ಪ್ರಧಾನ ಸುದ್ದಿ

ಮೇಲ್ಮನೆ ಉಪಸಭಾಪತಿಗೆ ಸಿಎಂ ಗೃಹಭಂಗ

ಮೇಲ್ಮನೆ ಉಪಸಭಾಪತಿಗೆ ಸಿಎಂ ಗೃಹಭಂಗ
Published On :

ಬೆಂಗಳೂರು: ಜ್ಯೋತಿಷಿಗಳ ಸಲಹೆಗೆ ತಲೆದೂಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಉಪಸಭಾಪತಿ ವಿಮಲಾಗೌಡರಿಗೆ 'ಗೃಹಭಂಗ' ಉಂಟು ಮಾಡಿದ್ದಾರೆ.
ವಿಮಲಾಗೌಡರಿಗೆ ನಿಗದಿಯಾಗಿದ್ದ ಮನೆಯನ್ನು ಸಿದ್ದರಾಮಯ್ಯ ಗೃಹ ಕಚೇರಿ ಮಾಡಿಕೊಳ್ಳುವ ಉದ್ದೇಶದಿಂದ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಆದರೆ ವಿಮಲಾಗೌಡರಿಗೆ ಈ ವಿಷಯ ಸೌಜನ್ಯಕ್ಕೂ ತಿಳಿಸಿಲ್ಲ.
ಇದರಿಂದ ತೀವ್ರ ಮನನೊಂದ ವಿಮಲಾಗೌಡ, ಖುದ್ದಾಗಿ ಸಿದ್ದರಾಮಯ್ಯನವರ ಬಳಿ ಬಂದು ತಮ್ಮ ಸಮಸ್ಯೆ ಭಿನ್ನವಿಸಿಕೊಂಡರು. ಆಗ ಸಿದ್ದರಾಮಯ್ಯ ಅವರ ಜತೆಯಲ್ಲೇ ಇದ್ದ ಅವರ ಆಪ್ತ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ, ಅಕ್ಷರಶಃ ಸರ್ವಾಧಿಕಾರಿಯಂತೆ ವರ್ತಿಸಿ ವಿಮಲಾಗೌಡರನ್ನು ಸಾಗಹಾಕಿದ್ದಾರೆ ಎಂಬ ಸುದ್ದಿ ವಿಧಾನಸೌಧದ ಸುತ್ತ ಕೇಳಿ ಬರುತ್ತಿದೆ.

