ವಿಧಾನಸಭೆಯಲ್ಲಿ ಒಕ್ಕಲಿಗರ ಮೇಲುಗೈ
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 9
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಒಕ್ಕಲಿಗರು (ರೆಡ್ಡಿಗಳು) ಪ್ರಾಬಲ್ಯ ಸಾಧಿಸಿದ್ದಾರೆ.
ಹೌದು, 223 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರು ಸೇರಿ ನಾನಾ ಪಕ್ಷಗಳಿಂದ 53 ಮಂದಿ ಒಕ್ಕಲಿಗರು ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ.
ನಂತರದ ಸ್ಥಾನ ಲಿಂಗಾಯತರದ್ದು. ಆ ಸಮುದಾಯದ ಒಟ್ಟು 46 ಮಂದಿ ಶಾಸನಸಭೆ ಪ್ರವೇಶಿಸಿದ್ದಾರೆ. ಜತೆಗೆ ಪರಿಶಿಷ್ಟ ಜಾತಿಯ 37, ಕುರುಬ ಸಮುದಾಯದ 13, ವಾಲ್ಮೀಕಿ, ನಾಯಕ ಸಮುದಾಯದ 17, ಮುಸ್ಲಿಂ ಸಮುದಾಯದ 11, ಬ್ರಾಹ್ಮಣ ಜನಾಂಗದ 10 ಮಂದಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಉಳಿದಂತೆ ಬಂಟ ಸಮುದಾಯದ 3, ಈಡಿಗ, ಬಿಲ್ಲವ- 6, ಜೈನರು- 3, ಕ್ರೈಸ್ತರು-2, ನಾಮದರೆಡ್ಡಿ- 2, ಮೊಗವೀರ-2, ಲಮಾಣಿ-2, ಕೊಡವ ಸಮುದಾಯದ ಒಬ್ಬರು ವಿಧಾನಸಭೆಗೆ ಆಯ್ಕೆಯಾದವರಲ್ಲಿ ಸೇರಿದ್ದಾರೆ.
ಇನ್ನುಳಿದಂತೆ ದೇವಾಂಗ, ಕಬ್ಬಿಗ (ಕೋಲಿ), ಬೇಡರು, ಮಾದರ, ಉಪ್ಪಾರ, ರಜಪೂತ, ಮರಾಠ... ಹೀಗೆ ನಾನಾ ಸಮುದಾಯದ ಒಬ್ಬರು ಅಥವಾ ಇಬ್ಬರು ಅಭ್ಯರ್ಥಿಗಳು ವಿಧಾನಸಭೆ ಪ್ರವೇಶಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ 28 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಒಕ್ಕಲಿಗರು ಆಯ್ಕೆಯಾಗಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಆರು ಶಾಸಕರ ಪೈಕಿ ಎಲ್ಲರೂ ಒಕ್ಕಲಿಗ ಸಮುದಾಯಕ್ಕೇ ಸೇರಿದವರಿರುವುದು ವಿಶೇಷ. ರಾಮನಗರದಿಂದ ಆಯ್ಕೆಯಾಗಿರುವ ನಾಲ್ಕು ಮಂದಿಯೂ ಇದೇ ಸಮುದಾಯಕ್ಕೆ ಸೇರಿದವರು.
ಇನ್ನು ಮಂಡ್ಯ ಜಿಲ್ಲೆಯ ಏಳು ಶಾಸಕರ ಪೈಕಿ 6 ಮಂದಿ, ಹಾಸನ ಜಿಲ್ಲೆಯ ಏಳು ಶಾಸಕರ ಪೈಕಿ 6 ಮಂದಿ ಒಕ್ಕಲಿಗರು ಎನ್ನುವುದು ವಿಶೇಷ.
ಲಿಂಗಾಯತರು ಎಲ್ಲಿ ಹೆಚ್ಚು: ಇನ್ನು ವಿಧಾನಸಭೆ ಪ್ರವೇಶಿಸಿದ 2ನೇ ಅತಿ ದೊಡ್ಡ ಜಾತಿ ಎನಿಸಿಕೊಂಡಿರುವ ಲಿಂಗಾಯತರ ಪೈಕಿ ಅತಿ ಹೆಚ್ಚು ಮಂದಿ ಇರುವುದು ಬೆಳಗಾವಿ ಜಿಲ್ಲೆಯಿಂದ. ಒಟ್ಟು 18 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಂದ ಲಿಂಗಾಯತರು ಆಯ್ಕೆಯಾಗಿದ್ದಾರೆ. ಈ ಪೈಕಿ ಐದು ಮಂದಿ ಪಂಚಮಸಾಲಿ ವರ್ಗಕ್ಕೆ ಸೇರಿದವರು. ಅದೇ ರೀತಿ ಬಿಜಾಪುರ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ 6 ಮಂದಿ, ದಾವಣಗೆರೆ ಜಿಲ್ಲೆಯ ಎಂಟು ಕ್ಷೇತ್ರಗಳಿಂದ 6 ಮಂದಿ ಲಿಂಗಾಯತರು ಆರಿಸಿ ಬಂದಿದ್ದಾರೆ. ಅದೇ ರೀತಿ ಬಳ್ಳಾರಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯದ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 3ರಲ್ಲಿ ಬ್ರಾಹ್ಮಣರು, ರಾಯಚೂರು ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ನಾಯಕ ಸಮುದಾಯದ ಅಭ್ಯರ್ಥಿಗಳು ಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

