ವಿದ್ಯಾರ್ಥಿಗಳು ಪಾಸ್; ಗುಣಮಟ್ಟ ಫೇಲ್
ಕ.ಪ್ರ. ವಾರ್ತೆ ಬೆಂಗಳೂರು ಮೇ 11
ಎಂಟೆಂಟ್ಲೆ ಮಗ್ಗಿ ಹೇಳಲು ಬಾರದವರೆಲ್ಲ ಎಂಟನೇ ತರಗತಿ ಉತ್ತೀರ್ಣರಾಗುತ್ತಿದ್ದಾರೆ!
ಲೋಕಸಭೆಯ ಸ್ಥಾಯಿ ಸಮಿತಿಯು ದೇಶದ ಶಿಕ್ಷಣ ವ್ಯವಸ್ಥೆ ಕುರಿತಂತೆ ನೀಡಿರುವ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ನಿಯಮದ ಬಗ್ಗೆ ಶಿಕ್ಷಣ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ಈ ನಿಯಮದ ಬಗ್ಗೆ ಶಿಕ್ಷಕರು ಬಹಿರಂಗವಾಗಿ ಬೇಸರ ತೋಡಿಕೊಳ್ಳುತ್ತಿದ್ದರು.
ಅನರ್ಹ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡದಿದ್ದರೇ ಶಿಕ್ಷಣದ ಗುಣಮಟ್ಟ ವೃದ್ಧಿಸಲು ಸಾಧ್ಯವೇ ಇಲ್ಲ ಎಂದು ಹತಾಶರಾಗಿ ಕೂತಿದ್ದರು. ಆದರೆ ರಾಜ್ಯಸಭೆಯಲ್ಲಿ ಮಂಡನೆಯಾಗಿರುವ ಈ ವರದಿಯು ಆಶಾದಾಯಕವಾಗಿ ಪರಿಣಮಿಸಿದೆ.
ಈ ನಿಯಮವನ್ನು ಪರಿಶೀಲನೆ ಮಾಡದಿದ್ದರೇ ಶಿಕ್ಷಣ ವ್ಯವಸ್ಥೆ ಕುಲಗೆಡಲಿದೆ ಎಂದು ಎಚ್ಚರಿಸಿದೆ.
ಶಿಕ್ಷಣ ರಂಗದಲ್ಲಿ ಮುಂದುವರಿದಿರುವ ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿಯೇ ಈ ನಿಯಮ ಜಾರಿಯಾದ ಬಳಿಕ ಗುಣಮಟ್ಟ ಕುಸಿಯುತ್ತಿದೆ. ಈ ಬಗ್ಗೆ ಶೀಘ್ರವಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಸಮಿತಿ ತಿಳಿಸಿದೆ.
ಶಿಕ್ಷಣ ಹಕ್ಕು ಕಾಯಿದೆ ಜಾರಿಯಾದ ಬಳಿಕ ದೇಶಾದ್ಯಂತ 1ನೇ ತರಗತಿಯಿಂದ 8ನೇ ತರಗತಿವರೆಗಿನ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ. 6 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಯಾವುದೇ ರ್ಯಾಂಕ್, ಮುಂದಿನ ತರಗತಿಗೆ ತೇರ್ಗಡೆ ಹೊಂದಲು ಪರೀಕ್ಷೆ ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ
ಕಾಯ್ದೆಯಲ್ಲಿಯೇ ಹೇಳಲಾಗಿತ್ತು. ಈ ಅಂಶವನ್ನು 2009ರಲ್ಲಿಯೇ ಸೂಚ್ಯವಾಗಿ ಗಮನಿಸಿದ್ದ ಶಿಕ್ಷಣ ತಜ್ಞರು, ಕಡ್ಡಾಯ ಶಿಕ್ಷಣದ ಹೆಸರಲ್ಲಿ ಗುಣಮಟ್ಟ ಹಾಳುಮಾಡಲಾಗುತ್ತಿದೆ ಎಂದು ಎಚ್ಚರಿಸಿದ್ದರು. ಆದರೆ ಕೇಂದ್ರ ಸರ್ಕಾರ ಕಾಯಿದೆಯ ಹೆಗ್ಗಳಿಕೆ ಪಡೆಯುವುದರ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿತ್ತು.
ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಇಳಿಕೆ: ಒಂದನೇ ತರಗತಿಯಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ. 8ನೇ ತರಗತಿಗೆ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಅರ್ಧಕ್ಕೂ ಅಧಿಕರು ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಪರಿಸ್ಥಿತಿಯಿದೆ. ಇಂತಹ ಪರೀಕ್ಷಾ ಪದ್ಧತಿಯಿಂದ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಪರಿಣಿತರಾಗಲು ಸಾಧ್ಯವಾಗುತ್ತಿಲ್ಲ.
5ನೇ ತರಗತಿಯಲ್ಲಿನ ವಿದ್ಯಾರ್ಥಿಗಳು 2ನೇ ತರಗತಿಯಲ್ಲಿನ ಪಠ್ಯಗಳನ್ನು ಓದಲಾಗುತ್ತಿಲ್ಲ. ಕಳೆದ 2010ರಲ್ಲಿ ಇಂತಹ ವಿದ್ಯಾರ್ಥಿಗಳ ಪ್ರಮಾಣ ಶೇ.46.3ರಷ್ಟಿದ್ದರೇ, ಇದು ವರ್ಷದಿಂದ ವರ್ಷಕ್ಕೆ ಕ್ರಮೇಣವಾಗಿ ಶೇ.51.8, ಶೇ.53.2ಕ್ಕೆ ಏರಿದೆ. ಅದೇ ಸರ್ಕಾರಿ ಶಾಲೆಗಳಲ್ಲಿ ಇದು ಶೇ.58.3ಕ್ಕೆ ಏರಿದೆ.
ಅದಲ್ಲದೇ 3ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳು 1ನೇ ತರಗತಿಯ ಪಠ್ಯವನ್ನು ಓದಲಾಗುತ್ತಿಲ್ಲ. ಈ ಪ್ರಮಾಣವು 2009ರಿಂದ 2012ಕ್ಕೆ ಶೇ.53.4ರಿಂದ ಶೇ. 63ಕ್ಕೆ ಏರಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ಈ ಪ್ರಮಾಣವು ಶೇ.67.7ಕ್ಕೆ ಏರಿದೆ.
ಇನ್ನೊಂದು ವಿಚಿತ್ರವೆಂದರೆ 5ನೇ ತರಗತಿಗೆ ದಾಖಲಾಗುತ್ತಿರುವ ಶೇ.46.5 ವಿದ್ಯಾರ್ಥಿಗಳಿಗೆ ದತ್ತಾಂಶದ ಅಂಕಿಗಳನ್ನು ಕಳೆದು ಲೆಕ್ಕಾಚಾರ ಮಾಡಲು ಬರುತ್ತಿಲ್ಲ. ಇದು 2009ರಲ್ಲಿ ಶೇ.29.1ರಷ್ಟಿರುವುದನ್ನು ಗಮನಿಸಬೇಕು. ಭಾಗಾಕಾರದಲ್ಲಿಯೂ ನಮ್ಮ ವಿದ್ಯಾರ್ಥಿಗಳು ಹಿಂದುಳಿಯುತ್ತಿದ್ದು ಕಳೆದ 3 ವರ್ಷದಲ್ಲಿ ಶೇ.63.8ರಿಂದ ಶೇ.75.2ಕ್ಕೆ ಏರಿದೆ.
ಆರ್ಟಿಇ ಹಾಗೂ ಉತ್ತೀರ್ಣವನ್ನು ಕಡ್ಡಾಯಗೊಳಿಸಿದ ಬಳಿಕ 8ನೇ ತರಗತಿಗೆ ಬರುತ್ತಿರುವ ವಿದ್ಯಾರ್ಥಿಗಳ ಸಾಮರ್ಥ್ಯ ಕ್ಷೀಣಿಸುತ್ತಿದೆ. 5ನೇ ತರಗತಿಯಲ್ಲಿ ಶೇ.58.87 ವಿದ್ಯಾರ್ಥಿಗಳು ಗಣಿತದಲ್ಲಿ ಉತ್ತೀರ್ಣರಾಗುವಂತಿದ್ದರು.
ಕಳೆದ 2012ರಲ್ಲಿ ಅದೇ 8ನೇ ತರಗತಿಯ ಶೇ.53.86 ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ವಿಜ್ಞಾನ ಹಾಗೂ ಸಮಾಜ ವಿಜ್ಞಾನದಲ್ಲಿ ಇದು ಶೇ.41.30 ಹಾಗೂ ಶೇ.46.19ಕ್ಕೆ ಇಳಿದಿದೆ.
ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