ಆಗಿದ್ದೇನು?: ವಿಧಾನ ಪರಿಷತ್ ಉಪಸಭಾಪತಿ ಆಗಿರುವ ವಿಮಲಾಗೌಡರಿಗೆ ಶಿಷ್ಟಾಚಾರದ ಪ್ರಕಾರ ಸರ್ಕಾರಿ ನಿವಾಸ ನಿಗದಿ ಮಾಡಬೇಕು. ಆದರೆ ಬಿಜೆಪಿ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ವಿಮಲಾಗೌಡರು ಅತಿಗಣ್ಯರ ಕೋಟಾದಲ್ಲಿ ಸರ್ಕಾರಿ ಸೂರು ನೀಡಿ ಎಂದು ಮಾಡಿದ್ದ ಮನವಿ ಫಲಿಸಿರಲಿಲ್ಲ. ನಂತರ ಬಂದ ಜಗದೀಶ್ ಶೆಟ್ಟರ್, 'ಆಯ್ತು ಬಿಡಿ ಕೊಡೋಣು' ಎಂದಿದ್ದರೇ ಹೊರತು ಮನೆ ಕೊಟ್ಟಿರಲಿಲ್ಲ.         
 ಅಷ್ಟರಲ್ಲಿ ಬಿಜೆಪಿಯಲ್ಲಿ ಮುಗಿಲುಮುಟ್ಟಿದ ಬಂಡಾಯದ ಫಲವಾಗಿ ಸಿ.ಎಂ. ಉದಾಸಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷದಿಂದ ಹೊರ ನಡೆದರು. ಹೀಗಾಗಿ ಆ ಮನೆಯನ್ನು ನೀಡುವಂತೆ ವಿಮಲಾಗೌಡರು ಶೆಟ್ಟರ್ ಬಳಿ ಮತ್ತೆ ಮನವಿ ಮಾಡಿದರು. ಸರ್ಕಾರದಿಂದ ಆದೇಶವೂ ಆಯ್ತು. ಆದರೆ ಸರ್ಕಾರಿ ಬಂಗಲೆಯಲ್ಲಿ ನೆಲೆಸುವ ವಿಮಲಾಗೌಡರ ಕನಸು ಮಾತ್ರ ನನಸಾಗಲೇ ಇಲ್ಲ!
ಏಕೆಂದರೆ ನೂತನವಾಗಿ ನೇಮಕಗೊಂಡ ಲೋಕಾಯುಕ್ತರಿಗೆ ನಿಗದಿ ಮಾಡುವಂತೆ ರಾಜ್ಯಪಾಲರು ಸೂಚಿಸಿದ್ದರು. ಹೀಗಾಗಿ ವಿಮಲಾಗೌಡರಿಗೆ ಕರೆ ಮಾಡಿದ ಶೆಟ್ಟರ್, 'ಮೇಡಂ ದಯವಿಟ್ಟು ಕ್ಷಮಿಸಿ' ಎಂದು ನಡೆದ ಘಟನೆ ವಿವರಿಸಿದ್ದರು. ಹೀಗಾಗಿ ಬಿಜೆಪಿ ಸರ್ಕಾರ ವಿಮಲಾಗೌಡರಿಗೆ ಆವಾಸ ಕಲ್ಪಿಸುವುದಕ್ಕೆ ಕೊನೆಗೂ ವಿಫಲವಾಯಿತು.
ಚುನಾವಣೆ ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತು. ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರ ಪಕ್ಕದಲ್ಲಿ ವಾಸ್ತವ್ಯವಿದ್ದ ಗೃಹ ಸಚಿವ ಆರ್. ಅಶೋಕ ಅವರ ಬಂಗಲೆಯನ್ನು ಶಿಷ್ಟಾಚಾರ ಇಲಾಖೆ ಕೊನೆಗೂ ವಿಮಲಾಗೌಡರಿಗೆ ನಿಗದಿಗೊಳಿಸಿತು. ಮನೆ ಸಿಕ್ಕ ಖುಷಿಯಲ್ಲಿ ಹಿರಿಹಿರಿ ಹಿಗ್ಗಿದ ಗೌಡರು ನವೀಕರಣ ಕಾರ್ಯ ಶುರುವಿಟ್ಟುಕೊಂಡಿದ್ದರು.
ಆದರೆ ಮುಖ್ಯಮಂತ್ರಿಯಾದ ನಂತರ ಜ್ಯೋತಿಷ್ಯದ ಬಗ್ಗೆ ವಿಶೇಷ ನಂಬಿಕೆ ಬೆಳೆಸಿಕೊಂಡಿರುವ ಸಿದ್ದರಾಮಯ್ಯ ಅನುಗ್ರಹದ ಬದಲು ತಾವು ವಿಧಾನಸಭೆ ಪ್ರತಿಪಕ್ಷ ನಾಯಕನಾಗಿದ್ದ ಸಂದರ್ಭದಲ್ಲಿ ಸರ್ಕಾರ ನಿಗದಿ ಮಾಡಿದ ಮನೆಯಲ್ಲೇ ವಾಸ್ತವ್ಯವಿರಲು ನಿರ್ಧರಿಸಿದರು. ಈ ಮನೆಯಿಂದಲೇ ತಮ್ಮ ಅದೃಷ್ಟ ಖುಲಾಯಿಸಿದೆ ಎಂದು ಬಲವಾಗಿ ನಂಬಿರುವ ಅವರು, ತಮ್ಮ ಮನೆ ಪಕ್ಕದಲ್ಲೇ ಇರುವ ವಿಮಲಾಗೌಡರಿಗೆ ನಿಗದಿಯಾದ ಮನೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೇಸರ:
ಇದರಿಂದ ನೊಂದ ವಿಮಲಾಗೌಡ ಸಿದ್ದರಾಮಯ್ಯನವರನ್ನು ಖುದ್ದಾಗಿ ಭೇಟಿ ಮಾಡಿ ಹಿಂದಿನ ಘಟನೆಯನ್ನು ವಿವರಿಸಿ ತಮಗೆ ಮನೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಮಾತ್ರವಲ್ಲ ನೀವು ಸೌಜನ್ಯಕ್ಕಾದರೂ ಉಪಸಭಾಪತಿಯಾದ ನನಗೆ ಒಂದು ಮಾತು ಹೇಳಬಹುದಿತ್ತು ಎಂದು ಸಾತ್ವಿಕ ಅಸಮಾಧಾನವನ್ನೂ ಪ್ರಕಟಿಸಿದ್ದಾರೆ.
ಸಿದ್ದರಾಮಯ್ಯನವರೇನೋ 'ಆಯ್ತು ಬಿಡಮ್ಮ ಬೇರೆ ವ್ಯವಸ್ಥೆ ಮಾಡೋಣ' ಎಂಬ ಧಾಟಿಯಲ್ಲಿ ಸಮಾಧಾನಪಡಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಅವರ ಜತೆಯಿದ್ದ ಸಚಿವ ಡಾ.ಮಹಾದೇವಪ್ಪ ಮುಖ್ಯಮಂತ್ರಿಯವರನ್ನು ಮೆಚ್ಚಿಸುವ ಭರದಲ್ಲಿ ಕೊಂಕು ಮಾತನಾಡಿದರು ಎಂದು ಖುದ್ದು ವಿಮಲಾಗೌಡರೇ ತಮ್ಮ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ. 'ಅಷ್ಟು ಮಾತ್ರವಲ್ಲ ನಮ್ಮ ಯಡಿಯೂರಪ್ಪ ಅವರೂ ಇಷ್ಟೇ ಸ್ಪೀಡಾಗಿ ಹೋಗ್ತಾ ಇದ್ರು. ಸ್ವಲ್ಪ ಹುಶಾರಾಗಿರಿ ಅಂತ ಸಾಹೇಬ್ರಿಗೆ ಹೇಳಿ' ಎಂದು ಸಿದ್ದರಾಮಯ್ಯ ಅವರ ಆಪ್ತರ ಬಳಿ ವ್ಯಂಗ್ಯವಾಡಿದ್ದಾರೆ.

- ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.