ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ರಚನೆ ಮಾಡುವ ಕುರಿತಂತೆ ಶುಕ್ರವಾರ ತನ್ನ ಅಭಿಪ್ರಾಯ ತಿಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಕಾವೇರಿ ನದಿ ನ್ಯಾಯಾಧಿಕರಣದ ಐತೀರ್ಪಿನಂತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ತ್ವರಿತವಾಗಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ನ್ಯಾಯಪೀಠದ ಮುಂದೆ ಕೇಂದ್ರ ಪರ ವಕೀಲರು ಈ ತಿಳಿಸಿದರು.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದಾಗಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ತನ್ನ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು. ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಕಾವೇರಿ ನದಿ ಪ್ರಾಧಿಕಾರ ರಚನೆ ಕುರತು ಯಾವ ನಿರ್ಧಾರವನ್ನು ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ ಕೈಗೊಳ್ಳಬಾರದು ಎಂದು ಚುನಾವಣಾ ಆಯೋಗ ಕೇಂದ್ರಕ್ಕೆ ಸೂಚಿಸಿತ್ತು.
ಮಂಗಳವಾರ ವಿಚಾರಣೆ ಆರಂಭವಾದಾಗ ಕೇಂದ್ರ ಪರ ವಕೀಲರು ತಮ್ಮ ನಿಲುವು ಸ್ಪಷ್ಟಪಡಿಸಿದರು. ಮುಂದಿನ ವಿಚಾರಣೆಯನ್ನು ರಜೆ ಮುಗಿದ ನಂತರ ಕೈಗೆತ್ತಿಕೊಳ್ಳಬಹುದು ಎಂದು ನ್ಯಾಯಮೂರ್ತಿ ಆರ್.ಎಂ.ಲೋಧಾ ತಿಳಿಸಿದರು. ತುರ್ತು ಅಗತ್ಯ ಇರುವುದರಿಂದ ಶೀಘ್ರ ವಿಚಾರಣೆಗೆ ತಮಿಳುನಾಡು ಪರ ವಕೀಲರು ಮನವಿ ಮಾಡಿಕೊಂಡರು. ನ್ಯಾಯಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.