ವೋಟ್ ಮುಗಿದ್ರೂ ವಿಮ್ಸ್ 'ಓಟಿ' ಸರಿಯಾಗಿಲ್ಲ!
ಬಳ್ಳಾರಿ: ರೋಗಿಯ ಜೀವ ಉಳಿಸುವ ಕೇಂದ್ರಗಳಾದ ಆಪರೇಷನ್ ಥಿಯೇಟರ್ ಓಟಿಗಳು ಆಸ್ಪತ್ರೆಯ ಹೃದಯ ಭಾಗವಿದ್ದಂತೆ. ಆದರೆ ನಾಲ್ಕೈದು ಜಿಲ್ಲೆಗಳಿಗೆ ಆಸರೆಯಾಗಿರುವ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆಪರೇಷನ್ ಥಿಯೇಟರ್ಗಳೆಲ್ಲವೂ ಅವ್ಯವಸ್ಥೆಯ ಆಗರವಾಗಿವೆ.
ಬಳ್ಳಾರಿಯಲ್ಲಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿಗಳ ಪರಿಸ್ಥಿತಿ ಶೋಚನೀಯ. ಓಟಿಗಳಲ್ಲಿ ಎಸಿ ವ್ಯವಸ್ಥೆ ಇಲ್ಲ. ಎಚ್ಐವಿ, ಎಬಿಎಸ್ಎಜಿಗೆ ಪ್ರತ್ಯೇಕ ಥಿಯೇಟರ್ ಇಲ್ಲ. ಸ್ವಲ್ಪ ಯಾಮಾರಿದರೂ ರೋಗಿಗಳ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ. ಇನ್ನು ನೀರು, ವಿದ್ಯುತ್ ಪೂರೈಕೆ ಯಾವಾಗಲೂ ಅಸಮರ್ಪಕ. ಸೂಕ್ತ ಸೌಲಭ್ಯಗಳಿಲ್ಲದೆ ರೋಗಿಗಳು ಮಾತ್ರವಲ್ಲ, ವೈದ್ಯರು ಹಾಗೂ ಸಿಬ್ಬಂದಿಯೂ ಸುಸ್ತು ಹೊಡೆದಿದ್ದಾರೆ. ಬಳ್ಳಾರಿಯ ಬಿಸಿಲಿನ ಉರಿಗೆ ಎಸಿ ಇಲ್ಲದಿದ್ದರೆ ತಾಸುಗಟ್ಟಲೆ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟ. ಆಸ್ಪತ್ರೆ ಅವ್ಯವಸ್ಥೆಯನ್ನು ಹೊರಗಡೆ ಹೇಳುವಂತಿಲ್ಲ, ಬಿಡುವಂತಿಲ್ಲ. ನಾಲ್ಕೈದು ವರ್ಷಗಳಿಂದ ಇಂಥ ಸ್ಥಿತಿಯಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಅಧಿಕಾರಗಳ ಬೇಜಾವಾಬ್ದಾರಿಯಿಂದಾಗಿ ರೋಗಿಗಳ ಹತ್ತಿರ ಉಗಿಸಿಕೊಳ್ಳುತ್ತಿದ್ದಾರೆ.
ಅವ್ಯವಸ್ಥೆಯಲ್ಲಿ ಓಟಿಗಳು: ರೋಗಿಗಳ ಹಿತರಕ್ಷಣೆಗಿಂತ ವಿಮ್ಸ್ನಲ್ಲಿ ಅಧಿಕಾರಕ್ಕಾಗಿ ಕಿತ್ತಾಟವೇ ಹೆಚ್ಚು. ಈ ಆಸ್ಪತ್ರೆಗೆ ಭಾರಿ ಪ್ರಮಾಣದ ಅನುದಾನ ಬಂದರೂ ಶಸ್ತ್ರಚಿಕಿತ್ಸಾ ಕೊಠಡಿಗಳು ಸುಧಾರಿಸಿಲ್ಲ. ನಿತ್ಯ ಸುದೀರ್ಘ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳ ನರಕಯಾತನೆ ಆ ದೇವರಿಗೇ ಪ್ರೀತಿ.
