ಪ್ರಧಾನ ಸುದ್ದಿ

ಸ್ಪಾಟ್ ಫಿಕ್ಸಿಂಗ್: ಬಾಲಿವುಡ್ ನಂಟು ಬಯಲು

ಸ್ಪಾಟ್ ಫಿಕ್ಸಿಂಗ್: ಬಾಲಿವುಡ್ ನಂಟು ಬಯಲು
Published On :

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಂಧನಕ್ಕೊಳಗಾಗಿದ್ದ ಕ್ರಿಕೆಟಿಗ ಶ್ರೀಶಾಂತ್ ಹಾಗೂ 10 ಇತರ ಆರೋಪಿಗಳ ಬಂಧನವನ್ನು 5 ದಿನಗಳವರೆಗೆ ವಿಸ್ತರಿಸಿ ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಏತನ್ಮಧ್ಯೆ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದಿವಂಗತ ದಾರಾಸಿಂಗ್ ಅವರ ಪುತ್ರ ವಿಂದು ಸಿಂಗ್ ಅವರನ್ನು ಬಂಧಿಸಿದ್ದಾರೆ. ಇದರಿಂದ, ಸ್ಪಾಟ್ ಫಿಕ್ಸಿಂಗ್‌ನಲ್ಲಿ ಬಾಲಿವುಡ್‌ನ ಪಾತ್ರವಿರುವ ಗುಮಾನಿ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.

ಬಂಧನ ಅವಧಿ ವಿಸ್ತರಣೆ: ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸುವ ಉದ್ದೇಶದಿಂದ ದೆಹಲಿ ಪೊಲೀಸ್, ಶ್ರೀಶಾಂತ್ ಸೇರಿ ಇತರರ ಬಂಧನದ ಅವಧಿಯನ್ನು ಹೆಚ್ಚಿಸುವಂತೆ ದೆಹಲಿ ನ್ಯಾಯಾಲಯವನ್ನು ಕೋರಲು ಉದ್ದೇಶಿಸಿದ್ದರು.  ಶ್ರೀಶಾಂತ್ ಹಾಗೂ ಇತರರ ಬಂಧನಾವಧಿ ಮಂಗಳವಾರಕ್ಕೆ ಕೊನೆಗೊಳ್ಳುವುದರಲ್ಲಿತ್ತು.     
ಈ ಹಿನ್ನೆಲೆಯಲ್ಲಿ, ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಶ್ರೀಶಾಂತ್, ಅಜಿತ್ ಚಂಡೀಲ ಹಾಗೂ ಅಂಕಿತ್ ಚೌವಾಣ್ ಅವರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ತದನಂತರ, ಮೂವರ ಬಂಧನ ಅವಧಿಯನ್ನು ವಿಸ್ತರಿಸುವಂತೆ ಮನವಿಯನ್ನೂ ಪೊಲೀಸರು ನ್ಯಾಯಾಲಯದ ಮುಂದಿಟ್ಟರು. ಮನವಿಯ ಪರಿಶೀಲಿಸಿದ ನ್ಯಾಯಾಲಯ, ಶ್ರೀಶಾಂತ್ ಸೇರಿದಂತೆ ಇತರ 10 ಜನರ ಆರೋಪಿಗಳ ಬಂಧನವನ್ನು 5 ದಿನಗಳವರೆಗೆ ವಿಸ್ತರಿಸಿ ಆದೇಶ ನೀಡಿತು.

