ಪ್ರಧಾನ ಸುದ್ದಿ

ಮಂಡಳಿ ರಚನೆವರೆಗೆ ಮೇಲ್ವಿಚಾರಣೆ ಸಮಿತಿ

Published On :

ನವದೆಹಲಿ: ಕಾವೇರಿ ನ್ಯಾಯಾಧಿಕರಣದ ತೀರ್ಪಿನಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆಗುವರೆಗೂ ತಾತ್ಕಾಲಿಕವಾಗಿ ಮೇಲ್ವಿಚಾರಣಾ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಮೇಲ್ವಿಚಾರಣೆ ಸಮಿತಿಯಲ್ಲಿ ನದಿ ಪಾತ್ರದ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ಮುಖ್ಯ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿ ಬರುವ ಮುಂಬರುವ ಜಲ ವರ್ಷದಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಮೇಲ್ವಿಚಾರಣೆ ನಡೆಸಲಿದೆ.
ಒಂದು ವೇಳೆ ನೀರು ಹಂಚಿಕೆಯಲ್ಲಿ ಯಾವುದೇ ರಾಜ್ಯಗಳ ನಡುವೆ ತಕರಾರು ಎದ್ದಲ್ಲಿ, ಅದು ಮೇಲ್ವಿಚಾರಣಾ ಸಮಿತಿ ವ್ಯಾಪ್ತಿಯಲ್ಲಿ ಇತ್ಯರ್ಥವಾಗದೇ ಇದ್ದಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನ ಪಡೆಯಬಹುದು ಎಂದು ಶುಕ್ರವಾರ ನ್ಯಾ. ಆರ್.ಎಂ. ಲೋಧಾ ನೇತತ್ವದ ನ್ಯಾಯಪೀಠ ತಿಳಿಸಿದೆ.
ಕಾವೇರಿ ನ್ಯಾಯಾಧಿಕರಣದ ಐತೀರ್ಪಿನಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಆದೇಶ ನೀಡಿದೆ. ಮೇ 7ರಂದು ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರಕ್ಕೆ ನಿರ್ವಹಣಾ ಮಂಡಳಿ ಯಾವಾಗ ರಚಿಸುತ್ತೀರಿ ಎಂಬ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಪೀಠ ಸೂಚಿಸಿತ್ತು. ಆದರೆ, ಕೇಂದ್ರ ಸರ್ಕಾರ ಶುಕ್ರವಾರ ವಿಚಾರಣೆ ವೇಳೆ ನಿರ್ವಹಣಾ ಮಂಡಳಿ ರಚಿಸುವ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ಪರ ವಕೀಲರಾದ ಫಾಲಿ ನಾರಿಮನ್ ಅವರು, ತಾತ್ಕಾಲಿಕವಾಗಿ ಮೇಲ್ವಿಚಾರಣಾ ಸಮಿತಿ ರಚಿಸಲು ಸಲಹೆ ನೀಡಿದರು.
ಫಾಲಿ ನಾರಿಮನ್ ಅವರ ಸಲಹೆಯನ್ನು ಒಪ್ಪಿದ ನ್ಯಾಯಪೀಠ, ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಆದೇಶ ನೀಡಿತು.
ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ರಚಿಸಲಿರುವ ಮೇಲ್ವಿಚಾರಣಾ ಸಮಿತಿಯು ಕಾವೇರಿ ನಿಗಾ ಸಮಿತಿ ಮಾದರಿಯಲ್ಲೇ ಕಾರ್ಯ ನಿರ್ವಹಿಸಲಿದೆ. ನಿಗಾ ಸಮಿತಿಯಲ್ಲೂ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಧ್ಯಕ್ಷರಾಗಿ ನದಿ ಪಾತ್ರದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸದಸ್ಯರಾಗಿದ್ದರು. ನೀರು ಹಂಚಿಕೆ ಕುರಿತು ತಕರಾರು ಬಂದಾಗಲೆಲ್ಲ ನಿಗಾ ಸಮಿತಿ ಇತ್ಯರ್ಥ ಪಡಿಸುತ್ತಿತ್ತು. ಸಾಧ್ಯವಾಗದೇ ಇದ್ದಾಗ ನ್ಯಾಯಾಲಯದಿಂದ ನಿರ್ದೇಶನ ಪಡೆಯುತ್ತಿತ್ತು. ಜೂನ್ 1ರಿಂದ ನೂತನ ಜಲವರ್ಷ ಪ್ರಾರಂಭವಾಗಲಿದೆ. ಹೀಗಾಗಿ ಮುಂದಿನ ಜಲವರ್ಷವಿಡೀ ಮೇಲ್ವಿಚಾರಣೆ ಸಮಿತಿ ಕಾರ್ಯನಿರ್ವಹಿಸಲಿದೆ.  ಕಾವೇರಿ ನ್ಯಾಯಾಧಿಕರಣ ಐತೀರ್ಪು ಪ್ರಶ್ನಿಸಿ ಕರ್ನಾಟಕ ಸಲ್ಲಿಸಿರುವ ಸಿವಿಲ್ ಅರ್ಜಿಗಳಿನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕಿದೆ. ಇತ್ಯರ್ಥವಾದ ನಂತರವಷ್ಟೆ ಮುಂದಿನ ಕ್ರಮ ಕೈಗೊಳ್ಳಬೇಕು  ಅಲ್ಲಿವರೆಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬಾರದು ಎಂಬುದು ಕರ್ನಾಟಕದ ಬೇಡಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.