ಭಾರತ್ ನಿರ್ಮಾಣ್ ಕೇಂದ್ರದ ಕ್ಯಾಂಪೇನ್

ನವದೆಹಲಿ: 2004ರಲ್ಲಿ ಭಾರತ್ ಶೈನಿಂಗ್... 2014ರಲ್ಲಿ ಭಾರತ್ ನಿರ್ಮಾಣ್...
ಹೌದು 2004ರಲ್ಲಿ ಎನ್ಡಿಎ ಸರ್ಕಾರ ತನ್ನ ಸಾಧನೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಭಾರತ್ ಶೈನಿಂಗ್ ಎಂಬ ಜಾಹೀರಾತು ಕ್ಯಾಂಪೇನ್ ಮಾಡಿತ್ತು. ಅಂತೆಯೇ ಇದೀಗ ಯುಪಿಎ ಸರ್ಕಾರ ಕೂಡ 2014ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ತನ್ನ ಸಾಧನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ 180 ಕೋಟಿ ವೆಚ್ಚದಲ್ಲಿ ಭಾರತ್ ನಿರ್ಮಾಣ್ ಎಂಬ ಅಭಿಯಾನ ಆರಂಭಿಸಿದೆ.
'ನಾವು ಭಾರತ್ ಶೈನಿಂಗ್ ರೀತಿಯ ಜಾಹೀರಾತು ಮಾಡುತ್ತಿಲ್ಲ, ಭಾರತ್ ನಿರ್ಮಾಣ್ಗೆ ತನ್ನದೇ ಆದ ಶೈಲಿ ಇದೆ' ಎಂದು ಕೇಂದ್ರ ಸಚಿವ ಮನೀಷ್ ತಿವಾರಿ ಹೇಳಿದ್ದಾರೆ.
ಈ ಜಾಹೀರಾತು ಆಂದೋಲನದಲ್ಲಿ ಕೇಂದ್ರ ಸರ್ಕಾರ ತನ್ನ 9 ವರ್ಷಗಳ ಆಡಳಿತದಲ್ಲಿನ ಸಾಧನೆಗಳನ್ನು ಜನರಿಗೆ ಕಟ್ಟಿಕೊಡಲು ಮುಂದಾಗಿದೆ. ಪ್ರಮುಖ 5 ಸಾಧನೆಗಳ ಪಟ್ಟಿ ಮಾಡಿ ಜನರ ಮುಂದಿಡುವುದು ಈ ಜಾಹೀರಾತಿನ ಉದ್ದೇಶ. ಅಲ್ಲದೆ 9 ವರ್ಷಗಳ ಮೊದಲು ಎನ್ಡಿಎ ಸಾಧನೆಗಳನ್ನು ಹೋಲಿಕೆ ಮಾಡಿ ಹೇಳುವುದು ಸೇರಿದೆ.
ಇದನ್ನು ಟಿವಿ ಜಾಹೀರಾತುಗಳು, ಕಿರುಚಿತ್ರಗಳು, ಪತ್ರಿಕೆಗಳಲ್ಲಿ ಜಾಹೀರಾತು, ಮೊಬೈಲ್ ಕಾಲರ್ ಟ್ಯೂನ್ಗಳನ್ನು ಬಳಸಿಕೊಂಡು ನೀಡಲಾಗುತ್ತದೆ. ಜಾಹೀರಾತುಗಳನ್ನು ತಕ್ಷಣದಿಂದಲೇ ಪ್ರಸಾರ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 35 ಕೋಟಿ ವೆಚ್ಚದಲ್ಲಿ 15 ದಿನಗಳ ಕಾಲ ಈ ಕ್ಯಾಂಪೇನ್ ನಡೆಸಲಾಗುತ್ತದೆ. ಈಗಿನಿಂದ ಮುಂದಿನ ವರ್ಷದ ಫೆಬ್ರವರಿ ವರೆಗೆ 180 ಕೋಟಿ ವೆಚ್ಚದಲ್ಲಿ ಜಾಹೀರಾತು ನೀಡಲಾಗುತ್ತದೆ.
ಎನ್ಡಿಎ ಸರ್ಕಾರ 2004ರಲ್ಲಿ ಭಾರತ್ ಶೈನಿಂಗ್ಗಾಗಿ 150 ಕೋಟಿ ವೆಚ್ಚ ಮಾಡಿತ್ತು. ಕೇಂದ್ರ ಸರ್ಕಾರ 2009ರಲ್ಲಿ ಜಾಹೀರಾತಿಗಾಗಿ 100 ಕೋಟಿ ವೆಚ್ಚ ಮಾಡಿತ್ತು.
