ಪ್ರಧಾನ ಸುದ್ದಿ

ಮಕ್ಕಳ ಹೊಟ್ಟೆಗೆ ಕೊಳೆತ ಮೊಟ್ಟೆ!

Published On :

ಕೊಪ್ಪಳ: ಸರ್ಕಾರ ಮಕ್ಕಳ ಆರೋಗ್ಯ ಕಾಪಾಡಲು ಹಾಗೂ ಅಪೌಷ್ಟಿಕತೆ ನೀಗಿಸಲು ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಅದರ ಅನುಷ್ಠಾನದ ಮೇಲೆ ಹಿಡಿತವಿಲ್ಲದ ಕಾರಣ, ಯೋಜನೆಗಳು ಅಡ್ಡ ಹಾದಿ ಹಿಡಿದಿವೆ.
ಇದಕ್ಕೆ ತಾಜಾ ಉದಾಹರಣೆ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಕೊಳೆತ ಮೊಟ್ಟೆಗಳು. ಇದರಿಂದ ಮಕ್ಕಳ ಆರೋಗ್ಯ ಕೆಡುತ್ತಿರುವುದನ್ನು ಮನಗಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಮೊಟ್ಟೆ ನೀಡುವುದನ್ನೇ ನಿಲ್ಲಿಸಿದ್ದಾರೆ. ಇಂತಹ ಮೊಟ್ಟೆಗಳನ್ನು ತಾಲೂಕು ಸಿಡಿಪಿಒ ಕಚೇರಿಗೂ ತಲುಪಿಸಿದ್ದಾರೆ.

ಭಾರಿ ಗೋಲ್ಮಾಲ್: ಜಿಲ್ಲಾದ್ಯಂತ 1782 ಅಂಗನವಾಡಿಗಳಿದ್ದು, 68620 ಮಕ್ಕಳಿದ್ದಾರೆ. ಈ ಮಕ್ಕಳಿಗೆ ಪ್ರತಿ ದಿನ ಇಷ್ಟು ಮೊಟ್ಟೆ ಎಂದರೂ ರು. 2.77 ಲಕ್ಷ ಆಗುತ್ತದೆ. ಕಾರಣ, ಸರ್ಕಾರ ಪ್ರತಿ ಮೊಟ್ಟೆಗೆ ನಾಲ್ಕು ರುಪಾಯಿ ಐದು ಪೈಸೆ ನೀಡುತ್ತದೆ.
ಇಲ್ಲಿಯೇ ಇರುವುದು ಗೋಲ್ಮಾಲ್. ಆದರೆ, ಈ ದರದಲ್ಲಿ ಮೊಟ್ಟೆಯನ್ನು ಖರೀದಿ ಮಾಡಿದರೆ ಅತ್ಯುತ್ತಮ ಮೊಟ್ಟೆಗಳು ಸಿಗುತ್ತವೆ. ಕೋಳಿಫಾರ್ಮ್ನಲ್ಲಿ ಸಿಗುವ ಕಡಿಮೆ ದರದ ಮೊಟ್ಟೆಗಳನ್ನು ಪೂರೈಕೆ ಮಾಡಲಾಗುತ್ತದೆ. ಕೋಳಿಫಾರ್ಮ್ನಲ್ಲಿ ಕೊಳೆತಂತಿರುವ ಹಾಗೂ ಚಿಕ್ಕದಾದ ಮೊಟ್ಟೆಗಳನ್ನು ಎರಡು ರುಪಾಯಿಗೆ ಒಂದರಂತೆ ನೀಡಿದರೂ 1.37 ಲಕ್ಷ ಕೊಳ್ಳೆ ಹೊಡೆತಂದಾಗುತ್ತದೆ. ಈ ಮೂಲಕ ಕೊಳೆತ ಮೊಟ್ಟೆ ನೀಡಿ ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು.
ಈ ಕುರಿತು 'ಕನ್ನಡಪ್ರಭ' ಕಲೆ ಹಾಕಿದ ಮಾಹಿತಿಯಿಂದ ಇದು ಗೊತ್ತಾಗಿದ್ದು, ಇದರ ದರ ಇನ್ನೂ ಕಡಿಮೆ ಇದೆ ಎನ್ನಲಾಗುತ್ತಿದೆ. ಕಾರಣ, ಮೊಟ್ಟೆಗಳು ಒಂದೇ ದಿನದಲ್ಲಿ ಕೊಳೆತು ನಾರುತ್ತಿರುವುದನ್ನು ನೋಡಿದರೆ ಗೊತ್ತಾಗುತ್ತದೆ ಇವೆಂಥ ಮೊಟ್ಟೆಗಳು ಎಂದು.

