ಪ್ರಧಾನ ಸುದ್ದಿ

ಗುರುಬಲ ಬಂಧಿ

ಗುರುಬಲ ಬಂಧಿ
Published On :

ನವದೆಹಲಿ/ಮುಂಬೈ: ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಗುರುನಾಥ್ ಮೇಯಪ್ಪನ್ ಅವರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.
ತಮಿಳುನಾಡಿನ ಮಧುರೆಯಿಂದ ರಾತ್ರಿ 8 ಗಂಟೆ ವೇಳೆಗೆ ಮುಂಬೈ ಪೊಲೀಸರ ಮುಂದೆ ಹಾಜರಾಗಿದ್ದ ಮೇಯಪ್ಪನ್, ವಿಚಾರಣೆಗೆ ಒಳಗಾಗಿದ್ದರು. ಆದರೆ ಪೊಲೀಸರ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವರು ಮೇಯಪ್ಪನ್ ಅವರನ್ನು ತಡರಾತ್ರಿ 12 ಗಂಟೆ ವೇಳೆಗೆ ಬಂಧಿಸಿದ್ದಾರೆ.
ಮುಂಬೈ ಅಪರಾಧ ವಿಭಾಗದ ಜಂಟಿ ಆಯುಕ್ತ ಹಿಮಾಂಶು ರಾಯ್ ಅವರು ಬಂಧನವನ್ನು ದೃಢಪಡಿಸಿದ್ದು, ಐಪಿಎಲ್ ಪಿಕ್ಸಿಂಗ್‌ನಲ್ಲಿ ಮೇಯಪ್ಪನ್ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿದ್ದಾರೆ.  ಇನ್ನು 24 ಗಂಟೆಗಳಲ್ಲಿ ಮೇಯಪ್ಪನ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.  ಮೇಯಪ್ಪನ್ ಬಂಧನವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಈ ಕೂಡಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಬಿಸಿಸಿಐನಿಂದ ಎನ್. ಶ್ರೀನಿವಾಸನ್ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆಂಗ್ಲ ಸುದ್ದಿವಾಹಿನಿಗಳ ಜೊತೆ ಮಾತನಾಡಿರುವ ಅವರು, ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಈ ಕೂಡಲೇ ಐಪಿಎಲ್‌ನಿಂದ ವಜಾ ಮಾಡಬೇಕು ಎಂದಿದ್ದಾರೆ.
ಶ್ರೀನಿ ಕುರ್ಚಿಗೆ ಭಂಗ?: ಅಳಿಯನ ಬಂಧನವಾಗುತ್ತಿದ್ದಂತೆ ಅತ್ತ ಬಿಸಿಸಿಐ ಅಧ್ಯಕ್ಷರಾಗಿರುವ ಎನ್. ಶ್ರೀನಿವಾಸನ್ ಕುರ್ಚಿ ಅಲ್ಲಾಡತೊಡಗಿದೆ. ಮೇಯಪ್ಪನ್‌ಗೂ ಸಿಎಸ್‌ಕೆಗೂ ಯಾವುದೇ ಸಂಬಂಧವಿಲ್ಲ ಎಂದು ಶುಕ್ರವಾರ ಬೆಳಗ್ಗೆ ಇಂಡಿಯಾ ಸಿಮೆಂಟ್ಸ್ ಸ್ಪಷ್ಟನೆ ನೀಡಿದ್ದರೂ ಸಹ ಶ್ರೀನಿವಾಸನ್ ಅವರು ಹುದ್ದೆಯನ್ನು ಮುಂದುವರಿಯುವುದು ಅನುಮಾನವೇ ಆಗಿದೆ.  ಶ್ರೀನಿವಾಸನ್ ರಾಜಿನಾಮೆ ನೀಡಬೇಕು ಎಂದು ಎನ್‌ಸಿಪಿ, ಸುಬ್ರತಾ ರಾಯ್ ಆಗ್ರಹಿಸಿದ್ದಾರೆ.