ಒಂದು ವೇಳೆ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟ ಮಾಡಿಬಿಟ್ಟರೆ, ಆಗ ಜಾಹೀರಾತು ಕೊಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಈಗಿನಿಂದಲೇ ಸರ್ಕಾರ ತನ್ನ ಸಾಧನೆಗಳನ್ನು ಜನರಿಗೆ ತಿಳಿಸಲು ಹೊರಟಿದೆ.
ಶಾನ್, ಸುನಿಧಿ ಕಂಠ: ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಕೇವಲ ಹಗರಣಗಳು, ವಿವಾದಗಳು, ಪ್ರತಿಪಕ್ಷಗಳ ಟೀಕೆಗಳ ಸುರಿಮಳೆಗಷ್ಟೇ ಸೀಮಿತವಲ್ಲ ಎಂಬುದನ್ನು ತೋರಿಸಿಕೊಡಲು ಕೇಂದ್ರ ಮುಂದಾಗಿದೆ. ಜಿಂಗಲ್ಗಳ ಮೂಲಕ ಯುಪಿಎ ಸಾಧನೆಗಳನ್ನು ಪದ್ಯದ ಮೂಲಕ ತಿಳಿಸುತ್ತಾ, 11 ಪ್ರಾದೇಶಿಕ ಭಾಷೆಗಳಲ್ಲಿ ಟೆಲಿವಿಷನ್, ಮುದ್ರಣ ಮಾಧ್ಯಮ, ಸಾಮಾಜಿಕ ತಾಣಗಳಲ್ಲಿ ಜಾಹೀರಾತು ನೀಡುವ ಯೋಜನೆ ರೂಪಿಸಲಾಗಿದೆ.
'ಮೀಲೋಂ ಹಮ್ ಆಗಯೇ, ಮೀಲೋಂ ಹಮೆ ಜಾನಾ ಹೈ'(ನಾವು ಬಹಳ ದೂರ ಕ್ರಮಿಸಿದ್ದೇವೆ, ಇನ್ನಷ್ಟು ದೂರ ಕ್ರಮಿಸಬೇಕಾಗಿದೆ) ಎಂಬ ಶೀರ್ಷಿಕೆಯುಳ್ಳ ಯುಪಿಎ-2ರ ಹೊಸ ಗೀತೆ ಬಗ್ಗೆ ಮಾಹಿತಿ ನೀಡಿದ್ದಾರೆ ಮಾಹಿತಿ ಮತ್ತು ಪ್ರಸಾರ ಸಚಿವ ಮನೀಷ್ ತಿವಾರಿ. ಇದನ್ನು ಬರೆದದ್ದು ಜಾವೇದ್ ಅಖ್ತರ್. ಈ ಹಾಡನ್ನು ಹಾಡಿದ್ದು ಖ್ಯಾತನಾಮರಾದ ಶಾನ್ ಮತ್ತು ಸುನಿಧಿ ಚೌಹಾಣ್.
ಯುಪಿಎಯ ಬಡವರ ಪರ ಯೋಜನೆಗಳು ಮತ್ತು ಸಾರ್ವಜನಿಕ ವಿತರಣಾ ಯೋಜನೆಗಳನ್ನು ಹಾಡಿ ಹೊಗಳುವ '9 ವರ್ಷಗಳ ಭಾರತದ ಕಥೆ' ಎಂಬ ಅಭಿಯಾನವನ್ನು ನಿರ್ದೇಶಿಸಿರುವುದು ಸಿನಿಮಾ ನಿರ್ಮಾಪಕ ಪ್ರದೀಪ್ ಸರ್ಕಾರ್. ಇದರ ಪ್ರಸಾರದ ಅಂದಾಜು ವೆಚ್ಚ 100 ಕೋಟಿ ಎನ್ನಲಾಗಿದೆ.
ಯುಪಿಎ ಆಂದೋಲನ
- ಐಟಿ ಮಂದಿ ಕೆಲಸ ಹುಡುಕಿಕೊಂಡು ಅಮೆರಿಕಕ್ಕೆ ಹೋಗದೆ ಇಲ್ಲೇ ನೆಲೆಸಿರುವ ಟಿವಿ ಜಾಹೀರಾತು
- ಶ್ರಮಿಕ ಮಹಿಳೆಗೆ ಸಂಜೆ ಹೊತ್ತಲ್ಲಿ ಪಾಠ ಹೇಳಿಕೊಡುವುದು
- ಪ್ರಧಾನಮಂತ್ರಿಗಳ ಯೋಜನೆಯಡಿ ಹಳ್ಳಿ ಹಳ್ಳಿಗಳಲ್ಲಿ ಆಗಿರುವ ರಸ್ತೆಗಳ ಬಗ್ಗೆ ಜಾಹೀರಾತು
- ವಿವಿಧ ನಗರಗಳಲ್ಲಿರುವ ಮೆಟ್ರೋ ಕಾಮಗಾರಿಗಳು
- ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಉಚಿತ ಚಿಕಿತ್ಸೆ
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


