ಪ್ರಧಾನ ಸುದ್ದಿ

ಡೆಂಘೀ ಪ್ರಕರಣ: ತಲಾ 1 ಲಕ್ಷ ಪರಿಹಾರ

Published On :

ಕ.ಪ್ರ. ವಾರ್ತೆ ಮೈಸೂರು ಮೇ 25
ಡೆಂಘೀ ಜ್ವರದಿಂದ ಮೃತಪಟ್ಟ ನಾಲ್ಕು ಮಕ್ಕಳ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮೈಸೂರು ತಾಲೂಕು ಡಿ. ಸಾಲುಂಡಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಅವರು, ಮೃತರ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೀಡುವುದಾಗಿ ಘೋಷಿಸಿದರು. ಅಲ್ಲದೆ, ಡೆಂಘೀ ಜ್ವರದಿಂದ ಬಳಲುತ್ತಿರುವವರಿಗೆ ಸರ್ಕಾರದಿಂದಲೇ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳಿದರು.
ಈಗಾಗಲೇ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಡೆಂಘೀ ವಿಶೇಷ ಘಟಕ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಇದು ಸಾಲದಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಈ ವೆಚ್ಚವನ್ನೂ ಸರ್ಕಾರ ಭರಿಸಲಿದೆ ಎಂದರು.
ಕಬಿನಿ ನೀರು: ಕಬಿನಿ ನೀರನ್ನು ಮೈಸೂರು ನಗರಕ್ಕೆ ಪೂರೈಸಲಾಗುತ್ತಿದೆ. ಈ ಯೋಜನೆಯಡಿ ಮೈಸೂರು ತಾಲೂಕಿನ 30 ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಒದಗಿಸಲಾಗುವುದು. ಇದರಲ್ಲಿ ಡಿ. ಸಾಲುಂಡಿ, ಧನಗಳ್ಳಿ ಇನ್ನಿತರ ಗ್ರಾಮಗಳು ಸೇರಿವೆ ಎಂದರು.
ಸಾಂತ್ವನ: ಡಿ. ಸಾಲುಂಡಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು ಮತ್ತು ಅವರ ಪೋಷಕರಿಗೆ ಧೈರ್ಯ ಹೇಳಿದರು. ಡೆಂಘೀ ಜ್ವರದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಅವರು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು.
ಬಳಿಕ ಡೆಂಘೀ ಜ್ವರದಿಂದ ಮೃತಪಟ್ಟ ಪ್ರೀತಂ, ಯಶಸ್ವಿನಿ, ರವಿಚಂದ್ರ ಮತ್ತು ಸುಷ್ಮಿತಾ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಶವ ಸಂಸ್ಕಾರ ಬಾಬ್ತು ತಲಾ 1000 ಚೆಕ್ ಅನ್ನು ಮೃತರ ಕುಟುಂಬಕ್ಕೆ ವಿತರಿಸಲಾಯಿತು.

ಚಪ್ಪಾಳೆ ತಟ್ಟಿದ್ದಕ್ಕೆ ಗದರಿಸಿದ ಸಿದ್ದು
ಡೆಂಘೀ ಜ್ವರದಿಂದ ಮೃತಪಟ್ಟ ಡಿ.ಸಾಲುಂಡಿ ಗ್ರಾಮದ ಮಕ್ಕಳ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸುತ್ತಿದ್ದಂತೆ ಗ್ರಾಮಸ್ಥರು ಚಪ್ಪಾಳೆ ತಟ್ಟಿದರು. ಇದರಿಂದ ಕುಪಿತಗೊಂಡ ಸಿದ್ದರಾಮಯ್ಯ 1 ಲಕ್ಷ ಕೊಟ್ಟರೆ ಸತ್ತು ಹೋಗಿರುವ ಮಕ್ಕಳು ಬಂದುಬಿಡುತ್ತಾರಾ ಎಂದು ಜೋರು ಧ್ವನಿಯಲ್ಲಿ ಗದರಿಸಿದರು. ಸಿದ್ದರಾಮಯ್ಯ ಅವರ ಈ ಪ್ರಶ್ನೆಗೆ ಉತ್ತರಿಸಲಾಗದ ಗ್ರಾಮಸ್ಥರು ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಿ ಸುಮ್ಮನಾದರು.

ಸಾಂಕ್ರಾಮಿಕ ರೋಗಕ್ಕೆ ಸರ್ಕಾರದಿಂದ ಚಿಕಿತ್ಸೆ ವೆಚ್ಚ: ಯು.ಟಿ. ಖಾದರ್
ಮಂಗಳೂರು:
ಸಾಂಕ್ರಾಮಿಕ ರೋಗದಿಂದ ಆಸ್ಪತ್ರೆಗೆ ದಾಖಲಾದವರ ಪೂರ್ಣ ಚಿಕಿತ್ಸೆಯನ್ನು ಭರಿಸಲು ಸರ್ಕಾರ ಸಜ್ಜಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಸಾಂಕ್ರಾಮಿಕ ರೋಗ ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲೆಯ ಅಧಿಕಾರಿಗಳ ಸಭೆ ಎರಡು ದಿನದೊಳಗೆ ನಡೆಸಲಾಗುವುದು. ಆರೋಗ್ಯ ಜಾಗೃತಿ ಬಗ್ಗೆ ತಿಂಗಳೊಳಗೆ ಜಿಲ್ಲಾವಾರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಲುಂಡಿ ದುರಂತಕ್ಕೆ ಇಲಾಖೆ ವೈಫಲ್ಯ ಕಾರಣ: ಆರೋಗ್ಯ ಇಲಾಖೆ ವೈಫಲ್ಯವೇ ಸಾಲುಂಡಿ ದುರಂತಕ್ಕೆ ಕಾರಣ. ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಧಿಕಾರಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.