ಸಿಡಿಪಿಒ ವರದಿ: ಅಂಗನವಾಡಿಯಲ್ಲಿ ಮಕ್ಕಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಕಳಪೆಯಾಗಿರುವುದನ್ನು ಸಿಡಿಪಿಒಗಳು ಈಗಾಗಲೇ ವರದಿ ಮಾಡಿದ್ದಾರೆ. ಆದರೆ, ಮೊಟ್ಟೆ ಪೂರೈಕೆ ಮಾಡಿರುವುದರಿಂದ ಏನು ಮಾಡಲಾಗುವುದಿಲ್ಲ. ಹಾಗಂತ ಸುಮ್ಮನೆ ಬಿಡುವುದಿಲ್ಲ. ಅವುಗಳಿಗೆ ಕಡಿಮೆ ದರ ನೀಡಲಾಗುವುದು ಹಾಗೂ ಏಜೆನ್ಸಿಯನ್ನು ಬದಲಿಸಲಾಗುವುದು ಎನ್ನುತ್ತಾರೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಸಂತ ಪ್ರೇಮಾ.
ಆದರೆ, ಈಗಾಗಲೇ ಪೂರೈಕೆಯಾಗಿರುವ ಮೊಟ್ಟೆಗಳನ್ನು ತಿಂದಿರುವ ಮಕ್ಕಳ ಆರೋಗ್ಯದ ಮೇಲಾಗಿರುವ ಪರಿಣಾಮದ ಕುರಿತ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. ಈ ಕುರಿತು ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಕಠಿಣ ಕ್ರಮಕ್ಕೆ ಆಗ್ರಹ
ಕೊಳೆತ ಮೊಟ್ಟೆ ಪೂರೈಕೆ ಮಾಡುವ ಮೂಲಕ ಮಕ್ಕಳ ಆರೋಗ್ಯದ ಜೊತೆಗೆ ಚಲ್ಲಾಟವಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.
- ಬಸವರಾಜ ಶೀಲವಂತರ, ಸಂಚಾಲಕರು, ಎಐಟಿಯುಸಿ

ಈಗ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಚೆನ್ನಾಗಿಲ್ಲ ಎಂದು ಸಿಡಿಪಿಒ ಅವರು ವರದಿ ಮಾಡಿದ್ದು, ಕೂಡಲೇ ಕ್ರಮಕೈಗೊಳ್ಳಲಾಗುವುದು ಹಾಗೂ ಏಜೆನ್ಸಿ ಬದಲಿಸಲಾಗುವುದು.
- ವಸಂತ ಪ್ರೇಮಾ, ಡಿಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಈಗ ಪೂರೈಕೆಯಾಗಿರುವ ಮೊಟ್ಟೆಗಳು ಅಡಕೆ ಗಾತ್ರದಷ್ಟು ಇದ್ದು, ತೀರಾ ಕಳಪೆಯಾಗಿವೆ. ಗಬ್ಬು ನಾರುತ್ತಿರುವುದರಿಂದ ಅವುಗಳನ್ನು ಮಕ್ಕಳಿಗೆ ಕೊಡುವುದಕ್ಕೆ ಮನಸ್ಸಾಗದೆ ಕೊಟ್ಟಿಲ್ಲ. ಇಲಾಖೆಗೆ ವಾಪಸ್ ಮಾಡಿದ್ದೇವೆ.
- ಹೆಸರು ಹೇಳದ ಅಂಗನವಾಡಿ ಕಾರ್ಯಕರ್ತೆ

- ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.