ಗೆ ಇನ್ನು ಮೂರೂವರೆ ವರ್ಷ ಜೈಲೇ ಗ್ಯಾರಂಟಿ.
ಸುಪ್ರೀಂಕೋರ್ಟ್ನಲ್ಲಾದರೂ ಜೈಲು ಶಿಕ್ಷೆಯಿಂದ ಪಾರಾಗಬಹುದು ಎಂಬ ಸಂಜಯ್ ಲೆಕ್ಕಾಚಾರ ಉಲ್ಟಾ ಆಗಿದೆ. ಆದರೆ ಒಂದು ಸಮಾಧಾನದ ವಿಷಯವೆಂದರೆ ಟಾಡಾ ಕೋರ್ಟ್ ವಿಧಿಸಿದ್ದ 6 ವರ್ಷಗಳ ಜೈಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ 5 ವರ್ಷಕ್ಕೆ ಇಳಿಸಿದೆ.
1993ರ ಮುಂಬೈ ಸರಣಿ ಸ್ಫೋಟ ಸಂಬಂಧ ಈಗಾಗಲೇ ಒಂದು ವರ್ಷ ಆರು ತಿಂಗಳು ಜೈಲಿನಲ್ಲಿ ಕಳೆದಿರುವುದರಿಂದ ಇನ್ನು ಮೂರು ವರ್ಷ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಿದೆ. ಕೋರ್ಟ್ ಸಂಜಯ್ ದತ್ಗೆ 4 ವಾರ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಶರಣಾಗುವಂತೆ ಸೂಚನೆ ನೀಡಿದೆ.
ಇದಲ್ಲದೇ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಗುರುತಿಸಿಕೊಂಡಿರುವ ಟೈಗರ್ ಮೆಮೋನ್ ಸೋದರ ಯಾಕುಬ್ ಮೆಮೋನ್ಗೆ ಟಾಡಾ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂನ ನ್ಯಾ. ಪಿ. ಸದಾಶಿವಂ ಮತ್ತು ನ್ಯಾ. ಬಿ.ಎಸ್. ಚೌಹಾಣ್ ಅವರಿದ್ದ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. ಗಲ್ಲಿಗೆ ಗುರಿಯಾಗಿದ್ದ ಉಳಿದ 10 ಮಂದಿಯ ಶಿಕ್ಷೆಯನ್ನು ಜೀವಾವಧಿಗೆ ಇಳಿಸುವ ಮೂಲಕ ಅವರಿಗೆ ಕೊಂಚ ಸಮಾಧಾನ ನೀಡಿದೆ. ಸಾಯುವವರೆಗೂ ಜೈಲಿನಲ್ಲೇ ಇರಬೇಕು ಎಂಬ ಆದೇಶ ನೀಡಿದೆ.
257 ಮಂದಿ ಸಾವಿಗೆ ಕಾರಣವಾಗಿದ್ದ ಈ ಪ್ರಕರಣದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೋರ್ಟ್, ಪೊಲೀಸ್, ಕಸ್ಟಮ್ ಮತ್ತು ಕರಾವಳಿ ರಕ್ಷಕ ಪಡೆ ವಿರುದ್ಧ ಸಿಟ್ಟನ್ನು ತೋರಿದೆ.
ಐವರು ಕಸ್ಟಮ್ ಅಧಿಕಾರಿಗಳು ಮತ್ತು ಐವರು ಪೊಲೀಸರು ಮುಂಬೈ ಒಳಗೆ ಆರ್ಡಿಎಕ್ಸ್ ಬರಲು ನೆರವಾಗಿದ್ದಾರೆ. ಕೆಲವರು ಲಂಚ ತೆಗೆದುಕೊಂಡಿದ್ದರೆ, ಇನ್ನು ಕೆಲವರು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಒಂದು ವೇಳೆ ಇವರೆಲ್ಲಾ ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಈ ಪ್ರಮಾಣದ ಸಾವು ನೋವು ಆಗುತ್ತಲೇ ಇರಲಿಲ್ಲ ಎಂದು ಹೇಳಿದೆ.
ಸಂಜಯ್ ದತ್ಗಿಲ್ಲ ನಿರಾಳತೆ: ಬಾಲಿವುಡ್ ನಟ ಸಂಜಯ್ ದತ್ ಮಾಡಿರುವ ಸಮಾಜಸೇವೆ ಗುರುತಿಸಿ ಶಿಕ್ಷೆ ಕಡಿಮೆ ಮಾಡಬೇಕು ಎಂಬುದು ವಕೀಲರ ವಾದ. ಆದರೆ ಕೋರ್ಟ್ ಇದಕ್ಕೆ ಮನ್ನಣೆನೀಡಿಲ್ಲ. ಬದಲಾಗಿ ಸಂಜಯ್ ದತ್ನ ಮೇಲಿರುವ ಆರೋಪ ಗಂಭೀರವಾದದ್ದು. ಇದಕ್ಕೆ ಶಿಕ್ಷೆ ನೀಡಲೇಬೇಕು. ಯಾವುದೇ ಕಾರಣಕ್ಕೂ ಅವರನ್ನು ಬಿಟ್ಟುಬಿಡಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೆ ಟಾಡಾ ಕೋರ್ಟ್ ಸಂಜಯ್ ದತ್ ವಿರುದ್ಧ ಭಯೋತ್ಪಾದನೆ ಆರೋಪಗಳನ್ನು ಬಿಟ್ಟಿತ್ತು. ಇದನ್ನು ಎತ್ತಿಹಿಡಿದಿರುವ ಕೋರ್ಟ್, ಸ್ಫೋಟದಲ್ಲಿ ಭಾಗಿಯಾಗದಿದ್ದರೂ, ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದು ಮೊದಲ ತಪ್ಪು, ಜೊತೆಗೆ ಅವುಗಳನ್ನು ನಾಶಪಡಿಸಲು ಯತ್ನಿಸಿದ್ದು ಮತ್ತೊಂದು ತಪ್ಪು. ಹೀಗಾಗಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಸಂಜಯ್ ದತ್ 5 ವರ್ಷ ಜೈಲು ಶಿಕ್ಷೆ ಅನುಭವಿಸಲೇಬೇಕು ಎಂದು ಸೂಚನೆ ನೀಡಿದೆ. ಇನ್ನು ನಾಲ್ಕು ವಾರಗಳಲ್ಲಿ ಶರಣಾಗುವಂತೆ ಆದೇಶ ನೀಡಿದೆ.