ವಿಂದು ಸಿಂಗ್ ಬಂಧನ: ಸ್ಪಾಟ್ ಫಿಕ್ಸಿಂಗ್ ಹಿನ್ನೆಲೆಯಲ್ಲಿ ಬಾಲಿವುಡ್ ನಟ ವಿಂದು ದಾರಾ ಸಿಂಗ್ ಅವರನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಬುಕ್ಕಿ ರಮೇಶ್ ವ್ಯಾಸ್ ವಿಚಾರಣೆಗೊಳಪಡಿಸಿದಾಗ ವ್ಯಾಸ್ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಪಟ್ಟಿಯಲ್ಲಿ ವಿಂದು ಹೆಸರು ಸಹ ಕಂಡುಬಂದಿದೆ. ಅಲ್ಲದೆ ವ್ಯಾಸ್ ವಿಂದುಗೆ ಹಲವಾರು ಬಾರಿ ಕರೆ ಮಾಡಿ ಮಾತನಾಡಿರುವುದು ಪತ್ತೆಯಾಗಿದೆ. ಹೀಗಾಗಿ, ವಿಂದು ಬುಕ್ಕಿಗಳು ಮತ್ತು ಆಟಗಾರರ ನಡುವಿನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಂದು ಬಾಲಿವುಡ್‌ನ ಕೆಲ ಚಿತ್ರಗಳಲ್ಲಿ ನಟಿಸಿದ್ದು, ಹಲವಾರು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ವಿಂದು ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ ಎನ್ನಲಾಗಿದೆ.
ವಿಂದು ಐಪಿಎಲ್ ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಸಾಕಷ್ಟು ಪಂದ್ಯಗಳನ್ನೂ ವೀಕ್ಷಿಸಿದ್ದಾರೆ. ಪಂದ್ಯಗಳ ಸಂದರ್ಭ ಹಲವಾರು ಸೆಲೆಬ್ರಿಟಿಗಳು ಮತ್ತು ಕ್ರಿಕೆಟರ್‌ಗಳ ಜತೆ ಪಂದ್ಯ ವೀಕ್ಷಿಸಿದ್ದಾರೆ ವಿಂದು.
ವಿಂದು ದಾರಾ ಸಿಂಗ್ ಅವರನ್ನು ಮೂರು ದಿನಗಳ ಕಾಲ ಅಂದರೆ ಮೇ 24ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ದೊಡ್ಡವರ ಷಾಮೀಲು?: ಸ್ಪಾಟ್ ಫಿಕ್ಸಿಂಗ್‌ನಡಿ ಬಂಧನಕ್ಕೊಳಗಾಗಿರುವ ವಿಂದು ಸಿಂಗ್ ಅವರು, ಧೋನಿ ಪತ್ನಿ ಸಾಕ್ಷಿ, ಹರ್ಭಜನ್ ಸಿಂಗ್ ಹಾಗೂ ಶಾರೂಖ್ ಖಾನ್ ಅವರಿಗೆ ಹೆಚ್ಚು ಆಪ್ತರಾಗಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗಿನ ಕೆಲ ಐಪಿಎಲ್‌ನ ವಿವಿಧ ಪಂದ್ಯಗಳಲ್ಲಿ ಸಾಕ್ಷಿ, ಹರ್ಭಜನ್ ಹಾಗೂ ಶಾರೂಖ್ ಜೊತೆ ಕುಳಿತು ವಿಂದು ಪಂದ್ಯ ವೀಕ್ಷಿಸಿರುವ ಫೋಟೋ ಹಾಗೂ ವಿಡಿಯೋಗಳು ಪೊಲೀಸರ ಕೈಗೆ ಸಿಕ್ಕಿದ್ದು, ಇದರಿಂದ 'ಆಟಗಾರರೊಂದಿಗೆ ನೇರ ಸಂಪರ್ಕ ಸಾಧ್ಯವಾಗದಿದ್ದರೆ, ಆಟಗಾರರ ಸಂಬಂಧಿಗಳ, ಸ್ನೇಹಿತರ ಮೂಲಕ ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್ ವ್ಯವಹಾರ ಕುದುರಿಸುತ್ತಾರೆ' ಎಂಬ ಪೊಲೀಸರ ಅನುಮಾನಕ್ಕೆ ಇದು ಇಂಬು ಕೊಟ್ಟಿದೆ.

