ಸಿದ್ದು ಡೇ ಔಟ್: ಪ್ರಧಾನಿ ಭೇಟಿ
ನವದೆಹಲಿ: ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ಬಂದು ಬೀಡು ಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಗುರುವಾರ ಬಿಡುವಿಲ್ಲದ ಕಾರ್ಯಕ್ರಮ. ಪ್ರಧಾನಿ, ಆಹಾರ ಸಚಿವರ ಭೇಟಿ ಜತೆಗೆ ಕಾಂಗ್ರೆಸ್ ಮುಖಂಡರ ಭೇಟಿ. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಸುಮಾರು 20 ನಿಮಿಷ ಕಾಲ ಮಾತುಕತೆ ನಡೆಸಿದರು.
ಮಾತುಕತೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ತಕ್ಷಣದಲ್ಲೇ ಜಾರಿ ಮಾಡುತ್ತಿರುವ ವಿಷಯವನ್ನು ತಿಳಿಸಿದ ಸಿದ್ದರಾಮಯ್ಯ, ಅದಕ್ಕೆ ಕೇಂದ್ರ ಸರ್ಕಾರದ ನೆರವು ಅಗತ್ಯ ಎಂಬ ಬೇಡಿಕೆಯನ್ನು ಇಟ್ಟರು.
ಒಂದು ರುಪಾಯಿಗೆ ಅಕ್ಕಿ ನೀಡುತ್ತಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ತಾವು ಆಹಾರ ಸಚಿವರನ್ನು ಭೇಟಿ ಮಾಡಿ ಔಪಚಾರಿಕವಾಗಿ ಬೇಡಿಕೆ ಸಲ್ಲಿಸುವುದಾಗಿಯೂ ಮತ್ತು ಅದಕ್ಕೆ ನಿಮ್ಮ ಒತ್ತಾಸೆಯೂ ಅತ್ಯಗತ್ಯ ಎಂದು ತಿಳಿಸಿದರು.
ಐದನೇ ಬಾರಿಗೆ ರಾಜ್ಯ ಸಭೆಗೆ ಆಯ್ಕೆ ಬಯಸಿರುವ ಪ್ರಧಾನಿ ಮನಮೋಹನ್ಸಿಂಗ್ ಅವರಿಗೆ ಸಿದ್ದರಾಮಯ್ಯ ಶುಭ ಹಾರೈಸಿದರು.
ಒಂದು ರುಪಾಯಿ ಅಕ್ಕಿ ಪಕ್ಕಾ!
ಸಿದ್ದರಾಮಯ್ಯ ಅವರ ಮೊದಲ ಸರ್ಕಾರಿ ಕೆಲಸಕ್ಕೆ ಯಶಸ್ಸು ಸಿಕ್ಕಿದೆ. ಕೇಂದ್ರ ಆಹಾರ ಸಚಿವ ಕೆ.ವಿ. ಥಾಮಸ್ ಕರ್ನಾಟಕಕ್ಕೆ 1.82 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಒದಗಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಗುರುವಾರ ಕೆ.ವಿ. ಥಾಮಸ್ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು ಒಂದು ರುಪಾಯಿಗೆ ಅಕ್ಕಿ ನೀಡುವ ಯೋಜನೆಯನ್ನು ವಿವರಿಸಿ ಹೆಚ್ಚುವರಿ ಅಕ್ಕಿಗೆ ಬೇಡಿಕೆ ಇಟ್ಟರು.
ಈಗಾಗಲೇ ಯೋಜನೆ ಬಗ್ಗೆ ಮಾಹಿತಿ ಪಡೆದಿದ್ದ ಕೆ.ವಿ. ಥಾಮಸ್ ಅವರು ಹೆಚ್ಚುವರಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದರು. ಹೆಚ್ಚುವರಿ ಅಕ್ಕಿಗೆ ಆಗುವ ವೆಚ್ಚದ ಅಲ್ಪ ಭಾಗವನ್ನು ಸಾಧ್ಯವಾದರೆ ಕೇಂದ್ರವೂ ಭರಿಸಲಿದೆ ಎಂಬ ಭರವಸೆಯನ್ನೂ ಕೆ.ವಿ. ಥಾಮಸ್ ನೀಡಿದ್ದಾರೆನ್ನಲಾಗಿದೆ. ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಚುನಾವಣಾ ಸಮಿತಿ ಅಧ್ಯಕ್ಷರಾಗಿದ್ದ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಂತರ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ಭೇಟಿ ಮಾಡಿದರು.
ಖರ್ಗೆ ಜತೆ 40 ನಿಮಿಷ ಮಾತುಕತೆ
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದ ಕೇಂದ್ರ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು ಸುಮಾರು 40 ನಿಮಿಷ ಮಾತುಕತೆ ನಡೆಸಿದರು. ಮಾತುಕತೆ ವೇಳೆ ಸಂಪುಟಕ್ಕೆ ತಾವು ಆಯ್ಕೆ ಮಾಡಿರುವ ವ್ಯಕ್ತಿಗಳು ಮತ್ತು ನೀಡಬಹುದಾದ ಖಾತೆಗಳ ಬಗ್ಗೆ ಚರ್ಚಿಸಿದರು. ಮಲ್ಲಿಕಾರ್ಜುನ ಖರ್ಗೆ ಪರವಾಗಿ ದಲಿತರು ನಡೆಸುತ್ತಿರುವ ಪ್ರತಿಭಟನೆ ಕುರಿತೂ ಪ್ರಸ್ತಾಪವಾಯಿತು ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಅವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಸಿದ್ದರಾಮಯ್ಯ ಅವರಿಗೆ ನನ್ನದಷ್ಟೆ ಅಲ್ಲ ಇಡೀ ಕಾಂಗ್ರೆಸ್ ಬೆಂಬಲ ಇದೆ' ಎಂದರು. ಎಲ್ಲರನ್ನು ಕಾಪಾಡುವ ಹೊಣೆ ಮುಖ್ಯಮಂತ್ರಿಗಳದ್ದು. ನನ್ನ ಮತ್ತು ಅವರ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಹೈಕಮಾಂಡ್ ಕೈಗೊಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಅತ್ಯುತ್ತಮ ಆಡಳಿತ ನೀಡುವುದಷ್ಟೆ ನಮ್ಮ ಮುಂದಿನ ಗುರಿ ಎಂದರು. ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

