ದೆಹಲಿ ಸ್ಫೋಟ ಸಂಚು ಉಗ್ರರ ಯತ್ನ ವಿಫಲ

ನವದೆಹಲಿ: ಹೋಳಿ ಹಬ್ಬದ ಸಂದರ್ಭದಲ್ಲಿ ದೆಹಲಿಯಲ್ಲಿ ರಕ್ತದೋಕುಳಿ ಹರಿಸಬೇಕೆಂಬ ಉಗ್ರರ ಯತ್ನ ಅದೃಷ್ಟವಶಾತ್ ವಿಫಲವಾಗಿದೆ.
ರಾಷ್ಟ್ರರಾಜಧಾನಿಯಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರನೊಬ್ಬನನ್ನು ಉತ್ತರಪ್ರದೇಶದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಭಾರಿ ಪ್ರಮಾಣದ ಸ್ಫೋಟಕಗಳು, ಗ್ರೆನೇಡ್ಗಳು, ಒಂದು ಎಕೆ-56 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪಾಕ್ನಲ್ಲಿ ತರಬೇತಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯವನಾದ ಸೈಯದ್ ಲಿಯಾಖತ್ ಷಾ ಎಂಬಾತನೇ ಬಂಧಿತ ಉಗ್ರ. ಈತನನ್ನು ಪಾಕಿಸ್ತಾನದ ಏಜೆನ್ಸಿಗಳು ಭಾರತಕ್ಕೆ ಕಳುಹಿಸಿದ್ದವು. ಲಿಯಾಖತ್ ಪಾಕ್ನಲ್ಲೇ ಉಗ್ರ ತರಬೇತಿ ಪಡೆದಿದ್ದ. ನಂತರ ಕರಾಚಿಯಿಂದ ನೇಪಾಳಕ್ಕೆ ಬಂದು ಅಲ್ಲಿಂದ ಈತ ಭಾರತಕ್ಕೆ ಆಗಮಿಸಿದ್ದ. ಈತನ ಬಂಧನದ ಮೂಲಕ ದೆಹಲಿಯಲ್ಲಿ ಹೋಳಿ ದಿನವಾದ ಬುಧವಾರ ನಡೆಯುತ್ತಿದ್ದ ಸಂಭಾವ್ಯ ಆತ್ಮಾಹುತಿ ಸ್ಫೋಟವನ್ನು ತಪ್ಪಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ಶ್ರೀವಾಸ್ತವ ತಿಳಿಸಿದ್ದಾರೆ. ಲಿಯಾಖತ್ನ ವಿಚಾರಣೆ ನಡೆಸಿದಾಗ ಕೇಂದ್ರ ದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿನ ಅತಿಥಿ ಗೃಹವೊಂದರಲ್ಲಿ ಸ್ಫೋಟಕವಿರುವುದು ತಿಳಿದುಬಂತು. ಅದರಂತೆ ಅಲ್ಲಿ ದಾಳಿ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯಿತು ಎಂದೂ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸಲು ಯುವಕರ ನೇಮಕದ ಮೇಲ್ವಿಚಾರಣೆಯನ್ನು ನನಗೆ ವಹಿಸಿರುವುದಾಗಿ ಹಿಜ್ಬುಲ್ ಮುಜಾಹಿದೀನ್ನ ಹಿರಿಯ ಕಮಾಂಡರ್ಗಳಾದ ಘಾಝಿ ನಸ್ರುದ್ದೀನ್ ಹಾಗೂ ಫಾರೂಖ್ ಖುರೇಷಿ ಹೇಳಿದ್ದರು ಎಂಬ ವಿಷಯವನ್ನೂ ಲಿಯಾಖತ್ ಬಾಯಿಬಿಟ್ಟಿದ್ದಾನೆ. ಇದೇ ವೇಳೆ, ಪೊಲೀಸರು ಲಿಯಾಖತ್ನನ್ನು ಕೋರ್ಟ್ಗೆ ಹಾಜರುಪಡಿಸಿದ್ದು, ಆತನನ್ನು 15 ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಿ ಕೋರ್ಟ್ ಆದೇಶ ನೀಡಿದೆ.
ಬ್ಯಾಗ್ ಇಟ್ಟವನಿಗಾಗಿ ಶೋಧ: ಇದೇ ವೇಳೆ ಅತಿಥಿ ಗೃಹದಲ್ಲಿ ಸ್ಫೋಟಕಗಳುಳ್ಳ ಬ್ಯಾಗ್ ಇಟ್ಟುಹೋದ ವ್ಯಕ್ತಿ ಯಾರು ಎಂಬುದನ್ನು ತಿಳಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರವಾಸಿಗನ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ 2 ದಿನಗಳ ಹಿಂದೆ ಅತಿಥಿ ಗೃಹದಲ್ಲಿ ಕೋಣೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದ. ಬ್ಯಾಗನ್ನು ಕೋಣೆಯೊಳಗಿಟ್ಟು ಬಾಡಿಗೆ ನೀಡಿ ಹೋದವನ ಪತ್ತೆಯೇ ಇಲ್ಲ ಎಂದು ಅತಿಥಿ ಗೃಹದ ನೌಕರರು ತಿಳಿಸಿದ್ದಾರೆ.
ಶರಣಾಗಲು ಹೊರಟಿದ್ದನೇ ಲಿಯಾಖತ್?
ಉಗ್ರ ಲಿಯಾಖತ್ ಬಂಧನವಾಗುತ್ತಿದ್ದಂತೆಯೇ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಲಿಯಾಖತ್ ಅಲ್ ಬರ್ಖ್ ಎಂಬ ಉಗ್ರ ಸಂಘಟನೆಯ ಮಾಜಿ ಕಾರ್ಯಕರ್ತನಾಗಿದ್ದ. ಆತ ತಮಗೆ ಶರಣಾಗಲೆಂದು ಬರುತ್ತಿದ್ದ ವೇಳೆಯೇ ದೆಹಲಿ ಪೊಲೀಸರು ಅವನನ್ನು ಬಂಧಿಸಿದ್ದಾರೆ ಎಂದು ಕಾಶ್ಮೀರ ಪೊಲೀಸರು ಹೇಳಿಕೊಂಡಿದ್ದಾರೆ. ಲಿಯಾಖತ್ ಬಂಧನದಿಂದ ತಬ್ಬಿಬ್ಬಾಗಿರುವ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಜತೆ ಮಾತುಕತೆ ನಡೆಸುವುದಾಗಿಯೂ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