ಐಪಿಎಲ್ ನಿಷೇಧವಿಲ್ಲ: ಸ್ಪಾಟ್ ಫಿಕ್ಸಿಂಗ್ ಹಿನ್ನೆಲೆಯಲ್ಲಿ ಐಪಿಎಲ್  ಉಳಿದ ಪಂದ್ಯಗಳ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸ್ಪಾಟ್ ಫಿಕ್ಸಿಂಗ್ ಹಿನ್ನೆಲೆಯಲ್ಲಿ, ಐಪಿಎಲ್‌ನ ಉಳಿದ ಪಂದ್ಯಗಳನ್ನು ನಿಷೇಧಿಸಬೇಕೆಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್, ಪಂದ್ಯಗಳನ್ನು ನಿಷೇಧಿಸಲು ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ಹೇಳಿತು.
ಆದರೆ, ಈಗ ಉಂಟಾಗಿರುವ ಸ್ಪಾಟ್ ಫಿಕ್ಸಿಂಗ್ ಬಗ್ಗೆ ತನಿಖೆ ನಡೆಸಲು ಬಿಸಿಸಿಐಗೆ ಸುಪ್ರೀಂ ಸೂಚನೆ ನೀಡಿದ್ದು, ತನಿಖೆಗಾಗಿ ಏಕವ್ಯಕ್ತಿ ಆಯೋಗವನ್ನು ನೇಮಿಸಿ, ಎರಡು ವಾರಗಳಲ್ಲಿ ತನಿಖಾ ವರದಿ ನೀಡುವಂತೆ ಹೇಳಿದೆ. ಅಲ್ಲದೇ, ವೈಜ್ಞಾನಿಕವಾಗಿ, ವಸ್ತುನಿಷ್ಠವಾಗಿ ತನಿಖೆ ನಡೆಸುವಂತೆ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಮಧ್ಯವರ್ತಿ ವಿಂದು ದಾರಾ ಸಿಂಗ್
ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಂಧಿತ ಬುಕ್ಕಿ ರಮೇಶ್ ವ್ಯಾಸ್ ವಿಚಾರಣೆಗೊಳಪಡಿಸಿದಾಗ ವ್ಯಾಸ ಸಂಪರ್ಕದಲ್ಲಿರುವ ವ್ಯಕ್ತಿಗಳ ಪಟ್ಟಿಯಲ್ಲಿ ವಿಂದು ಹೆಸರು ಕಂಡುಬಂದಿದೆ. ಅಲ್ಲದೆ ವ್ಯಾಸ್ ವಿಂದುಗೆ ಹಲವಾರು ಬಾರಿ ಕರೆ ಮಾಡಿದ್ದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಂದು ಅವರನ್ನು ಬಂಧಿಸಲಾಗಿದೆ. ಈತ ಬುಕ್ಕಿಗಳು, ಆಟಗಾರರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ವಿಂದು ಬಾಲಿವುಡ್‌ನ ಕೆಲ ಚಿತ್ರಗಳಲ್ಲಿ ನಟಿಸಿದ್ದು, ಹಲವಾರು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ವಿಂದು ಐಪಿಎಲ್ ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಸಾಕಷ್ಟು ಪಂದ್ಯಗಳನ್ನೂ ವೀಕ್ಷಿಸಿದ್ದಾರೆ. ಪಂದ್ಯಗಳ ಸಂದರ್ಭ ಹಲವಾರು ಸೆಲೆಬ್ರಿಟಿಗಳು ಮತ್ತು ಕ್ರಿಕೆಟರ್‌ಗಳ ಜತೆ ಪಂದ್ಯ ವೀಕ್ಷಿಸಿದ್ದಾರೆ ವಿಂದು. ವಿಂದು ದಾರಾ ಸಿಂಗ್ ಅವರನ್ನು ಮೂರು ದಿನಗಳ ಕಾಲ ಅಂದರೆ ಮೇ 24ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.