ಪ್ರಧಾನ ಸುದ್ದಿ

ಗಣಿ ಮಾಲೀಕರ ಠೇವಣಿ ಮೇಲೆ ಐಟಿ ಕಣ್ಣು

Published On :

ಕ.ಪ್ರ.ವಾರ್ತೆ, ಬಳ್ಳಾರಿ, ನ. 4-
ಗಣಿ ಹಣವನ್ನು ಬೇನಾಮಿ ಹೆಸರಿನಲ್ಲಿ ಸಾವಧಿ ಠೇವಣಿ (ಫಿಕ್ಸಡ್ ಡೆಪಾಸಿಟ್) ರೂಪದಲ್ಲಿ ಸೇಫ್ ಎಂದು ಹಲವರು ಇಟ್ಟಿದ್ದಾರೆ.
ಒಂದೆಡೆ ಸಿಬಿಐ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಆರೋಪಿಗಳ ಮೇಲೆ ವಿಸ್ತ್ರೃತವಾದ ತನಿಖೆ ನಡೆಸುತ್ತಿದೆ. ಇದೀಗ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕೆಲವು ಬ್ಯಾಂಕುಗಳಲ್ಲಿ ಬೇನಾಮಿ ಹೆಸರಿನಲ್ಲಿರುವ ಠೇವಣಿ ಹಣಕ್ಕೆ ಟಿಡಿಎಸ್ ಪಾವತಿಸಿರುವ ಬಗ್ಗೆ ಮಾಹಿತಿ ಪಡೆಯಲು ಮುಂದಾಗಿರುವುದು ಗಣಿ ಉದ್ಯಮಿಗಳಿಗೆ ಮತ್ತೊಂದು ಶಾಕ್ ನೀಡಿದಂತಾಗಿದೆ.
ಬಳ್ಳಾರಿ, ಹೊಸಪೇಟೆ, ಸಂಡೂರು ಹೀಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಖಾಸಗಿ ಹಾಗೂ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗಣಿ ಉದ್ಯಮಿಗಳು, ವ್ಯಾಪಾರಸ್ಥರ ಹಣ ಬೇನಾಮಿ ಹೆಸರಿನಲ್ಲಿ ಸಾವಧಿ ಠೇವಣಿ ರೂಪದಲ್ಲಿದೆಯೇ ಎಂಬ ಅನುಮಾನ ಕಾಡುತ್ತಿದೆ. ಬೇನಾಮಿ ಪತ್ರವೊಂದು ಇಂಥ ಹಣವಿರುವ ಬಗ್ಗೆ ಐಟಿ ಅಧಿಕಾರಿಗಳ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಕೆಲವು ಬ್ಯಾಂಕುಗಳನ್ನು ಪರಿಶೀಲಿಸುತ್ತಿದ್ದಾರೆ. ಇದರಿಂದ ಕೇವಲ ಗಣಿ ಉದ್ಯಮಿಗಳಿಗೆ ಮಾತ್ರವಲ್ಲದೆ, ಇದೀಗ ಬ್ಯಾಂಕ್ ಅಧಿಕಾರಿಗಳಿಗೂ ಬಿಸಿ ಮುಟ್ಟುವ ಭೀತಿ ಎದುರಾಗಿದೆ.

ಬ್ಯಾಂಕುಗಳಲ್ಲಿ ಕೋಟ್ಯಂತರ ಠೇವಣಿ ಹಣ: ಗಣಿಗಾರಿಕೆಯಿಂದ ಗಳಿಸಿರುವ ಹಣಕ್ಕೆ ಟಿಡಿಎಸ್ನಿಂದ ತಪ್ಪಿಸಿಕೊಳ್ಳಲು ಬ್ಯಾಂಕುಗಳನ್ನು ಮೂಲವಾಗಿ ಬಳಸಿಕೊಂಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ ಬೇನಾಮಿ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟು, ಅದನ್ನು ಆರು ತಿಂಗಳ ನಂತರ ಬೇರೆಯವರ ಹೆಸರಿನಲ್ಲಿ ಅಥವಾ ಬೇರೆ ಬ್ಯಾಂಕುಗಳಲ್ಲಿ ಸಾವಧಿ ಠೇವಣಿ ಇಡುವುದರಿಂದ ವರ್ಷದ ಅವಧಿಯಲ್ಲಿ ಟಿಡಿಎಸ್ನಿಂದ ತಪ್ಪಿಸಿಕೊಳ್ಳಬಹುದು. ಒಂದು ಸಾರಿ ಟಿಡಿಎಸ್ ಕಟ್ಟಿದರೆ, ಆ ಹಣದ ಬಗ್ಗೆ ಐಟಿ ಅಧಿಕಾರಿಗಳು ಕಣ್ಣಿಡುತ್ತಾರೆ. ಇದರಿಂದ ಸಾವಧಿ ಠೇವಣಿಯನ್ನು 6 ತಿಂಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಶೀಲನಾ ಕಾರ್ಯಕ್ಕೆ ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.