ಗುರುವೇ ಗೊತ್ತಿಲ್ಲ: ಸಿಎಸ್‌ಕೆ
ಗುರುನಾಥ್ ಮೇಯಪ್ಪನ್‌ಗೂ, ಸಿಎಸ್‌ಕೆಗೂ ಯಾವುದೇ ಸಂಬಂಧವಿಲ್ಲ. ಅವರು ತಂಡದ ಸಿಇಓ ಆಗಲಿ ಅಥವಾ ಪ್ರಿನ್ಸಿಪಲ್ ಆಗಿರಲಿಲ್ಲ ಎಂದು ಇಂಡಿಯಾ ಸಿಮೆಂಟ್ಸ್ ಹೇಳಿಕೆ ಹೊರಡಿಸಿದೆ. ಆದರೆ ಅವರು ತಂಡದ ಸಲಹೆಗಾರರು ಆಗಿದ್ದರು ಎಂಬ ಸ್ಪಷ್ಟನೆಯನ್ನೂ ನೀಡಿದೆ. ಈ ಮೂಲಕ ಸಿಎಸ್‌ಕೆ ಆಡಳಿತ ಮಂಡಳಿ ಗುರುನಾಥ್ ಮೇಯಪ್ಪನ್ ಅವರಿಂದ ಸಂಪೂರ್ಣವಾಗಿ ದೂರ ಉಳಿಯುವ ಪ್ರಯತ್ನ ಮಾಡಿದೆ.

ಟ್ವಿಟರ್‌ನಲ್ಲಿ ಬಯಲು
ಆಂಗ್ಲ ವಾಹಿನಿ ಸಿಎನ್‌ಎನ್ -ಐಬಿಎನ್ ಮೇಯಪ್ಪನ್‌ಗೂ, ಸಿಎಸ್‌ಕೆಗೂ ಇರುವ ಸಂಬಂಧದ ಕುರಿತಂತೆ ಟ್ವಿಟರ್ ವರದಿಯೊಂದನ್ನು ಪ್ರಕಟಿಸಿತು. ಮೇಯಪ್ಪನ್ ಅವರ ಟ್ವಿಟರ್ ಅಕೌಂಟ್‌ನಲ್ಲಿ ಮೊದಲಿಗೆ, ಸಿಎಸ್‌ಕೆಯ ಪ್ರಿನ್ಸಿಪಲ್ ಎಂಬ ಹುದ್ದೆಯ ಉಲ್ಲೇಖವಿತ್ತು. ಆದರೆ ಇಂಡಿಯಾ ಸಿಮೆಂಟ್ಸ್ ಹೇಳಿಕೆ ಹೊರಡಿಸುತ್ತಿದ್ದಂತೆ, ಅವರ ಅಕೌಂಟ್‌ನಲ್ಲಿದ್ದ ಸಿಎಸ್‌ಕೆ ಪ್ರಿನ್ಸಿಪಲ್ ಎಂಬ ಉಲ್ಲೇಖವೇ ಮಾಯವಾಗಿತ್ತು!

ಸಿಎಸ್‌ಕೆ ಭವಿಷ್ಯವೇ ಅತಂತ್ರ

ಮೇಯಪ್ಪನ್ ಬಂಧನವಾಗುತ್ತಿದ್ದಂತೆ ಸಿಎಸ್‌ಕೆ ಭವಿಷ್ಯವೂ ಅತಂತ್ರವಾಗಿದೆ. ಐಪಿಎಲ್ ನಿಯಮಾವಳಿಗಳ ಪ್ರಕಾರ, ಫ್ರಾಂಚೈಸಿಯೊಂದರ ಮಾಲೀಕ ಬಂಧನಕ್ಕೊಳಗಾದರೆ ಆ ತಂಡವನ್ನು ಅನರ್ಹಗೊಳಿಸಬಹುದಾಗಿದೆ. ಹೀಗಾಗಿ ಮೇಯಪ್ಪನ್ ಬಂಧನ ಸಿಎಸ್‌ಕೆಯ ವಿನಾಶಕ್ಕೂ ಕಾರಣವಾಗುವ ಸಂಭವವಿದೆ ಎಂದು ಹೇಳಲಾಗಿದೆ.

ಸ್ಪಾಟ್ ಫಿಕ್ಸಿಂಗ್: ವಿಚಾರಣೆ ವೇಳೆ ಪೊಲೀಸರಿಗೆ ಸಹಕರಿಸದ ಹಿನ್ನೆಲೆ

ಮುಂಬೈ ಅಪರಾಧ ವಿಭಾಗ ಪೊಲೀಸರಿಂದ ಮೇಯಪ್ಪನ್ ಬಂಧನ
ರಾತ್ರಿ 12ರ ವೇಳೆಗೆ ಸಿಎಸ್‌ಕೆ ಮುಖ್ಯಸ್ಥನನ್ನು ಬಂಧಿಸಿದ ಪೊಲೀಸರು
ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ರಾಜಿನಾಮೆಗೆ ಹೆಚ್ಚಿದ ಒತ್ತಡ
ಎನ್‌ಸಿಪಿ ನಾಯಕ ಶರದ್ ಪವಾರ್, ಸುಬ್ರತಾ ರಾಯ್‌ರಿಂದ ಆಗ್ರಹ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.