ಪ್ರತ್ಯೇಕ ಶಸ್ತ್ರಚಿಕಿತ್ಸೆ ಕೊಠಡಿ ಇಲ್ಲ: ಎಚ್ಐವಿ, ಎಚ್ಬಿಎಸ್ಎಜಿಗೆ ಪ್ರತ್ಯೇಕ ಶಸ್ತ್ರಚಿಕಿತ್ಸೆ ಕೊಠಡಿ ಇರಬೇಕು. ರಾಜ್ಯದಲ್ಲಿ ಅತಿದೊಡ್ಡ ಆರೋಗ್ಯ ಸಂಸ್ಥೆಯಾದ ವಿಮ್ಸ್ನಲ್ಲೇ ಆ ರೋಗಿಗಳಿಗಾಗಿ ಪ್ರತ್ಯೇಕ ಶಸ್ತ್ರಚಿಕಿತ್ಸೆ ಕೊಠಡಿ ಇಲ್ಲ. ಆಯಾ ವಿಭಾಗಗಳಿಗೆ ಇರುವ ಕೊಠಡಿಯಲ್ಲಿ ಎಚ್ಐವಿ, ಎಚ್ಬಿಎಸ್ಎಜಿ ರೋಗಿಗಳಿಗೂ ಆತಂಕದಲ್ಲೇ ಶಸ್ತ್ರಚಿಕಿತ್ಸೆ ಮಾಡಬೇಕು. ಒಂದು ಶಸ್ತ್ರಚಿಕಿತ್ಸೆ ಮುಗಿದು ಮೂರು ತಾಸಿನ ಮೇಲೆ ಮತ್ತೊಂದನ್ನು ಮಾಡುವಂಥ ಅವ್ಯವಸ್ಥೆ ವಿಮ್ಸ್ನಲ್ಲಿದೆ.
ಹತ್ತಾರು ಗಂಟೆ ಕೆಲಸ: ವಿಮ್ಸ್ಗೆ ಬಳ್ಳಾರಿ, ಕೊಪ್ಪಳ, ರಾಯಚೂರು, ಆಂಧ್ರಪ್ರದೇಶದ ಕರ್ನೂಲು, ಅನಂತಪುರ ಮುಂತಾದ ಜಿಲ್ಲೆಗಳಿಂದ ಸಾವಿರಾರು ರೋಗಿಗಳು ಬರುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ವೈದ್ಯರು ಹತ್ತಾರು ಗಂಟೆ ಓಟಿಗಳಲ್ಲೇ ಕಾಲ ಕಳೆಯಬೇಕಾಗಿದೆ. ಕನಿಷ್ಠ ಆಪರೇಷನ್ ಮಾಡುವಾಗಲಾದರೂ ಎಸಿ ಇದ್ದರೆ ವೈದ್ಯರು ಹಾಗೂ ರೋಗಿಗಳ ಆರೋಗ್ಯಕ್ಕೆ ಉತ್ತಮ.
ಆಪರೇಷನ್ಗೆ ತೊಂದರೆ: ಕಿವಿ, ಮೂಗು, ಗಂಟಲು ವಿಭಾಗ, ಕಿಡ್ನಿ ಮೂತ್ರ ಪಿಂಡ, ಎಲುಬು ಮತ್ತು ಕೀಲು ವಿಭಾಗ, ಪ್ರಸೂತಿ ಮತ್ತು ಹೆರಿಗೆ ವಿಭಾಗ- ಹೀಗೆ ವಿಮ್ಸ್ನಲ್ಲಿ 6-7 ಆಪರೇಷನ್ ಥಿಯೇಟರ್ಗಳಿದ್ದು, ಎಲ್ಲವೂ ಅವ್ಯವಸ್ಥೆಯ ಆಗರಗಳಾಗಿವೆ. ಶಸ್ತ್ರಚಿಕಿತ್ಸೆ ಮಾಡುವಾಗ ವಿದ್ಯುತ್ ಕೈಕೊಟ್ಟರೆ, ಜನರೇಟರ್ ಚಾಲೂ ಮಾಡಲು 5ರಿಂದ 15 ನಿಮಿಷ ಬೇಕು. ಅಷ್ಟರವರೆಗೆ ಆಪರೇಷನ್ ಸ್ಥಗಿತ!
ವಾರದೊಳಗೆ ಎಸಿ ವ್ಯವಸ್ಥೆ
ವಿಮ್ಸ್ನ ಆಪರೇಷನ್ ಥಿಯೇಟರ್ಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಈ ವಾರದ ಕೊನೆಗೆ ಎಲ್ಲ ಥಿಯೇಟರ್ಗಳಿಗೆ ಹವಾನಿಯಂತ್ರಣ ವ್ಯವಸ್ಥೆ, ಸಮರ್ಪಕ ವಿದ್ಯುತ್, ನೀರು ಪೂರೈಕೆ ಮಾಡಲಾಗುತ್ತದೆ. ಎಚ್ಐವಿ, ಎಚ್ಬಿಎಸ್ಎಜಿ ರೋಗಿಗಳಿಗೆ ಪ್ರತ್ಯೇಕ ಆಪರೇಷನ್ ಥಿಯೇಟರ್ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
- ಡಾ. ಲಕ್ಷ್ಮಿನಾರಾಯಣ ರೆಡ್ಡಿ, ವಿಮ್ಸ್ ನಿರ್ದೇಶಕ
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