ಐಟಿ ಅಧಿಕಾರಿಗಳಿಂದ ಪರಿಶೀಲನೆ: ಈಗಾಗಲೇ ಬಳ್ಳಾರಿ, ಹೊಸಪೇಟೆ, ಸಂಡೂರು ತಾಲೂಕುಗಳ ಕೆಲವು ಬ್ಯಾಂಕ್ಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಬ್ಯಾಂಕುಗಳಲ್ಲಿ ಎಷ್ಟು ಹಣ ಠೇವಣಿ ರೂಪದಲ್ಲಿದೆ? ಎಷ್ಟು ಹಣಕ್ಕೆ ಟಿಡಿಎಸ್ ಕಟ್ಟಿದ್ದಾರೆ? ಹೀಗೆ ವಿವಿಧ ರೂಪದಲ್ಲಿಟ್ಟಿರುವ ಠೇವಣಿಗಳನ್ನು ಪರಿಶೀಲಿಸಲಾಗುತ್ತಿದೆ. ಯಾವುದೇ ಬ್ಯಾಂಕುಗಳು ನೋ (್ಞಟ್ಟಿಢಿ) ಯುವರ್ ಕಸ್ಟಮರ್(ಕೆವೈಸಿ), ಆ್ಯಂಟಿ ಮನಿ ಲ್ಯಾಂಡರಿಂಗ್ ಆ್ಯಕ್ಟಿವಿಟೀಸ್ (ಎಂಎಎಲ್) ಅಡಿಯಲ್ಲಿ ಗ್ರಾಹಕರ ಕೋಟ್ಯಂತರ ರುಪಾಯಿಗೆ ಠೇವಣಿ ಇಡುವಾಗ ಹಣದ ಮಾಹಿತಿಯನ್ನು ಪಡೆಯಬೇಕು. ಬ್ಯಾಂಕ್ಗಳು ನಿಯಮಗಳನ್ನು ಅನುಸರಿಸುತ್ತಿವೆಯೇ ಎಂಬುದು ಇಂಥ ಪರಿಶೀಲನೆಯ ವೇಳೆಯಲ್ಲಿ ಅಥವಾ ಮುಂದಿನ ಪರಿಶೀಲನೆಯ ಸಂದರ್ಭದಲ್ಲಿ ತಿಳಿಯುತ್ತದೆ.

ಕೋಟ್ಯಂತರ ರು. ಮೂಲದ ಪರಿಶೀಲನೆ: ಇದೀಗ ಠೇವಣಿ ರೂಪದಲ್ಲಿ ಇಟ್ಟಿರುವ ಕೋಟ್ಯಂತರ ಹಣವನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು ಮುಂದೆ ಠೇವಣಿ ಇಟ್ಟಿರುವವರಿಗೆ ನೋಟಿಸ್ ಮೂಲಕ ಮಾಹಿತಿ ಕೇಳುವ ಸಾಧ್ಯತೆ ಇದೆ. ಸಿಬಿಐ ಅಧಿಕಾರಿಗಳು ಗಣಿ ಉದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ತನಿಖೆಯ ವ್ಯಾಪ್ತಿಗೆ ಒಳಪಡುವ ಬ್ಯಾಂಕುಗಳ ಲೇವಾದೇವಿ ವ್ಯವಹಾರದ ಬಗ್ಗೆ ತನಿಖೆ ನಡೆಸಿದರೆ, ಇದೀಗ ಐಟಿ ಅಧಿಕಾರಿಗಳು ಬ್ಯಾಂಕುಗಳಲ್ಲಿರುವ ಕೋಟ್ಯಂತರ ರುಪಾಯಿ ಠೇವಣಿ, ತೆರಿಗೆ ಪಾವತಿ ಕುರಿತಾಗಿ ಪರಿಶೀಲಿಸುತ್ತಿದ್ದಾರೆ.

ಗಣಿ ವಲಯಕ್ಕೆ ಮತ್ತೊಂದು ಕುತ್ತು: ಬ್ಯಾಂಕುಗಳೂ ಆದಾಯ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾದಂತೆ ಕಾಣುತ್ತಿದೆ. ಐಟಿ ಅಧಿಕಾರಿಗಳು ಗೌಪ್ಯವಾಗಿಯೇ ಠೇವಣಿ ಕುರಿತಾಗಿ ಟಿಡಿಎಸ್ ಪಾವತಿಸಿರುವ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಸಿಬಿಐ ತನ್ನ ತನಿಖೆಯ ಮೂಲಕ ಕೆಲವೊಂದು ಗಣಿ ಉದ್ಯಮಿಗಳ ವ್ಯವಹಾರದ ಬಣ್ಣ ಬಯಲು ಮಾಡಲು ಮುಂದಾಗಿದ್ದಾರೆ. ಇದೀಗ ಐಟಿ ಅಧಿಕಾರಿಗಳು ಠೇವಣಿ ಹಣದ ಮೇಲೆ ಹದ್ದಿನ ಕಣ್ಣಿಟ್ಟಿರುವುದು ಬ್ಯಾಂಕ್ಗಳೂ ಮತ್ತಷ್ಟು ಭೀತಿಗೊಳ್ಳುವಂತೆ ಮಾಡಿದೆ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.