ಕೋರ್ಟ್ನ ತೀರ್ಪಿನ ವೇಳೆ ಉಪಸ್ಥಿತರಿದ್ದ ಸಂಜಯ್ ದತ್ ಸೋದರಿ ಮುಂಬೈ ಸಂಸದೆ ಪ್ರಿಯಾ ದತ್ ಕುಸಿದುಬಿದ್ದ ಘಟನೆಯೂ ನಡೆಯಿತು. ಅಲ್ಲದೆ ಕೋರ್ಟ್ ತೀರ್ಪು ಪಾಲಿಸುವುದಾಗಿ ಸಂಜಯ್ ದತ್ ಹೇಳಿದ್ದಾರೆ.
ಇದೇ ವೇಳೆ ಸಂಜಯ್ ದತ್ಗೆ ಶಿಕ್ಷೆ ಕಾಯಂಗೊಂಡ ಸಂಗತಿ ಬಾಲಿವುಡ್ಗೆ ಆಘಾತ ನೀಡಿದೆ. ಸಂಜಯ್ ದತ್ ಮೇಲೆ ಹಲವಾರು ನಿರ್ಮಾಪಕರು ಸುಮಾರು 250 ಕೋಟಿ ಹೂಡಿದ್ದಾರೆ ಎನ್ನಲಾಗಿದ್ದು, ಇವರಲ್ಲಿ ಭೀತಿ ಹುಟ್ಟಿಸಿದೆ.
ಪಾಕ್ ಹೊಣೆ; ಸುಪ್ರೀಂ
1993ರ ಮುಂಬೈ ಸರಣಿ ಸ್ಫೋಟಕ್ಕೆ ಪಾಕಿಸ್ತಾನವೇ ನೇರ ಹೊಣೆ ಎಂದು ಸುಪ್ರೀಂಕೋರ್ಟ್ ಬಹಿರಂಗವಾಗಿಯೇ ಆರೋಪಿಸಿದೆ. ಇಡೀ ಸ್ಫೋಟಕ್ಕೆ ಕಾರಣೀಭೂತರಾದ ದಾವೂದ್ ಇಬ್ರಾಹಿಂ, ಟೈಗರ್ ಮೆಮೋನ್(ಇವರಿಬ್ಬರೂ ಪಾಕ್ನಲ್ಲೇ ಇದ್ದಾರೆ), ಯಾಕುಬ್ ಮೆಮೋನ್, ಮಹ್ಮದ್ ಅಹಮದ್ ದೋಸಾ, ಅಬ್ದುಲ್ ರಜಾಕ್ ಮೆಮೋನ್ ಸೇರಿದಂತೆ ಇತರೆ ಉಗ್ರರಿಗೆ ಪಾಕಿಸ್ತಾನ ಮತ್ತು ಅಲ್ಲಿನ ಐಎಸ್ಐ ತರಬೇತಿ ನೀಡಿದೆ. ಇದು ವಿಚಾರಣೆ ವೇಳೆ ಬಹಿರಂಗವಾಗಿದೆ. ಅಲ್ಲದೆ ಈ ಯೋಜನೆ ಸುಸೂತ್ರವಾಗಿ ನಡೆಯುವ ಸಂಬಂಧ ಪಾಕಿಸ್ತಾನ ಎಲ್ಲಾ ರೀತಿಯ ಸಹಾಯ ಮಾಡಿದೆ ಎಂದು ಕೋರ್ಟ್ ಹೇಳಿದೆ.
ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮೋನ್ ದುಬೈನಿಂದ ಪಾಕಿಸ್ತಾನಕ್ಕೆ ಬರಲು ಐಎಸ್ಐ ಸಂಪೂರ್ಣವಾಗಿ ಸಹಾಯ ಮಾಡಿದೆ. ಇವರಿಗೆ ಇಸ್ಲಾಮಾಬಾದ್ ಏರ್ಪೋರ್ಟ್ನಲ್ಲಿ ಪರಿಶೀಲನೆ ಮಾಡದೇ ಹೋಗಿ ಬರುವ ವ್ಯವಸ್ಥೆ ಮಾಡುವ ಮೂಲಕ ಎಲ್ಲಾ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಎರಡನೇ ಮಹಾಯುದ್ಧದ ನಂತರ ಅತ್ಯಧಿಕವಾಗಿ ಆರ್ಡಿಎಕ್ಸ್ ಬಳಕೆಯಾಗಿದ್ದು ಮುಂಬೈ ಸರಣಿ ಸ್ಫೋಟದಲ್ಲೇ ಎಂದು ಕೋರ್ಟ್ ಹೇಳಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಆರ್ಡಿಎಕ್ಸ್ ಬಳಸಿ ಭಯೋತ್ಪಾದನೆ ಕೃತ್ಯ ನಡೆಸಿದ್ದೂ ಮುಂಬೈನಲ್ಲಿ ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


